Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯಾಕೋಬನು 2 - ಕನ್ನಡ ಸತ್ಯವೇದವು J.V. (BSI)


ಪಕ್ಷಪಾತವನ್ನು ಕುರಿತದ್ದು

1 ನನ್ನ ಸಹೋದರರೇ, ಪ್ರಭಾವವುಳ್ಳ ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ಪಕ್ಷಪಾತಿಗಳಾಗಿರಬಾರದು.

2 ಹೇಗಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರವನ್ನೂ ಶೋಭಾಯಮಾನವಾದ ವಸ್ತ್ರಗಳನ್ನೂ ಹಾಕಿಕೊಂಡು ನಿಮ್ಮ ಸಭಾಮಂದಿರದೊಳಗೆ ಬರಲು ಮತ್ತು ಒಬ್ಬ ಬಡಮನುಷ್ಯನು ಹೀನವಾದ ಬಟ್ಟೆಹಾಕಿಕೊಂಡು ಬರಲು

3 ನೀವು ಶೋಭಾಯಮಾನವಾದ ವಸ್ತ್ರಗಳನ್ನು ಧರಿಸಿಕೊಂಡಿರುವವನನ್ನು ಮರ್ಯಾದೆಯಿಂದ ನೋಡಿ ಅವನಿಗೆ - ನೀವು ಇಲ್ಲಿ ಈ ಸುಖಾಸನದ ಮೇಲೆ ಕೂತುಕೊಳ್ಳಿರಿ ಎಂತಲೂ ಆ ಬಡಮನುಷ್ಯನಿಗೆ - ನೀನು ಅಲ್ಲಿ ನಿಂತುಕೋ, ಇಲ್ಲವೆ ನನ್ನ ಕಾಲ್ಮಣೆಯ ಹತ್ತಿರ ನೆಲದ ಮೇಲೆ ಕೂತುಕೋ ಎಂತಲೂ ಹೇಳಿದರೆ

4 ನೀವು ನಿಮ್ಮಲ್ಲಿ ಭೇದಮಾಡುವವರಾಗಿ ಅನ್ಯಾಯವಾದ ತೀರ್ಪನ್ನು ಮಾಡುವವರಾದಿರಲ್ಲಾ.

5 ನನ್ನ ಪ್ರಿಯ ಸಹೋದರರೇ, ಕೇಳಿರಿ, ದೇವರು ಲೌಕಿಕ ವಿಷಯದಲ್ಲಿ ಬಡವರಾಗಿರುವವರನ್ನು ಆದುಕೊಂಡು ಅವರು ನಂಬಿಕೆಯಲ್ಲಿ ಐಶ್ವರ್ಯವಂತರಾಗಿಯೂ ತನ್ನನ್ನು ಪ್ರೀತಿಸುವವರಿಗೆ ತಾನು ವಾಗ್ದಾನಮಾಡಿದ ರಾಜ್ಯಕ್ಕೆ ಬಾಧ್ಯರಾಗಿಯೂ ಇರಬೇಕೆಂದು ನೇವಿುಸಲಿಲ್ಲವೋ?

6 ನೀವಾದರೋ ಬಡವರನ್ನು ಅವಮಾನ ಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನಕ್ಕೆ ಎಳೆದುಕೊಂಡು ಹೋಗುವವರು ಐಶ್ಚರ್ಯವಂತರಲ್ಲವೋ?

7 ನೀವು ಕರೆಸಿಕೊಳ್ಳುವ ಶ್ರೇಷ್ಠವಾದ ನಾಮವನ್ನು ದೂಷಿಸುವವರು ಅವರಲ್ಲವೋ?

8 ಆದರೂ ಶಾಸ್ತ್ರಕ್ಕೆ ಸರಿಯಾಗಿ ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕೆಂಬ ರಾಜಾಜ್ಞೆಯನ್ನು ನೀವು ನೆರವೇರಿಸುತ್ತಿದ್ದರೆ ನೀವು ಒಳ್ಳೇದನ್ನು ಮಾಡುವವರು.

9 ಅದನ್ನು ಬಿಟ್ಟು ಪಕ್ಷಪಾತ ತೋರಿಸುವವರಾಗಿದ್ದರೆ ನೀವು ಪಾಪಮಾಡುವವರಾಗಿದ್ದು ಅಪರಾಧಿಗಳೆಂದು ಧರ್ಮಶಾಸ್ತ್ರದಿಂದ ತೀರ್ಮಾನಿಸಲ್ಪಡುತ್ತೀರಿ.

10 ಯಾಕಂದರೆ ಯಾವನಾದರೂ ಧರ್ಮಶಾಸ್ತ್ರವನ್ನೆಲ್ಲಾ ಕೈಕೊಂಡು ನಡೆದು ಒಂದೇ ಒಂದರಲ್ಲಿ ತಪ್ಪಿದರೆ ಅವನು ಎಲ್ಲಾ ವಿಷಯದಲ್ಲಿಯೂ ಅಪರಾಧಿಯಾಗುತ್ತಾನೆ.

11 ವ್ಯಭಿಚಾರಮಾಡಬಾರದೆಂದು ಹೇಳಿದವನೇ ನರಹತ್ಯಮಾಡಬಾರದೆಂತಲೂ ಹೇಳಿದನು. ಆದಕಾರಣ ನೀನು ವ್ಯಭಿಚಾರಮಾಡದೆ ಇದ್ದರೂ ನರಹತ್ಯ ಮಾಡಿದರೆ ಧರ್ಮಪ್ರಮಾಣವನ್ನು ಮೀರಿದವನಾದಿ.

12 ನೀವು ಬಿಡುಗಡೆಯನ್ನುಂಟುಮಾಡುವ ಧರ್ಮಪ್ರಮಾಣದ ಪ್ರಕಾರ ತೀರ್ಮಾನವನ್ನು ಹೊಂದತಕ್ಕವರೆಂದು ಮಾತಾಡಿರಿ, ನಡೆಯಿರಿ.

13 ಕರುಣೆತೋರಿಸದೆ ಇರುವವನಿಗೆ ನ್ಯಾಯತೀರ್ಮಾನದಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ. ಕರುಣೆಯು ನ್ಯಾಯತೀರ್ಮಾನವನ್ನು ಗೆದ್ದು ಹಿಗ್ಗುತ್ತದೆ.


ನಂಬಿಕೆ ಮಾತ್ರವೇ ಸಾಲದು, ನಡತೆಯೂ ಬೇಕೆಂಬ ಬೋಧೆ

14 ನನ್ನ ಸಹೋದರರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು ತಕ್ಕ ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜವೇನು? ಅಂಥ ನಂಬಿಕೆಯು ಇವನನ್ನು ರಕ್ಷಿಸುವದೋ?

15 ಒಬ್ಬ ಸಹೋದರನಿಗೆ ಇಲ್ಲವೇ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದೆ ಇರುವಾಗ

16 ನಿಮ್ಮಲ್ಲಿ ಒಬ್ಬನು ಅವರಿಗೆ ದೇಹಕ್ಕೆ ಬೇಕಾದದ್ದನ್ನು ಕೊಡದೆ - ಸಮಾಧಾನದಿಂದ ಹೋಗಿರಿ, ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆತುಂಬಿಸಿಕೊಳ್ಳಿ ಎಂದು ಬರೀ ಮಾತು ಹೇಳಿದರೆ ಪ್ರಯೋಜನವೇನು?

17 ಹಾಗೆಯೇ ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು.

18 ಹೀಗಲ್ಲವಾದರೆ ಒಬ್ಬ ಮನುಷ್ಯನು - ನಿನಗೆ ನಂಬಿಕೆಯುಂಟು, ನನಗೆ ಕ್ರಿಯೆಗಳುಂಟು, ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ನಿನಗೆ ತೋರಿಸುತ್ತೇನೆ; ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ನನಗೆ ತೋರಿಸು ನೋಡೋಣ ಎಂದು ಹೇಳುವನಲ್ಲವೇ.

19 ದೇವರು ಒಬ್ಬನೇ ಎಂದು ನೀನು ನಂಬುವವನು. ಹಾಗೆ ನಂಬುವದು ಒಳ್ಳೇದು. ದೆವ್ವಗಳು ಕೂಡ ಹಾಗೆಯೇ ನಂಬಿ ಹೆದರಿ ನಡುಗುತ್ತವೆ.

20 ಅಪ್ರಯೋಜಕನೇ, ಕ್ರಿಯೆಗಳಿಲ್ಲದ ನಂಬಿಕೆಯು ವ್ಯರ್ಥವಾಗಿದೆ ಎಂಬದಕ್ಕೆ ದೃಷ್ಟಾಂತಬೇಕೋ?

21 ನಮ್ಮ ಪಿತೃವಾದ ಅಬ್ರಹಾಮನು ಇಸಾಕನೆಂಬ ತನ್ನ ಮಗನನ್ನು ಯಜ್ಞವೇದಿಯ ಮೇಲೆ ಅರ್ಪಿಸಿದಾಗ ನೀತಿವಂತನೆಂಬ ನಿರ್ಣಯವನ್ನು ಹೊಂದಿದ್ದು ಕ್ರಿಯೆಗಳಿಂದಲ್ಲವೇ.

22 ಅವನ ನಂಬಿಕೆಯು ಕ್ರಿಯೆಗಳೊಂದಿಗೆ ಪ್ರವರ್ತಿಸಿ ಆ ಕ್ರಿಯೆಗಳಿಂದಲೇ ಸಿದ್ಧಿಗೆ ಬಂತೆಂಬದು ಕಾಣಬರುತ್ತದಲ್ಲಾ.

23 ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆ ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು ಎಂಬ ಶಾಸ್ತ್ರದ ಮಾತು ಹೀಗೆ ನೆರವೇರಿತು, ಮತ್ತು ದೇವರ ಸ್ನೇಹಿತನೆಂಬ ಹೆಸರು ಅವನಿಗೆ ಉಂಟಾಯಿತು.

24 ಮನುಷ್ಯನು ಕ್ರಿಯೆಗಳಿಂದ ನೀತಿವಂತನೆಂದು ನಿರ್ಣಯಿಸಲ್ಪಡುತ್ತಾನೇ ಹೊರತು ಬರೀ ನಂಬಿಕೆಯಿಂದಲ್ಲವೆಂದು ನೋಡುತ್ತೀರಿ.

25 ಅದೇ ರೀತಿಯಾಗಿ ಸೂಳೆಯಾದ ರಹಾಬಳು ಗೂಢಚಾರರನ್ನು ತನ್ನ ಮನೆಯಲ್ಲಿ ಸೇರಿಸಿಕೊಂಡು ಬೇರೆ ದಾರಿಯಿಂದ ಅವರನ್ನು ಕಳುಹಿಸಿದ್ದರಲ್ಲಿ ಕ್ರಿಯೆಗಳಿಂದಲೇ ನೀತಿವಂತಳೆಂಬ ನಿರ್ಣಯವನ್ನು ಹೊಂದಿದಳಲ್ಲವೇ.

26 ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು