ಮಾರ್ಕ 8 - ಕನ್ನಡ ಸತ್ಯವೇದವು J.V. (BSI)ಯೇಸು ನಾಲ್ಕುಸಾವಿರ ಜನರಿಗೆ ಊಟಮಾಡಿಸಿದ್ದು ( ಮತ್ತಾ. 15.32-39 ) 1 ಆ ದಿವಸಗಳಲ್ಲಿ ಜನರು ತಿರಿಗಿ ಗುಂಪುಕೂಡಿ ಬಂದಾಗ ಅವರಿಗೆ ಊಟಕ್ಕೆ ಏನೂ ಇಲ್ಲದೆ ಇರಲು 2 ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು - ಈ ಜನರನ್ನು ನೋಡಿ ಕನಿಕರಪಡುತ್ತೇನೆ; ಇವರು ನನ್ನ ಬಳಿಗೆ ಬಂದು ಮೂರು ದಿನವಾಯಿತು; ಇವರಿಗೆ ಊಟಕ್ಕೆ ಏನೂ ಇಲ್ಲ; 3 ಇವರನ್ನು ಉಪವಾಸವಾಗಿ ಮನೆಗೆ ಕಳುಹಿಸಿಬಿಟ್ಟರೆ ದಾರಿಯಲ್ಲಿ ಬಳಲಿಹೋಗುವರು; ಇವರಲ್ಲಿ ಕೆಲವರು ದೂರದಿಂದ ಬಂದಿದ್ದಾರಲ್ಲಾ ಎಂದು ಅವರಿಗೆ ಹೇಳಿದ್ದಕ್ಕೆ 4 ಶಿಷ್ಯರು - ಈ ಅಡವಿಯಲ್ಲಿ ಎಲ್ಲಿಂದ ರೊಟ್ಟಿಯನ್ನು ತಂದು ಈ ಜನರನ್ನು ತೃಪ್ತಿಪಡಿಸುವದಕ್ಕಾದೀತು? ಅಂದರು. 5 ಆತನು - ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ ಎಂದು ಅವರನ್ನು ಕೇಳಿದ್ದಕ್ಕೆ ಅವರು - ಏಳು ಅವೆ ಅಂದರು. 6 ಆಗ ಆತನು ಜನರ ಗುಂಪಿಗೆ - ನೆಲದ ಮೇಲೆ ಕೂತುಕೊಳ್ಳಿರಿ ಎಂದು ಅಪ್ಪಣೆಕೊಟ್ಟು ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅವುಗಳನ್ನು ಮುರಿದು ಹಂಚುವದಕ್ಕೆ ತನ್ನ ಶಿಷ್ಯರ ಕೈಗೆ ಕೊಟ್ಟನು; ಅವರು ಗುಂಪಿನವರಿಗೆ ಹಂಚಿಕೊಟ್ಟರು. 7 ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು; ಅವುಗಳನ್ನು ಆತನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ - ಇವುಗಳನ್ನೂ ಹಂಚಿಕೊಡಿರಿ ಅಂದನು. 8 ಅವರು ಊಟಮಾಡಿ ತೃಪ್ತರಾದರು. ವಿುಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಹೆಡಿಗೆ ಆದವು. 9 ಊಟಮಾಡಿದವರು ಹೆಚ್ಚು ಕಡಿಮೆ ನಾಲ್ಕುಸಾವಿರ ಮಂದಿ. 10 ಬಳಿಕ ಆತನು ಅವರನ್ನು ಕಳುಹಿಸಿಬಿಟ್ಟು ಕೂಡಲೆ ತನ್ನ ಶಿಷ್ಯರನ್ನು ಕರಕೊಂಡು ದೋಣಿಯನ್ನು ಹತ್ತಿ ದಲ್ಮನೂಥ ಸೀಮೆಗೆ ಬಂದನು. ಯೇಸು ಯೆಹೂದ್ಯ ಮತಾಭಿಮಾನಿಗಳ ವಿಷಯವಾಗಿ ಎಚ್ಚರಿಕೆ ಕೊಟ್ಟದ್ದು ( ಮತ್ತಾ. 16.1-12 ; ಲೂಕ. 11.16 , 12.1 ; ಯೋಹಾ. 6.30 ) 11 ತರುವಾಯ ಫರಿಸಾಯರು ಹೊರಟು ಬಂದು ಆತನ ಕೂಡ ತರ್ಕಮಾಡುತ್ತಾ ಪರೀಕ್ಷಿಸುವದಕ್ಕಾಗಿ - ನೀನು ಆಕಾಶದಲ್ಲಿ ಒಂದು ಸೂಚಕಕಾರ್ಯವನ್ನು ತೋರಿಸಿಕೊಡಬೇಕೆಂದು ಕೇಳುತ್ತಿರಲು ಆತನು ತನ್ನ ಆತ್ಮದಲ್ಲಿ ನೊಂದು ನಿಟ್ಟುಸುರುಬಿಟ್ಟು - 12 ಈ ಸಂತತಿಯು ಸೂಚಕಕಾರ್ಯವನ್ನು ಅಪೇಕ್ಷಿಸುವದು ಯಾಕೆ? ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಸಂತತಿಗೆ ಸೂಚಕಕಾರ್ಯವು ಸಿಕ್ಕುವದೇ ಇಲ್ಲ ಎಂದು ಹೇಳಿ 13 ಅವರನ್ನು ಬಿಟ್ಟು ತಿರಿಗಿ ದೋಣಿಯನ್ನು ಹತ್ತಿ ಆಚೇದಡಕ್ಕೆ ಹೋದನು. 14 ಆದರೆ ಶಿಷ್ಯರು ರೊಟ್ಟೀಬುತ್ತಿ ಕಟ್ಟಿಕೊಳ್ಳುವದನ್ನು ಮರೆತರು. ದೋಣಿಯಲ್ಲಿ ಅವರಿಗೆ ಒಂದು ರೊಟ್ಟಿ ಮಾತ್ರ ಇತ್ತು; ಬೇರೆ ಇರಲಿಲ್ಲ. 15 ಯೇಸು ಅವರಿಗೆ - ಎಚ್ಚರಿಕೆ, ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ನೋಡಿಕೊಳ್ಳಿರಿ ಎಂದು ಖಂಡಿತವಾಗಿ ಹೇಳಲು 16 ಅವರು - ನಮ್ಮಲ್ಲಿ ರೊಟ್ಟಿಯಿಲ್ಲವಲ್ಲಾ ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಳ್ಳುತ್ತಿದ್ದರು. 17 ಆತನು ಅದನ್ನು ತಿಳಿದು - ರೊಟ್ಟಿಯಿಲ್ಲವಲ್ಲಾ ಎಂದು ಮಾತಾಡಿಕೊಳ್ಳುವದೇಕೆ? ನೀವು ಇನ್ನೂ ಗ್ರಹಿಸಲಿಲ್ಲವೋ? ತಿಳುವಳಿಕೆ ಬರಲಿಲ್ಲವೋ? 18 ನಿಮ್ಮ ಮನಸ್ಸು ಕಲ್ಲಾಗಿದೆಯೋ? ಕಣ್ಣಿದ್ದೂ ಕಾಣುವದಿಲ್ಲವೋ? ಕಿವಿಯಿದ್ದೂ ಕೇಳುವದಿಲ್ಲವೋ? ನಿಮಗೆ ನೆನಪಿಲ್ಲವೋ? 19 ನಾನು ಆ ಐದು ರೊಟ್ಟಿಗಳನ್ನು ಮುರಿದು ಐದುಸಾವಿರ ಜನರಿಗೆ ಹಂಚಿಸಿದಾಗ ತುಂಡು ತುಂಬಿದ ಎಷ್ಟು ಪುಟ್ಟಿಗಳನ್ನು ತೆಗೆದುಕೊಂಡು ಹೋದಿರಿ ಎಂದು ಕೇಳಿದ್ದಕ್ಕೆ ಅವರು - ಹನ್ನೆರಡು ಪುಟ್ಟಿ ಅಂದರು. 20 ಮತ್ತು ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರಿಗೆ ಹಂಚಿಸಿದಾಗ ತುಂಡು ತುಂಬಿದ ಎಷ್ಟು ಹೆಡಿಗೆಗಳನ್ನು ತೆಗೆದುಕೊಂಡು ಹೋದಿರಿ ಎಂದು ಕೇಳಿದ್ದಕ್ಕೆ ಅವರು - ಏಳು ಹೆಡಿಗೆ ಅಂದರು. 21 ಆಗ ಆತನು ಅವರಿಗೆ - ನಿಮಗೆ ಇನ್ನೂ ತಿಳುವಳಿಕೆ ಬರಲಿಲ್ಲವೇ? ಎಂದು ಹೇಳಿದನು. ಯೇಸು ಕುರುಡನಿಗೆ ಕಣ್ಣುಕೊಟ್ಟದ್ದು 22 ಮತ್ತು ಅವರು ಬೇತ್ಸಾಯಿದ ಊರಿಗೆ ಬಂದರು. ಅಲ್ಲಿ ಜನರು ಒಬ್ಬ ಕುರುಡನನ್ನು ಯೇಸುವಿನ ಬಳಿಗೆ ಕರಕೊಂಡುಬಂದು - ಇವನನ್ನು ಮುಟ್ಟಬೇಕು ಎಂದು ಆತನನ್ನು ಬೇಡಿಕೊಂಡರು. 23 ಆತನು ಕುರುಡನ ಕೈ ಹಿಡುಕೊಂಡು ಊರ ಹೊರಕ್ಕೆ ಕರಕೊಂಡು ಹೋಗಿ ಅವನ ಕಣ್ಣುಗಳಲ್ಲಿ ಉಗುಳಿ ಅವನ ಮೇಲೆ ಕೈಯಿಟ್ಟು - ನಿನಗೇನಾದರೂ ಕಾಣುತ್ತದೋ? ಎಂದು ಅವನನ್ನು ಕೇಳಿದನು. 24 ಅವನು ತಲೆಯೆತ್ತಿ ನೋಡಿ - ನನಗೆ ಜನರು ಕಾಣುತ್ತಾರೆ; ಅವರು ಮರಗಳಂತೆ ಕಾಣಿಸಿದರೂ ತಿರುಗಾಡುತ್ತಾ ಇದ್ದಾರೆ ಅಂದನು. 25 ಆಗ ಆತನು ಅವನ ಕಣ್ಣುಗಳ ಮೇಲೆ ತಿರಿಗಿ ಕೈಯಿಟ್ಟನು; ಅವನು ಕಣ್ಣು ಬಿಟ್ಟು ನೋಡಲು ಅವನಿಗೆ ಗುಣವಾಗಿತ್ತು; ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು. 26 ತರುವಾಯ ಆತನು - ನೀನು ಊರೊಳಕ್ಕೇನೂ ಹೋಗಬೇಡ ಎಂದು ಹೇಳಿ ಅವನನ್ನು ಅವನ ಮನೆಗೆ ಕಳುಹಿಸಿಬಿಟ್ಟನು. ಪೇತ್ರನು ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡ ಮೇಲೆ ಯೇಸು ತನ್ನ ಮರಣವನ್ನೂ ತನ್ನ ಶಿಷ್ಯರಿಗೆ ಬರುವ ಕಷ್ಟಗಳನ್ನೂ ಮುಂದಾಗಿ ತಿಳಿಸಿದ್ದು ( ಮತ್ತಾ. 16.13-28 ; ಲೂಕ. 9.18-27 ) 27 ಯೇಸುವೂ ಆತನ ಶಿಷ್ಯರೂ ಫಿಲಿಪ್ಪನ ಕೈಸರೈಯ ಎಂಬ ಪಟ್ಟಣಕ್ಕೆ ಸೇರಿದ ಗ್ರಾಮಗಳಿಗೆ ಹೊರಟರು. ದಾರಿಯಲ್ಲಿ ಆತನು - ಜನರು ನನ್ನನ್ನು ಯಾರು ಅನ್ನುತ್ತಾರೆ ಎಂದು ತನ್ನ ಶಿಷ್ಯರನ್ನು ಕೇಳಿದ್ದಕ್ಕೆ ಅವರು - 28 ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ; ಕೆಲವರು ಎಲೀಯನು ಅನ್ನುತ್ತಾರೆ; ಇನ್ನು ಕೆಲವರು ಪ್ರವಾದಿಗಳಲ್ಲಿ ಒಬ್ಬನು ಅನ್ನುತ್ತಾರೆ ಎಂದು ಹೇಳಿದರು. 29 ಆತನು ಅವರನ್ನು - ಆದರೆ ನೀವು ನನ್ನನ್ನು ಯಾರನ್ನುತ್ತೀರಿ? ಎಂದು ಕೇಳಲಾಗಿ ಪೇತ್ರನು - ನೀನು ಬರಬೇಕಾಗಿರುವ ಕ್ರಿಸ್ತನು ಎಂದು ಉತ್ತರಕೊಟ್ಟನು. 30 ಅದಕ್ಕೆ ಆತನು - ನನ್ನ ವಿಷಯವಾಗಿ ಯಾರಿಗೂ ಹೇಳಬೇಡಿರಿ ಎಂದು ಅವರಿಗೆ ಖಂಡಿತವಾಗಿ ಹೇಳಿದನು. 31 ಇದಲ್ಲದೆ ಆತನು - ಮನುಷ್ಯಕುಮಾರನು ಬಹು ಕಷ್ಟಗಳನ್ನನುಭವಿಸಿ ಹಿರಿಯರಿಂದಲೂ ಮಹಾಯಾಜಕರಿಂದಲೂ ಶಾಸ್ತ್ರಿಗಳಿಂದಲೂ ನಿರಾಕೃತವಾಗಿ ಕೊಲ್ಲಲ್ಪಟ್ಟು ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರಬೇಕಾಗಿದೆ ಎಂದು ಉಪದೇಶಮಾಡುವದಕ್ಕೆ ಪ್ರಾರಂಭಮಾಡಿದನು. 32 ಆತನು ಈ ಮಾತನ್ನು ಏನೂ ಗುಂಬವಿಲ್ಲದೆ ಹೇಳಿದನು. ಆಗ ಪೇತ್ರನು ಆತನ ಕೈ ಹಿಡಿದು ಆತನನ್ನು ಗದರಿಸುವದಕ್ಕೆ ಪ್ರಾರಂಭಿಸಲು 33 ಆತನು ಹಿಂತಿರುಗಿಕೊಂಡು ತನ್ನ ಶಿಷ್ಯರನ್ನು ನೋಡಿ ಪೇತ್ರನಿಗೆ - ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ, ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ ಎಂದು ಗದರಿಸಿ ಹೇಳಿದನು. 34 ಆಮೇಲೆ ಆತನು ತನ್ನ ಶಿಷ್ಯರ ಜೊತೆಗೆ ಜನರ ಗುಂಪನ್ನೂ ಹತ್ತಿರ ಕರೆದು ಅವರಿಗೆ ಹೇಳಿದ್ದೇನಂದರೆ - ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ. 35 ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿವಿುತ್ತವಾಗಿಯೂ ಸುವಾರ್ತೆಯ ನಿವಿುತ್ತವಾಗಿಯೂ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಉಳಿಸಿಕೊಳ್ಳುವನು. 36 ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು? 37 ಒಬ್ಬನು ತನ್ನ ಪ್ರಾಣಕ್ಕೆ ಏನು ಈಡು ಕೊಡಬಹುದು? 38 ವ್ಯಭಿಚಾರಿಣಿಯಂತಿರುವ ಈ ಪಾಪಿಷ್ಠ ಸಂತತಿಯಲ್ಲಿ ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ ಅವನಿಗೆ ಮನುಷ್ಯಕುಮಾರನು, ತಾನು ತನ್ನ ತಂದೆಯ ಪ್ರಭಾವದೊಡನೆ ಪರಿಶುದ್ಧ ದೇವದೂತರ ಸಮೇತವಾಗಿ ಬರುವಾಗ ನಾಚಿಕೊಳ್ಳುವನು ಅಂದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India