ಯೆರೆಮೀಯ 13 - ಕನ್ನಡ ಸತ್ಯವೇದವು J.V. (BSI)ನಡುಕಟ್ಟಿನ ಸಾಮ್ಯ 1 ಯೆಹೋವನು ನನಗೆ - ನೀನು ಹೋಗಿ ನಾರಿನ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೋ, ನೀರಿನಲ್ಲಿ ನೆನಸಬೇಡ ಎಂದು ಅಪ್ಪಣೆಕೊಟ್ಟನು. 2 ಆಗ ನಾನು ಯೆಹೋವನ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆನು. 3-4 ಆಮೇಲೆ - ನೀನು ಕೊಂಡು ಸೊಂಟಕ್ಕೆ ಬಿಗಿದ ನಡುಕಟ್ಟನ್ನು ತೆಗೆದುಕೊಂಡು ಹೊರಟು ಯೂಫ್ರೇಟೀಸ್ ನದಿಗೆ ಹೋಗಿ ಅದನ್ನು ಅಲ್ಲಿ ಬಂಡೆಯ ಸಂದಿನೊಳಗೆ ಬಚ್ಚಿಡು ಎಂಬದಾಗಿ ಯೆಹೋವನ ಎರಡನೆಯ ಮಾತು ನನಗೆ ಬಂತು. 5 ಆಗ ಯೆಹೋವನ ಅಪ್ಪಣೆಯ ಮೇರೆಗೆ ನಾನು ಹೋಗಿ ಯೂಫ್ರೇಟೀಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆನು. 6 ಬಹುದಿನಗಳ ಮೇಲೆ ಯೆಹೋವನು ನನಗೆ - ಹೊರಡು, ಯೂಫ್ರೇಟೀಸ್ ನದಿಗೆ ಹೋಗಿ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ ಎಂದು ಹೇಳಿದನು. 7 ಆಗ ನಾನು ಯೂಫ್ರೇಟೀಸ್ ನದಿಗೆ ಹೋಗಿ ಅಗೆದು ನಾನು ಬಚ್ಚಿಟ್ಟ ಸ್ಥಳದೊಳಗಿಂದ ನಡುಕಟ್ಟನ್ನು ತೆಗೆದೆನು; ಆಹಾ, ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು. 8 ಆಗ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು - 9 ಇದು ಯೆಹೋವನಾದ ನನ್ನ ನುಡಿ - ಇದೇ ಪ್ರಕಾರವಾಗಿ ನಾನು ಯೆಹೂದದ ದೊಡ್ಡಸ್ತಿಕೆಯನ್ನೂ ಯೆರೂಸಲೇವಿುನ ಬಲು ದೊಡ್ಡಸ್ತಿಕೆಯನ್ನೂ ಕೆಡಿಸಿಬಿಡುವೆನು. 10 ನನ್ನ ಮಾತುಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಹಟದಂತೆ ನಡೆದು ಅನ್ಯದೇವತೆಗಳನ್ನು ಹಿಂಬಾಲಿಸಿ ಸೇವಿಸಿ ಪೂಜಿಸುತ್ತಿರುವ ಈ ದುಷ್ಟ ಜನರು ಯಾವ ಕೆಲಸಕ್ಕೂ ಬಾರದ ಈ ನಡುಕಟ್ಟಿಗೆ ಸಾಟಿಯಾಗುವರು. 11 ಸಮಸ್ತ ಇಸ್ರಾಯೇಲ್ ವಂಶವೂ ಸಕಲ ಯೆಹೂದ ವಂಶವೂ ನನ್ನ ಪ್ರಜೆಯಾಗಿದ್ದು ನನಗೆ ಹೆಸರುವಾಸಿಯೂ ಸ್ತೋತ್ರವೂ ಮಹಿಮೆಯೂ ಆಗಿರಲೆಂದು ನಡುಕಟ್ಟು ಸೊಂಟಕ್ಕೆ ಬಿಗಿದಿರುವಂತೆ ಇವರನ್ನು ಬಿಗಿದುಕೊಂಡಿದ್ದೇನೆ; ಆದರೂ ಇವರು ಕೇಳಲೊಲ್ಲದೆ ಹೋದರು ಎಂದು ಯೆಹೋವನು ಅನ್ನುತ್ತಾನೆ. ಗಡಿಗೆಗಳ ಸಾಮ್ಯ 12 ಹೀಗಿರಲು ಪ್ರತಿಯೊಂದು ಗಡಿಗೆಯು ದ್ರಾಕ್ಷಾರಸದಿಂದ ತುಂಬಿರುವದು ಎಂಬದಾಗಿ ಇಸ್ರಾಯೇಲ್ಯರ ದೇವರಾದ ಯೆಹೋವನು ಹೇಳುವ ಮಾತನ್ನು ಕೇಳಿರಿ ಎಂದು ನೀನು ಅವರಿಗೆ ಸಾರು; ಆಗ ಅವರು ನಿನಗೆ - ಪ್ರತಿಯೊಂದು ಗಡಿಗೆಯು ದ್ರಾಕ್ಷಾರಸದಿಂದ ತುಂಬಿರುವದು ನಮಗೆ ಗೊತ್ತಿಲ್ಲವೋ ಎಂದು ಹೇಳುವರು. 13 ಆಗ ನೀನು ಅವರಿಗೆ - ಯೆಹೋವನ ಈ ಮಾತನ್ನು ಕೇಳಿರಿ, ದಾವೀದನ ಸಿಂಹಾಸನವನ್ನೇರಿದ ಅರಸರನ್ನೂ ಯಾಜಕರನ್ನೂ ಪ್ರವಾದಿಗಳನ್ನೂ ಯೆರೂಸಲೇವಿುನ ಸಕಲ ನಿವಾಸಿಗಳನ್ನೂ ಅಂತು ದೇಶದ ಜನರೆಲ್ಲರನ್ನೂ ನಾನು ಅಮಲಿನಿಂದ ತುಂಬಿಸಿ 14 ಹಿರಿಕಿರಿಯರಾದ ಸಮಸ್ತರನ್ನು ಒಬ್ಬರಿಗೊಬ್ಬರು ಬಡಿದಾಡುವಂತೆ ಮಾಡುವೆನು; ನಾನು ಅವರನ್ನು ಉಳಿಸೆನು, ಕನಿಕರಿಸೆನು, ಕರುಣಿಸೆನು, ನಾಶಮಾಡದೆ ಬಿಡೆನು; ಇದು ಯೆಹೋವನ ನುಡಿ. ಯೆಹೂದವನ್ನು ಎಚ್ಚರಿಸಿದ್ದು 15 ಕಿವಿಗೊಟ್ಟು ಕೇಳಿರಿ, ಹೆಮ್ಮೆ ಪಡಬೇಡಿರಿ; ಯೆಹೋವನೇ ಮಾತಾಡಿದ್ದಾನೆ. 16 ನಿಮ್ಮ ದೇವರಾದ ಯೆಹೋವನನ್ನು ಘನಪಡಿಸಿರಿ; ಇಲ್ಲದಿದ್ದರೆ ಸ್ವಲ್ಪಕಾಲದೊಳಗೆ ಆತನು ಕತ್ತಲನ್ನು ಉಂಟುಮಾಡುವನು, ನಿಮ್ಮ ಕಾಲುಗಳು ಮೊಬ್ಬಿನ ಬೆಟ್ಟಗಳಲ್ಲಿ ಮುಗ್ಗರಿಸುವವು; ನೀವು ಬೆಳಕನ್ನು ನಿರೀಕ್ಷಿಸುತ್ತಿರುವಾಗ ಆತನು ಅದನ್ನು ಮರಣಾಂಧಕಾರದ ಕಾರ್ಗತ್ತಲನ್ನಾಗಿ ಮಾಡುವನು. 17 ನೀವು ಕೇಳದಿದ್ದರೆ ನನ್ನ ಆತ್ಮವು ಗುಟ್ಟಾದ ಸ್ಥಳದಲ್ಲಿ ನಿಮ್ಮ ಗರ್ವದ ನಿವಿುತ್ತ ಗೋಳಾಡುವದು; ಯೆಹೋವನ ಮಂದೆಯು ಸೆರೆಯಾಗಿ ಹೋದದರಿಂದ ಬಹಳವಾಗಿ ಅಳುವೆನು, ನನ್ನ ನೇತ್ರವು ಅಶ್ರುಧಾರೆಯನ್ನು ಸುರಿಸುವದು. ರಾಜನನ್ನೂ ರಾಜಮಾತೆಯನ್ನೂ ಎಚ್ಚರಿಸಿದ್ದು 18 ರಾಜನಿಗೂ ರಾಜಮಾತೆಗೂ - ನೆಲದಲ್ಲಿ ಕೂತುಕೊಳ್ಳಿರಿ, ನಿಮ್ಮ ಅಂದದ ಕಿರೀಟವು ನಿಮ್ಮ ತಲೆಯಿಂದ ಕೆಳಗೆ ಬಿದ್ದಿದೆ ಎಂದು ಹೇಳಿರಿ. 19 ದಕ್ಷಿಣದೇಶದ ಪಟ್ಟಣಗಳು ಮುತ್ತಿಗೆಯಾಗಿವೆ, ಅವುಗಳನ್ನು ಬಿಡಿಸಲು ಯಾರೂ ಇಲ್ಲ; ಯೆಹೂದವೆಲ್ಲಾ ಸೆರೆಹೋಗಿದೆ, ಸಂಪೂರ್ಣವಾಗಿ ಸೆರೆಯಾಗಿದೆ. ಬಾಬೆಲಿನಿಂದ ಯೆಹೂದಕ್ಕೆ ಬರುವ ದುರ್ಗತಿ 20 [ಚೀಯೋನೇ] ಕಣ್ಣೆತ್ತು, ಬಡಗಲಿಂದ ಬರುವವರನ್ನು ನೋಡು; ನಿನಗೆ ಒಪ್ಪಿಸಿದ ಹಿಂಡು, ನಿನ್ನ ಅಂದವಾದ ಹಿಂಡು ಎಲ್ಲಿ? 21 ನಿನ್ನಲ್ಲಿ ಬಳಿಕೆಗೊಳ್ಳುವಂತೆ ನೀನು ಅಭ್ಯಾಸಮಾಡಿಸಿದವರನ್ನು [ಯೆಹೋವನು] ನಿನಗೆ ತಲೆಯಾಗಿ ನೇವಿುಸುವಾಗ ಏನು ಹೇಳುವಿ? ವೇದನೆಯು ನಿನ್ನನ್ನು ಹೆರುವವಳನ್ನೋ ಎಂಬಂತೆ ಹಿಡಿಯುವದಲ್ಲವೆ. 22 ಇವು ನನಗೆ ಏಕೆ ಸಂಭವಿಸಿದವು ಎಂದು ನೀನು ಮನದೊಳಗೆ ಅಂದುಕೊಂಡರೆ ನಿನ್ನ ನೆರಿಗೆಯು ಕೀಳಲ್ಪಟ್ಟು ನಿನ್ನ ಹಿಮ್ಮಡಿಯು ನಾಚಿಕೆಗೆ ಈಡಾದದ್ದಕ್ಕೆ ನಿನ್ನ ಮಹಾಪಾಪವೇ ಕಾರಣ ಎಂದು ನಿನಗೆ ಗೊತ್ತಾಗುವದು. 23 ಕೂಷ್ಯನು ತನ್ನ ಚರ್ಮವನ್ನು ಮಾರ್ಪಡಿಸಬಲ್ಲನೇ? ಚಿರತೆಯು ತನ್ನ ಚುಕ್ಕೆಗಳನ್ನು ಬದಲಾಯಿಸೀತೇ? ಹೀಗಾದರೆ ದುಷ್ಟತನದಲ್ಲಿ ಶಿಕ್ಷಿತರಾದ ನೀವು ಶಿಷ್ಟತನದಲ್ಲಿ ನಡೆಯಬಹುದು. 24 ಆದಕಾರಣ ಬೈಲುಗಾಳಿಯು ಬಡಿದುಕೊಂಡು ಹೋಗುವ ಒಣಹುಲ್ಲನ್ನೋ ಎಂಬಂತೆ ನಾನು ಅವರನ್ನು ಚದರಿಸಿಬಿಡುವೆನು. 25 ನೀನು ನನ್ನನ್ನು ಮರೆತು ಸುಳ್ಳನ್ನು ನಂಬಿದ್ದರಿಂದ ಇದೇ ನಿನ್ನ ಪಾಲು, ಇದೇ ನಾನು ನಿನಗೆ ಅಳೆದುಕೊಟ್ಟ ಭಾಗ ಎಂದು ಯೆಹೋವನು ಅನ್ನುತ್ತಾನೆ. 26 ನಿನ್ನ ನೆರಿಗೆಯನ್ನು ನಿನ್ನ ಕಣ್ಣ ಮುಂದೆಯೇ ಕೀಳಿಸುವೆನು, ನಿನಗೆ ಅವಮಾನವಾಗುವದು. 27 ನಾನು ನಿನ್ನ ವ್ಯಭಿಚಾರಗಳನ್ನು, ನಿನ್ನ ಹೇಕಾರಗಳನ್ನು, ನಿನ್ನ ಕೆಟ್ಟ ಸೂಳೆಗಾರಿಕೆಯನ್ನು, ಅಂತು ಗುಡ್ಡಗಳಲ್ಲಿಯೂ ಬೈಲಿನಲ್ಲಿಯೂ ನೀನು ನಡಿಸಿದ ಅಸಹ್ಯಕಾರ್ಯಗಳನ್ನು ನೋಡಿದ್ದೇನೆ. ಯೆರೂಸಲೇಮೇ, ನಿನ್ನ ಗತಿಯನ್ನು ಏನೆಂದು ಹೇಳಲಿ! ನೀನು ಶುದ್ಧಳಾಗಲು ಇನ್ನೆಷ್ಟು ಕಾಲಬೇಕು? |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India