Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮಾರ್ಕ 15 - ಕನ್ನಡ ಸತ್ಯವೇದವು J.V. (BSI)


ಪಿಲಾತನು ಯೇಸುವನ್ನು ವಿಚಾರಿಸಿ ಆತನಲ್ಲಿ ಅಪರಾಧವಿಲ್ಲವೆಂದು ಕಂಡರೂ ಆತನನ್ನು ಮರಣದಂಡನೆಗೆ ಒಪ್ಪಿಸಿದ್ದು
( ಮತ್ತಾ. 27.1 , 2 , 11-26 ; ಲೂಕ. 23.1-25 ; ಯೋಹಾ. 18.28—19.16 )

1 ಬೆಳಗಾದ ಕೂಡಲೆ ಮಹಾಯಾಜಕರೂ ಹಿರಿಯರೂ ಶಾಸ್ತ್ರಿಗಳೂ ಹಿರೀಸಭೆಯವರೆಲ್ಲರೂ ಒಟ್ಟುಗೂಡಿ ಆಲೋಚನೆ ಮಾಡಿಕೊಂಡು ಯೇಸುವನ್ನು ಕಟ್ಟಿಸಿ ತೆಗೆದುಕೊಂಡು ಹೋಗಿ ಪಿಲಾತನಿಗೆ ಒಪ್ಪಿಸಿದರು.

2 ಪಿಲಾತನು ಆತನನ್ನು - ನೀನು ಯೆಹೂದ್ಯರ ಅರಸನು ಹೌದೋ ಎಂದು ಕೇಳಲು ಆತನು - ನೀನೇ ಹೇಳಿದ್ದೀ ಎಂದು ಉತ್ತರಕೊಟ್ಟನು.

3-4 ಮಹಾಯಾಜಕರು ಆತನ ಮೇಲೆ ತುಂಬಾ ದೂರು ಹೇಳುತ್ತಿದ್ದರು. ಆಗ ಪಿಲಾತನು ಇನ್ನೊಂದಾವರ್ತಿ ಆತನನ್ನು - ನೀನು ಏನೂ ಉತ್ತರಕೊಡುವದಿಲ್ಲವೇ? ಇವರು ನಿನ್ನ ಮೇಲೆ ಎಷ್ಟು ದೂರುಗಳನ್ನು ಹೇಳುತ್ತಾರೆ ನೋಡು ಎಂದು ಕೇಳಿದನು.

5 ಆದರೆ ಯೇಸು ಇನ್ನೇನೂ ಉತ್ತರಕೊಡಲಿಲ್ಲ. ಅದನ್ನು ನೋಡಿ ಪಿಲಾತನು ಆಶ್ಚರ್ಯಪಟ್ಟನು.

6 ಅವನು ಆ ಹಬ್ಬದಲ್ಲಿ ಜನರು ಬೇಡಿದ ಸೆರೆಯವನನ್ನು ಅವರಿಗೆ ಬಿಟ್ಟುಕೊಡುವ ಪದ್ಧತಿಯಿತ್ತು.

7 ಆಗ ಬರಬ್ಬನೆಂಬವನೊಬ್ಬನಿದ್ದನು; ಇವನನ್ನು ದಂಗೆಯಲ್ಲಿ ಕೊಲೆಪಾತಕ ಮಾಡಿದ ದಂಗೆಗಾರರ ಕೂಡ ಕಟ್ಟಿಹಾಕಿದ್ದರು.

8 ಜನರು ಪಿಲಾತನ ಬಳಿಗೆ ಹೋಗಿ - ನೀನು ನಮಗೆ ಮಾಡುತ್ತಾ ಬಂದ ಪ್ರಕಾರ ಮಾಡು ಎಂದು ಬೇಡಿಕೊಳ್ಳುತ್ತಿದ್ದರು.

9-10 ಮಹಾಯಾಜಕರು ಹೊಟ್ಟೇಕಿಚ್ಚಿನಿಂದ ಯೇಸುವನ್ನು ಒಪ್ಪಿಸಿಕೊಟ್ಟಿದ್ದಾರೆಂದು ಪಿಲಾತನು ಗ್ರಹಿಸಿಕೊಂಡು - ನಾನು ಯೆಹೂದ್ಯರ ಅರಸನನ್ನು ನಿಮಗೆ ಬಿಟ್ಟು ಕೊಡಬೇಕನ್ನುತ್ತೀರೋ ಎಂದು ಅವರನ್ನು ಕೇಳಿದನು.

11 ಅತ್ತಲಾಗಿ ಮಹಾಯಾಜಕರು - ಬರಬ್ಬನನ್ನೇ ಬಿಟ್ಟುಕೊಡಬೇಕೆಂದು ಬೇಡಿಕೊಳ್ಳಿರಿ ಎಂಬದಾಗಿ ಜನರನ್ನು ಪ್ರೇರೇಪಿಸಿದರು.

12 ಅದಕ್ಕೆ ಪಿಲಾತನು ತಿರಿಗಿ ಅವರನ್ನು - ಹಾಗಾದರೆ ನೀವು ಹೇಳುವ ಯೆಹೂದ್ಯರ ಅರಸನನ್ನು ನಾನೇನು ಮಾಡಲಿ ಎಂದು ಕೇಳಲು ಅವರು -

13 ಅವನನ್ನು ಶಿಲುಬೆಗೆ ಹಾಕಿಸು ಎಂದು ತಿರಿಗಿ ಬೊಬ್ಬೆಹಾಕಿದರು.

14 ಪಿಲಾತನು - ಯಾಕೆ? ಕೆಟ್ಟದ್ದೇನು ಮಾಡಿದನು? ಅಂದನು. ಆದರೆ ಅವರು - ಅವನನ್ನು ಶಿಲುಬೆಗೆ ಹಾಕಿಸು ಎಂದು ಬಹಳವಾಗಿ ಆರ್ಭಟಿಸಿದರು.

15 ಅದಕ್ಕೆ ಪಿಲಾತನು ಜನರ ಮನಸ್ಸನ್ನು ಸಮಾಧಾನಪಡಿಸಬೇಕೆಂದು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿದನು.


ಯೇಸುವನ್ನು ಪರಿಹಾಸ್ಯಮಾಡಿ ಶಿಲುಬೆಗೆ ಹಾಕಿದ್ದು; ಆತನು ಪ್ರಾಣಬಿಟ್ಟದ್ದು
( ಮತ್ತಾ. 27.27-56 ; ಲೂಕ. 23.26-49 ; ಯೋಹಾ. 19.17-30 )

16 ಸಿಪಾಯಿಗಳು ಆತನನ್ನು ಅಧಿಪತಿಯ ಅರಮನೆಗೆ ಸೇರಿದ ಅಂಗಳದೊಳಕ್ಕೆ ಸಾಗಿಸಿಕೊಂಡುಹೋಗಿ ಪಟಾಲಮನ್ನೆಲ್ಲಾ ಒಟ್ಟಿಗೆ ಕರೆದು

17 ಆತನಿಗೆ ಕೆಂಪು ಒಲ್ಲಿಯನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಆತನಿಗಿಟ್ಟು -

18 ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ ಎಂದು ಆತನಿಗೆ ವಂದನೆಮಾಡಿ

19 ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು ಆತನ ಮೇಲೆ ಉಗುಳಿ ಆತನ ಮುಂದೆ ಮೊಣಕಾಲೂರಿ ಅಡ್ಡಬಿದ್ದರು.

20 ಹೀಗೆ ಆತನನ್ನು ಪರಿಹಾಸ್ಯ ಮಾಡಿದ ಮೇಲೆ ಆ ಒಲ್ಲಿಯನ್ನು ತೆಗೆದು ಆತನ ಬಟ್ಟೆಗಳನ್ನು ಹೊದಿಸಿ ಆತನನ್ನು ಶಿಲುಬೆಗೆ ಹಾಕುವದಕ್ಕೆ ತೆಗೆದುಕೊಂಡು ಹೋದರು.

21 ಆಗ ಹೊಲದಿಂದ ಹೊರಟು ಆ ಮಾರ್ಗವಾಗಿ ಬರುತ್ತಿದ್ದ ಒಬ್ಬನನ್ನು ಆತನ ಶಿಲುಬೆಯನ್ನು ಹೊರುವದಕ್ಕೆ ಬಿಟ್ಟೀಹಿಡಿದರು. ಇವನು ಯಾರಂದರೆ - ಅಲೆಕ್ಸಾಂದ್ರ ರೂಫ ಎಂಬವರ ತಂದೆಯಾದ ಕುರೇನೆ ಪಟ್ಟಣದ ಸೀಮೋನನು.

22 ಬಳಿಕ ಆತನನ್ನು ಗೊಲ್ಗೊಥಾ ಎಂಬ ಸ್ಥಳಕ್ಕೆ ಕರಕೊಂಡು ಬಂದರು. ಗೊಲ್ಗೊಥಾ ಅಂದರೆ ಕಪಾಲಸ್ಥಳ.

23 ಅಲ್ಲಿ ಆತನಿಗೆ ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕೊಟ್ಟರು; ಆದರೆ ಆತನು ತೆಗೆದುಕೊಳ್ಳಲಿಲ್ಲ.

24 ಅವರು ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಲ್ಲಿ ಯಾವ ಯಾವದು ಯಾರಾರಿಗೆ ಆಗಬೇಕೆಂದು ಚೀಟುಹಾಕಿ ಪಾಲುಮಾಡಿಕೊಂಡರು.

25 ಆತನನ್ನು ಶಿಲುಬೆಗೆ ಹಾಕುವಾಗ ಹೊತ್ತಾರೆ ಒಂಭತ್ತು ಗಂಟೆಯಾಗಿತ್ತು.

26 ಇದಲ್ಲದೆ ಅವರು ಹೊರಿಸಿದ ಅಪರಾಧವನ್ನು ಸೂಚಿಸುವ ಒಂದು ವಿಳಾಸವು ಶಿಲುಬೆಯ ಮೇಲೆ ಬರೆದಿತ್ತು; ಅದೇನಂದರೆ - ಯೆಹೂದ್ಯರ ಅರಸನು ಎಂಬದೇ.

27 ಅದಲ್ಲದೆ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಆತನ ಬಲಗಡೆಯಲ್ಲಿ ಒಬ್ಬನನ್ನು ಎಡಗಡೆಯಲ್ಲಿ ಆತನ ಸಂಗಡ ಶಿಲುಬೆಗೆ ಹಾಕಿದರು.

29 ಅಲ್ಲಿ ಹಾದುಹೋಗುವವರು ತಲೇ ಆಡಿಸಿ ಆಹಾ, ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಕಟ್ಟುವವನೇ,

30 ಶಿಲುಬೆಯಿಂದ ಇಳಿದು ನಿನ್ನನ್ನು ರಕ್ಷಿಸಿಕೋ ಎಂದು ಆತನನ್ನು ಹಂಗಿಸುತ್ತಿದ್ದರು.

31 ಅದೇ ಮೇರೆಗೆ ಮಹಾಯಾಜಕರೂ ಶಾಸ್ತ್ರಿಗಳೂ - ಅವನು ಮತ್ತೊಬ್ಬರನ್ನು ರಕ್ಷಿಸಿದನು; ತನ್ನನ್ನು ರಕ್ಷಿಸಿಕೊಳ್ಳಲಾರನು.

32 ಇಸ್ರಾಯೇಲ್ಯರ ಅರಸನಾದ ಈ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಇಳಿದುಬಂದರೆ ನಾವು ನೋಡಿ ನಂಬೇವು ಎಂದು ತಮ್ಮತಮ್ಮೊಳಗೆ ಹಾಸ್ಯದಿಂದ ಮಾತಾಡುತ್ತಿದ್ದರು. ಆತನ ಸಂಗಡ ಶಿಲುಬೆಗೆ ಹಾಕಲ್ಪಟ್ಟವರು ಸಹ ಆತನನ್ನು ನಿಂದಿಸುತ್ತಿದ್ದರು.

33 ಮಧ್ಯಾಹ್ನವಾದಾಗ ದೇಶದ ಮೇಲೆಲ್ಲಾ ಕತ್ತಲೆ ಕವಿದು ಸಾಯಂಕಾಲ ಮೂರು ಗಂಟೆಯ ತನಕ ಇತ್ತು.

34 ಮೂರು ಗಂಟೆಗೆ ಯೇಸು - ಎಲೋಹಿ, ಎಲೋಹಿ, ಲಮಾ ಸಬಕ್ತಾನೀ ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ ಎಂದು ಮಹಾಧ್ವನಿಯಿಂದ ಕೂಗಿದನು.

35 ಹತ್ತಿರ ನಿಂತಿದ್ದವರಲ್ಲಿ ಕೆಲವರು ಅದನ್ನು ಕೇಳಿ - ಎಲೀಯನನ್ನು ಕರೆಯುತ್ತಾನೆ ಕಾಣಿರೋ, ಅಂದರು.

36 ಆಗ ಒಬ್ಬನು ಓಡಿಹೋಗಿ ಸ್ಪಂಜನ್ನು ಹುಳಿರಸದಿಂದ ತುಂಬಿಸಿ ಕೋಲಿಗೆ ಸಿಕ್ಕಿಸಿ ಆತನಿಗೆ ಕುಡಿಯುವದಕ್ಕೆ ಕೊಟ್ಟು - ಬಿಡಿರಿ, ಎಲೀಯನು ಇವನನ್ನು ಇಳಿಸುವದಕ್ಕೆ ಬರುವನೇನೋ ನೋಡೋಣ ಅಂದನು.

37 ಆದರೆ ಯೇಸು ಮಹಾಧ್ವನಿಯನ್ನು ಗೈದು ಪ್ರಾಣಬಿಟ್ಟನು.

38 ಆಗ ದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು.

39 ಆತನು ಹೀಗೆ ಪ್ರಾಣಬಿಟ್ಟದ್ದನ್ನು ಆತನ ಹತ್ತಿರ ಎದುರಿಗೆ ನಿಂತಿದ್ದ ಶತಾಧಿಪತಿಯು ನೋಡಿ - ನಿಜವಾಗಿ ಈ ಮನುಷ್ಯನು ದೇವಕುಮಾರನಾಗಿದ್ದನು ಅಂದನು.

40-41 ಇದಲ್ಲದೆ ಅಲ್ಲಿ ಸ್ತ್ರೀಯರು ಸಹ ದೂರದಿಂದ ನೋಡುತ್ತಿದ್ದರು; ಇವರಲ್ಲಿ, ಆತನು ಗಲಿಲಾಯದಲ್ಲಿದ್ದಾಗ ಆತನನ್ನು ಹಿಂಬಾಲಿಸಿ ಸೇವೆ ಮಾಡುತ್ತಿದ್ದವರಾದ ಮಗ್ದಲದ ಮರಿಯ, ಚಿಕ್ಕ ಯಾಕೋಬನ ಮತ್ತು ಯೋಸೆಯ ತಾಯಿಯಾದ ಮರಿಯ, ಸಲೋಮೆ ಎಂಬವರೂ ಆತನ ಸಂಗಡ ಯೆರೂಸಲೇವಿುಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರೂ ಇದ್ದರು.


ಶಿಷ್ಯರು ಯೇಸುವಿನ ದೇಹವನ್ನು ಸಮಾಧಿಯಲ್ಲಿಟ್ಟದ್ದು
( ಮತ್ತಾ. 27.57-61 ; ಲೂಕ. 23.50-56 ; ಯೋಹಾ. 19.38-42 )

42 ಆಗಲೇ ಸಂಜೆಯಾಗಿತ್ತು; ಮತ್ತು ಆ ದಿನವು ಸೌರಣೆಯ ದಿನ, ಅಂದರೆ ಸಬ್ಬತ್ ದಿನದ ಹಿಂದಿನ ದಿನ ಆಗಿತ್ತು.

43 ಹೀಗಿರಲಾಗಿ ಅರಿಮಥಾಯದ ಯೋಸೇಫನೆಂಬವನು ಬಂದು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡನು. ಇವನು ಹಿರೀಸಭೆಯವರಲ್ಲಿ ಘನವಂತನು, ದೇವರ ರಾಜ್ಯವನ್ನು ಎದುರು ನೋಡುತ್ತಿದ್ದವನು.

44 ಪಿಲಾತನು - ಅವನು ಇಷ್ಟು ಬೇಗ ಸತ್ತನೋ ಎಂದು ಆಶ್ಚರ್ಯಪಟ್ಟು ಶತಾಧಿಪತಿಯನ್ನು ಕರೆಸಿ - ಅವನು ಆಗಲೇ ಸತ್ತನೋ ಎಂದು ಅವನನ್ನು ಕೇಳಿ

45 ಆತನು ಸತ್ತದ್ದನ್ನು ಶತಾಧಿಪತಿಯಿಂದ ತಿಳಿದು ಶವವನ್ನು ಯೋಸೇಫನಿಗೆ ಕೊಡಿಸಿದನು.

46 ಯೋಸೇಫನು ನಾರು ಮಡಿಯನ್ನು ಕೊಂಡುತಂದು ಆತನನ್ನು ಇಳಿಸಿ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ತೋಡಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು.

47 ಮಗ್ದಲದ ಮರಿಯಳೂ ಯೋಸೆಯ ತಾಯಿ ಮರಿಯಳೂ ಆತನನ್ನಿಡುವ ಸ್ಥಳವನ್ನು ನೋಡಿದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು