ಯಾಜಕಕಾಂಡ 12 - ಕನ್ನಡ ಸತ್ಯವೇದವು J.V. (BSI)ಬಾಣಂತಿಯರ ಶುದ್ಧೀಕರಣ ವಿಷಯ 1 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ - 2 ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಬೇಕು - ಒಬ್ಬ ಸ್ತ್ರೀ ಗಂಡುಮಗುವನ್ನು ಹೆತ್ತರೆ ತಾನು ತಿಂಗಳ ಮುಟ್ಟಿನಿಂದ ಹೇಗೆ ಅಶುದ್ಧಳಾಗುವಳೋ ಹಾಗೆಯೇ ಏಳು ದಿನಗಳ ತನಕ ಅಶುದ್ಧಳಾಗಿರಬೇಕು. 3 ಎಂಟನೆಯ ದಿನದಲ್ಲಿ ಆ ಮಗುವಿಗೆ ಸುನ್ನತಿಮಾಡಿಸಬೇಕು. 4 ಆಮೇಲೆ ಅವಳ ಶುದ್ಧೀಕರಣ ಪೂರ್ತಿಗೆ ಇನ್ನೂ ಮೂವತ್ತು ಮೂರು ದಿವಸ ಹಿಡಿಯುವದು. ಅದು ಪೂರೈಸುವ ತನಕ ಅವಳು ದೇವರ ವಸ್ತುವನ್ನು ಮುಟ್ಟಕೂಡದು, ದೇವಸ್ಥಾನಕ್ಕೆ ಬರಕೂಡದು. 5 ಹೆಣ್ಣು ಮಗುವನ್ನು ಹೆತ್ತರೆ ತಾನು ತಿಂಗಳ ಮುಟ್ಟಿನಿಂದ ಹೇಗೆ ಅಶುದ್ಧಳಾಗುವಳೋ ಹಾಗೆಯೇ ಎರಡು ವಾರಗಳು ಅಶುದ್ಧಳಾಗಿರಬೇಕು; ಮತ್ತು ಶುದ್ಧೀಕರಣಪೂರ್ತಿಗೆ ಅರುವತ್ತಾರು ದಿವಸ ಹಿಡಿಯುವದು. 6 ಗಂಡುಮಗುವನ್ನು ಹೆತ್ತರೂ ಹೆಣ್ಣು ಮಗುವನ್ನು ಹೆತ್ತರೂ ಅವಳ ಶುದ್ಧೀಕರಣದ ದಿನಗಳು ಪೂರೈಸಿದಾಗ ಅವಳು ಸರ್ವಾಂಗಹೋಮಕ್ಕಾಗಿ ಒಂದು ವರುಷದ ಕುರಿಯನ್ನು, ದೋಷಪರಿಹಾರಕ್ಕಾಗಿ ಪಾರಿವಾಳದ ಮರಿಯನ್ನು ಇಲ್ಲವೆ ಬೆಳವಕ್ಕಿಯನ್ನು ದೇವದರ್ಶನದ ಗುಡಾರದ ಬಾಗಲಿಗೆ ತಂದು ಯಾಜಕನಿಗೆ ಒಪ್ಪಿಸಬೇಕು. 7 ಅವನು ಅವುಗಳನ್ನು ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಿ ಅವಳಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಅವಳಿಗೆ ರಕ್ತಸ್ರಾವದಿಂದುಂಟಾದ ಅಪರಿಶುದ್ಧತೆ ನಿವೃತ್ತಿಯಾಗಿ ಶುದ್ಧಳಾಗುವಳು. ಗಂಡುಮಗುವನ್ನಾಗಲಿ ಹೆಣ್ಣುಮಗುವನ್ನಾಗಲಿ ಹೆತ್ತವಳಿಗೆ ಇದೇ ವಿಧಿ. 8 ಕುರಿಯನ್ನು ಕೊಡುವದಕ್ಕೆ ಗತಿಯಿಲ್ಲದಿದ್ದರೆ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ಸರ್ವಾಂಗಹೋಮಕ್ಕಾಗಿ ಒಂದನ್ನೂ ದೋಷಪರಿಹಾರಕ್ಕಾಗಿ ಒಂದನ್ನೂ ಸಮರ್ಪಿಸಬೇಕು. ಯಾಜಕನು ಅವಳಿಗೋಸ್ಕರ ದೋಷಪರಿಹಾರವನ್ನು ಮಾಡಿದಾಗ ಶುದ್ಧಳಾಗುವಳು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India