Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಜಕಕಾಂಡ 24 - ಕನ್ನಡ ಸತ್ಯವೇದವು J.V. (BSI)


ದೇವಸ್ಥಾನದ ದೀಪಸ್ತಂಭವನ್ನೂ ನೈವೇದ್ಯವಾದ ರೊಟ್ಟಿಗಳನ್ನೂ ಕುರಿತದ್ದು

1 ಯೆಹೋವನು ಮೋಶೆಗೆ ಹೇಳಿದ್ದೇನಂದರೆ -

2 ದೇವಸ್ಥಾನದಲ್ಲಿನ ದೀಪಗಳನ್ನು ಪ್ರತಿನಿತ್ಯವೂ ಉರಿಸುವದಕ್ಕಾಗಿ ಇಸ್ರಾಯೇಲ್ಯರು ಎಣ್ಣೇಮರದ ಕಾಯಿಗಳನ್ನು ಕುಟ್ಟಿತೆಗೆದ ನಿರ್ಮಲವಾದ ಎಣ್ಣೆಯನ್ನು ನಿನಗೆ ತಂದುಕೊಡಬೇಕೆಂದು ಅವರಿಗೆ ಆಜ್ಞಾಪಿಸು.

3 ದೇವದರ್ಶನದ ಗುಡಾರದಲ್ಲಿ ಆಜ್ಞಾಶಾಸನಗಳ ಮಂಜೂಷದ ಮುಂದಣ ತೆರೆಯ ಹೊರಗೆ ಆ ದೀಪಗಳು ಯೆಹೋವನ ಸನ್ನಿಧಿಯಲ್ಲಿ ಸಾಯಂಕಾಲದಿಂದ ಉದಯದವರೆಗೂ ಉರಿಯುತ್ತಿರುವಂತೆ ಆರೋನನು ಅವುಗಳನ್ನು ಸರಿಪಡಿಸಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತನಿಯಮ.

4 ಅವನು ಪ್ರತಿನಿತ್ಯವೂ ಯೆಹೋವನ ಸನ್ನಿಧಿಯಲ್ಲಿ ಹಣತಿಗಳನ್ನು ಆ ಚೊಕ್ಕಬಂಗಾರದ ದೀಪಸ್ತಂಭದ ಮೇಲೆ ಸರಿಯಾಗಿ ಇಡಬೇಕು.

5 ಅದಲ್ಲದೆ ನೀನು ಗೋದಿಯ ಹಿಟ್ಟಿನಿಂದ ಹನ್ನೆರಡು ರೊಟ್ಟಿಗಳನ್ನು ಮಾಡಬೇಕು; ಪ್ರತಿಯೊಂದು ರೊಟ್ಟಿಯು ಆರಾರು ಸೇರಿನದಾಗಿರಬೇಕು.

6 ಅವುಗಳನ್ನು ಆರಾರರ ಮೇರೆಗೆ ಎರಡು ರಾಶಿಗಳಾಗಿ ಚೊಕ್ಕ ಬಂಗಾರದ ಮೇಜಿನ ಮೇಲೆ ಯೆಹೋವನ ಸನ್ನಿಧಿಯಲ್ಲಿ ಇಡಬೇಕು.

7 ಒಂದೊಂದು ರಾಶಿಯ ಮೇಲೆ ಸ್ವಚ್ಫವಾದ ಧೂಪವನ್ನು ಇಡಬೇಕು. ಆ ರೊಟ್ಟಿಗಳ ನೈವೇದ್ಯವನ್ನು ಸೂಚಿಸುವದಕ್ಕಾಗಿ ಆ ಧೂಪವೇ ಯೆಹೋವನಿಗೆ ಹೋಮಮಾಡಲ್ಪಡಬೇಕು.

8 ಯಾಜಕನು ಯಾವಾಗಲೂ ಪ್ರತಿ ಸಬ್ಬತ್‍ದಿನದಲ್ಲಿ ರೊಟ್ಟಿಗಳನ್ನು ತಂದು ಯೆಹೋವನ ಸನ್ನಿಧಿಯಲ್ಲಿ ಕ್ರಮಪಡಿಸಬೇಕು. ಶಾಶ್ವತವಾದ ನಿಬಂಧನೆಯ ಮೇರೆಗೆ ಅವುಗಳನ್ನು ಇಸ್ರಾಯೇಲ್ಯರಿಗೋಸ್ಕರ ಯೆಹೋವನಿಗೆ ಸಮರ್ಪಿಸಬೇಕು.

9 ಅವು ಆರೋನನಿಗೂ ಅವನ ಸಂತತಿಯವರಿಗೂ ಸಲ್ಲಬೇಕು. ಮಹಾಪರಿಶುದ್ಧವಾದ ಅವುಗಳನ್ನು ದೇವಸ್ಥಾನದ ಪ್ರಾಕಾರದಲ್ಲಿಯೇ ತಿನ್ನಬೇಕು. ಅವು ಯೆಹೋವನಿಗೆ ಸಮರ್ಪಿತವಾದ ಹೋಮದ್ರವ್ಯಗಳಿಗೆ ಸೇರಿದವುಗಳಾದದರಿಂದ ಶಾಶ್ವತನಿಯಮದ ಪ್ರಕಾರ ಯಾಜಕರಿಗೇ ಸಲ್ಲಬೇಕು.


ದೇವದೂಷಕನಿಗೆ ಮರಣಶಿಕ್ಷೆಯೂ ಮನುಷ್ಯನನ್ನು ಅಂಗಹೀನಮಾಡಿದವನಿಗೆ ಪ್ರತಿಯಾಗಿ ಅಂಗಭಂಗವೂ ಆಗಬೇಕೆಂಬ ನಿಯಮ

10 ಇಸ್ರಾಯೇಲ್ ಸ್ತ್ರೀಯಲ್ಲಿ ಐಗುಪ್ತ ಪುರುಷನಿಂದ ಹುಟ್ಟಿದವನೊಬ್ಬನು ಬಂದು ಇಸ್ರಾಯೇಲ್ಯರ ಪಾಳೆಯದಲ್ಲಿ ಇಸ್ರಾಯೇಲ್ಯನಾದ ಒಬ್ಬ ಮನುಷ್ಯನ ಸಂಗಡ ಜಗಳವಾಡುತ್ತಾ ಬೈದು

11 [ಯೆಹೋವನ] ಹೆಸರನ್ನು ದೂಷಿಸಿದದರಿಂದ ಅವನನ್ನು ಮೋಶೆಯ ಬಳಿಗೆ ಹಿಡಿದು ತಂದರು. ಅವನ ತಾಯಿಯು ದಾನ್‍ಕುಲದ ದಿಬ್ರೀಯ ಮಗಳಾದ ಶೆಲೋಮೀತ್ ಎಂಬವಳು.

12 ಅವನ ವಿಷಯವಾಗಿ ಯೆಹೋವನ ತೀರ್ಪನ್ನು ತಿಳುಕೊಳ್ಳುವ ಪರ್ಯಂತರ ಅವನನ್ನು ಕಾವಲಲ್ಲಿರಿಸಿದರು.

13 ಆಗ ಯೆಹೋವನು ಮೋಶೆಗೆ ಹೇಳಿದ್ದೇನಂದರೆ -

14 ಆ ದೂಷಿಸಿದವನನ್ನು ಪಾಳೆಯದ ಹೊರಗೆ ಒಯ್ಯಬೇಕು. ಅವನ ದೂಷಣೆಯ ಮಾತುಗಳನ್ನು ಕೇಳಿದವರೆಲ್ಲರೂ ಅವನ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟನಂತರ ಸಮೂಹದವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು.

15 ಮತ್ತು ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳಬೇಕು - ತನ್ನ ದೇವರನ್ನು ದೂಷಿಸಿದವನು ಆ ದೋಷದ ಫಲವನ್ನು ಅನುಭವಿಸಬೇಕು.

16 ಯೆಹೋವನ ಹೆಸರನ್ನು ನಿಂದಿಸಿದವನಿಗೆ ಮರಣಶಿಕ್ಷೆಯಾಗಬೇಕು; ಸಮೂಹದವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. ಅನ್ಯದೇಶಸ್ಥನೇಯಾಗಲಿ ಸ್ವದೇಶಸ್ಥನೇಯಾಗಲಿ ಯೆಹೋವನ ಹೆಸರನ್ನು ನಿಂದಿಸಿದರೆ ಅವನಿಗೆ ಮರಣಶಿಕ್ಷೆಯಾಗಬೇಕು.

17 ಮನುಷ್ಯನನ್ನು ಹೊಡೆದು ಕೊಂದವನಿಗೆ ಮರಣ ಶಿಕ್ಷೆಯಾಗಬೇಕು.

18 ಪಶುವನ್ನು ಹೊಡೆದು ಕೊಂದವನಿಂದ ಅದಕ್ಕೆ ಪ್ರತಿಯಾಗಿ ಈಡನ್ನು ಕೊಡಿಸಬೇಕು; ಪ್ರಾಣಿಗೆ ಪ್ರತಿಯಾಗಿ ಪ್ರಾಣಿಯನ್ನು ಕೊಡಿಸಬೇಕು.

19 ಯಾವನಾದರೂ ಮತ್ತೊಬ್ಬನನ್ನು ಅಂಗಹೀನಮಾಡಿದರೆ ಅವನು ಮಾಡಿದಂತೆಯೇ ಅವನಿಗೆ ಮಾಡಿಸಬೇಕು.

20 ಅವಯವವನ್ನು ಮುರಿದವನಿಗೆ ಅವಯವವನ್ನು ಮುರಿಯುವದೇ ಶಿಕ್ಷೆ. ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗಿಸಬೇಕು. ಮತ್ತೊಬ್ಬನನ್ನು ಅಂಗಹೀನ ಮಾಡಿದವನಿಗೆ ಈ ಪ್ರಕಾರ ಪ್ರತೀಕಾರ ಮಾಡಿಸಬೇಕು.

21 ಪಶುವನ್ನು ಕೊಂದವನು ಅದಕ್ಕೆ ಬದಲಾಗಿ ಈಡು ಕೊಡಬೇಕು. ಮನುಷ್ಯನನ್ನು ಕೊಂದವನಿಗೆ ಮರಣಶಿಕ್ಷೆಯಾಗಬೇಕು.

22 ಅನ್ಯರಿಗಾಗಲಿ ಸ್ವದೇಶದವರಿಗಾಗಲಿ ಪಕ್ಷಪಾತವಿಲ್ಲದೆ ಒಂದೇ ವಿಧಿಯಿರಬೇಕು. ನಾನು ನಿಮ್ಮ ದೇವರಾದ ಯೆಹೋವನು.

23 ಮೋಶೆ ಈ ಮಾತುಗಳನ್ನು ಇಸ್ರಾಯೇಲ್ಯರಿಗೆ ತಿಳಿಸಲಾಗಿ ಅವರು ದೂಷಿಸಿದವನಾದ ಆ ಮನುಷ್ಯನನ್ನು ಪಾಳೆಯದ ಹೊರಕ್ಕೆ ತೆಗೆದುಕೊಂಡುಹೋಗಿ ಕಲ್ಲೆಸೆದು ಕೊಂದುಬಿಟ್ಟರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲ್ಯರು ಮಾಡಿದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು