Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಜಕಕಾಂಡ 6 - ಕನ್ನಡ ಸತ್ಯವೇದವು J.V. (BSI)

1 ಯೆಹೋವನು ಮೋಶೆಗೆ ಹೇಳಿದ್ದೇನಂದರೆ -

2 ಯಾವನಾದರೂ ಮತ್ತೊಬ್ಬನಿಂದ ತನ್ನ ವಶಕ್ಕೆ ಕೊಡಲ್ಪಟ್ಟ ವಸ್ತುವಿನ ವಿಷಯದಲ್ಲಾಗಲಿ ತನ್ನ ಬಳಿಯಲ್ಲಿ ಇಡಲ್ಪಟ್ಟ ಅಡವಿನ ವಿಷಯದಲ್ಲಾಗಲಿ ತಾನು ಮಾಡಿದ ಕಳವಿನ ವಿಷಯದಲ್ಲಾಗಲಿ ಸುಳ್ಳಾಡುವದರಿಂದಲೋ ಮತ್ತೊಬ್ಬನನ್ನು ಮೋಸಗೊಳಿಸಿದ್ದರಿಂದಲೋ

3 ಮತ್ತೊಬ್ಬನು ಕಳಕೊಂಡದ್ದನ್ನು ತಾನು ಕಂಡು ಬೊಂಕಿ ಸುಳ್ಳಾಣೆಯಿಟ್ಟದ್ದರಿಂದಲೋ ಇವುಗಳಲ್ಲಿ ಯಾವ ವಿಷಯದಲ್ಲಾದರೂ ಒಬ್ಬನು ಪಾಪಮಾಡಿ ಯೆಹೋವನಿಗೆ ದ್ರೋಹಿಯಾಗಿ ದೋಷಕ್ಕೆ ಒಳಗಾದರೆ

4 ಅವನು ಆಯಾ ವಸ್ತುಗಳನ್ನೇ ಅಂದರೆ ಕದ್ದದ್ದನ್ನೂ ಮೋಸದಿಂದ ಪಡೆದದ್ದನ್ನೂ ತನ್ನ ವಶಕ್ಕೆ ತೆಗೆದುಕೊಂಡದ್ದನ್ನೂ ತಾನು ಕಂಡುಕೊಂಡದ್ದನ್ನೂ

5 ಬೇರೆ ಯಾವದರ ವಿಷಯದಲ್ಲಿ ಅವನು ಸುಳ್ಳಾಣೆಯಿಟ್ಟನೋ ಅದನ್ನೂ ಪೂರ್ತಿಯಾಗಿ ತಂದುಕೊಡಬೇಕಲ್ಲದೆ ಐದನೆಯ ಒಂದು ಪಾಲನ್ನು ಹೆಚ್ಚಾಗಿ ಕೊಡಬೇಕು. ಅವನು ಪ್ರಾಯಶ್ಚಿತ್ತಯಜ್ಞವನ್ನು ಮಾಡುವ ದಿನದಲ್ಲೇ ಅದನ್ನು ಅದರ ನ್ಯಾಯವಾದ ಒಡೆಯನಿಗೆ ಹಿಂದಕ್ಕೆ ಕೊಡಬೇಕು.

6 ಮತ್ತು ಅವನು ಪ್ರಾಯಶ್ಚಿತ್ತಕ್ಕಾಗಿ ನಿನಗೆ ಸರಿಯೆಂದು ತೋರುವ ಪೂರ್ಣಾಂಗವಾದ ಟಗರನ್ನು ಹಿಂಡಿನಿಂದ ತಂದು ಯಾಜಕನಿಗೆ ಒಪ್ಪಿಸಬೇಕು.

7 ಯಾಜಕನು ಅವನಿಗೋಸ್ಕರ ಯೆಹೋವನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡಿದಾಗ ಅವನು ಯಾವ ವಿಷಯದಲ್ಲಿ ಅಪರಾಧಕ್ಕೆ ಒಳಗಾಗಿದ್ದನೋ ಆ ವಿಷಯದಲ್ಲಿ ಅವನಿಗೆ ಕ್ಷಮಾಪಣೆಯಾಗುವದು.


ಆಯಾ ಯಜ್ಞಗಳ ವಿಷಯದಲ್ಲಿ ಯಾಜಕರು ತಿಳಿದುಕೊಳ್ಳಬೇಕಾದದ್ದು

8-9 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - ನೀನು ಆರೋನನಿಗೂ ಅವನ ವಂಶದವರಿಗೂ ಮುಂದಿನ ಸಂಗತಿಗಳನ್ನು ಆಜ್ಞಾಪಿಸಬೇಕು; ಯಾವವಂದರೆ - ಸರ್ವಾಂಗಹೋಮ ವಿಷಯವಾದ ನಿಯಮಗಳು. ಸರ್ವಾಂಗಹೋಮದ್ರವ್ಯವು ರಾತ್ರಿಯೆಲ್ಲಾ ಮರುದಿನದ ಬೆಳಗಿನವರೆಗೂ ಯಜ್ಞವೇದಿಯ ಮೇಲೆ ಉರಿಯುತ್ತಾ ಇರಬೇಕು. ಅದರಿಂದಲೇ ಯಜ್ಞವೇದಿಯ ಮೇಲಣ ಬೆಂಕಿ ಉರಿಯುತ್ತಿರಬೇಕು.

10 ಯಾಜಕನು ನಾರಿನ ನಿಲುವಂಗಿಯನ್ನು ಧರಿಸಿಕೊಂಡು ಮಾನರಕ್ಷಕವಾದ ನಾರಿನ ಚಡ್ಡಿಯನ್ನು ಹಾಕಿಕೊಂಡು ಯಜ್ಞವೇದಿಯ ಮೇಲಣ ಸರ್ವಾಂಗಹೋಮದ್ರವ್ಯದ ಬೂದಿಯನ್ನು ಎತ್ತಿ ವೇದಿಯ ಬಳಿಯಲ್ಲಿ ಇಡಬೇಕು.

11 ಅನಂತರ ಆ ವಸ್ತ್ರಗಳನ್ನು ತೆಗೆದಿಟ್ಟು ಬೇರೆ ವಸ್ತ್ರಗಳನ್ನು ಹಾಕಿಕೊಂಡು ಆ ಬೂದಿಯನ್ನು ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.

12 ಯಜ್ಞವೇದಿಯ ಮೇಲಣ ಬೆಂಕಿ ಸರ್ವಾಂಗಹೋಮದ್ರವ್ಯದಿಂದ ಉರಿಯುತ್ತಲೇ ಇರಬೇಕು; ಅದು ಆರಿಹೋಗಬಾರದು. ಪ್ರತಿದಿನವೂ ಹೊತ್ತಾರೆಯಲ್ಲಿ ಯಾಜಕನು ಕಟ್ಟಿಗೆಯನ್ನು ತಂದುಹಾಕಿ ಬೆಂಕಿ ಉರಿಸಿ ಅದರ ಮೇಲೆ ಹೋಮದ್ರವ್ಯವನ್ನು ಕ್ರಮಪಡಿಸಿ ಸಮಾಧಾನಯಜ್ಞಪಶುಗಳ ಕೊಬ್ಬನ್ನು ಅದರ ಮೇಲೆ ಹೋಮಮಾಡಬೇಕು.

13 ಬೆಂಕಿಯು ಯಜ್ಞವೇದಿಯ ಮೇಲೆ ಯಾವಾಗಲೂ ಉರಿಯುತ್ತಿರಬೇಕು; ಆರಿಹೋಗಬಾರದು.

14 ಧಾನ್ಯನೈವೇದ್ಯ ವಿಷಯವಾದ ನಿಯಮಗಳು. ಆರೋನನ ವಂಶದವರು ನೈವೇದ್ಯದ್ರವ್ಯವನ್ನು ಯೆಹೋವನ ಸನ್ನಿಧಿಯಲ್ಲಿ ಯಜ್ಞವೇದಿಯ ಎದುರಾಗಿಯೇ ಸಮರ್ಪಿಸಬೇಕು.

15 ಅವರಲ್ಲಿ ಒಬ್ಬನು ನೈವೇದ್ಯವಾದದ್ದನ್ನು ಸೂಚಿಸುವದಕ್ಕಾಗಿ ಎಣ್ಣೆ ಹೊಯಿದ ಹಿಟ್ಟಿನಲ್ಲಿ ಒಂದು ಹಿಡಿಯನ್ನೂ ಅದರ ಮೇಲಿರುವ ಧೂಪವೆಲ್ಲವನ್ನೂ ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಿ ಯೆಹೋವನಿಗೆ ಸುವಾಸನೆಯನ್ನುಂಟುಮಾಡಬೇಕು.

16 ವಿುಕ್ಕದ್ದನ್ನು ಆರೋನನೂ ಅವನ ವಂಶದವರೂ ತಿನ್ನಬಹುದು; ಅವರು ಅದರಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿಕೊಂಡು ಪವಿತ್ರಸ್ಥಳದೊಳಗೆ ಅಂದರೆ ದೇವದರ್ಶನದ ಗುಡಾರದ ಅಂಗಳದಲ್ಲಿ ತಿನ್ನಬೇಕು.

17 ಅದಕ್ಕೆ ಹುಳಿಕಲಸಿ ಸುಡಕೂಡದು. ನನಗೆ ಹೋಮರೂಪವಾಗಿ ಸಮರ್ಪಿಸಿದ ದ್ರವ್ಯಗಳಲ್ಲಿ ಅದನ್ನು ಅವರ ಪಾಲಿಗೆ ಬಿಟ್ಟಿದ್ದೇನೆ. ದೋಷಪರಿಹಾರಕ ಯಜ್ಞದ್ರವ್ಯದಂತೆಯೂ ಪ್ರಾಯಶ್ಚಿತ್ತ ಯಜ್ಞದ್ರವ್ಯದಂತೆಯೂ ಅದು ಮಹಾಪರಿಶುದ್ಧವಾದದ್ದು.

18 ಆರೋನನ ವಂಶದವರಾದ ಗಂಡಸರೆಲ್ಲರೂ ಅದನ್ನು ತಿನ್ನಬಹುದು. ಯೆಹೋವನಿಗೆ ಹೋಮವಾಗಿ ಅರ್ಪಿತವಾದ ದ್ರವ್ಯಗಳಲ್ಲಿ ಅದು ನಿಮಗೂ ನಿಮ್ಮಸಂತತಿಯವರಿಗೂ ಸಲ್ಲತಕ್ಕದ್ದೆಂಬದು ಶಾಶ್ವತ ನಿಯಮ. ಆ ದ್ರವ್ಯಗಳಿಗೆ ತಗಲಿದ್ದೆಲ್ಲಾ ಪರಿಶುದ್ಧವಾಗುವದು.

19 ಯೆಹೋವನು ಮೋಶೆಗೆ ಹೇಳಿದ್ದೇನಂದರೆ -

20 ಆರೋನನಿಗೆ ಅಭಿಷೇಕವಾದ ದಿನ ಮೊದಲುಗೊಂಡು ಅವನೂ ಅವನ ವಂಶದವರೂ ಯೆಹೋವನಿಗೆ ಸಮರ್ಪಿಸಬೇಕಾದ ಧಾನ್ಯನೈವೇದ್ಯಕ್ರಮ ಹೇಗಂದರೆ - ಅವರು ನಿತ್ಯವೂ ಮೂರು ಸೇರು ಗೋದಿ ಹಿಟ್ಟನ್ನು, ಹೊತ್ತಾರೆ ಅರ್ಧವನ್ನೂ ಸಾಯಂಕಾಲ ಅರ್ಧವನ್ನೂ ಸಮರ್ಪಿಸಬೇಕು.

21 ಕಬ್ಬಿಣದ ಹಂಚಿನ ಮೇಲೆ ಎಣ್ಣೆ ಸವರಿ ಅದನ್ನು ಸುಡಬೇಕು. ಅದನ್ನು ತರುವಾಗ ಅದು ಎಣ್ಣೆಯಿಂದ ನೆನೆದೇ ಇರಬೇಕು. ಅದನ್ನು ಭಾಗ ಭಾಗವಾಗಿ ಮಾಡಿ ಯೆಹೋವನಿಗೆ ಸುವಾಸನೆಯುಳ್ಳ ನೈವೇದ್ಯವನ್ನಾಗಿ ಸಮರ್ಪಿಸಬೇಕು.

22 ಆರೋನನ ಸಂತತಿಯವರಲ್ಲಿ ಯಾವನು ಅವನ ತರುವಾಯ ಅಭಿಷಿಕ್ತಯಾಜಕನ ಪಟ್ಟಕ್ಕೆ ಬರುವನೋ ಅವನೇ ಅದನ್ನು ಸಮರ್ಪಿಸಬೇಕು; ಇದು ಶಾಶ್ವತನಿಯಮ. ಅದನ್ನು ನಿಶ್ಶೇಷವಾಗಿ ಹೋಮಮಾಡಿಬಿಡಬೇಕು.

23 ಯಾಜಕರು ತಮಗೋಸ್ಕರ ಸಮರ್ಪಿಸುವ ನೈವೇದ್ಯದ್ರವ್ಯಗಳನ್ನು ನಿಶ್ಶೇಷವಾಗಿ ಹೋಮಮಾಡಿಬಿಡಬೇಕು; ಅದನ್ನು ತಿನ್ನಲೇಬಾರದು.

24 ಯೆಹೋವನು ಮೋಶೆಗೆ ಹೇಳಿದ್ದೇನಂದರೆ -

25 ನೀನು ಆರೋನನಿಗೂ ಅವನ ವಂಶದವರಿಗೂ ಹೀಗೆ ಆಜ್ಞಾಪಿಸು - ದೋಷಪರಿಹಾರಕ ಯಜ್ಞನಿಯಮಗಳು. ಸರ್ವಾಂಗಹೋಮದ ಪಶುವನ್ನು ವಧಿಸುವ ಸ್ಥಳದಲ್ಲೇ ದೋಷಪರಿಹಾರಕ ಯಜ್ಞಪಶುವನ್ನೂ ಯೆಹೋವನ ಸನ್ನಿಧಿಯಲ್ಲಿ ವಧಿಸಬೇಕು.

26 ಅದು ಮಹಾಪರಿಶುದ್ಧವಾದದ್ದರಿಂದ ಸಮರ್ಪಿಸುವ ಯಾಜಕನು ಅದರ ಮಾಂಸವನ್ನು ಊಟಮಾಡಬೇಕು. ಪವಿತ್ರಸ್ಥಳದೊಳಗೆ ಅಂದರೆ ದೇವದರ್ಶನದ ಗುಡಾರದ ಅಂಗಳದಲ್ಲಿ ಅದನ್ನು ಊಟಮಾಡಬೇಕು.

27 ಆ ಪಶುವಿನ ಮಾಂಸಕ್ಕೆ ಸೋಂಕಿದ್ದೆಲ್ಲಾ ಪರಿಶುದ್ಧವಾಗುವದು. ಅದರ ರಕ್ತದಲ್ಲಿ ಸ್ವಲ್ಪವಾದರೂ ಬಟ್ಟೆಯ ಮೇಲೆ ಬಿದ್ದರೆ ಆ ಬಟ್ಟೆಯನ್ನು ಪವಿತ್ರಸ್ಥಳದೊಳಗೆ ಒಗೆದುಕೊಳ್ಳಬೇಕು.

28 ಅದನ್ನು ಬೇಯಿಸಿದ ಮಣ್ಣೆನ ಪಾತ್ರೆಯನ್ನು ಒಡೆದುಬಿಡಬೇಕು. ತಾಮ್ರದ ಪಾತ್ರೆಯಲ್ಲಿ ಬೇಯಿಸಿದ್ದಾದರೆ ಆ ಪಾತ್ರೆಯನ್ನು ಬೆಳಗಿ ನೀರಿನಿಂದ ತೊಳೆಯಬೇಕು.

29 ಯಾಜಕರಲ್ಲಿ ಗಂಡಸರೆಲ್ಲರೂ ಅದನ್ನು ತಿನ್ನಬಹುದು; ಅದು ಮಹಾಪರಿಶುದ್ಧವಾದದ್ದು.

30 ಆದರೆ ದೋಷಪರಿಹಾರಕ ಯಜ್ಞಪಶುಗಳಲ್ಲಿ ಯಾವ ಪಶುವಿನ ರಕ್ತವು ದೋಷಪರಿಹಾರಕ್ಕಾಗಿ ದೇವದರ್ಶನದ ಗುಡಾರದೊಳಗೆ ತಂದಿರಬೇಕೋ ಅದರ ಮಾಂಸವನ್ನು ತಿನ್ನಲೇಬಾರದು. ಬೆಂಕಿಯಲ್ಲಿ ಸುಟ್ಟುಬಿಡಬೇಕು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು