ಯಾಕೋಬನು 5 - ಕನ್ನಡ ಸತ್ಯವೇದವು J.V. (BSI)ಐಶ್ವರ್ಯವಂತರು ಮಾಡುವ ಬಲಾತ್ಕಾರದ ಖಂಡನೆ 1 ಧನಿಕರೇ, ಕೇಳಿರಿ; ನಿಮಗೆ ಬರುವ ದುರ್ದಶೆಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ. 2 ನಿಮ್ಮ ಧನವು ನಾಶವಾಗಿದೆ, ನಿಮ್ಮ ಬಟ್ಟೆಗಳಿಗೆ ನುಸಿಹಿಡಿದಿದೆ. ನಿಮ್ಮ ಚಿನ್ನ ಬೆಳ್ಳಿಗಳು ಮಣ್ಣು ಹಿಡಿದವೆ; 3 ಆ ಮಣ್ಣೇ ನಿಮಗೆ ಸಾಕ್ಷಿಯಾಗಿದ್ದು ಬೆಂಕಿಯಂತೆ ನಿಮ್ಮ ಮಾಂಸವನ್ನು ನುಂಗಿಬಿಡುವದು. ಅಂತ್ಯದಿವಸಗಳು ಬಂದರೂ ದ್ರವ್ಯವನ್ನು ಕೂಡಿಸಿ ಇಟ್ಟುಕೊಂಡಿದ್ದೀರಿ. 4 ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿದ್ದೀರಿ. ಅಗೋ, ಆ ಕೂಲಿ ನಿಮ್ಮ ಮೇಲೆ ಕೂಗಿಕೊಳ್ಳುತ್ತದೆ; ಮತ್ತು ಕೊಯಿದವರ ಕೂಗು ಸಕಲಸೇನಾಧಿಪತಿಯಾಗಿರುವ ಕರ್ತನ ಕಿವಿಗಳಲ್ಲಿ ಬಿದ್ದಿದೆ. 5 ಭೂಲೋಕದಲ್ಲಿ ನೀವು ಅತಿಭೋಗಿಗಳಾಗಿ ಬದುಕಿ ಮನಸ್ಸು ಬಂದಂತೆ ನಡೆದುಕೊಂಡಿದ್ದೀರಿ. ವಧೆಯ ದಿವಸ ಬಂದರೂ ನಿಮ್ಮನ್ನು ಕೊಬ್ಬಿಸಿಕೊಂಡಿದ್ದೀರಿ. 6 ನೀತಿವಂತನಿಗೆ ಮರಣದಂಡನೆಯನ್ನು ವಿಧಿಸಿ ಅವನನ್ನು ಕೊಂದುಹಾಕಿದ್ದೀರಿ; ಅವನು ನಿಮ್ಮನ್ನು ಎದುರಾಯಿಸುವವನಲ್ಲ. ಹಿಂಸೆಪಡುವ ಕ್ರೈಸ್ತರಿಗೆ ಪ್ರೋತ್ಸಾಹವು 7 ಸಹೋದರರೇ, ಕರ್ತನು ಪ್ರತ್ಯಕ್ಷನಾಗುವ ತನಕ ದೀರ್ಘಶಾಂತಿಯಿಂದಿರಿ. ವ್ಯವಸಾಯಗಾರನನ್ನು ನೋಡಿರಿ; ಅವನು ಭೂವಿುಯ ಬೆಲೆಯುಳ್ಳ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು. 8 ನೀವೂ ದೀರ್ಘಶಾಂತಿಯಿಂದಿರಿ; ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ, ಕರ್ತನ ಪ್ರತ್ಯಕ್ಷತೆಯು ಹತ್ತಿರವಾಯಿತು. 9 ಸಹೋದರರೇ, ನೀವು ಒಬ್ಬರಮೇಲೊಬ್ಬರು ಗುಣಗುಟ್ಟಬೇಡಿರಿ; ನ್ಯಾಯವಿಚಾರಣೆಗೆ ಗುರಿಯಾದೀರಿ. ಅಗೋ, ನ್ಯಾಯಾಧಿಪತಿಯು ಬಾಗಲಿನ ಹತ್ತಿರದಲ್ಲೇ ನಿಂತಿದ್ದಾನೆ. 10 ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಕರ್ತನ ಹೆಸರಿನಿಂದ ಮಾತಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ. 11 ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ. ಬೇರೆ ಬೇರೆ ವಿಷಯಗಳನ್ನು ಕುರಿತದ್ದು 12 ಮುಖ್ಯವಾಗಿ, ನನ್ನ ಸಹೋದರರೇ, ಆಣೆ ಇಡಲೇಬೇಡಿರಿ; ಆಕಾಶದ ಮೇಲಾಗಲಿ ಭೂವಿುಯ ಮೇಲಾಗಲಿ ಇನ್ನಾತರ ಮೇಲಾಗಲಿ ಆಣೆ ಇಡಬೇಡಿರಿ. ಹೌದೆಂದು ಹೇಳಬೇಕಾದರೆ ಹೌದೆನ್ನಿರಿ, ಅಲ್ಲವೆನ್ನಬೇಕಾದರೆ ಅಲ್ಲವೆನ್ನಿರಿ; ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವದಿಲ್ಲ. 13 ನಿಮ್ಮಲ್ಲಿ ಬಾಧೆಪಡುವವನು ಇದ್ದಾನೋ? ಅವನು ದೇವರನ್ನು ಪ್ರಾರ್ಥಿಸಲಿ. ನಿಮ್ಮಲ್ಲಿ ಸಂತೋಷಪಡುವವನಿದ್ದಾನೋ? ಅವನು ಕೀರ್ತನೆ ಹಾಡಲಿ. 14 ನಿಮ್ಮಲ್ಲಿ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ; ಅವರು ಕರ್ತನ ಹೆಸರಿನಿಂದ ಅವನಿಗೆ ಎಣ್ಣೆಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ. 15 ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ರಕ್ಷಿಸುವದು; ಕರ್ತನು ಅವನನ್ನು ಎಬ್ಬಿಸುವನು; ಮತ್ತು ಪಾಪಮಾಡಿದವನಾಗಿದ್ದರೆ ಅದು ಪರಿಹಾರವಾಗುವದು. 16 ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ ಒಬ್ಬರಿಗೋಸ್ಕರ ಒಬ್ಬರು ದೇವರನ್ನು ಪ್ರಾರ್ಥಿಸಿರಿ; ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ. 17 ಎಲೀಯನು ನಮ್ಮಂಥ ಸ್ವಭಾವವುಳ್ಳವನಾಗಿದ್ದನು; ಅವನು ಮಳೆಬರಬಾರದೆಂದು ಬಹಳವಾಗಿ ಪ್ರಾರ್ಥಿಸಲು ಮೂರು ವರುಷ ಆರು ತಿಂಗಳವರೆಗೂ ಮಳೆಬೀಳಲಿಲ್ಲ. 18 ತಿರಿಗಿ ಅವನು ಪ್ರಾರ್ಥನೆಮಾಡಲು ಆಕಾಶವು ಮಳೆಗರೆಯಿತು, ಭೂವಿುಯು ಬೆಳೆಯಿತು. 19 ನನ್ನ ಸಹೋದರರೇ, ನಿಮ್ಮಲ್ಲಿ ಒಬ್ಬನು ಸತ್ಯಮಾರ್ಗವನ್ನು ತಪ್ಪಿಹೋಗಿರಲಾಗಿ ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ - 20 ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದವನು ಅವನ ಪ್ರಾಣವನ್ನು ಮರಣಕ್ಕೆ ತಪ್ಪಿಸಿ ಬಹುಪಾಪಗಳನ್ನು ಮುಚ್ಚಿದವನಾದನೆಂದು ತಿಳಿದುಕೊಳ್ಳಿರಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India