Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಜಕಕಾಂಡ 13 - ಕನ್ನಡ ಸತ್ಯವೇದವು J.V. (BSI)


ಕುಷ್ಠರೋಗದಿಂದುಂಟಾಗುವ ಅಪವಿತ್ರತೆಯನ್ನೂ ಅದರ ಶುದ್ಧೀಕರಣವನ್ನೂ ಕುರಿತದ್ದು

1 ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನಂದರೆ -

2 ಒಬ್ಬ ಮನುಷ್ಯನ ಮೈಮೇಲೆ ಬಾವಾಗಲಿ ಗುಳ್ಳೆಯಾಗಲಿ ಹೊಳೆಯುವ ಮಚ್ಚೆಯಾಗಲಿ ಉಂಟಾಗಿ ಅದರಲ್ಲಿ ಕುಷ್ಠರೋಗದ ಲಕ್ಷಣಗಳು ತೋರಿದರೆ ಅವನನ್ನು ಮಹಾಯಾಜಕನಾದ ಆರೋನನ ಬಳಿಗೆ ಇಲ್ಲವೆ ಆರೋನನ ಮಕ್ಕಳಾದ ಯಾಜಕರಲ್ಲಿ ಒಬ್ಬನ ಬಳಿಗೆ ಕರಕೊಂಡು ಬರಬೇಕು.

3 ಯಾಜಕನು ಅವನ ಚರ್ಮದಲ್ಲಿರುವ ಮಚ್ಚೆಯನ್ನು ನೋಡುವಾಗ ಆ ಮಚ್ಚೆಯಲ್ಲಿರುವ ರೋಮ ಬೆಳ್ಳಗಾಗಿಹೋಗಿದ್ದರೆ ಮತ್ತು ಆ ಮಚ್ಚೆ ವಿುಕ್ಕ ಚರ್ಮಕ್ಕಿಂತ ತಗ್ಗಾಗಿದ್ದರೆ ಅದು ಕುಷ್ಠರೋಗ. ಯಾಜಕನು ಅದನ್ನು ಪರೀಕ್ಷಿಸಿ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.

4 ಆ ಹೊಳೆಯುವ ಮಚ್ಚೆ ಬೆಳ್ಳಗಾಗಿದ್ದು ವಿುಕ್ಕ ಚರ್ಮಕ್ಕಿಂತ ತಗ್ಗಾಗಿರದೆ ಹೋದರೆ ಮತ್ತು ಅಲ್ಲಿರುವ ರೋಮ ಬೆಳ್ಳಗಾಗದಿದ್ದರೆ ಯಾಜಕನು ಆ ಮಚ್ಚೆಯಿದ್ದವನನ್ನು ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು.

5 ಏಳನೆಯ ದಿನದಲ್ಲಿ ಯಾಜಕನು ಅವನನ್ನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಳ್ಳದೆ ಮೊದಲು ಇದ್ದಂತೆಯೇ ತೋರಿದರೆ ಯಾಜಕನು ಇನ್ನು ಏಳು ದಿನಗಳವರೆಗೂ ಅವನನ್ನು ಪ್ರತ್ಯೇಕವಾಗಿ ಇರಿಸಬೇಕು. ಆ

6 ಏಳು ದಿನಗಳಾದ ಮೇಲೆ ಯಾಜಕನು ತಿರಿಗಿ ಅವನನ್ನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಳ್ಳದೆ ಮೊಬ್ಬಾಗಿದ್ದರೆ ಯಾಜಕನು ಅದು ಬರೀ ಗುಳ್ಳೆಯೆಂದು ತಿಳಿದು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು; ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗುವನು.

7 ಆದರೆ ಅವನು ತನ್ನ ಶುದ್ಧಿಯ ವಿಷಯದಲ್ಲಿ ತನ್ನನ್ನು ಯಾಜಕನಿಗೆ ತೋರಿಸಿಕೊಂಡನಂತರ ಆ ಗುಳ್ಳೆ ದೇಹದ ಚರ್ಮದಲ್ಲಿ ಹರಡಿಕೊಂಡರೆ ಅವನು ತಿರಿಗಿ ಯಾಜಕನಿಗೆ ತೋರಿಸಿಕೊಳ್ಳಬೇಕು.

8 ಯಾಜಕನು ನೋಡುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಂಡಿದ್ದರೆ ಅದು ಕುಷ್ಠವೆಂದು ತಿಳಿದು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.

9 ಕುಷ್ಠರೋಗದ ಚಿಹ್ನೆಗಳು ಯಾವನಲ್ಲಾದರೂ ಕಾಣಬಂದರೆ ಅವನನ್ನು ಯಾಜಕನ ಬಳಿಗೆ ಕರಕೊಂಡು ಬರಬೇಕು.

10 ಯಾಜಕನು ಅವನನ್ನು ನೋಡುವಾಗ ದೇಹದ ಚರ್ಮದಲ್ಲಿ ಬೆಳ್ಳಗಾದ ಬಾವು ಇದ್ದರೆ ಮತ್ತು ಅಲ್ಲಿರುವ ರೋಮವು ಬೆಳ್ಳಗಾಗಿಹೋಗಿದ್ದರೆ ಮತ್ತು ಆ ಬಾವಿನಲ್ಲಿ ಮಾಂಸ ಕಾಣಿಸಿದರೆ ಅದು ಹಳೇ ಕುಷ್ಠರೋಗದ ಗುರುತು.

11 ಅವನು ಅಶುದ್ಧನಾದದರಿಂದ ಯಾಜಕನು ಅವನನ್ನು ಪ್ರತ್ಯೇಕಿಸದೆ ಆಗಲೇ ಅಶುದ್ಧನೆಂದು ನಿರ್ಣಯಿಸಬೇಕು.

12 ಆದರೆ ಒಬ್ಬನ ಚರ್ಮದಲ್ಲಿ ತೊನ್ನು ಹತ್ತಿ ಯಾಜಕನು ನೋಡುವ ಎಲ್ಲಾ ಕಡೆಯಲ್ಲಿಯೂ ತಲೆ ಮೊದಲುಗೊಂಡು ಅಂಗಾಲಿನವರೆಗೂ ಹರಡಿಕೊಂಡಿದ್ದರೆ

13 ಯಾಜಕನು ನೋಡುವಾಗ ಆ ತೊನ್ನು ದೇಹದಲ್ಲೆಲ್ಲಾ ವ್ಯಾಪಿಸಿಕೊಂಡಿದ್ದರೆ ಅಂಥವನನ್ನು ಶುದ್ಧನೆಂದು ಯಾಜಕನು ನಿರ್ಣಯಿಸಬೇಕು. ಅವನ ಚರ್ಮವೆಲ್ಲಾ ಬೆಳ್ಳಗಾಗಿ ಹೋದದರಿಂದ ಅವನು ಶುದ್ಧನು.

14 ಆದರೆ ಅಂಥವನ ದೇಹದಲ್ಲಿ ಯಾವಾಗಲಾದರೂ ಮಾಂಸ ಕಾಣಬಂದರೆ ಅವನು ಅಶುದ್ಧನಾಗುವನು.

15 ಯಾಜಕನು ಆ ಮಾಂಸವನ್ನು ನೋಡಿ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. ಅಂಥ ಮಾಂಸವು ಅಶುದ್ಧವೇ; ಅದು ಕುಷ್ಠವು.

16 ಆದರೆ ಆ ಮಾಂಸವು ಅದೇ ಪ್ರಕಾರವಾಗಿ ಇರದೆ ತಿರಿಗಿ ಬೆಳ್ಳಗಾದರೆ ಅವನು ಯಾಜಕನ ಬಳಿಗೆ ಬರಬೇಕು.

17 ಯಾಜಕನು ನೋಡುವಾಗ ಆ ಮಚ್ಚೆಯು ಬೆಳ್ಳಗಾಗಿಹೋಗಿದ್ದರೆ ಆ ಮನುಷ್ಯನನ್ನು ಶುದ್ಧನೆಂದು ನಿರ್ಣಯಿಸಬೇಕು; ಅವನು ಶುದ್ಧನೇ.

18 ಒಬ್ಬನ ದೇಹದ ಚರ್ಮದಲ್ಲಿ ಹುಣ್ಣು ಆಗಿದ್ದು ವಾಸಿಯಾದ ಮೇಲೆ

19 ಅದು ಇದ್ದ ಸ್ಥಳದಲ್ಲಿ ಬಿಳೀ ಬಾವಾಗಲಿ ಕೆಂಪು ಬಿಳುಪು ವಿುಶ್ರವಾಗಿ ಹೊಳೆಯುವ ಕಲೆಯಾಗಲಿ ಉಂಟಾದರೆ ಅವನು ತನ್ನನ್ನು ಯಾಜಕನಿಗೆ ತೋರಿಸಿಕೊಳ್ಳಬೇಕು.

20 ಯಾಜಕನು ನೋಡುವಾಗ ಆ ಕಲೆ ವಿುಕ್ಕ ಚರ್ಮಕ್ಕಿಂತ ತಗ್ಗಾಗಿ ತೋರಿದರೆ ಮತ್ತು ಅದರಲ್ಲಿರುವ ರೋಮ ಬೆಳ್ಳಗಾಗಿ ಹೋಗಿದ್ದರೆ ಆ ಹುಣ್ಣಿನಲ್ಲಿ ಕುಷ್ಠಹುಟ್ಟಿದದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು.

21 ಆದರೆ ಯಾಜಕನು ನೋಡುವಾಗ ಅದರಲ್ಲಿ ಬಿಳೀ ರೋಮವಿಲ್ಲದೆ ಹೋದರೆ ಮತ್ತು ಆ ಕಲೆ ವಿುಕ್ಕ ಚರ್ಮಕ್ಕಿಂತ ತಗ್ಗಾಗದೆ ಮೊಬ್ಬಾಗಿದ್ದರೆ ಯಾಜಕನು ಅವನನ್ನು ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.

22 ತರುವಾಯ ಅದು ಚರ್ಮದಲ್ಲಿ ಹರಡಿಕೊಂಡಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು; ಅದು ಕುಷ್ಠರೋಗವೇ.

23 ಆದರೆ ಆ ಹೊಳೆಯುವ ಕಲೆ ಹರಡಿಕೊಳ್ಳದೆ ಮೊದಲಿದ್ದಂತೆಯೇ ಇದ್ದರೆ ಅದು ಆ ಹುಣ್ಣಿನ ಕಲೆಯೆಂದು ತಿಳುಕೊಂಡು ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು.

24 ಒಬ್ಬನ ದೇಹದ ಚರ್ಮದಲ್ಲಿ ಬೆಂಕಿಯಿಂದುಂಟಾದ ಬೊಬ್ಬೆ ಇರಲಾಗಿ ಆ ಬೊಬ್ಬೆಯ ಸ್ಥಳವು ಹೊಳೆಯುವ ಕಲೆಯಾಗಿ ಬೆಳ್ಳಗಾಗಿಯಾಗಲಿ ಕೆಂಪು ಬಿಳುಪು ವಿುಶ್ರವಾಗಿಯಾಗಲಿ ಇದ್ದರೆ ಯಾಜಕನು ಅದನ್ನು ನೋಡಬೇಕು.

25 ಅವನು ನೋಡುವಾಗ ಆ ಹೊಳೆಯುವ ಕಲೆಯಲ್ಲಿರುವ ರೋಮವು ಬೆಳ್ಳಗಾಗಿಹೋಗಿದ್ದರೆ ಮತ್ತು ಆ ಕಲೆಯು ವಿುಕ್ಕ ಚರ್ಮಕ್ಕಿಂತ ತಗ್ಗಾಗಿ ತೋರಿದರೆ ಅದು ಆ ಬೊಬ್ಬೆಯಲ್ಲಿ ಹುಟ್ಟಿದ ಕುಷ್ಠವೆಂದು ತಿಳಿದು ಯಾಜಕನು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.

26 ಆದರೆ ಯಾಜಕನು ನೋಡುವಾಗ ಆ ಹೊಳೆಯುವ ಕಲೆಯಲ್ಲಿ ಬಿಳೀ ರೋಮವಿಲ್ಲದೆ ಹೋದರೆ ಮತ್ತು ಅದು ವಿುಕ್ಕ ಚರ್ಮಕ್ಕಿಂತ ತಗ್ಗಾಗಿ ತೋರದೆ ಮೊಬ್ಬಾಗಿಹೋಗಿದ್ದರೆ ಯಾಜಕನು ಅವನನ್ನು ಏಳು ದಿನಗಳ ತನಕ ಪ್ರತ್ಯೇಕವಾಗಿ ಇರಿಸಬೇಕು.

27 ಏಳನೆಯ ದಿನದಲ್ಲಿ ಯಾಜಕನು ಅವನನ್ನು ನೋಡುವಾಗ ಅದು ಚರ್ಮದಲ್ಲಿ ಹರಡಿಕೊಂಡಿದ್ದರೆ ಅದು ಕುಷ್ಠರೋಗವೆಂದು ತಿಳಿದು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.

28 ಆ ಹೊಳೆಯುವ ಕಲೆಯು ಚರ್ಮದಲ್ಲಿ ಹರಡಿಕೊಳ್ಳದೆ ಮೊದಲಿನಂತೆಯೇ ಇದ್ದು ಮೊಬ್ಬಾಗಿಹೋಗಿದ್ದರೆ ಅದು ಬೆಂಕಿಸುಟ್ಟ ಬೊಬ್ಬೆಯೆಂದು ತಿಳಿದು ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು.

29 ಹೆಂಗಸಿನ ತಲೆಯಲ್ಲಿ ಆಗಲಿ ಗಂಡಸಿನ ತಲೆಯಲ್ಲಿ ಅಥವಾ ಗಡ್ಡದಲ್ಲಿ ಆಗಲಿ ಕಲೆಯುಂಟಾದರೆ ಯಾಜಕನು ಅದನ್ನು ನೋಡಬೇಕು.

30 ಆಗ ಅದು ವಿುಕ್ಕ ಚರ್ಮಕ್ಕಿಂತ ತಗ್ಗಾಗಿ ತೋರಿದರೆ ಮತ್ತು ಅದರಲ್ಲಿ ಹಳದಿ ಬಣ್ಣವುಳ್ಳ ಸಣ್ಣ ಕೂದಲು ಇದ್ದರೆ ಅದು ತಲೆಯಲ್ಲಾಗಲಿ ಗಡ್ಡದಲ್ಲಾಗಲಿ ಉಂಟಾದ ಕುಷ್ಠವನ್ನು ಸೂಚಿಸುವ ದದ್ದು ಆಗಿರುವದರಿಂದ ಯಾಜಕನು ಅಂಥವನನ್ನು ಅಶುದ್ಧನೆಂದು ನಿರ್ಣಯಿಸಬೇಕು.

31 ಯಾಜಕನು ಆ ದದ್ದನ್ನು ನೋಡುವಾಗ ಅದು ವಿುಕ್ಕ ಚರ್ಮಕ್ಕಿಂತ ತಗ್ಗಾಗಿ ತೋರದೆ ಹೋದಾಗ್ಯೂ ಅದು ಇರುವ ಕಡೆ ಕರೇಕೂದಲು ಇಲ್ಲದಿದ್ದರೆ ಯಾಜಕನು ಅವನನ್ನು ಏಳು ದಿನಗಳ ತನಕ ಪ್ರತ್ಯೇಕವಾಗಿ ಇರಿಸಬೇಕು.

32 ಏಳನೆಯ ದಿನದಲ್ಲಿ ಯಾಜಕನು ನೋಡುವಾಗ ಆ ದದ್ದು ಹರಡಿಕೊಳ್ಳದೆ ಇದ್ದರೆ ಮತ್ತು ಅದು ಇರುವ ಕಡೆ ಹಳದಿ ಬಣ್ಣದ ಕೂದಲು ಇಲ್ಲದಿದ್ದರೆ ಮತ್ತು ಅದು ವಿುಕ್ಕ ಚರ್ಮಕ್ಕಿಂತ ತಗ್ಗಾಗಿ ತೋರದೆಹೋದರೆ ಅವನು ಕ್ಷೌರ ಮಾಡಿಸಿಕೊಳ್ಳಬೇಕು.

33 ಆ ದದ್ದು ಇರುವ ಭಾಗವನ್ನು ಮಾತ್ರ ಕ್ಷೌರ ಮಾಡಿಸಿಕೊಳ್ಳಬಾರದು. ಯಾಜಕನು ಅವನನ್ನು ಇನ್ನು ಏಳು ದಿನಗಳವರೆಗೂ ಪ್ರತ್ಯೇಕಿಸಬೇಕು.

34 ಏಳನೆಯ ದಿನದಲ್ಲಿ ಯಾಜಕನು ತಿರಿಗಿ ಆ ದದ್ದನ್ನು ನೋಡುವಾಗ ಅದು ಚರ್ಮದಲ್ಲಿ ಹರಡಿಕೊಳ್ಳದೆ ಹೋಗಿದ್ದರೆ ವಿುಕ್ಕ ಚರ್ಮಕ್ಕಿಂತ ತಗ್ಗಾಗಿ ತೋರದೆ ಇದ್ದರೆ ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡಾಗ ಶುದ್ಧನಾಗುವನು.

35 ಆದರೆ ಅವನು ಶುದ್ಧನೆಂದು ನಿರ್ಣಯಿಸಲ್ಪಟ್ಟ ಮೇಲೆ ಆ ದದ್ದು ಚರ್ಮದಲ್ಲಿ ಹರಡಿಕೊಂಡರೆ ಯಾಜಕನು ಅವನನ್ನು ನೋಡಬೇಕು;

36 ಆದರೆ ಹಳದಿಬಣ್ಣದ ಕೂದಲು ಇದೆಯೋ ಇಲ್ಲವೋ ಎಂದು ನೋಡಬೇಕಾದ ಅಗತ್ಯವಿಲ್ಲ; ಅವನು ಅಶುದ್ಧನೇ.

37 ಆ ದದ್ದು ಮೊದಲು ಇದ್ದಂತೆಯೇ ಇದ್ದು ಅದರಲ್ಲಿ ಕರೇ ಕೂದಲು ಹುಟ್ಟಿದ್ದರೆ ಅದು ವಾಸಿಯಾಯಿತು. ಅವನು ಶುದ್ಧನು; ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು.

38 ಗಂಡಸಿಗಾಗಲಿ ಹೆಂಗಸಿಗಾಗಲಿ ಚರ್ಮದಲ್ಲಿ ಹೊಳೆಯುವ ಬಿಳುಪಾದ ಕಲೆಗಳು ಅಲ್ಲಲ್ಲಿ ಹುಟ್ಟಿದ್ದರೆ ಯಾಜಕನು ಅವುಗಳನ್ನು ನೋಡಬೇಕು.

39 ಆ ಹೊಳೆಯುವ ಕಲೆಗಳು ಮೊಬ್ಬಾದ ಬಿಳೀ ಬಣ್ಣವಾಗಿದ್ದರೆ ಅದು ದೇಹದ ಚರ್ಮದಲ್ಲಿ ಹುಟ್ಟಿದ ಚಿಬ್ಬು; ಅವನು ಶುದ್ಧನು.

40 ಯಾವನಾದರೂ ತಲೆಯ ಕೂದಲು ಉದುರಿಹೋದದರಿಂದ ಬೋಳತಲೆಯವನಾದರೂ ಅವನು ಶುದ್ಧನೇ.

41 ಮುಂದಲೆಯ ಕೂದಲು ಉದುರಿದರೆ ಅವನು ಪಟ್ಟೆ ತಲೆಯವನಾದರೂ ಶುದ್ಧನೇ.

42 ಆದರೆ ಬೋಳತಲೆಯಲ್ಲಾಗಲಿ ಪಟ್ಟೆತಲೆಯಲ್ಲಾಗಲಿ ಕೆಂಪು ಬಿಳುಪು ವಿುಶ್ರವಾದ ಮಚ್ಚೆ ಹುಟ್ಟಿದರೆ ಅದು ಕುಷ್ಠವೇ.

43 ಯಾಜಕನು ಅವನನ್ನು ನೋಡಬೇಕು. ಆಗ ಅದರಿಂದುಂಟಾದ ಬಾವು ಕೆಂಪು ಬಿಳುಪು ವಿುಶ್ರವಾಗಿ ಚರ್ಮದಲ್ಲಿನ ಕುಷ್ಠದಂತೆ ತೋರಿದರೆ ಅವನು ಕುಷ್ಠರೋಗಿ; ಅಶುದ್ಧನು.

44 ಅವನ ತಲೆಯ ಮೇಲೆ ಕುಷ್ಠದ ಗುರುತು ಕಾಣಿಸಿದದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು.

45 ಯಾರಲ್ಲಿ ಕುಷ್ಠದ ಗುರುತು ಕಾಣಬಂತೋ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡು ತಲೆಯನ್ನು ಕೆದರಿಕೊಂಡು ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡು - ನಾನು ಅಶುದ್ಧನು ಅಶುದ್ಧನು ಎಂದು ಕೂಗಿಕೊಳ್ಳಬೇಕು.

46 ಆ ರೋಗದ ಗುರುತುಗಳು ಅವನಲ್ಲಿ ಇರುವ ದಿನಗಳೆಲ್ಲಾ ಅವನು ಅಶುದ್ಧನಾಗಿರುವನು. ಅವನು ಅಶುದ್ಧನಾದದರಿಂದ ಪ್ರತ್ಯೇಕವಾಗಿಯೇ ವಾಸವಾಗಿರಬೇಕು; ಅವನ ನಿವಾಸವು ಪಾಳೆಯದ ಹೊರಗೆ ಇರಬೇಕು.

47 ಕುಷ್ಠರೋಗದ ಗುರುತು ಬಟ್ಟೆಯಲ್ಲಿ ಕಂಡುಬಂದಾಗ ಅದು ಉಣ್ಣೆಯ ಬಟ್ಟೆಯಾಗಲಿ ನಾರಿನ ಬಟ್ಟೆಯಾಗಲಿ,

48 ನಾರಿನ ಅಥವಾ ಉಣ್ಣೆಯ ಹಾಸಿನಲ್ಲಾಗಲಿ ಹೊಕ್ಕಿನಲ್ಲಾಗಲಿ, ಇಲ್ಲವೆ ತೊಗಲಿನಲ್ಲಾಗಲಿ ತೊಗಲಿನಿಂದ ಮಾಡಲ್ಪಟ್ಟ ವಸ್ತುವಿನಲ್ಲಾಗಲಿ,

49 ಆ ಬಟ್ಟೆ ತೊಗಲು ಹಾಸು ಹೊಕ್ಕು ತೊಗಲಿನ ಸಾಮಾನುಗಳಲ್ಲಿ ಹಸುರಾಗಿ ಇಲ್ಲವೆ ಕೆಂಪಾಗಿ ಮಚ್ಚೆಕಾಣಿಸಿದರೆ ಅದು ಕುಷ್ಠದ ಗುರುತು; ಅದನ್ನು ಯಾಜಕನಿಗೆ ತೋರಿಸಬೇಕು.

50 ಯಾಜಕನು ಅದನ್ನು ನೋಡಿ ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇಡಿಸಬೇಕು.

51 ಏಳನೆಯ ದಿನದಲ್ಲಿ ಅವನು ಅದನ್ನು ನೋಡುವಾಗ ಆ ಬಟ್ಟೆಯ ಹಾಸಿನಲ್ಲಾಗಲಿ ಹೊಕ್ಕಿನಲ್ಲಾಗಲಿ ಇಲ್ಲವೆ ಯಾವದಾದರೂ ಒಂದು ಕೆಲಸಕ್ಕೆ ಉಪಯೋಗವಾಗಿರುವ ಆ ತೊಗಲಿನಲ್ಲಿ ಆ ಮಚ್ಚೆ ಹರಡಿಕೊಂಡಿದ್ದರೆ ಅದು ಪ್ರಾಣಕ್ಕೆ ಅಪಾಯಕರವಾದ ಕುಷ್ಠವೇ; ಆ ವಸ್ತು ಅಶುದ್ಧ.

52 ಆ ವಸ್ತುವು ಬಟ್ಟೆಯಾದರೂ ಹಾಸಾದರೂ ಹೊಕ್ಕಾದರೂ ಉಣ್ಣೆಯದಾದರೂ ನಾರಿನದಾದರೂ ತೊಗಲಿನದಾದರೂ ಅದರಲ್ಲಿ ಪ್ರಾಣಕ್ಕೆ ಅಪಾಯಕರವಾದ ಕುಷ್ಠವಿರುವದರಿಂದ ಅದನ್ನು ಬೆಂಕಿಯಿಂದ ಸುಡಿಸಿಬಿಡಬೇಕು.

53 ಆದರೆ ಯಾಜಕನು ನೋಡುವಾಗ ಆ ವಸ್ತುವಿನಲ್ಲಿ ಅಂದರೆ ಆ ಬಟ್ಟೆ, ಹಾಸು, ಹೊಕ್ಕು, ತೊಗಲಿನ ಸಾಮಾನು ಇವುಗಳಲ್ಲಿ ಆ ಮಚ್ಚೆ ಹರಡಿಕೊಳ್ಳದಿದ್ದರೆ

54 ಅದನ್ನು ನೀರಿನಿಂದ ತೊಳೆಯಬೇಕೆಂದು ಯಾಜಕನು ಅಪ್ಪಣೆಕೊಟ್ಟು ಇನ್ನೂ ಏಳು ದಿನಗಳ ತನಕ ಅದನ್ನು ಪ್ರತ್ಯೇಕವಾಗಿ ಇಡಿಸಬೇಕು.

55 ಆ ಮಚ್ಚೆ ಇದ್ದ ವಸ್ತುವನ್ನು ತೊಳೆಸಿದ ಮೇಲೆ ಯಾಜಕನು ನೋಡುವಾಗ ಆ ಮಚ್ಚೆಯು ಹರಡಿಕೊಳ್ಳದೆ ಇದ್ದಾಗ್ಯೂ ಅದರ ಬಣ್ಣ ಮೊದಲಿದ್ದಂತೆಯೇ ಇದ್ದರೆ ಆ ವಸ್ತು ಅಶುದ್ಧ. ಕುಷ್ಠರೋಗದ ಗುರುತು ಅದರ ಮೇಲಣ ಕಡೆಯಿಂದಾಗಲಿ ಕೆಳಗಣ ಕಡೆಯಿಂದಾಗಲಿ ಆ ವಸ್ತುವಿನೊಳಗೆ ವ್ಯಾಪಿಸಿದದರಿಂದ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.

56 ಆದರೆ ತೊಳೆದ ಬಟ್ಟೆಯನ್ನು ಯಾಜಕನು ನೋಡುವಾಗ ಅದರಲ್ಲಿದ್ದ ಮಚ್ಚೆ ಮೊಬ್ಬಾಗಿಹೋಗಿದ್ದರೆ ಅವನು ಆ ಮಚ್ಚೆ ಇರುವ ಭಾಗವನ್ನು ಆ ಬಟ್ಟೆಯಿಂದಾಗಲಿ ತೊಗಲಿನಿಂದಾಗಲಿ ಹಾಸಿನಿಂದಾಗಲಿ ಹೊಕ್ಕಿನಿಂದಾಗಲಿ ಕತ್ತರಿಸಿಬಿಡಬೇಕು.

57 ಆಮೇಲೆಯೂ ಕುಷ್ಠದ ಮಚ್ಚೆ ಆ ಬಟ್ಟೆಯಲ್ಲಾಗಲಿ ಹಾಸಿನಲ್ಲಾಗಲಿ ಹೊಕ್ಕಿನಲ್ಲಾಗಲಿ ತೊಗಲಿನ ಸಾಮಾನಿನಲ್ಲಾಗಲಿ ಕಂಡುಬಂದರೆ ಕುಷ್ಠರೋಗವು ಇನ್ನೂ ಅದರಲ್ಲಿ ಉಂಟೆಂದು ತಿಳಿದುಕೊಳ್ಳಬೇಕು. ಆ ಮಚ್ಚೆ ಇರುವ ವಸ್ತುವನ್ನೇ ಬೆಂಕಿಯಿಂದ ಸುಟ್ಟುಬಿಡಬೇಕು.

58 ಆ ಬಟ್ಟೆಯನ್ನಾಗಲಿ ಹಾಸನ್ನಾಗಲಿ ಹೊಕ್ಕನ್ನಾಗಲಿ ತೊಗಲಿನ ಸಾಮಾನನ್ನಾಗಲಿ ತೊಳೆದನಂತರ ಆ ಮಚ್ಚೆ ಕಾಣದೆಹೋದರೆ ಅದನ್ನು ಎರಡನೆಯ ಸಾರಿ ತೊಳೆಯಬೇಕು; ಆಗ ಅದು ಶುದ್ಧವಾಗುವದು.

59 ಉಣ್ಣೇಬಟ್ಟೆಯಲ್ಲಾಗಲಿ ನಾರಿನ ಬಟ್ಟೆಯಲ್ಲಾಗಲಿ ಹಾಸಿನಲ್ಲಾಗಲಿ ಹೊಕ್ಕಿನಲ್ಲಾಗಲಿ ತೊಗಲಿನ ಸಾಮಾನಿನಲ್ಲಾಗಲಿ ಕಾಣಬಂದ ಕುಷ್ಠರೋಗದ ಗುರುತಿನ ವಿಷಯವಾದ ವಿಧಿ ಇದೇ. ಅದು ಶುದ್ಧವೆಂದು ನಿರ್ಣಯಿಸಬೇಕೋ ಅಶುದ್ಧವೆಂದು ನಿರ್ಣಯಿಸಬೇಕೋ ಎಂಬದು ಇದರಿಂದ ತಿಳಿಯುವದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು