ಯೆರೆಮೀಯ 17 - ಕನ್ನಡ ಸತ್ಯವೇದವು J.V. (BSI)1 ಯೆಹೂದದ ಪಾಪವು ಉಕ್ಕಿನ ಕಂಠದಿಂದಲೂ ವಜ್ರದ ಮೊನೆಯಿಂದಲೂ ಲಿಖಿತವಾಗಿದೆ; ಅವರ ಹೃದಯದ ಹಲಗೆಯಲ್ಲಿಯೂ ಅವರ ಯಜ್ಞವೇದಿಗಳ ಕೊಂಬುಗಳಲ್ಲಿಯೂ ಕೆತ್ತಿದೆ. 2 ಅವರ ಮಕ್ಕಳು ಸೊಂಪಾಗಿ ಬೆಳೆದಿರುವ ಮರಗಳನ್ನೂ ಎತ್ತರವಾದ ಗುಡ್ಡಗಳನ್ನೂ ಕಂಡಾಗೆಲ್ಲಾ ಅವರ ಯಜ್ಞವೇದಿಗಳನ್ನೂ ಅಶೇರ ವಿಗ್ರಹಸ್ತಂಭಗಳನ್ನೂ ಜ್ಞಾಪಿಸಿಕೊಳ್ಳುವರು. 3 ಬೈಲಿನ ನನ್ನ ಪರ್ವತದ ಜನರೇ, ನಿಮ್ಮ ಸಕಲ ಪ್ರಾಂತಗಳಲ್ಲಿ ನೀವು ಮಾಡಿದ ಪಾಪದ ನಿವಿುತ್ತ ನಾನು ನಿಮ್ಮ ಎಲ್ಲಾ ಸೊತ್ತು ಸಂಪತ್ತುಗಳನ್ನೂ ಪೂಜಾಸ್ಥಳಗಳನ್ನೂ ಸೂರೆಗೆ ಈಡುಮಾಡುವೆನು. 4 ನಾನು ನಿಮಗೆ ದಯಪಾಲಿಸಿದ ಸ್ವಾಸ್ತ್ಯವನ್ನು ಸ್ವದೋಷದಿಂದಲೇ ಕಳೆದುಕೊಳ್ಳುವಿರಿ; ನೀವು ನೋಡದ ದೇಶದಲ್ಲಿ ನಿಮ್ಮನ್ನು ನಿಮ್ಮ ಶತ್ರುಗಳಿಗೆ ದಾಸರನ್ನಾಗಿ ಮಾಡುವೆನು; ನೀವು ನನ್ನ ರೋಷಾಗ್ನಿಯನ್ನು ಹತ್ತಿಸಿದ್ದೀರಿ, ಅದು ನಿತ್ಯವೂ ಜ್ವಲಿಸುತ್ತಿರುವದು. ದೇವರನ್ನು ನಂಬುವವರಿಗೂ ಮನುಷ್ಯರನ್ನು ನಂಬುವವರಿಗೂ ಇರುವ ತಾರತಮ್ಯ 5 ಯೆಹೋವನು ಹೀಗನ್ನುತ್ತಾನೆ - ಮಾನವಮಾತ್ರದವರಲ್ಲಿ ಭರವಸವಿಟ್ಟು ನರಜನ್ಮದವರನ್ನು ತನ್ನ ಭುಜಬಲವೆಂದು ತಿಳಿದು ಯೆಹೋವನನ್ನು ತೊರೆಯುವ ಮನಸ್ಸುಳ್ಳವನು ಶಾಪಗ್ರಸ್ತನು. 6 ಇವನು ಅಡವಿಯಲ್ಲಿನ ಜಾಲಿಗೆ ಸಮಾನನು; ಶುಭಸಂಭವಿಸಿದರೂ ಅದನ್ನು ಕಾಣನು; ಯಾರೂ ವಾಸಿಸದ ಚೌಳು ನೆಲವಾಗಿರುವ ಅರಣ್ಯದ ಬೆಗ್ಗಾಡಿನಲ್ಲಿ ವಾಸಿಸುವ ಸ್ಥಿತಿಯೇ ಅವನದು. 7 ಯಾವನು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾನೋ ಯಾವನಿಗೆ ಯೆಹೋವನು ಭರವಸವಾಗಿದ್ದಾನೋ ಅವನು ಧನ್ಯನು. 8 ನೀರಾವರಿಯಲ್ಲಿ ನೆಡಲ್ಪಟ್ಟು ಹೊಳೆಯ ದಡದಲ್ಲಿ ತನ್ನ ಬೇರುಗಳನ್ನು ಹರಡಿ ದಗೆಗೆ ಭಯಪಡದೆ ಹಸುರೆಲೆಯನ್ನು ಬಿಡುತ್ತಾ ಕ್ಷಾಮ ವರ್ಷದಲ್ಲಿಯೂ ನಿಶ್ಚಿಂತೆಯಾಗಿ ಸದಾ ಫಲಕೊಡುತ್ತಾ ಇರುವ ಮರಕ್ಕೆ ಸಮಾನನಾಗಿರುವನು. 9 ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು? 10 ಯೆಹೋವನಾದ ನಾನು ಪ್ರತಿಯೊಬ್ಬನಿಗೂ ಕರ್ಮಫಲವನ್ನು ಅವನವನ ನಡತೆಗೆ ತಕ್ಕ ಹಾಗೆ ಕೊಡಬೇಕೆಂದು ಹೃದಯವನ್ನು ಪರೀಕ್ಷಿಸುವವನೂ ಅಂತರಿಂದ್ರಿಯವನ್ನು ಶೋಧಿಸುವವನೂ ಆಗಿದ್ದೇನೆ. 11 ಆಸ್ತಿಪಾಸ್ತಿಗಳನ್ನು ಅನ್ಯಾಯವಾಗಿ ಸಂಪಾದಿಸಿಕೊಂಡವನು ತನ್ನದಲ್ಲದ ಮರಿಗಳನ್ನು ಕೂಡಿಸಿಕೊಳ್ಳುವ ಕೌಜುಗ ಹಕ್ಕಿಗೆ ಸಮಾನನು; ಅವನ ಮಧ್ಯಪ್ರಾಯದಲ್ಲಿ ಅವು ಅವನಿಂದ ತೊಲಗಿಹೋಗುವವು; ಅವನು ತನ್ನ ಅಂತ್ಯಕಾಲದಲ್ಲಿ ಹುಚ್ಚನಾಗಿ ಕಂಡುಬರುವನು. 12 ನಮ್ಮ ಪವಿತ್ರಾಲಯಸ್ಥಾನವು ಆದಿಯಿಂದಲೂ ಉನ್ನತವಾದ ಮಹಿಮೆಯ ಸಿಂಹಾಸನವಾಗಿದೆ. 13 ಯೆಹೋವನೇ, ಇಸ್ರಾಯೇಲ್ಯರ ನಿರೀಕ್ಷೆಯೇ, ನಿನ್ನನ್ನು ಬಿಟ್ಟುಹೋಗುವವರು ಆಶಾಭಂಗಪಡುವರು; ಯೆಹೋವನಾದ ನಿನ್ನನ್ನು ತೊರೆದವರು ಜೀವಜಲದ ಬುಗ್ಗೆಯನ್ನು ತೊರೆದವರಾಗಿದ್ದಾರೆ; ಅವರ ಹೆಸರು ದೂಳಿನಲ್ಲಿ ಬರೆಯಲ್ಪಡುವದು. ಪ್ರವಾದಿಯ ವಿಜ್ಞಾಪನೆ 14 ಯೆಹೋವನೇ, ನನ್ನನ್ನು ಸ್ವಸ್ಥಪಡಿಸು, ಆಗ ಸ್ವಸ್ಥನೇ ಆಗುವೆನು; ನನ್ನನ್ನು ರಕ್ಷಿಸು, ಆಗ ರಕ್ಷಿತನೇ ಆಗುವೆನು; ನೀನೇ ನನಗೆ ಸ್ತುತ್ಯನು. 15 ಆಹಾ, ಜನರು ನನಗೆ - ಯೆಹೋವನ ಮಾತೆಲ್ಲಿ? ಅದು ಈಗಲೇ ನೆರವೇರಲಿ ಎಂದು ಹೇಳುತ್ತಾರೆ. 16 ನಾನಾದರೋ ಸಭಾ ಪಾಲನೆಯಲ್ಲಿ ನಿನ್ನನ್ನು ಹಿಂಬಾಲಿಸುವದನ್ನು ಬಿಡುವದಕ್ಕೆ ಆತುರಪಡಲಿಲ್ಲ; ಅನಿವಾರ್ಯ ವಿಪತ್ತಿನ ದಿನವನ್ನು ಅಪೇಕ್ಷಿಸಲಿಲ್ಲ; ನೀನೇ ಬಲ್ಲೆ; ನಿನ್ನ ಸಮಕ್ಷಮದಲ್ಲೇ ನನ್ನ ಬಾಯ ಮಾತು ಹೊರಟಿತು. 17 ನನಗೆ ಭಯಾಸ್ಪದವಾಗಬೇಡ; ಕೇಡಿನ ಕಾಲದಲ್ಲಿ ನನಗೆ ಆಶ್ರಯವಾಗಿದ್ದೀ. 18 ನನ್ನ ಹಿಂಸಕರಿಗೆ ಅವಮಾನವಾಗಲಿ, ನನಗಾಗದಿರಲಿ; ಭಯಭ್ರಾಂತಿಯು ಅವರನ್ನು ಹಿಡಿಯಲಿ, ನನ್ನನ್ನು ಬೇಡ; ಅವರಿಗೆ ಕೇಡುಗಾಲವನ್ನು ಬರಮಾಡಿ ವಿಪರೀತಭಂಗದಿಂದ ಅವರನ್ನು ನಾಶಪಡಿಸು. ಸಬ್ಬತ್ ದಿನವನ್ನು ಆಚರಿಸಬೇಕೆಂಬ ಬೋಧನೆ 19 ಯೆಹೋವನು ನನಗೆ ಇಂತೆಂದನು - ನೀನು ಹೊರಟು ಯೆಹೂದದ ಅರಸರು ಹೋಗಿ ಬರುವ ಸಾಮಾನ್ಯಜನರ ಬಾಗಲಿನಲ್ಲಿಯೂ ಯೆರೂಸಲೇವಿುನ ಎಲ್ಲಾ ಬಾಗಿಲುಗಳಲ್ಲಿಯೂ ನಿಂತುಕೊಂಡು ಅವರಿಗೆ ಹೀಗೆ ಸಾರು - 20 ಈ ಬಾಗಿಲುಗಳಲ್ಲಿ ಸೇರುವ ಯೆಹೂದದ ಅರಸರೇ, ಎಲ್ಲಾ ಯೆಹೂದ್ಯರೇ, ಯೆರೂಸಲೇವಿುನ ಸಕಲ ನಿವಾಸಿಗಳೇ, ಯೆಹೋವನ ಈ ಮಾತನ್ನು ಕೇಳಿರಿ - 21 ಮನಮುಟ್ಟಿ ಗಮನಿಸಿರಿ, ಸಬ್ಬತ್ ದಿನದಲ್ಲಿ ಯಾವ ಹೊರೆಯನ್ನೂ ಹೊರಬೇಡಿರಿ, ಯೆರೂಸಲೇವಿುನ ಬಾಗಿಲುಗಳಲ್ಲಿ ತರಲೇಬೇಡಿರಿ; 22 ಆ ದಿನದಲ್ಲಿ ನಿಮ್ಮ ಮನೆಗಳಿಂದ ಯಾವ ಹೊರೆಯನ್ನೂ ಈಚೆಗೆ ತೆಗೆದುಕೊಂಡು ಬರಬೇಡಿರಿ, ಯಾವ ಕೆಲಸವನ್ನೂ ಮಾಡದಿರಿ; ಸಬ್ಬತ್ ದಿನವನ್ನು ನನ್ನ ದಿನವೆಂದು ಆಚರಿಸಿರಿ; ನಿಮ್ಮ ಪಿತೃಗಳಿಗೆ ನಾನು ಹೀಗೆ ಆಜ್ಞೆಮಾಡಿದೆನಲ್ಲಾ; 23 ಅವರಾದರೋ ಕಿವಿಗೊಟ್ಟು ಕೇಳಲಿಲ್ಲ, ಕೇಳಲಿಕ್ಕೂ ಉಪದೇಶ ಹೊಂದಲಿಕ್ಕೂ ಒಪ್ಪಲಿಲ್ಲ. 24 ಯೆಹೋವನಾದ ನನ್ನ ನುಡಿ ಇದೇ - ನೀವು ನನ್ನ ಕಡೆಗೆ ಚೆನ್ನಾಗಿ ಕಿವಿಗೊಟ್ಟು ಸಬ್ಬತ್ ದಿನದಲ್ಲಿ ಈ ಊರಿನ ಬಾಗಿಲುಗಳೊಳಗೆ ಯಾವ ಹೊರೆಯನ್ನೂ ತಾರದೆ ಯಾವ ಕೆಲಸವನ್ನೂ ಮಾಡದೆ ಆ ದಿನವನ್ನು ನನ್ನ ದಿನವೆಂದು ಆಚರಿಸಿದರೆ 25 ಆಗ ದಾವೀದನ ಸಿಂಹಾಸನಾರೂಢರಾದ ಅರಸರೂ ಪ್ರಭುಗಳೂ ರಥಾಶ್ವಗಳನ್ನೇರಿದವರಾಗಿ ಈ ಪಟ್ಟಣದ ಬಾಗಿಲುಗಳನ್ನು ಪ್ರವೇಶಿಸುವರು; ಇವರು, ಇವರ ಪ್ರಧಾನರು, ಯೆಹೂದದ ಜನರು, ಯೆರೂಸಲೇವಿುನ ನಿವಾಸಿಗಳು, ಎಲ್ಲರೂ ಇಲ್ಲಿ ಸೇರುವರು; ಈ ಪಟ್ಟಣವು ನಿತ್ಯವೂ ನೆಲೆಯಾಗಿರುವದು. 26 ಮತ್ತು ಯೆಹೂದದ ಪಟ್ಟಣಗಳು, ಯೆರೂಸಲೇವಿುನ ಸುತ್ತಣ ಪ್ರದೇಶಗಳು, ಬೆನ್ಯಾಮೀನ್ ಸೀಮೆ, ಇಳಕಲಿನ ಪ್ರದೇಶ, ಬೆಟ್ಟದ ಮೇಲಣ ಪ್ರದೇಶ, ದಕ್ಷಿಣಪ್ರಾಂತ, ಈ ಎಲ್ಲಾ ಸ್ಥಳಗಳಿಂದಲೂ ಸರ್ವಾಂಗಹೋಮಪಶು, ಯಜ್ಞಪಶು, ನೈವೇದ್ಯ, ಧೂಪ ಎಂಬೀ ಕೃತಜ್ಞತಾರ್ಪಣಗಳನ್ನು ಯೆಹೋವನ ಆಲಯಕ್ಕೆ ಜನರು ತೆಗೆದುಕೊಂಡು ಬರುವರು. 27 ಆದರೆ ನೀವು ನನ್ನ ಕಡೆಗೆ ಕಿವಿಗೊಡದೆ ಸಬ್ಬತ್ ದಿನದಲ್ಲಿ ಹೊರೆಯನ್ನು ಹೊತ್ತು ಯೆರೂಸಲೇವಿುನ ಬಾಗಿಲುಗಳೊಳಗೆ ಪ್ರವೇಶಿಸಬಾರದೆಂಬ ನಿಯಮವನ್ನು ಕೈಕೊಳ್ಳದೆ ಆ ದಿನವನ್ನು ನನ್ನ ದಿನವೆಂದು ಆಚರಿಸದೆ ಇದ್ದರೆ ಆಗ ನಾನು ಊರಬಾಗಿಲುಗಳಲ್ಲಿ ಬೆಂಕಿಯನ್ನು ಹೊತ್ತಿಸುವೆನು, ಅದು ಯೆರೂಸಲೇವಿುನ ಉಪ್ಪರಿಗೆಗಳನ್ನು ದಹಿಸಿಬಿಡುವದು, ಆರುವದೇ ಇಲ್ಲ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India