Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮೀಕ 5 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲನ್ನು ರಕ್ಷಿಸುವ ರಾಜ

1 ವ್ಯೂಹಭರಿತದೇಶವೇ, ನಿನ್ನ ವ್ಯೂಹಗಳನ್ನು ಈಗ ಕೂಡಿಸು; ಆಹಾ, ಶತ್ರುಗಳು ನಮಗೆ ಮುತ್ತಿಗೆ ಹಾಕಿದ್ದಾರೆ; ಇಸ್ರಾಯೇಲಿನ ಅಧಿಪತಿಯ ಕೆನ್ನೆಗೆ ಕೋಲಿನಿಂದ ಹೊಡೆಯುವರು.

2 ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗ್ರಾಮಗಳಲ್ಲಿ ಚಿಕ್ಕದ್ದಾಗಿದ್ದರೂ ಇಸ್ರಾಯೇಲನ್ನು ಆಳತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು; ಆತನ ಹೊರಡೋಣದ ಮೂಲವು ಪುರಾತನವೂ ಅನಾದಿಯೂ ಆದದ್ದು.

3 ಹೀಗಿರಲು ಪ್ರಸವವೇದನೆಪಡತಕ್ಕವಳು ಮಗನನ್ನು ಹೆರುವವರೆಗೂ ನನ್ನ ಜನರು ಶತ್ರುವಶವಾಗಿರುವಂತೆ ಮಾಡುವೆನು. ಅನಂತರ ಆ ಮಗನ ಸಹೋದರರಲ್ಲಿ ಉಳಿದವರು ಇಸ್ರಾಯೇಲ್ಯರೊಂದಿಗೆ ಹಿಂದಿರುಗುವರು.

4 ಆತನು ಯೆಹೋವನ ಬಲವನ್ನೂ ತನ್ನ ದೇವರಾದ ಯೆಹೋವನ ನಾಮದ ಮಹಿಮೆಯನ್ನೂ ಹೊಂದಿದವನಾಗಿ ನಿಂತು ತನ್ನ ಹಿಂಡನ್ನು ಮೇಯಿಸುವನು; ಆ ಹಿಂಡು ನೆಮ್ಮದಿಯಾಗಿ ನೆಲೆಗೊಂಡಿರುವದು; ಆತನು ಭೂವಿುಯ ಕಟ್ಟಕಡೆಯವರೆಗೂ ಪ್ರಬಲನಾಗಿರುವನು.

5 ಆತನೇ, [ನಮಗೆ] ಸಮಾಧಾನಪ್ರದನು; ಅಶ್ಶೂರ್ಯರು ನಮ್ಮ ದೇಶದಲ್ಲಿ ನುಗ್ಗಿ ನಮ್ಮ ಅರಮನೆಗಳನ್ನು ತುಳಿದುಹಾಕುವಾಗ ನಾವು ಅವರಿಗೆ ವಿರುದ್ಧವಾಗಿ ಏಳು ಮಂದಿ ಪಾಲಕರನ್ನು, ಹೌದು, ಎಂಟು ಮಂದಿ ಪುರುಷಶ್ರೇಷ್ಠರನ್ನು ಏರ್ಪಡಿಸುವೆವು.

6 ಅವರ ಕತ್ತಿಯು ಅಶ್ಶೂರ ದೇಶವನ್ನು ತಿಂದುಬಿಡುವದು, ನಿಮ್ರೋದ್ ಸೀಮೆಯ ಪ್ರವೇಶಸ್ಥಾನಗಳು ಅವರ ಖಡ್ಗಕ್ಕೆ ತುತ್ತಾಗುವವು; ಅಶ್ಶೂರ್ಯರು ನಮ್ಮ ದೇಶದಲ್ಲಿ ನುಗ್ಗಿ ನಮ್ಮ ಪ್ರಾಂತವನ್ನು ತುಳಿದುಹಾಕುವಾಗ [ಆ ಸಮಾಧಾನಪ್ರದನು] ನಮ್ಮನ್ನು ಅವರ ಕೈಯೊಳಗಿಂದ ಉದ್ಧರಿಸುವನು.

7 ಯೆಹೋವನ ವರವಾದ ಇಬ್ಬನಿಯೂ ಹುಲ್ಲನ್ನು ಬೆಳೆಯಿಸುವ ಹದಮಳೆಗಳೂ ಹೇಗೆ ಮನುಷ್ಯರನ್ನು ಎದುರುನೋಡದೆ ಮಾನವರನ್ನು ನಿರೀಕ್ಷಿಸದೆ ಹಿತಕರವಾಗಿರುವವೋ ಹಾಗೆಯೇ ಯಾಕೋಬಿನ ಜನಶೇಷವು ಬಹು ಜನಾಂಗಗಳ ಮಧ್ಯದಲ್ಲಿ ಹಿತಕರವಾಗಿರುವದು.

8 ಅಲ್ಲದೆ ಸಿಂಹವು ಕಾಡುಮೃಗಗಳನ್ನು, ಪ್ರಾಯದ ಸಿಂಹವು ಕುರಿಹಿಂಡುಗಳನ್ನು ಹಾದುಹೋಗುವಾಗೆಲ್ಲಾ ಅವುಗಳನ್ನು ಯಾರೂ ರಕ್ಷಿಸಲಾರದಂತೆ ತುಳಿದು ಸೀಳಿಹಾಕುವ ಹಾಗೆ ಯಾಕೋಬಿನ ಜನಶೇಷವು ದೇಶದೇಶಗಳೊಳಗೆ ಬಹುಜನಾಂಗಗಳ ಮಧ್ಯದಲ್ಲಿ ನಾಶಕರವಾಗಿರುವದು.

9 [ಯಾಕೋಬೇ,] ನಿನ್ನ ಕೈ ನಿನ್ನ ವಿರೋಧಿಗಳ ಮೇಲೆ ಎತ್ತಲ್ಪಡಲಿ, ನಿನ್ನ ವೈರಿಗಳೆಲ್ಲಾ ನಿರ್ಮೂಲವಾಗಲಿ.


ಇಸ್ರಾಯೇಲಿನ ಮೂಢಭರವಸಭಂಗ

10 ಯೆಹೋವನು ಇಂತೆನ್ನುತ್ತಾನೆ - ಆ ದಿನದಲ್ಲಿ ನಿನ್ನ ಕುದುರೆಗಳನ್ನು ನಿನ್ನೊಳಗಿಂದ ಕಡಿದುಬಿಡುವೆನು, ನಿನ್ನ ರಥಗಳನ್ನು ನಾಶಗೊಳಿಸುವೆನು;

11 ನಿನ್ನ ದೇಶದ ಪಟ್ಟಣಗಳನ್ನು ಹಾಳುಮಾಡಿ ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು;

12 ನಿನ್ನ ಕೈಯಲ್ಲಿನ ಮಂತ್ರತಂತ್ರಗಳನ್ನು ನಿಲ್ಲಿಸಿಬಿಡುವೆನು, ನಿನ್ನಲ್ಲಿ ಕಣಿಯವರು ಇನ್ನಿರರು;

13 ನಿನ್ನ ಮೂರ್ತಿಗಳನ್ನೂ ಕಲ್ಲುಕಂಬಗಳನ್ನೂ ನಿನ್ನಲ್ಲಿ ನಿಲ್ಲದಂತೆ ಒಡೆದುಹಾಕುವೆನು, ನಿನ್ನ ಕೈ ರೂಪಿಸಿದ್ದನ್ನು ಇನ್ನು ಪೂಜಿಸದಿರುವಿ.

14 ನಿನ್ನ ಅಶೇರವೆಂಬ ವಿಗ್ರಹಸ್ತಂಭಗಳನ್ನು ನಿನ್ನ ಮಧ್ಯದೊಳಗಿಂದ ಕಿತ್ತುಬಿಟ್ಟು ನಿನ್ನ ಪಟ್ಟಣಗಳನ್ನು ನಿರ್ಮೂಲಮಾಡುವೆನು.

15 ಅವಿಧೇಯಜನಾಂಗಗಳಿಗೆ ಉಗ್ರಕೋಪದಿಂದ ಮುಯ್ಯಿತೀರಿಸುವೆನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು