ಯಾಕೋಬನು 3 - ಕನ್ನಡ ಸತ್ಯವೇದವು J.V. (BSI)ನಾಲಿಗೆಯನ್ನು ಬಿಗಿಹಿಡಿಯುವದರ ವಿಷಯವು 1 ನನ್ನ ಸಹೋದರರೇ, ಬೋಧಕರಾದ ನಮಗೆ ಕಠಿನವಾದ ತೀರ್ಪು ಆಗುವದೆಂದು ತಿಳಿದುಕೊಂಡು ಬಹುಮಂದಿ ಬೋಧಕರಾಗಬೇಡಿರಿ. 2 ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ. 3 ನಾವು ಕುದುರೆಗಳನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದಿರುವಾಗ ಅವುಗಳ ಬಾಯಿಗೆ ಕಡಿವಾಣಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ತಿರುಗಿಸುವದಕ್ಕೆ ಆಗುತ್ತದೆ. 4 ಹಡಗುಗಳನ್ನು ನೋಡಿರಿ. ಅವು ಬಹು ದೊಡ್ಡವು, ಬಲವಾದ ಗಾಳಿಯಿಂದ ಬಡಿಸಿಕೊಂಡು ಹೋಗುತ್ತವೆ. ಆದರೂ ನಡಿಸುವವನು ಬಹು ಸಣ್ಣ ಚುಕ್ಕಾಣಿಯಿಂದ ಅವುಗಳನ್ನು ತನ್ನ ಮನಸ್ಸಿಗೆ ಬಂದ ಕಡೆಗೆ ತಿರುಗಿಸುತ್ತಾನೆ. 5 ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. 6 ಎಷ್ಟು ಕೊಂಚ ಕಿಚ್ಚು ಎಷ್ಟು ದೊಡ್ಡ ಕಾಡನ್ನು ಉರಿಸುತ್ತದೆ ನೋಡಿರಿ. ನಾಲಿಗೆಯೂ ಕಿಚ್ಚೇ. ನಾಲಿಗೆಯು ಅಧರ್ಮಲೋಕರೂಪವಾಗಿ ನಮ್ಮ ಅಂಗಗಳ ನಡುವೆ ಇಟ್ಟದೆ. ಅದು ದೇಹವನ್ನೆಲ್ಲಾ ಕೆಡಿಸುತ್ತದೆ. ತಾನೇ ನರಕದಿಂದ ಬೆಂಕಿಹತ್ತಿಸಿಕೊಳ್ಳುತ್ತಾ ಪ್ರಪಂಚವೆಂಬ ಚಕ್ರಕ್ಕೆ ಬೆಂಕಿಹಚ್ಚುತ್ತದೆ. 7 ನರಜಾತಿಯು ಸಕಲಜಾತಿಯ ಮೃಗ ಪಕ್ಷಿ ಕ್ರಿವಿು ಜಲಚರಗಳನ್ನೂ ಹತೋಟಿಗೆ ತರುವದುಂಟು ಮತ್ತು ತಂದದ್ದುಂಟು. 8 ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು. ಅದು ಸುಮ್ಮನಿರಲಾರದ ಕೆಡುಕಾಗಿದೆ; ಮರಣಕರವಾದ ವಿಷದಿಂದ ತುಂಬಿ ಇದೆ. 9 ನಾಲಿಗೆಯಿಂದ ತಂದೆಯಾದ ಕರ್ತನನ್ನು ಕೊಂಡಾಡುತ್ತೇವೆ; ಅದರಿಂದಲೇ ದೇವರ ಹೋಲಿಕೆಗೆ ಸರಿಯಾಗಿ ಉಂಟುಮಾಡಲ್ಪಟ್ಟ ಮನುಷ್ಯರನ್ನು ಶಪಿಸುತ್ತೇವೆ. 10 ಅದೇ ಬಾಯಿಂದ ಸ್ತುತಿ ಶಾಪ ಎರಡೂ ಬರುತ್ತವೆ. ನನ್ನ ಸಹೋದರರೇ, ಹೀಗಿರುವದು ಯೋಗ್ಯವಲ್ಲ. 11 ಊಟೆಯ ಒಂದೇ ಬಾಯಿಂದ ಸಿಹಿನೀರು ಕಹಿನೀರು ಎರಡೂ ಹೊರಡುವದುಂಟೇ? 12 ನನ್ನ ಸಹೋದರರೇ, ಅಂಜೂರದ ಮರವು ಎಣ್ಣೇ ಮರದ ಕಾಯಿ ಬಿಡುವದೋ? ದ್ರಾಕ್ಷೇ ಬಳ್ಳಿಯಲ್ಲಿ ಅಂಜೂರದ ಹಣ್ಣಾಗುವದೋ? ಹಾಗೆಯೇ ಉಪ್ಪುನೀರಿನ ಬಾವಿಯಿಂದ ಸಿಹಿನೀರು ಬರುವದಿಲ್ಲ. ನಿಜವಾದ ಜ್ಞಾನದ ಲಕ್ಷಣಗಳು 13 ನಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಯೋಗ್ಯವಾಗಿ ನಡೆದುಕೊಂಡು ಜ್ಞಾನದ ಲಕ್ಷಣವಾಗಿರುವ ಶಾಂತಗುಣದಿಂದ ಅದರ ಫಲವನ್ನು ತೋರಿಸಲಿ. 14 ಆದರೆ ತೀಕ್ಷ್ಣವಾದ ಮತ್ಸರವೂ ಪಕ್ಷಭೇದವೂ ನಿಮ್ಮ ಹೃದಯದೊಳಗೆ ಇರುವಲ್ಲಿ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ. 15 ಅದು ಮೇಲಣಿಂದ ಬಂದ ಜ್ಞಾನವಲ್ಲ; ಅದು ಭೂಸಂಬಂಧವಾದದ್ದು, ಪ್ರಾಕೃತ ಭಾವವಾದದ್ದು, ದೆವ್ವಗಳಿಗೆ ಸಂಬಂಧಪಟ್ಟದ್ದು. 16 ಮತ್ಸರವೂ ಪಕ್ಷಭೇದವೂ ಇರುವ ಕಡೆ ಗಲಿಬಿಲಿಯೂ ಸಕಲವಿಧ ನೀಚಕೃತ್ಯಗಳೂ ಇರುವವು. 17 ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ಪರಿಶುದ್ಧವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದು, ಕರುಣೆ ಮುಂತಾದ ಒಳ್ಳೇ ಫಲಗಳಿಂದ ತುಂಬಿರುವಂಥದು ಆಗಿದೆ; ಅದರಲ್ಲಿ ಚಂಚಲವೂ ಕಪಟವೂ ಇಲ್ಲ. 18 ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುವರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India