Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮಾರ್ಕ 7 - ಕನ್ನಡ ಸತ್ಯವೇದವು J.V. (BSI)


ಊಟದಿಂದ ಮನುಷ್ಯರು ಕೆಡುವದಿಲ್ಲವೆಂದು ಯೇಸು ಬೋಧಿಸಿದ್ದು
( ಮತ್ತಾ. 15.1-20 )

1 ತರುವಾಯ ಯೆರೂಸಲೇವಿುನಿಂದ ಬಂದಿದ್ದ ಫರಿಸಾಯರೂ ಶಾಸ್ತ್ರಿಗಳಲ್ಲಿ ಕೆಲವರೂ ಆತನ ಬಳಿಗೆ ಕೂಡಿ ಬಂದರು.

2-4 ಫರಿಸಾಯರೂ ಯೆಹೂದ್ಯರೆಲ್ಲರೂ ಹಿರಿಯರಿಂದ ಬಂದ ಸಂಪ್ರದಾಯವನ್ನು ಹಿಡಿದು ತಮ್ಮ ಕೈಗಳನ್ನು ಚೆನ್ನಾಗಿ ತೊಳಕೊಳ್ಳದೆ ಆಹಾರ ತೆಗೆದುಕೊಳ್ಳುವದಿಲ್ಲ; ಮತ್ತು ಪೇಟೆಗೆ ಹೋಗಿ ಬಂದರೆ ನೀರನ್ನು ಪ್ರೋಕ್ಷಿಸಿಕೊಳ್ಳದೆ ಆಹಾರ ತೆಗೆದುಕೊಳ್ಳುವದಿಲ್ಲ; ಇದಲ್ಲದೆ ಅವರಲ್ಲಿ ತಂಬಿಗೆ ಬಟ್ಟಲು ತಪ್ಪಲೆಗಳನ್ನು ಬೆಳಗಿ ತೊಳೆಯುವದೇ ಮೊದಲಾದ ಅನೇಕಾಚಾರಗಳನ್ನು ನಡಿಸುವ ನೇಮಕವುಂಟು. ಆತನ ಶಿಷ್ಯರಲ್ಲಿ ಕೆಲವರು ಮೈಲಿಗೆಯ ಕೈಯಿಂದ, ಅಂದರೆ ಕೈತೊಳಕೊಳ್ಳದೆ ಆಹಾರ ತೆಗೆದುಕೊಳ್ಳುವದನ್ನು ಆ ಫರಿಸಾಯರೂ ಶಾಸ್ತ್ರಿಗಳೂ ಕಂಡು

5 ಆತನನ್ನು - ನಿನ್ನ ಶಿಷ್ಯರು ಹಿರಿಯರಿಂದ ಬಂದ ಸಂಪ್ರದಾಯದಂತೆ ಯಾಕೆ ನಡೆದುಕೊಳ್ಳುವದಿಲ್ಲ? ಮೈಲಿಗೆಯ ಕೈಯಿಂದ ಯಾಕೆ ಆಹಾರ ತೆಗೆದುಕೊಳ್ಳುತ್ತಾರೆ ಎಂದು ಕೇಳಿದರು.

6 ಅದಕ್ಕೆ ಆತನು - ಕಪಟಿಗಳಾದ ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ; ಅವನು ಬರೆದದ್ದೇನಂದರೆ - ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಮನಸ್ಸು ನನಗೆ ದೂರವಾಗಿದೆ.

7 ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ ಭಕ್ತಿತೋರಿಸುವದು ವ್ಯರ್ಥ ಎಂಬದೇ.

8 ನೀವು ದೇವರ ಆಜ್ಞೆಯನ್ನು ಬಿಟ್ಟು ಮನುಷ್ಯರು ಕಲ್ಪಿಸಿದ ಸಂಪ್ರದಾಯವನ್ನು ಹಿಡಿದಿದ್ದೀರಿ ಎಂದು ಹೇಳಿದನು.

9 ಆತನು ಇನ್ನೂ ಅವರಿಗೆ - ನೀವು ನಿಮ್ಮ ಸಂಪ್ರದಾಯವನ್ನು ಹಿಡಿದು ನಡಿಸುವದಕ್ಕಾಗಿ ದೇವರ ಆಜ್ಞೆಯನ್ನು ವ್ಯರ್ಥಮಾಡುತ್ತೀರಿ; ಬಹು ಚೆನ್ನಾಗಿದೆಯಲ್ಲವೇ.

10 ತಂದೆತಾಯಿಗಳನ್ನು ಸನ್ಮಾನಿಸಬೇಕೆಂತಲೂ ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣದಂಡನೆ ಆಗಬೇಕೆಂತಲೂ ಮೋಶೆಯು ಹೇಳಿದ್ದಾನೆ;

11 ನೀವೋ ಒಬ್ಬನು ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ನೋಡಿ - ನಾನು ನಿನ್ನ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ಕೊರ್ಬಾನ್ ಮಾಡಿದ್ದೇನೆ (ಅಂದರೆ ದೇವರಿಗಾಗಿ ಇಟ್ಟಿದ್ದೇನೆ) ಎಂದು ಹೇಳುವದಾದರೆ

12 ಅವನು ತನ್ನ ತಂದೆಗಾಗಲಿ ತಾಯಿಗಾಗಲಿ ಇನ್ನೇನೂ ಮಾಡಬಾರದೆಂದು ಹೇಳುತ್ತೀರಿ.

13 ಹೀಗೆ ನೀವು ಕಲಿಸುತ್ತಾ ಬಂದಿರುವ ಸಂಪ್ರದಾಯದಿಂದ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ, ಮತ್ತು ಇಂಥ ಕಾರ್ಯಗಳನ್ನು ಇನ್ನೂ ಎಷ್ಟೋ ಮಾಡುತ್ತೀರಿ ಎಂದು ಹೇಳಿದನು.

14 ಆಮೇಲೆ ಯೇಸು ಜನರ ಗುಂಪನ್ನು ತಿರಿಗಿ ಹತ್ತಿರಕ್ಕೆ ಕರೆದು ಅವರಿಗೆ - ಎಲ್ಲರೂ ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ತಿಳುಕೊಳ್ಳಿರಿ.

15 ಹೊರಗಿನಿಂದ ಮನುಷ್ಯನೊಳಕ್ಕೆ ಹೋಗಿ ಅವನನ್ನು ಹೊಲೆಮಾಡತಕ್ಕಂಥದು ಒಂದೂ ಇಲ್ಲ; ಆದರೆ ಮನುಷ್ಯನೊಳಗಿಂದ ಹೊರಡುವವುಗಳೇ ಮನುಷ್ಯನನ್ನು ಹೊಲೆಮಾಡುವಂಥವುಗಳಾಗಿವೆ ಎಂದು ಹೇಳಿದನು.

17 ತರುವಾಯ ಆತನು ಜನರನ್ನು ಬಿಟ್ಟು ಮನೆಯೊಳಕ್ಕೆ ಹೋದಾಗ ಆತನ ಶಿಷ್ಯರು ಆ ಸಾಮ್ಯದ ಅರ್ಥವೇನೆಂದು ಆತನನ್ನು ಕೇಳಲು

18 ಆತನು ಅವರಿಗೆ - ನಿಮಗೂ ಅಷ್ಟು ಬುದ್ಧಿ ಇಲ್ಲವೇ? ಹೊರಗಿನಿಂದ ಮನುಷ್ಯನೊಳಕ್ಕೆ ಹೋಗುವಂಥದು

19 ಅವನ ಹೃದಯದೊಳಕ್ಕೆ ಸೇರದೆ ಹೊಟ್ಟೆಯಲ್ಲಿ ಸೇರಿ ಬಹಿರ್ದೇಶಕ್ಕೆ ಹೋಗುವದರಿಂದ ಅವನನ್ನು ಹೊಲೆಮಾಡಲಾರದೆಂದು ನಿಮಗೆ ತಿಳಿಯಲಿಲ್ಲವೋ ಎಂದು ಹೇಳಿದನು. ಹೀಗೆ ಹೇಳಿದ್ದರಿಂದ ತಿನ್ನುವ ಪದಾರ್ಥಗಳೆಲ್ಲಾ ಶುದ್ಧವೆಂದು ಸೂಚಿಸಿದನು.

20 ಆತನು ಇನ್ನೂ - ಮನುಷ್ಯನೊಳಗಿಂದ ಹೊರಡುವಂಥದೇ ಮನುಷ್ಯನನ್ನು ಹೊಲೆಮಾಡುವದು;

21 ಒಳಗಿನಿಂದ ಅಂದರೆ ಮನುಷ್ಯರ ಮನಸ್ಸಿನೊಳಗಿಂದ

22 ಸೂಳೆಗಾರಿಕೆ ಕಳ್ಳತನ ಕೊಲೆ ಹಾದರ ದ್ರವ್ಯಾಶೆ ಕೆಡುಕುತನ ಮೋಸ ಬಂಡತನ ಹೊಟ್ಟೇಕಿಚ್ಚು ಬೈಗಳು ಸೊಕ್ಕು ಬುದ್ಧಿಗೇಡಿತನ ಇವೇ ಮೊದಲಾದವುಗಳ ಕೆಟ್ಟ ಆಲೋಚನೆಗಳು ಹೊರಡುತ್ತವೆ.

23 ಈ ಕೆಟ್ಟ ವಿಷಯಗಳೆಲ್ಲಾ ಒಳಗಿನಿಂದ ಹೊರಟು ಮನುಷ್ಯನನ್ನು ಹೊಲೆಮಾಡುತ್ತವೆ ಅಂದನು.


ಯೇಸು ಅನ್ಯಮತಸ್ಥಳ ಮಗಳನ್ನೂ ಒಬ್ಬ ಮೂಕನನ್ನೂ ಸ್ವಸ್ಥಮಾಡಿದ್ದು
( ಮತ್ತಾ. 15.21-28 )

24 ಅಲ್ಲಿಂದ ಯೇಸು ಎದ್ದು ಹೊರಟು ತೂರ್ ಪಟ್ಟಣದ ಪ್ರಾಂತ್ಯಗಳಿಗೆ ಹೋಗಿ ಒಂದು ಮನೆಯೊಳಗೆ ಇಳುಕೊಂಡು ಅದು ಯಾರಿಗೂ ಗೊತ್ತಾಗಬಾರದೆಂದಿದ್ದನು; ಆದರೆ ಆತನು ಗುಪ್ತವಾಗಿರುವದಕ್ಕೆ ಆಗದೆ ಹೋಯಿತು.

25 ಕೂಡಲೆ ಒಬ್ಬ ಹೆಂಗಸು ಆತನ ಸುದ್ದಿಯನ್ನು ಕೇಳಿ ಬಂದು ಆತನ ಪಾದಕ್ಕೆ ಬಿದ್ದಳು.

26 ಆಕೆಯ ಮಗಳಿಗೆ ದೆವ್ವ ಹಿಡಿದಿತ್ತು. ಆ ಹೆಂಗಸು ಅನ್ಯಮತದವಳೂ ಸುರೋಪೊಯಿನಿಕ್ಯರವಳೂ ಆಗಿದ್ದಳು.

27 ಆಕೆಯು ತನ್ನ ಮಗಳ ದೆವ್ವವನ್ನು ಬಿಡಿಸಬೇಕೆಂದು ಆತನನ್ನು ಬೇಡಿಕೊಂಡಾಗ ಆತನು ಆಕೆಗೆ - ಮಕ್ಕಳಿಗೆ ಮೊದಲು ತೃಪ್ತಿಯಾಗಲಿ; ಮಕ್ಕಳು ತಿನ್ನುವ ರೊಟ್ಟಿಯನ್ನು ತಕ್ಕೊಂಡು ನಾಯಿಮರಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿದನು.

28 ಅದಕ್ಕೆ ಆಕೆಯು - ಸ್ವಾಮೀ, ಆ ಮಾತು ನಿಜವೇ; ಮೇಜಿನ ಕೆಳಗಿರುವ ನಾಯಿಮರಿಗಳಂತೂ ಮಕ್ಕಳ ಕೈಯಿಂದ ಬೀಳುವ ರೊಟ್ಟೀತುಂಡುಗಳನ್ನು ತಿನ್ನುತ್ತವಲ್ಲಾ ಎಂದು ಉತ್ತರಕೊಡಲು

29 ಆತನು - ಈ ಮಾತನ್ನು ಹೇಳಿದ್ದರಿಂದ ದೆವ್ವವು ನಿನ್ನ ಮಗಳನ್ನು ಬಿಟ್ಟು ಬಿಟ್ಟಿದೆ, ಹೋಗು ಅಂದನು.

30 ಆಕೆಯು ತನ್ನ ಮನೆಗೆ ಹೋಗಿ ನೋಡಲಾಗಿ ಆ ಹುಡುಗಿ ಹಾಸಿಗೆಯ ಮೇಲೆ ಮಲಗಿದ್ದಳು; ದೆವ್ವ ಅವಳನ್ನು ಬಿಟ್ಟು ಹೋಗಿತ್ತು.

31 ಅನಂತರ ಆತನು ತೂರ್ ಪಟ್ಟಣದ ಪ್ರಾಂತ್ಯಗಳನ್ನು ಬಿಟ್ಟು ಸೀದೋನ್ ಪಟ್ಟಣದ ಮಾರ್ಗವಾಗಿ ದೆಕಪೊಲಿಯ ಪ್ರಾಂತ್ಯಗಳನ್ನು ಹಾದು ಗಲಿಲಾಯ ಸಮುದ್ರಕ್ಕೆ ಬಂದನು.

32 ಆಗ ಕೆಲವರು ತೊದಲು ಮಾತಾಡುವ ಒಬ್ಬ ಕಿವುಡನನ್ನು ಆತನ ಬಳಿಗೆ ಕರತಂದು - ಇವನ ಮೇಲೆ ನಿನ್ನ ಕೈಯಿಡಬೇಕು ಎಂದು ಆತನನ್ನು ಬೇಡಿಕೊಂಡರು.

33 ಆತನು ಅವನನ್ನು ಜನರ ಗುಂಪಿನಿಂದ ಒತ್ತಟ್ಟಿಗೆ ಕರಕೊಂಡು ಹೋಗಿ ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿ ಇಟ್ಟು ಉಗುಳಿ

34 ಅವನ ನಾಲಿಗೆಯನ್ನು ಮುಟ್ಟಿ ಆಕಾಶದ ಕಡೆಗೆ ನೋಡಿ ನಿಟ್ಟುಸುರು ಬಿಟ್ಟು ಅವನಿಗೆ - ಎಪ್ಫಥಾ ಎಂದು ಹೇಳಿದನು. ಆ ಶಬ್ದಕ್ಕೆ ತೆರೆಯಲಿ ಎಂದರ್ಥ.

35 ಹೇಳುತ್ತಲೇ ಅವನ ಕಿವಿ ತೆರೆದವು; ಅವನ ನಾಲಿಗೆಯ ಕಟ್ಟು ಬಿಚ್ಚಿಹೋಯಿತು; ಅವನು ನೆಟ್ಟಗೆ ಮಾತಾಡಿದನು.

36 ಆಗ ಆತನು - ಯಾರಿಗೂ ತಿಳಿಸಬಾರದೆಂದು ಅವರಿಗೆ ಖಂಡಿತವಾಗಿ ಹೇಳಿದನು. ಆದರೆ ಎಷ್ಟು ಖಂಡಿತವಾಗಿ ಹೇಳಿದರೂ ಅವರು ಮತ್ತಷ್ಟು ಹೆಚ್ಚಾಗಿ ಅದನ್ನು ಹಬ್ಬಿಸಿದರು.

37 ಅವರು ಅತ್ಯಂತಾಶ್ಚರ್ಯಪಟ್ಟು - ಎಲ್ಲಾ ಚೆನ್ನಾಗಿ ಮಾಡಿದ್ದಾನೆ; ಕಿವುಡರಾದರೂ ಕೇಳುವಂತೆ ಮಾಡುತ್ತಾನೆ, ಮೂಕರಾದರೂ ಮಾತಾಡುವಂತೆ ಮಾಡುತ್ತಾನೆ ಅಂದುಕೊಂಡರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು