Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಜಕಕಾಂಡ 8 - ಕನ್ನಡ ಸತ್ಯವೇದವು J.V. (BSI)


ಆರೋನನೂ ಅವನ ಮಕ್ಕಳೂ ಯಾಜಕೋದ್ಯೋಗವನ್ನು ವಹಿಸಿಕೊಂಡದ್ದು ( 8—10 ) ಆರೋನನೂ ಅವನ ಮಕ್ಕಳೂ ಯಾಜಕೋದ್ಯೋಗದಲ್ಲಿ ಪ್ರತಿಷ್ಠಿತರಾದದ್ದು

1-2 ಯೆಹೋವನು ಮೋಶೆಗೆ - ನೀನು ಆರೋನನನ್ನೂ ಅವನ ಗಂಡು ಮಕ್ಕಳನ್ನೂ ಕರಕೊಂಡು ಅವರಿಗೆ ಬೇಕಾದ ದೀಕ್ಷಾವಸ್ತ್ರಗಳನ್ನೂ ಅಭಿಷೇಕ ತೈಲವನ್ನೂ ದೋಷಪರಿಹಾರಕ್ಕಾಗಿ ಸಮರ್ಪಿಸಬೇಕಾದ ಹೋರಿಯನ್ನೂ ಎರಡು ಟಗರುಗಳನ್ನೂ ಹುಳಿಯಿಲ್ಲದ ಭಕ್ಷ್ಯಗಳು ತುಂಬಿರುವ ಪುಟ್ಟಿಯನ್ನೂ ತೆಗೆದುಕೊಂಡು ಬಂದು

3 ಜನಸಮೂಹವನ್ನೆಲ್ಲಾ ದೇವದರ್ಶನದ ಗುಡಾರದ ಬಾಗಲಿನ ಹತ್ತಿರಕ್ಕೆ ಕರಿಸು ಎಂದು ಆಜ್ಞಾಪಿಸಲಾಗಿ

4 ಯೆಹೋವನು ಹೇಳಿದಂತೆಯೇ ಮೋಶೆ ಮಾಡಿದನು. ಜನಸಮೂಹವೆಲ್ಲಾ ದೇವದರ್ಶನದ ಗುಡಾರದ ಬಾಗಲಿನ ಹತ್ತಿರ ಕೂಡಿದಾಗ ಮೋಶೆ ಅವರಿಗೆ -

5 ನಾನು ಈಗ ಮಾಡುವ ಕಾರ್ಯವು ಯೆಹೋವನು ಆಜ್ಞಾಪಿಸಿದ್ದು ಎಂದು ಹೇಳಿದನು.

6 ಆಗ ಮೋಶೆ ಆರೋನನನ್ನೂ ಅವನ ಮಕ್ಕಳನ್ನೂ ಹತ್ತಿರಕ್ಕೆ ಬರಮಾಡಿಕೊಂಡು ಸ್ನಾನಮಾಡಿಸಿದನು.

7 ಆಮೇಲೆ ಯೆಹೋವನು ಆಜ್ಞಾಪಿಸಿದಂತೆ ಆರೋನನಿಗೆ ನಿಲುವಂಗಿಯನ್ನು ತೊಡಿಸಿ ನಡುಕಟ್ಟನ್ನು ಸುತ್ತಿ ಮೇಲಂಗಿಯನ್ನು ತೊಡಿಸಿ ಕವಚವನ್ನು ಹಾಕಿಸಿ ಕವಚದ ಮೇಲಣ ವಿಚಿತ್ರವಾದ ನಡುಕಟ್ಟನ್ನು ಕಟ್ಟಿ ಅದರಿಂದ ಕವಚವನ್ನು ಅವನಿಗೆ ಬಂಧಿಸಿ

8 ಚೀಲದ ಪದಕವನ್ನು ಅವನಿಗೆ ಬಿಗಿಸಿ ಅದರೊಳಗೆ ಊರೀಮ್ ತುಮ್ಮೀಮ್ ಎಂಬ ವಸ್ತುಗಳನ್ನು ಹಾಕಿ

9 ಅವನ ತಲೆಗೆ ಮುಂಡಾಸವನ್ನು ಇಟ್ಟು ಅದರ ಮುಂಭಾಗದಲ್ಲಿ ಬಂಗಾರದ ಪಟ್ಟವನ್ನು ಕಟ್ಟಿದನು; ಅದೇ ಅವನಿಗೆ ಪರಿಶುದ್ಧ ಕಿರೀಟವು.

10 ಅನಂತರ ಮೋಶೆ ಅಭಿಷೇಕತೈಲವನ್ನು ತೆಗೆದುಕೊಂಡು ದೇವದರ್ಶನದ ಗುಡಾರವನ್ನೂ ಅದರಲ್ಲಿದ್ದ ಎಲ್ಲವನ್ನೂ ಅಭಿಷೇಕಿಸಿ ಪ್ರತಿಷ್ಠಿಸಿದನು.

11 ಯಜ್ಞವೇದಿಯ ಮೇಲೆ ಏಳು ಸಾರಿ ಆ ತೈಲವನ್ನು ಚಿವಿುಕಿಸಿ ವೇದಿಯನ್ನೂ ಅದರ ಎಲ್ಲಾ ಉಪಕರಣಗಳನ್ನೂ ಗಂಗಾಳವನ್ನೂ ಅದರ ಪೀಠವನ್ನೂ ಅಭಿಷೇಕಿಸಿ ಪ್ರತಿಷ್ಠಿಸಿದನು.

12 ಅದರಲ್ಲಿ ಸ್ವಲ್ಪವನ್ನು ಆರೋನನ ತಲೆಯ ಮೇಲೆ ಹೊಯಿದು ಅವನನ್ನು ಅಭಿಷೇಕಿಸಿ ಪ್ರತಿಷ್ಠಿಸಿದನು.

13 ಆಮೇಲೆ ಯೆಹೋವನು ಆಜ್ಞಾಪಿಸಿದಂತೆ ಮೋಶೆ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು ಅವರಿಗೆ ನಿಲುವಂಗಿಗಳನ್ನು ತೊಡಿಸಿ ನಡುಕಟ್ಟುಗಳನ್ನು ಸುತ್ತಿ ಮುಂಡಾಸಗಳನ್ನು ಇಟ್ಟನು.

14 ಅನಂತರ ಅವನು ದೋಷಪರಿಹಾರಾರ್ಥವಾದ ಹೋರಿಯನ್ನು ತರಿಸಿದನು. ಆರೋನನೂ ಅವನ ಮಕ್ಕಳೂ ತಮ್ಮ ಕೈಗಳನ್ನು ಅದರ ತಲೆಯ ಮೇಲೆ ಇಟ್ಟರು.

15 ಆ ಹೋರಿಯನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ತನ್ನ ಬೆರಳಿನಿಂದ ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಿ ಯಜ್ಞವೇದಿಯನ್ನು ಶುದ್ಧಪಡಿಸಿ ವಿುಕ್ಕ ರಕ್ತವನ್ನು ಯಜ್ಞವೇದಿಯ ಬುಡದಲ್ಲಿ ಸುರಿದುಬಿಟ್ಟನು. ಹೀಗೆ ಯಜ್ಞವೇದಿಯ ನಿವಿುತ್ತ ದೋಷಪರಿಹಾರಕಾಚಾರವನ್ನು ನಡಿಸಿ ಅದನ್ನು ಪ್ರತಿಷ್ಠಿಸಿದನು.

16 ಆ ಹೋರಿಯ ಕರುಳುಗಳ ಮೇಲಣ ಕೊಬ್ಬನ್ನೂ ಕಾಳಿಜದ ಹತ್ತಿರವಿರುವ ಕೊಬ್ಬನ್ನೂ ಎರಡು ಹುರುಳಿಕಾಯಿಗಳನ್ನೂ ಅವುಗಳ ಮೇಲಿರುವ ಕೊಬ್ಬನ್ನೂ ಮೋಶೆ ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಿದನು.

17 ಯೆಹೋವನು ಆಜ್ಞಾಪಿಸಿದಂತೆ ಅದರಲ್ಲಿ ವಿುಕ್ಕದ್ದನ್ನೆಲ್ಲಾ ಅಂದರೆ ಅದರ ಚರ್ಮವನ್ನೂ ಮಾಂಸವನ್ನೂ ಕಲ್ಮಷವನ್ನೂ ಪಾಳೆಯದ ಹೊರಗೆ ಬೆಂಕಿಯಿಂದ ಸುಡಿಸಿಬಿಟ್ಟನು.

18 ತರುವಾಯ ಅವನು ಸರ್ವಾಂಗಹೋಮಕ್ಕಾಗಿ ಟಗರನ್ನು ತರಿಸಿದನು. ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು.

19 ಅದನ್ನು ವಧಿಸಿದ ಮೇಲೆ ಮೋಶೆ ಅದರ ರಕ್ತವನ್ನು ಯಜ್ಞವೇದಿಗೆ ಸುತ್ತಲೂ ಎರಚಿದನು.

20 ಆ ಟಗರನ್ನು ತುಂಡುತುಂಡಾಗಿ ಕಡಿದ ಮೇಲೆ ಮೋಶೆ ಅದರ ತಲೆಯನ್ನೂ ಮಾಂಸಖಂಡಗಳನ್ನೂ ಕೊಬ್ಬನ್ನೂ ಹೋಮಮಾಡಿದನು.

21 ಅದರ ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳಿಸಿ ಮೋಶೆ ಆ ಟಗರನ್ನು ಯಜ್ಞವೇದಿಯ ಮೇಲೆ ಪೂರ್ತಿಯಾಗಿ ಹೋಮಮಾಡಿಬಿಟ್ಟನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅದು ಅಗ್ನಿಯ ಮೂಲಕ ಯೆಹೋವನಿಗೆ ಸುಗಂಧಕರವಾದ ಸರ್ವಾಂಗಹೋಮವಾಗಿತ್ತು.

22 ಆಮೇಲೆ ಅವನು ಪಟ್ಟಾಭಿಷೇಕಕ್ಕಾಗಿ ಸಮರ್ಪಿಸಬೇಕಾದ ಎರಡನೆಯ ಟಗರನ್ನು ತರಿಸಿದನು. ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟರು.

23 ಅದನ್ನು ವಧಿಸಿದ ನಂತರ ಮೋಶೆ ಅದರ ರಕ್ತದಲ್ಲಿ ಸ್ವಲ್ಪ ತೆಗೆದುಕೊಂಡು ಆರೋನನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿದನು.

24 ಆಗ ಮೋಶೆ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು ಆ ರಕ್ತದಲ್ಲಿ ಸ್ವಲ್ಪವನ್ನು ಅವರವರ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿ ಉಳಿದ ರಕ್ತವನ್ನು ಯಜ್ಞವೇದಿಗೆ ಸುತ್ತಲೂ ಎರಚಿದನು.

25 ಅವನು ಆ ಟಗರಿನ ಕೊಬ್ಬನ್ನೂ ಅಂದರೆ ಬಾಲದ ಕೊಬ್ಬು, ಕರುಳುಗಳ ಮೇಲಣ ಎಲ್ಲಾ ಕೊಬ್ಬು, ಕಾಳಿಜದ ಹತ್ತಿರವಿರುವ ಕೊಬ್ಬು, ಎರಡು ಹುರುಳಿಕಾಯಿಗಳು, ಅವುಗಳ ಮೇಲಿದ್ದ ಕೊಬ್ಬು ಇವುಗಳನ್ನೂ ಬಲದೊಡೆಯನ್ನೂ

26 ಯೆಹೋವನ ಸನ್ನಿಧಿಯಲ್ಲಿ ಪುಟ್ಟಿಯಲ್ಲಿ ಇಟ್ಟಿದ್ದ ಹುಳಿಯಿಲ್ಲದ ಭಕ್ಷ್ಯಗಳಲ್ಲಿ ಒಂದು ರೊಟ್ಟಿಯನ್ನೂ ಎಣ್ಣೆ ವಿುಶ್ರವಾದ ಒಂದು ಹೋಳಿಗೆಯನ್ನೂ ಒಂದು ಕಡುಬನ್ನೂ ತೆಗೆದುಕೊಂಡು ಈ ಭಕ್ಷ್ಯಗಳನ್ನು ಆ ಕೊಬ್ಬಿನ ಮತ್ತು ಬಲದೊಡೆಯ ಮೇಲೆ ಇಟ್ಟು

27 ಎಲ್ಲವುಗಳನ್ನು ಆರೋನನ ಮತ್ತು ಅವನ ಮಕ್ಕಳ ಕೈಗಳಿಗೆ ಕೊಟ್ಟು ನೈವೇದ್ಯವೆಂದು ಸೂಚಿಸುವದಕ್ಕೆ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಿದನು.

28 ಆಮೇಲೆ ಮೋಶೆ ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಯಜ್ಞವೇದಿಯಲ್ಲಿ ಸರ್ವಾಂಗಹೋಮದ್ರವ್ಯದ ಮೇಲಿಟ್ಟು ಹೋಮಮಾಡಿದನು. ಅದು ಅಗ್ನಿಯ ಮೂಲಕ ಯೆಹೋವನಿಗೆ ಸುಗಂಧಕರವಾದ ಪಟ್ಟಾಭಿಷೇಕಯಜ್ಞವಾಗಿತ್ತು.

29 ಮೋಶೆ ಅದರ ಎದೆಯ ಭಾಗವನ್ನು ತೆಗೆದುಕೊಂಡು ನೈವೇದ್ಯವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಿದನು. ಯೆಹೋವನು ಆಜ್ಞಾಪಿಸಿದಂತೆ ಆ ಪಟ್ಟಾಭಿಷೇಕಯಜ್ಞದ ಟಗರಿನಲ್ಲಿ ಆ ಎದೆಯ ಭಾಗವೇ ಮೋಶೆಗೆ ಸಲ್ಲಬೇಕಾದದ್ದು.

30 ಆಗ ಮೋಶೆ ಅಭಿಷೇಕತೈಲದಲ್ಲಿಯೂ ಯಜ್ಞವೇದಿಯ ಮೇಲಿದ್ದ ರಕ್ತದಲ್ಲಿಯೂ ಸ್ವಲ್ಪ ತೆಗೆದುಕೊಂಡು ಆರೋನನ ಮತ್ತು ಅವನ ವಸ್ತ್ರಗಳ ಮೇಲೆಯೂ ಅವನ ಮಕ್ಕಳ ಮತ್ತು ಅವರ ವಸ್ತ್ರಗಳ ಮೇಲೆಯೂ ಚಿವಿುಕಿಸಿದನು. ಹೀಗೆ ಆರೋನನನ್ನೂ ಅವನ ವಸ್ತ್ರಗಳನ್ನೂ ಅವನ ಮಕ್ಕಳನ್ನೂ ಅವರ ವಸ್ತ್ರಗಳನ್ನೂ ಪ್ರತಿಷ್ಠಿಸಿದನು.

31 ಮತ್ತು ಮೋಶೆ ಆರೋನನಿಗೂ ಅವನ ಮಕ್ಕಳಿಗೂ ಹೀಗಂದನು - ಮಾಂಸವನ್ನು ನೀವು ದೇವದರ್ಶನದ ಗುಡಾರದ ಬಾಗಲಿನ ಹತ್ತಿರ ಬೇಯಿಸಿ ಅದನ್ನೂ ಪಟ್ಟಾಭಿಷೇಕಕ್ಕಾಗಿ ಪುಟ್ಟಿಯಲ್ಲಿ ಇಟ್ಟಿರುವ ಭಕ್ಷ್ಯಗಳನ್ನೂ ಅಲ್ಲೇ ಊಟಮಾಡಬೇಕು.

32 ಆರೋನನೂ ಅವನ ಮಕ್ಕಳೂ ಅದನ್ನು ತಿನ್ನಬೇಕೆಂಬದೇ ನನಗಾದ ಅಪ್ಪಣೆ. ಆ ಮಾಂಸದಲ್ಲಿಯೂ ಭಕ್ಷ್ಯಗಳಲ್ಲಿಯೂ ವಿುಕ್ಕದ್ದನ್ನು ನೀವು ಬೆಂಕಿಯಿಂದ ಸುಟ್ಟುಬಿಡಬೇಕು.

33 ಇದಲ್ಲದೆ ಈ ನಿಮ್ಮ ಯಾಜಕೋದ್ಯೋಗದ ದೀಕ್ಷೆಯು ಪೂರೈಸುವದಕ್ಕೆ ಏಳು ದಿವಸ ಹಿಡಿಯುವದಾದದರಿಂದ ಆವರೆಗೂ ನೀವು ದೇವದರ್ಶನದ ಗುಡಾರದ ಬಾಗಲಿನ ಆಚೆಗೆ ಹೋಗಬಾರದು.

34 ನಿಮ್ಮ ದೋಷಪರಿಹಾರಕ್ಕಾಗಿ ಈ ಹೊತ್ತು ಏನೇನು ನಡೆಯಿತೋ ಅದನ್ನು [ಏಳು ದಿನವೂ] ನಡಿಸಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ.

35 ಆದದರಿಂದ ನೀವು ಯೆಹೋವನ ಆಜ್ಞೆಯ ಮೇರೆಗೆ ಏಳು ದಿನವೂ ಹಗಲಿರುಳು ದೇವದರ್ಶನದ ಗುಡಾರದ ಬಾಗಲಿನ ಹತ್ತಿರ ಇರಬೇಕು; ಇಲ್ಲದಿದ್ದರೆ ಸಾಯುವಿರಿ; ಹೀಗೆಯೇ ನನಗೆ ಅಪ್ಪಣೆಯಾಯಿತು.

36 ಯೆಹೋವನು ಮೋಶೆಯ ಮೂಲಕವಾಗಿ ಆಜ್ಞಾಪಿಸಿದ್ದನ್ನೆಲ್ಲಾ ಆರೋನನೂ ಅವನ ಮಕ್ಕಳೂ ಮಾಡಿದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು