Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮೀಕ 7 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲಿನ ಕೊರಗುವಿಕೆ

1 ಅಯ್ಯೋ, ನನ್ನ ಗತಿಯನ್ನು ಏನೆಂದು ಹೇಳಲಿ! ಮಾಗಿದ ಹಣ್ಣನ್ನು ಕೊಯ್ದು ದ್ರಾಕ್ಷೆಯ ಹಕ್ಕಲನ್ನು ಆಯ್ದ [ತೋಟದ] ಸ್ಥಿತಿಗೆ ಬಂದಿದ್ದೇನೆ; ತಿನ್ನುವದಕ್ಕೆ ಗೊಂಚಲೇ ಇಲ್ಲ, ನನಗೆ ಪ್ರಿಯವಾದ ಮೊದಲು ಮಾಗಿದ ಅಂಜೂರದ ಹಣ್ಣು ಸಿಕ್ಕದು.

2 ಸದ್ಭಕ್ತರು ದೇಶದೊಳಗಿಂದ ನಾಶವಾಗಿದ್ದಾರೆ, ಜನರಲ್ಲಿ ಸತ್ಯವಂತರೇ ಇಲ್ಲ. ಸರ್ವರು ರಕ್ತಸುರಿಸಬೇಕೆಂದು ಹೊಂಚು ಹಾಕುತ್ತಾರೆ, ಒಬ್ಬರನ್ನೊಬ್ಬರು ಬಲೆಯೊಡ್ಡಿ ಬೇಟೆಯಾಡುತ್ತಾರೆ.

3 ಕೆಟ್ಟ ಕೆಲಸಕ್ಕೆ ಎರಡು ಕೈಗಳನ್ನು ಹಾಕಿ ಚೆನ್ನಾಗಿ ಮಾಡುತ್ತಾರೆ; ಪ್ರಭುವು [ಧನವನ್ನು] ಕೇಳುತ್ತಾನೆ, ನ್ಯಾಯಾಧಿಪತಿಯು ಲಂಚಕ್ಕೆ [ಕೈಯೊಡ್ಡುತ್ತಾನೆ], ದೊಡ್ಡ ಮನುಷ್ಯನು ತನ್ನ ದುರಾಶೆಯನ್ನು ತಿಳಿಸುತ್ತಾನೆ; ಹೀಗೆ ಕುಯುಕ್ತಿಯನ್ನು ಹೆಣೆಯುತ್ತಾರೆ.

4 ಅವರಲ್ಲಿ ಉತ್ತಮನೂ ಮುಳ್ಳುಕಂಪೆ, ಸತ್ಯವಂತನೂ ಕೂಡ ಮುಳ್ಳುಬೇಲಿಗಿಂತ ಕಡೆ; ನಿನ್ನ ಕಾವಲುಗಾರರು ಮುಂತಿಳಿಸಿದ ದಿನ, ನಿನ್ನ ದಂಡನೆಯ ದಿನ ಬಂದಿದೆ; ಈಗ ನಿನ್ನ ಜನರಿಗೆ ಭ್ರಾಂತಿಹಿಡಿಯುವದು.

5 ವಿುತ್ರನನ್ನು ನಂಬಬೇಡ; ಆಪ್ತನಲ್ಲಿ ಭರವಸವಿಡದಿರು; ನಿನ್ನ ಎದೆಯ ಮೇಲೆ ಒರಗುವವಳಿಗೂ ನಿನ್ನ ಬಾಯಬಾಗಲನ್ನು ಭದ್ರವಾಗಿಟ್ಟುಕೋ.

6 ಮಗನು ತಂದೆಯನ್ನು ತುಚ್ಫೀಕರಿಸುತ್ತಾನೆ, ಮಗಳು ತಾಯಿಗೆ ಎದುರೇಳುತ್ತಾಳೆ; ಸೊಸೆಯು ಅತ್ತೆಯನ್ನು ವಿರೋಧಿಸುತ್ತಾಳೆ; ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗಿದ್ದಾರೆ.


ಇಸ್ರಾಯೇಲಿನ ದೀನಭಕ್ತಿ, ದೇವರ ಕರುಣೆ

7 ನಾನಂತು ಯೆಹೋವನನ್ನು ಎದುರು ನೋಡುವೆನು; ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು; ನನ್ನ ದೇವರು ನನ್ನ ಕಡೆಗೆ ಕಿವಿಗೊಡುವನು,

8 ನನ್ನ ಶತ್ರುವೇ, ನನ್ನ ವಿಷಯದಲ್ಲಿ ಹಿಗ್ಗಬೇಡ; ನಾನು ಬಿದ್ದಿದ್ದರೂ ಏಳುವೆನು, ಕತ್ತಲಲ್ಲಿ ಕೂತಿದ್ದರೂ ಯೆಹೋವನು ನನಗೆ ಬೆಳಕಾಗಿರುವನು.

9 ನಾನು ಯೆಹೋವನಿಗೆ ಪಾಪಮಾಡಿದ್ದರಿಂದ ಆತನ ರೋಷವನ್ನು ತಾಳಿಕೊಂಡಿರುವೆನು; ಕಾಲಾನುಕಾಲಕ್ಕೆ ಆತನು ತನ್ನ ವ್ಯಾಜ್ಯವನ್ನು ನಿರ್ವಹಿಸಿ ನನಗೆ ನ್ಯಾಯವನ್ನು ತೀರಿಸುವನು; ನನ್ನನ್ನು ಬೆಳಕಿಗೆ ತರುವನು, ಆತನ ರಕ್ಷಣಧರ್ಮವನ್ನು ನೋಡುವೆನು.

10 ನಿನ್ನ ದೇವರಾದ ಯೆಹೋವನು ಎಲ್ಲಿ ಎಂದು ನನ್ನನ್ನು ಜರೆದ ಶತ್ರುಗಳು ಇದನ್ನು ನೋಡುವಾಗ ನಾಚಿಕೆಯು ಅವರನ್ನು ಕವಿದುಕೊಳ್ಳುವದು; ನಾನು ಅವರನ್ನು ಕಣ್ಣಾರೆ ನೋಡುವೆನು. ಈಗಲೇ ಬೀದಿಗಳ ಕೆಸರಂತೆ ತುಳಿತಕ್ಕೀಡಾಗುವರು.

11 ಆಹಾ, ನಿನ್ನ ಪೌಳಿಗೋಡೆಗಳನ್ನು ಕಟ್ಟುವ ದಿನವು ಬರುವದು; ಆ ದಿನದಲ್ಲಿ ನಿನ್ನ ಎಲ್ಲೆಯು ದೂರದ ತನಕ ವಿಸ್ತರಿಸಿಕೊಂಡಿರುವದು.

12 ಅದೇ ದಿನದಲ್ಲಿ ನಿನ್ನ ಜನರು ಅಶ್ಶೂರದಿಂದಲೂ ಐಗುಪ್ತದ ಪಟ್ಟಣಗಳಿಂದಲೂ ನಿನ್ನ ಬಳಿಗೆ ಕೂಡಿಬರುವರು; ಸಮುದ್ರದಿಂದ ಸಮುದ್ರದವರೆಗೆ, ಪರ್ವತದಿಂದ ಪರ್ವತದವರೆಗೆ, ಅಂತು ಐಗುಪ್ತದಿಂದ ಯೂಫ್ರೇಟೀಸ್ ನದಿಯವರೆಗೂ ಚದರಿರುವ ನಿನ್ನ ಸಕಲಜನರು ನಿನ್ನನ್ನು ಸೇರುವರು.

13 ಆದರೆ [ಅಷ್ಟರೊಳಗೆ] ಈ ದೇಶವು ತನ್ನ ನಿವಾಸಿಗಳ ನಿವಿುತ್ತ, ಅವರ ದುಷ್ಕೃತ್ಯಗಳಿಗೆ ಫಲವಾಗಿ ಹಾಳುಬಿದ್ದಿರುವದು.

14 ಫಲವತ್ತಾದ ಭೂವಿುಯ ಮಧ್ಯದಲ್ಲಿನ ಕಾಡಿನೊಳಗೆ ಪ್ರತ್ಯೇಕವಾಗಿ ತಂಗುವ ನಿನ್ನ ಜನರನ್ನು, ನಿನ್ನ ಸ್ವಾಸ್ತ್ಯವಾದ ಹಿಂಡನ್ನು ನಿನ್ನ ಕೋಲಿನಿಂದ ಮೇಯಿಸು; ಪೂರ್ವಕಾಲದಂತೆ ಬಾಷಾನಿನಲ್ಲಿಯೂ ಗಿಲ್ಯಾದಿನಲ್ಲಿಯೂ ಮೇಯಲಿ.

15 ನೀನು ಐಗುಪ್ತದೇಶದೊಳಗಿಂದ ಪಾರಾಗಿ ಬಂದ ಕಾಲದಲ್ಲಿ ನಾನು ತೋರಿಸಿದಂತೆ ಅದ್ಭುತಗಳನ್ನು ತೋರಿಸುವೆನು.

16 ಜನಾಂಗಗಳವರು ನೋಡಿ ತಮ್ಮ ಮಹಾಶಕ್ತಿಗೂ ನಾಚಿಕೆಪಡುವರು; ಬಾಯ ಮೇಲೆ ಕೈಯಿಟ್ಟುಕೊಳ್ಳುವರು, ಅವರ ಕಿವಿ ಕೇಳದಿರುವದು.

17 ಹಾವಿನಂತೆ ದೂಳನ್ನು ನೆಕ್ಕುವರು; ನೆಲದಲ್ಲಿ ಹರಿದಾಡುವ ಕ್ರಿವಿುಕೀಟಗಳ ಹಾಗೆ ತಮ್ಮ ಗುಪ್ತಸ್ಥಳಗಳಿಂದ ನಡುಗುತ್ತಾ ಈಚೆಗೆ ಹೊರಡುವರು; ಯೆಹೋವನೆಂಬ ನಮ್ಮ ದೇವರಾದ ನಿನ್ನನ್ನು ಅಂಜುತ್ತಾ ಸಮೀಪಿಸಿ ನಿನಗೆ ಭಯಪಡುವರು.

18 ನಿನಗೆ ಯಾವ ದೇವರು ಸಮಾನ? ನೀನು ನಿನ್ನ ಸ್ವಾಸ್ತ್ಯದವರಲ್ಲಿ ಉಳಿದವರ ಅಪರಾಧವನ್ನು ಕ್ಷವಿುಸುವವನೂ ಅವರ ದ್ರೋಹವನ್ನು ಲಕ್ಷಿಸದವನೂ ಆಗಿದ್ದೀ; ಹೌದು, ನಮ್ಮ ದೇವರು ನಿತ್ಯವೂ ಕೋಪಿಸುವವನಲ್ಲ, ಕರುಣೆಯೇ ಆತನಿಗೆ ಇಷ್ಟ.

19 ಆತನು ನಮ್ಮ ಕಡೆಗೆ ತಿರುಗಿಕೊಂಡು ನಮ್ಮನ್ನು ಕನಿಕರಿಸುವನು, ನಮ್ಮ ಅಪರಾಧಗಳನ್ನು ಅಣಗಿಸುವನು. [ದೇವರೇ,] ನಿನ್ನ ಜನರ ಪಾಪಗಳನ್ನೆಲ್ಲಾ ಸಮುದ್ರದ ತಳಕ್ಕೆ ಬಿಸಾಟುಬಿಡುವಿ.

20 ನೀನು ಪುರಾತನ ಕಾಲದಿಂದಲೂ ನಮ್ಮ ಪಿತೃಗಳಿಗೆ ಪ್ರಮಾಣಮಾಡಿರುವಂತೆ ಯಾಕೋಬನ ವಂಶದವರಿಗೆ ಸತ್ಯಪರನಾಗಿಯೂ ಅಬ್ರಹಾಮನ ವಂಶದವರಿಗೆ ಪ್ರೀತಿಪರನಾಗಿಯೂ ನಡೆಯುವಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು