ಮತ್ತಾಯ 3 - ಕನ್ನಡ ಸತ್ಯವೇದವು J.V. (BSI)ಸ್ನಾನಿಕನಾದ ಯೋಹಾನನ ಉಪದೇಶ ( ಮಾರ್ಕ. 1.2-8 ; ಲೂಕ. 3.1-18 ; ಯೋಹಾ. 1.6-8 , 19-34 ) 1 ಆ ದಿನಗಳಲ್ಲಿ ಸ್ನಾನಿಕನಾದ ಯೋಹಾನನು - 2 ಪರಲೋಕರಾಜ್ಯವು ಸಮೀಪವಾಯಿತು; ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ಯೂದಾಯದ ಅಡವಿಯಲ್ಲಿ ಸಾರಿ ಹೇಳುತ್ತಾ ಬಂದನು. 3 ಕರ್ತನ ದಾರಿಯನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ ಎಂಬದಾಗಿ ಪ್ರವಾದಿಯಾದ ಯೆಶಾಯನಿಂದ ಸೂಚಿತನಾದವನು ಇವನೇ. 4 ಈ ಯೋಹಾನನಿಗೆ ಒಂಟೇ ಕೂದಲಿನ ಹೊದಿಕೆಯೂ ಸೊಂಟದಲ್ಲಿ ತೊಗಲಿನ ನಡುಕಟ್ಟೂ ಇದ್ದವು. ಅವನಿಗೆ ವಿುಡಿತೆ ಮತ್ತು ಕಾಡಜೇನು ಆಹಾರವಾಗಿದ್ದವು. 5 ಆಗ ಯೆರೂಸಲೇಮೂ ಎಲ್ಲಾ ಯೂದಾಯವೂ ಯೊರ್ದನ್‍ಹೊಳೆಯ ಸುತ್ತಲಿರುವ ಎಲ್ಲಾ ಸೀಮೆಯೂ 6 ಅವನ ಬಳಿಗೆ ಹೊರಟುಹೋಗಿ, ಅವರು ತಮ್ಮತಮ್ಮ ಪಾಪಗಳನ್ನು ಹೇಳಿಕೊಂಡು ಯೊರ್ದನ್‍ಹೊಳೆಯಲ್ಲಿ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು. 7 ಆದರೆ ಅವನು ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ಸ್ನಾನಮಾಡಿಸಿಕೊಳ್ಳುವದಕ್ಕೆ ಬರುವದನ್ನು ಕಂಡು ಅವರಿಗೆ - ಎಲೈ ಸರ್ಪಜಾತಿಯವರೇ, ಮುಂದೆ ಕಾಣಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮಗೆ ಉಪದೇಶ ಮಾಡಿದವರಾರು? 8 ಹಾಗಾದರೆ ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿತೆಂಬದನ್ನು ತಕ್ಕ ಫಲದಿಂದ ತೋರಿಸಿರಿ. 9 ಅಬ್ರಹಾಮನು ನಮಗೆ ಮೂಲಪುರುಷನಲ್ಲವೇ ಎಂಬುವ ಆಲೋಚನೆಯನ್ನು ಬಿಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲನೆಂದು ನಿಮಗೆ ಹೇಳುತ್ತೇನೆ. 10 ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿದೆ; ಒಳ್ಳೇ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು. 11 ನಾನಂತೂ ನಿಮ್ಮ ಮನಸ್ಸು ತಿರುಗಿಕೊಳ್ಳಬೇಕೆಂಬದಕ್ಕೆ ನಿಮಗೆ ನೀರಿನಲ್ಲಿ ಸ್ನಾನಮಾಡಿಸುತ್ತೇನೆ. ಆದರೆ ನನ್ನ ಹಿಂದೆ ಬರುವವನು ನನಗಿಂತ ಶಕ್ತನು; ಆತನ ಕೆರಗಳನ್ನು ಹೊರಲಿಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ನಿಮಗೆ ಸ್ನಾನಮಾಡಿಸುವನು. 12 ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ; ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನುಮಾಡಿ ತನ್ನ ಗೋದಿಯನ್ನು ಕಣಜದಲ್ಲಿ ತುಂಬಿಕೊಂಡು ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು ಎಂದು ಹೇಳಿದನು. ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡದ್ದು ( ಮಾರ್ಕ. 1.9-11 ; ಲೂಕ. 3.21 , 22 ) 13 ಆ ಕಾಲದಲ್ಲಿ ಯೇಸು ಯೋಹಾನನಿಂದ ಸ್ನಾನಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದನ್‍ಹೊಳೆಗೆ ಬಂದನು. 14 ಆಗ ಯೋಹಾನನು - ನಾನು ನಿನ್ನಿಂದ ಸ್ನಾನ ಮಾಡಿಸಿಕೊಳ್ಳತಕ್ಕವನಾಗಿರುವಲ್ಲಿ ನೀನು ನನ್ನ ಬಳಿಗೆ ಬರುವದೇನು ಎಂದು ಹೇಳಿ ಆತನನ್ನು ತಡೆಯುತ್ತಾ ಇದ್ದನು. 15 ಆದರೆ ಯೇಸು ಅವನಿಗೆ - ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ಧರ್ಮವನ್ನು ನೆರವೇರಿಸತಕ್ಕದ್ದಾಗಿದೆ ಎಂದು ಹೇಳಿದಾಗ ಅವನು ಒಪ್ಪಿಕೊಂಡನು. 16 ಯೇಸು ಸ್ನಾನಮಾಡಿಸಿಕೊಂಡ ಕೂಡಲೆ ನೀರಿನಿಂದ ಮೇಲಕ್ಕೆ ಬರಲು ಇಗೋ, ಆತನಿಗೆ ಆಕಾಶವು ತೆರೆಯಿತು; ಮತ್ತು ದೇವರ ಆತ್ಮ ಪಾರಿವಾಳದ ಹಾಗೆ ಇಳಿದು ತನ್ನ ಮೇಲೆ ಬರುವದನ್ನು ಕಂಡನು. 17 ಆಗ - ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India