Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಕೋಬನು 4 - ಕನ್ನಡ ಸತ್ಯವೇದವು J.V. (BSI)


ಜಗಳಗಂಟಿಗತನ ಪ್ರಾಪಂಚಿಕಬುದ್ಧಿ ಇವುಗಳ ವಿಷಯವಾದ ಎಚ್ಚರಿಕೆ

1 ನಿಮ್ಮಲ್ಲಿ ಯುದ್ಧಗಳೂ ಕಾದಾಟಗಳೂ ಎಲ್ಲಿಂದ ಹುಟ್ಟುತ್ತವೆ? ನಿಮ್ಮ ಇಂದ್ರಿಯಗಳಲ್ಲಿ ಹೋರಾಡುವ ಭೋಗಾಶೆಗಳಿಂದಲೇ ಅಲ್ಲವೇ.

2 ನೀವು ಆಶಿಸಿದರೂ ಹೊಂದದೆ ಇದ್ದೀರಿ. ನೀವು ಕೊಲೆಗಾರರಾಗುವಷ್ಟು ಹೊಟ್ಟೆಕಿಚ್ಚು ಪಟ್ಟಾದರೂ ಸಂಪಾದಿಸಲಾರದೆ ಇದ್ದೀರಿ; ನೀವು ಕಾದಾಡುತ್ತೀರಿ, ಯುದ್ಧಮಾಡುತ್ತೀರಿ. ನೀವು ದೇವರನ್ನು ಬೇಡಿಕೊಳ್ಳದ ಕಾರಣ ನಿಮಗೇನೂ ದೊರೆಯಲಿಲ್ಲ.

3 ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಗಳಿಗಾಗಿ ಉಪಯೋಗಿಸಬೇಕೆಂಬ ದುರಭಿಪ್ರಾಯಪಟ್ಟು ಬೇಡಿಕೊಳ್ಳುವದರಿಂದ ನಿಮಗೆ ದೊರೆಯುವದಿಲ್ಲ.

4 ವ್ಯಭಿಚಾರಿಗಳು ನೀವು; ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.

5 ದೇವರು ನಮ್ಮಲ್ಲಿ ಇರಿಸಿರುವ ಪವಿತ್ರಾತ್ಮನು ಅಭಿಮಾನತಾಪದಿಂದ ನಮಗೋಸ್ಕರ ಹಂಬಲಿಸುತ್ತಾನೆ ಎಂಬ ಶಾಸ್ತ್ರೋಕ್ತಿ ಬರೀ ಮಾತೆಂದು ಭಾವಿಸುತ್ತೀರೋ?

6 ಆತನು ನಮ್ಮ ಮೇಲೆ ಅತಿಶಯವಾದ ಕೃಪೆಯನ್ನು ಇಡುತ್ತಾನೆ. ಆದುದರಿಂದ - ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ ಎಂದು ಶಾಸ್ತ್ರವು ಹೇಳುತ್ತದೆ.

7 ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.

8 ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲಮಾಡಿಕೊಳ್ಳಿರಿ.

9 ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಗುವದನ್ನು ಬಿಟ್ಟು ಗೋಳಾಡಿರಿ; ಸಂತೋಷವನ್ನು ಬಿಟ್ಟು ಮನಗುಂದಿದವರಾಗಿರಿ.

10 ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆ ತರುವನು.

11 ಸಹೋದರರೇ, ಒಬ್ಬರನ್ನೊಬ್ಬರು ನಿಂದಿಸಬೇಡಿರಿ. ಯಾವನಾದರೂ ತನ್ನ ಸಹೋದರನನ್ನು ನಿಂದಿಸಿದರೆ ಅಥವಾ ತನ್ನ ಸಹೋದರನ ವಿಷಯವಾಗಿ ತೀರ್ಪುಮಾಡಿದರೆ ಅವನು ಧರ್ಮಶಾಸ್ತ್ರವನ್ನು ನಿಂದಿಸಿ ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪುಮಾಡಿದ ಹಾಗಾಗುವದು. ಆದರೆ ನೀನು ಧರ್ಮಶಾಸ್ತ್ರದ ವಿಷಯದಲ್ಲಿ ತೀರ್ಪುಮಾಡಿದರೆ ನೀನು ನ್ಯಾಯಾಧಿಪತಿಯೆನಿಸಿಕೊಳ್ಳುವಿಯೇ ಹೊರತು ಅದನ್ನು ಅನುಸರಿಸುವವನಲ್ಲ.

12 ನ್ಯಾಯವನ್ನು ವಿಧಿಸಿದ ನ್ಯಾಯಾಧಿಪತಿ ಒಬ್ಬನೇ; ಆತನೇ ಉಳಿಸುವದಕ್ಕೂ ನಾಶ ಮಾಡುವದಕ್ಕೂ ಶಕ್ತನು. ಹೀಗಿರುವಾಗ ನಿನ್ನ ನೆರೆಯವನ ವಿಷಯದಲ್ಲಿ ತೀರ್ಪು ಮಾಡುವದಕ್ಕೆ ನೀನು ಯಾರು?

13 ಈಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರುಷವಿದ್ದು ವ್ಯಾಪಾರವನ್ನು ಮಾಡಿ ಲಾಭವನ್ನು ಸಂಪಾದಿಸುತ್ತೇವೆ ಅನ್ನುವವರೇ, ಕೇಳಿರಿ. ನಾಳೆ ಏನಾಗುವದೋ ನಿಮಗೆ ತಿಳಿಯದು.

14 ನಿಮ್ಮ ಜೀವಮಾನವು ಎಂಥದು? ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆಹೋಗುವ ಹಬೆಯಂತಿರುತ್ತೀರಿ.

15 ಆದದರಿಂದ ನೀವು ಅಂಥ ಮಾತನ್ನು ಬಿಟ್ಟು ದೇವರ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ ಆ ಕೆಲಸವನ್ನಾಗಲಿ ಮಾಡುವೆವು ಎಂದು ಹೇಳಬೇಕು.

16 ಹೀಗೆ ಹೇಳದೆ ನೀವು ಅಹಂಭಾವದಿಂದ ಹೊಗಳಿಕೊಳ್ಳುತ್ತೀರಿ. ಅಂಥ ಹೊಗಳಿಕೆಯೆಲ್ಲಾ ಕೆಟ್ಟದ್ದೇ.

17 ಹೀಗಿರುವದರಿಂದ ಒಳ್ಳೇದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನು ಪಾಪಕ್ಕೊಳಗಾಗಿದ್ದಾನೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು