Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮೀಕ 4 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲಿಗೆ ವಿವಿಧ ವಾಗ್ದಾನಗಳು ( 4 , 5 ) ಚೀಯೋನಿನ ಮುಂದಣ ಪ್ರಖ್ಯಾತಿ

1 ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಜನಾಂಗಗಳು ಅದರ ಕಡೆಗೆ ಪ್ರವಾಹಗಳಂತೆ ಬರುವವು.

2 ಹೊರಟುಬಂದ ಬಹು ದೇಶಗಳವರು - ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು. ಏಕಂದರೆ ಚೀಯೋನಿನಿಂದ ಧರ್ಮೋಪದೇಶವೂ ಯೆರೂಸಲೇವಿುನಿಂದ ಯೆಹೋವನ ವಾಕ್ಯವೂ ಹೊರಡುವವು.

3 ಆತನು ಬಹು ರಾಷ್ಟ್ರದವರ ವ್ಯಾಜ್ಯಗಳನ್ನು ವಿಚಾರಿಸುವನು, ಪ್ರಬಲ ಜನಾಂಗಗಳಿಗೆ ನ್ಯಾಯತೀರಿಸುವನು; ಅವರೋ ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.

4 ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದಿದೆ.

5 ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ; ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.

6 ಯೆಹೋವನು ಇಂತೆನ್ನುತ್ತಾನೆ - ಆ ದಿನದಲ್ಲಿ ಕುಂಟುಜನಾಂಗವನ್ನು ಒಟ್ಟುಗೊಡಿಸುವೆನು, ನಾನು ಬಾಧಿಸಿ ತಳ್ಳಿದ ಪ್ರಜೆಯನ್ನು ಸೇರಿಸುವೆನು;

7 ಆ ಕುಂಟುಜನವನ್ನು ಉಳಿಸಿ ಕಾಪಾಡುವೆನು, ದೂರತಳ್ಳಲ್ಪಟ್ಟ ಪ್ರಜೆಯನ್ನು ಪ್ರಬಲ ಜನಾಂಗವನ್ನಾಗಿ ಮಾಡುವೆನು; ಯೆಹೋವನು ಚೀಯೋನ್ ಪರ್ವತದಲ್ಲಿ ಇಂದಿನಿಂದ ಎಂದೆಂದಿಗೂ ಅವರ ರಾಜನಾಗಿರುವನು.

8 ಹಿಂಡಿಗೆ ರಕ್ಷಕವಾದ ಹೂಡೆಯೇ, ಚೀಯೋನ್ ಯುವತಿಯ ಗುಡ್ಡವೇ, ನಿನ್ನ ಹಿಂದಿನ ಆಡಳಿತವು ನಿನಗೆ ದೊರೆಯುವದು, ಯೆರೂಸಲೇಮ್ ಪುರಿಯ ರಾಜ್ಯಾಧಿಕಾರವು ನಿನಗೆ ಲಭಿಸುವದು.


ಚೀಯೋನಿನ ಇಂದಿನ ಇಕ್ಕಟ್ಟು, ಮುಂದಿನ ಜಯ

9 ನೀನೀಗ ಅರಚಿಕೊಳ್ಳುವದೇಕೆ? ಪ್ರಸವವೇದನೆಯಷ್ಟು ಕಠಿನವಾದ ಯಾತನೆಯು ನಿನ್ನನ್ನು ಹಿಡಿದದ್ದಕ್ಕೆ ಕಾರಣವೇನು? ನಿನ್ನಲ್ಲಿ ರಾಜನಿಲ್ಲವೋ? ನಿನ್ನ ಆಲೋಚನಾಕರ್ತನು ನಾಶವಾದನೋ?

10 ಚೀಯೋನ್ ಯುವತಿಯೇ, ಹೆರುವವಳಂತೆ ವೇದನೆಗೆ ಒಳಗಾಗು, ಯಾತನೆಪಡು; ನೀನೀಗ ಪಟ್ಟಣದೊಳಗಿಂದ ಹೊರಟು ಕಾಡಿನಲ್ಲಿ ವಾಸಿಸುತ್ತಾ ಬಾಬೆಲಿಗೆ ಸೇರುವಿ; ಅಲ್ಲೇ ನಿನಗೆ ಉದ್ಧಾರವಾಗುವದು, ಅಲ್ಲೇ ಯೆಹೋವನು ಶತ್ರುಗಳ ಕೈಯಿಂದ ನಿನ್ನನ್ನು ಬಿಡಿಸುವನು.

11 [ಯೆರೂಸಲೇಮು] ಹೊಲಸಾಗಿ ಹೋಗಲಿ, ಚೀಯೋನಿನ ನಾಶನವನ್ನು ಕಣ್ಣುತುಂಬಾ ನೋಡೋಣ ಅಂದುಕೊಳ್ಳುವ ಬಹು ಜನಾಂಗಗಳು ನಿನಗೆ ವಿರುದ್ಧವಾಗಿ ಕೂಡಿಬಂದಿವೆ.

12 ಆಹಾ, ಅವು ಯೆಹೋವನ ಆಲೋಚನೆಗಳನ್ನು ತಿಳಿದಿಲ್ಲ, ಆತನ ಸಂಕಲ್ಪವನ್ನು ಗ್ರಹಿಸಿಲ್ಲ; ಕಣಕ್ಕೆ ಹಾಕಿದ ಸಿವುಡುಗಳ ಹಾಗೆ ಅವುಗಳನ್ನು ಕೂಡಿಸಿದ್ದಾನಲ್ಲಾ.

13 ಚೀಯೋನ್ ನಗರಿಯೇ, ಎದ್ದು ಒಕ್ಕು; ನಾನು ನಿನ್ನ ಕೊಂಬನ್ನು ಕಬ್ಬಿಣವನ್ನಾಗಿಯೂ ನಿನ್ನ ಗೊರಸನ್ನು ತಾಮ್ರವನ್ನಾಗಿಯೂ ಮಾಡುವೆನು; ನೀನು ಬಹು ಜನಾಂಗಗಳನ್ನು ಚೂರುಚೂರಾಗಿ ತುಳಿದುಬಿಡುವಿ; ಅವುಗಳಿಂದ ಹೊಡೆದ ಕೊಳ್ಳೆಯನ್ನು ಕೇವಲ ಯೆಹೋವನದಾಗಿ ಪ್ರತ್ಯೇಕಿಸುವಿ, ಅವುಗಳ ಆಸ್ತಿಯನ್ನು ಲೋಕದ ಕರ್ತನಿಗೆ ಮೀಸಲುಮಾಡುವಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು