ಮೀಕ 3 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲಿನ ಮುಖಂಡರ ಖಂಡನೆ 1 ನಾನು ಹೀಗೆ ಸಾರಿದೆನು - ಯಾಕೋಬಿನ ಮುಖಂಡರೇ, ಇಸ್ರಾಯೇಲ್ ವಂಶದ ಅಧ್ಯಕ್ಷರೇ, ಕೇಳಿರಿ, ಕೇಳಿರಿ! ನ್ಯಾಯವನ್ನು ಮಂದಟ್ಟುಮಾಡಿಕೊಳ್ಳುವದು ನಿಮ್ಮ ಧರ್ಮವಲ್ಲವೆ. 2 ಆಹಾ, ಇವರು ಒಳ್ಳೆಯದನ್ನು ದ್ವೇಷಿಸಿ ಕೆಟ್ಟದನ್ನು ಪ್ರೀತಿಸುತ್ತಾರೆ, ಜನರ ಮೈಮೇಲಿಂದ ಚರ್ಮವನ್ನು ಸುಲಿಯುತ್ತಾರೆ, ಅವರ ಎಲುಬುಗಳಿಂದ ಮಾಂಸವನ್ನು ಕಿತ್ತುಬಿಡುತ್ತಾರೆ; 3 ನನ್ನ ಪ್ರಜೆಯ ಮಾಂಸವನ್ನು ತಿನ್ನುತ್ತಾರೆ, ಅವರ ಚರ್ಮವನ್ನು ಸುಲಿದುಹಾಕಿ ಅವರ ಎಲುಬುಗಳನ್ನು ಮುರಿಯುತ್ತಾರೆ; ಹಂಡೆಯಲ್ಲಿನ ತುಂಡುಗಳಂತೆ, ಕೊಪ್ಪರಿಗೆಯಲ್ಲಿನ ಮಾಂಸದ ಹಾಗೆ ಅವರನ್ನು ಚೂರುಚೂರಾಗಿ ಕತ್ತರಿಸುತ್ತಾರೆ. 4 ಇಷ್ಟೆಲ್ಲಾ ನಡಿಸಿ ಇವರು ಯೆಹೋವನಿಗೆ ಮೊರೆಯಿಡಲು ಆತನು ಇವರಿಗೆ ಉತ್ತರಕೊಡನು; ಇವರ ನಡತೆಯ ದುಷ್ಕೃತ್ಯಗಳಿಗೆ ತಕ್ಕಹಾಗೆ ಆ ಕಾಲದಲ್ಲಿ ಇವರಿಗೆ ವಿಮುಖನಾಗುವನು. 5 ನನ್ನ ಜನರನ್ನು ಸನ್ಮಾರ್ಗದಿಂದ ತಪ್ಪಿಸುವವರೂ ಹಲ್ಲುಗಳಿಗೆ ಕುರುಕುವದೇನಾದರೂ ಸಿಕ್ಕಿರುವ ತನಕ ಶುಭವನ್ನು ಪ್ರಕಟಿಸುವವರೂ ತಮ್ಮ ಬಾಯಿಗೆ ಕವಳಕೊಡದವನ ಮೇಲೆ ಯುದ್ಧನಿರ್ಧರಿಸುವವರೂ ಆಗಿರುವ ಪ್ರವಾದಿಗಳ ವಿಷಯವಾಗಿ ಯೆಹೋವನು ಇಂತೆನ್ನುತ್ತಾನೆ - 6 ನೀವು ಇಂಥವರಾದಕಾರಣ ನಿಮಗೆ ರಾತ್ರಿಯಾಗುವದು, ದಿವ್ಯದರ್ಶನವಾಗದು; ನಿಮಗೆ ಕತ್ತಲುಕವಿಯುವದು, ಕಣಿಹೇಳಲಾಗದು; ಸೂರ್ಯನು ಪ್ರವಾದಿಗಳಿಗೆ ಮುಣುಗುವನು, ಹಗಲು ಅವರಿಗೆ ಕಾರ್ಗತ್ತಲಾಗುವದು; 7 ದಿವ್ಯದರ್ಶಿಗಳು ಆಶಾಭಂಗಪಡುವರು, ಕಣಿಯವರು ನಾಚಿಕೆಗೊಳ್ಳುವರು, ಎಲ್ಲರೂ ಬಟ್ಟೆಯಿಂದ ಬಾಯಿಮುಚ್ಚಿಕೊಳ್ಳುವರು; ಅವರಿಗೆ ದೈವೋತ್ತರವೇ ದೊರೆಯದು. 8 ನಾನಾದರೋ ಯೆಹೋವನ ಆತ್ಮಾವೇಶದಿಂದ ಬಲಪರಾಕ್ರಮನ್ಯಾಯಭರಿತನಾಗಿ ಯಾಕೋಬಿಗೆ ಅದರ ದ್ರೋಹವನ್ನು ಇಸ್ರಾಯೇಲಿಗೆ ಅದರ ಪಾಪವನ್ನು ಸಾರಲು ಶಕ್ತನಾಗಿದ್ದೇನೆ. 9 ನ್ಯಾಯಕ್ಕೆ ಅಸಹ್ಯಪಟ್ಟು ನೆಟ್ಟಗಿರುವದನ್ನು ಸೊಟ್ಟಗೆ ಮಾಡುವ ಯಾಕೋಬ್ ವಂಶದ ಮುಖಂಡರೇ, ಇಸ್ರಾಯೇಲ್ ಮನೆತನದ ಅಧ್ಯಕ್ಷರೇ, 10 ಚೀಯೋನನ್ನು ನರಹತ್ಯದಿಂದಲೂ ಯೆರೂಸಲೇಮನ್ನು ಅನ್ಯಾಯದಿಂದಲೂ ಕಟ್ಟುವವರೇ, ಇದನ್ನು ಕೇಳಿರಿ, ಕೇಳಿರಿ! 11 ಮುಖಂಡರು ಲಂಚಕ್ಕೆ ನ್ಯಾಯತೀರಿಸುತ್ತಾರೆ, ಯಾಜಕರು ಸಂಬಳಕ್ಕಾಗಿ ಉಪದೇಶಿಸುತ್ತಾರೆ, ಪ್ರವಾದಿಗಳು ಹಣಕ್ಕೋಸ್ಕರ ಕಣಿಹೇಳುತ್ತಾರೆ; ಆದರೂ ಯೆಹೋವನ ಮೇಲೆ ಭಾರಹಾಕಿ - ಯೆಹೋವನು ನಮ್ಮ ಮಧ್ಯದಲ್ಲಿ ಇದ್ದಾನಲ್ಲಾ, ನಮಗೆ ಯಾವ ಕೇಡೂ ಸಂಭವಿಸದು ಅಂದುಕೊಳ್ಳುತ್ತಾರೆ. 12 ಹೀಗಿರಲು ನಿಮ್ಮ ದೆಸೆಯಿಂದ ಚೀಯೋನ್ ಪಟ್ಟಣವು ಹೊಲದಂತೆ ಗೇಯಲ್ಪಡುವದು, ಯೆರೂಸಲೇಮು ಹಾಳುದಿಬ್ಬಗಳಾಗುವದು, ಯೆಹೋವನ ಆಲಯದ ಪರ್ವತವು ಕಾಡುಗುಡ್ಡಗಳಂತಾಗುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India