ಯೆರೆಮೀಯ 15 - ಕನ್ನಡ ಸತ್ಯವೇದವು J.V. (BSI)ಯೆಹೋವನು ಪ್ರವಾದಿಯ ವಿಜ್ಞಾಪನೆಯನ್ನು ಚಿತ್ತೈಸದೆ ಯೆಹೂದಕ್ಕೆ ಕಠಿನದಂಡನೆಯನ್ನು ವಿಧಿಸಿದ್ದು 1 ಯೆಹೋವನು ನನಗೆ ಹೀಗೆ ಹೇಳಿದನು - ಮೋಶೆಯೂ ಸಮುವೇಲನೂ ನನಗೆ ವಿಜ್ಞಾಪಿಸಿದರೂ ನನ್ನ ಮನಸ್ಸು ಈ ಜನರ ಕಡೆಗೆ ತಿರುಗದು; ನನ್ನ ಕಣ್ಣೆದುರಿನಿಂದ ಇವರನ್ನು ನೂಕಿಬಿಡು, ತೊಲಗಿಹೋಗಲಿ! ಅವರು - ನಾವು ಎಲ್ಲಿಗೆ ಹೋಗೋಣ ಎಂದು ಕೇಳಲು 2 ನೀನು ಅವರಿಗೆ - ಮರಣವ್ಯಾಧಿಗೆ ಗೊತ್ತಾದವರು ಮರಣವ್ಯಾಧಿಗೆ, ಖಡ್ಗಕ್ಕೆ ಗೊತ್ತಾದವರು ಖಡ್ಗಕ್ಕೆ, ಕ್ಷಾಮಕ್ಕೆ ಗೊತ್ತಾದವರು ಕ್ಷಾಮಕ್ಕೆ, ಸೆರೆಗೆ ಗೊತ್ತಾದವರು ಸೆರೆಗೆ ಗುರಿಯಾಗಿ ಹೋಗಲಿ; ಇದೇ ಯೆಹೋವನ ನುಡಿ ಎಂದು ಹೇಳು. 3 ನಾನು ಅವರಿಗೆ ನಾಲ್ಕು ವಿಧವಾದ ಬಾಧೆಗಳನ್ನು, ಅಂದರೆ ಕಡಿಯುವದಕ್ಕೆ ಖಡ್ಗವನ್ನು, ಸೀಳುವದಕ್ಕೆ ನಾಯಿಗಳನ್ನು, ನುಂಗಿ ಹಾಳುಮಾಡುವದಕ್ಕೆ ಆಕಾಶಪಕ್ಷಿಗಳನ್ನೂ ಭೂಜಂತುಗಳನ್ನೂ ನೇವಿುಸುವೆನು ಎಂಬದು ಯೆಹೋವನಾದ ನನ್ನ ಮಾತು. 4 ಹಿಜ್ಕೀಯನ ಮಗನೂ ಯೆಹೂದದ ಅರಸನೂ ಆದ ಮನಸ್ಸೆಯು ಯೆರೂಸಲೇವಿುನಲ್ಲಿ ನಡಿಸಿದ್ದಕ್ಕೆ ಪ್ರತಿಫಲವಾಗಿ ನಾನು ಅವರನ್ನು ಲೋಕದ ಸಮಸ್ತರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು. 5 ಯೆರೂಸಲೇಮೇ, ಯಾರು ನಿನ್ನನ್ನು ಕರುಣಿಸುವರು? ನಿನಗಾಗಿ ಯಾರು ಬಡುಕೊಳ್ಳುವರು? ನಿನ್ನ ಕ್ಷೇಮವನ್ನು ವಿಚಾರಿಸಲು ಯಾರು ನಿನ್ನ ಕಡೆಗೆ ತಿರುಗುವರು? 6 ಯೆಹೋವನ ಈ ಮಾತನ್ನು ಕೇಳು - ನೀನು ನನ್ನನ್ನು ಅಲ್ಲಗಳೆದು ಹಿಂದಿರುಗಿದ್ದೀ; ಆದಕಾರಣ ನಾನು ನಿನ್ನ ಮೇಲೆ ಕೈಯೆತ್ತಿ ನಿನ್ನನ್ನು ನಾಶಮಾಡುವೆನು; ಕ್ಷವಿುಸಿ ಕ್ಷವಿುಸಿ ಸಾಕಾಯಿತು. 7 ನನ್ನ ಜನರನ್ನು ದೇಶದ ಉಕ್ಕಡಗಳಲ್ಲಿ ಕವೆಗೋಲಿನಿಂದ ಹಾರಿಸಿ ತೂರುವೆನು; ಅವರನ್ನು ಪುತ್ರಶೋಕಕ್ಕೆ ಈಡುಮಾಡಿ ನಾಶಪಡಿಸುವೆನು; ಅವರು ಹೋದ ದಾರಿಯಿಂದ ಹಿಂದಿರುಗರು. 8 ಅವರ ವಿಧವೆಯರು ನನ್ನ ಭಾಗಕ್ಕೆ ಸಮುದ್ರದ ಉಸುಬಿಗಿಂತ ಹೆಚ್ಚಾಗಿರುವರು; ಯುವಕರ ತಾಯಿಗಳ ಮೇಲೆ ಕೊಳ್ಳೆಹೊಡೆಯುವವನನ್ನು ಮಧ್ಯಾಹ್ನದಲ್ಲೇ ಬರಮಾಡುವೆನು; ಅವರ ಮೇಲೆ ಕಳವಳವನ್ನೂ ದಿಗಿಲನ್ನೂ ತಟ್ಟನೆ ಬೀಳಿಸುವೆನು. 9 ಏಳು ಮಂದಿ ಮಕ್ಕಳನ್ನು ಹೆತ್ತ ಭಾಗ್ಯವಂತಳೂ ಬಳಲಿ ಪ್ರಾಣಬಿಟ್ಟಂತಿದ್ದಾಳೆ, ಹಗಲಿನಲ್ಲಿಯೇ ಆಕೆಯ ಪಾಲಿಗೆ ಸೂರ್ಯನು ಮುಣುಗಿದ್ದಾನೆ, ಆಶಾಭಂಗಪಟ್ಟು ಅವಮಾನಕ್ಕೆ ಈಡಾಗಿದ್ದಾಳೆ; ಆಕೆಯ ಉಳಿದ ಸಂತಾನವನ್ನು ಶತ್ರುಗಳ ಕಣ್ಣೆದುರಿನಲ್ಲಿ ನಾನು ಖಡ್ಗಕ್ಕೆ ಗುರಿಮಾಡುವೆನು, ಇದು ಯೆಹೋವನ ನುಡಿ. ಪ್ರವಾದಿಯ ಪ್ರಲಾಪ 10 ನನ್ನ ತಾಯೀ, ನನ್ನ ಗತಿಯನ್ನು ಏನು ಹೇಳಲಿ! ನಿನ್ನ ಗರ್ಭದಿಂದ ಬಂದ ನಾನು ಲೋಕದವರೆಲ್ಲರಿಗೆ ಜಗಳಗಂಟಿಗನೂ ವ್ಯಾಜ್ಯಗಾರನೂ ಆಗಿದ್ದೇನಲ್ಲಾ. ನಾನು ಹಣವನ್ನು ಬಡ್ಡಿಗೆ ಕೊಟ್ಟವನಲ್ಲ, ತೆಗೆದುಕೊಂಡವನಲ್ಲ, ಆದರೂ ನನ್ನನ್ನು ಎಲ್ಲರೂ ಬಯ್ಯುತ್ತಾರೆ. 11 ಇದಕ್ಕೆ ಯೆಹೋವನು - ನಿನಗೆ ಮೇಲಾಗುವಂತೆ ನಿಶ್ಚಯವಾಗಿ ನಿನ್ನನ್ನು ಬಿಡುಗಡೆಮಾಡುವೆನು, ನಿಜನಿಜವಾಗಿ ನಿನ್ನ ಶತ್ರುವನ್ನು ಕೇಡಿನಲ್ಲಿಯೂ ಇಕ್ಕಟ್ಟಿನಲ್ಲಿಯೂ ನಿನಗೆ ಶರಣಾಗತನನ್ನಾಗಿ ಮಾಡುವೆನು. 12 ಕಬ್ಬಿಣವನ್ನು, ಬಡಗಣ ಕಬ್ಬಿಣವನ್ನು ಯಾರು ಮುರಿದಾರು? ತಾಮ್ರವನ್ನು ಮುರಿಯುವದು ಯಾರಿಂದಾದೀತು ಎಂದು ಹೇಳಿದನು. 13 ನಿನ್ನ ಸಕಲ ಪ್ರಾಂತ್ಯಗಳಲ್ಲಿ ನೀನು ಮಾಡಿದ ಎಲ್ಲಾ ಪಾಪಗಳ ನಿವಿುತ್ತ ನಾನು ನಿನ್ನ ಸೊತ್ತು ಸಂಪತ್ತುಗಳನ್ನು ಲಾಭವಿಲ್ಲದೆ ಸೂರೆಗೆ ಈಡುಮಾಡಿ 14 ನಿನ್ನ ಶತ್ರುಗಳ ಕೈಗೆ ಕೊಟ್ಟು ನೀನು ನೋಡದ ದೇಶಕ್ಕೆ ಸಾಗಿಸಿಬಿಡುವೆನು. ನನ್ನ ರೋಷದಿಂದ ಉರಿಯು ಹತ್ತಿಕೊಂಡಿದೆ, ಅದು ನಿಮ್ಮನ್ನು ಸುಟ್ಟುಬಿಡುವದು. 15 [ಅದಕ್ಕೆ ನಾನು] - ಯೆಹೋವನೇ, ನೀನೇ ಬಲ್ಲೆ, ನನ್ನನ್ನು ಜ್ಞಾಪಕಕ್ಕೆ ತಂದು ಕಟಾಕ್ಷಿಸು; ನನಗಾಗಿ ನನ್ನ ಹಿಂಸಕರಿಗೆ ಮುಯ್ಯಿತೀರಿಸು; ಅವರಿಗೆ ಹೆಚ್ಚು ತಾಳ್ಮೆಯನ್ನು ತೋರಿಸಬೇಡ, ನನ್ನನ್ನು ನಿರ್ಮೂಲಮಾಡಬೇಡ; ನಿನ್ನ ನಿವಿುತ್ತವೇ ನಾನು ನಿಂದೆಗೆ ಗುರಿಯಾದೆನೆಂದು ಚಿತ್ತಕ್ಕೆ ತಂದುಕೋ. 16 ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ ಹೃದಯಾನಂದವೂ ಆದವು; ಸೇನಾಧೀಶ್ವರನಾದ ದೇವರೇ, ಯೆಹೋವನೇ, ನಾನು ನಿನ್ನ ಹೆಸರಿನವನಲ್ಲವೇ! 17 ನಾನು ವಿನೋದಗಾರರ ಕೂಟದಲ್ಲಿ ಕೂತುಕೊಳ್ಳಲಿಲ್ಲ, ಉಲ್ಲಾಸಪಡಲೂ ಇಲ್ಲ; ನೀನು ನನ್ನ ಮೇಲೆ ಕೈಯಿಟ್ಟಿದ್ದರಿಂದ ಒಂಟಿಗನಾಗಿ ಕೂತೆನು; ನನ್ನನ್ನು ರೋಷದಿಂದ ತುಂಬಿಸಿದ್ದಿಯಷ್ಟೆ. 18 ಏಕೆ ನನ್ನ ವ್ಯಥೆಯು ನಿರಂತರವಾಗಿದೆ? ನನ್ನ ಗಾಯವು ಗಡುಸಾಗಿ ಗುಣಹೊಂದಲೊಲ್ಲದೇಕೆ? ನೀನು ನನಗೆ ನೀರು ಬತ್ತುವ ಕಳ್ಳತೊರೆಯಂತಿರಬೇಕೋ [ಎಂದು ಅರಿಕೆಮಾಡಿಕೊಂಡೆನು.] ಯೆಹೋವನು ಪ್ರವಾದಿಯನ್ನು ಧೈರ್ಯಗೊಳಿಸಿದ್ದು 19 ಇದರಿಂದ ಯೆಹೋವನು ಹೀಗಂದಿದ್ದಾನೆ - ನೀನು [ನನ್ನ ಕಡೆಗೆ] ಹಿಂದಿರುಗಿದರೆ ನನ್ನ ಸಮ್ಮುಖದಲ್ಲಿ ನಿಲ್ಲುವಂತೆ ನಾನು ನಿನ್ನನ್ನು ತಿರುಗಿ ಸೇರಿಸಿಕೊಳ್ಳುವೆನು; ನೀನು ತುಚ್ಫವಾದದ್ದನ್ನು ನಿರಾಕರಿಸಿ ಅಮೂಲ್ಯವಾದದ್ದನ್ನು ಪ್ರಕಾಶಪಡಿಸಿದರೆ ನೀನು ನನ್ನ ಬಾಯಂತಿರುವಿ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು, ನೀನು ಅವರ ಕಡೆಗೆ ತಿರುಗದಿರುವಿ. 20 ನಾನು ನಿನ್ನನ್ನು ಈ ಜನರಿಗೆ ದುರ್ಗಮವಾದ ತಾಮ್ರದ ಪೌಳಿಗೋಡೆಯನ್ನಾಗಿ ಮಾಡುವೆನು; ಅವರು ನಿನಗೆ ವಿರುದ್ಧವಾಗಿ ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗುವದಿಲ್ಲ. ನಿನ್ನನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು. ಇದು ಯೆಹೋವನಾದ ನನ್ನ ಮಾತು. 21 ನಾನು ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು; ಹೌದು, ಕ್ರೂರರ ಕೈಯಿಂದ ರಕ್ಷಿಸುವೆನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India