Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 26 - ಕನ್ನಡ ಸತ್ಯವೇದವು J.V. (BSI)


ಅಧಿಕಾರಸ್ಥರು ಯೇಸುವನ್ನು ಕೊಲ್ಲಬೇಕೆಂದು ಆಲೋಚಿಸಿದ್ದು. ಒಬ್ಬ ಸ್ತ್ರೀಯು ಬೆಲೆಯುಳ್ಳ ಪರಿಮಳ ತೈಲವನ್ನು ಆತನ ಮೇಲೆ ಹೊಯಿದದ್ದು
( ಮಾರ್ಕ. 14.1-11 ; ಲೂಕ. 22.1-6 ; ಯೋಹಾ. 12.1-8 )

1 ಯೇಸು ಈ ಮಾತುಗಳನ್ನೆಲ್ಲಾ ಆಡಿ ಮುಗಿಸಿದ ಮೇಲೆ ತನ್ನ ಶಿಷ್ಯರಿಗೆ -

2 ಎರಡು ದಿವಸಗಳಾದ ಮೇಲೆ ಪಸ್ಕಹಬ್ಬ ಬರುತ್ತದೆಂದು ಬಲ್ಲಿರಿ; ಆಗ ಮನುಷ್ಯಕುಮಾರನನ್ನು ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿಕೊಡೋಣವಾಗುವದು ಎಂದು ಹೇಳಿದನು.

3 ಆ ಕಾಲದಲ್ಲಿ ಮಹಾಯಾಜಕರೂ ಪ್ರಜೆಯ ಹಿರಿಯರೂ ಕಾಯಫನೆಂಬ ಮಹಾಯಾಜಕನ ಮಠಕ್ಕೆ ಕೂಡಿಬಂದು

4 ಯೇಸುವನ್ನು ಉಪಾಯದಿಂದ ಹಿಡಿದು ಕೊಲ್ಲಬೇಕೆಂಬದಾಗಿ ಆಲೋಚನೆಮಾಡಿಕೊಂಡರು.

5 ಆದರೂ - ಹಬ್ಬದಲ್ಲಿ ಹಿಡಿಯಬಾರದು, ನಮ್ಮ ಜನರಲ್ಲಿ ಗದ್ದಲವಾದೀತು ಎಂದು ಮಾತಾಡಿಕೊಂಡರು.

6 ಯೇಸು ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿದ್ದಾಗ ಒಬ್ಬ ಸ್ತ್ರೀಯು

7 ಬಹು ಬೆಲೆಯುಳ್ಳ ಸುಗಂಧ ತೈಲದ ಭರಣಿಯನ್ನು ತೆಗೆದುಕೊಂಡು ಆತನ ಬಳಿಗೆ ಬಂದು ಆತನು ಊಟಕ್ಕೆ ಕೂತಿರುವಾಗ ಆ ತೈಲವನ್ನು ಆತನ ತಲೆಯ ಮೇಲೆ ಹೊಯಿದಳು.

8 ಶಿಷ್ಯರು ಇದನ್ನು ಕಂಡು ಕೋಪಗೊಂಡು - ಈ ನಷ್ಟ ಯಾತಕ್ಕೆ?

9 ಈ ತೈಲವನ್ನು ಬಹಳ ಹಣಕ್ಕೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ ಅಂದರು.

10 ಯೇಸು ಅದನ್ನು ತಿಳಿದು ಅವರಿಗೆ - ಈ ಸ್ತ್ರೀಗೆ ಯಾಕೆ ತೊಂದರೆಕೊಡುತ್ತೀರಿ? ಈಕೆ ನನಗೆ ಒಳ್ಳೇ ಕಾರ್ಯವನ್ನು ಮಾಡಿದ್ದಾಳೆ.

11 ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ, ಆದರೆ ನಾನು ನಿಮ್ಮಲ್ಲಿ ಯಾವಾಗಲೂ ಇರುವದಿಲ್ಲ.

12 ಈಕೆಯು ಈ ತೈಲವನ್ನು ನನ್ನ ದೇಹದ ಮೇಲೆ ಹೊಯಿದದ್ದು ನನ್ನ ಉತ್ತರಕ್ರಿಯೆಗಾಗಿಯೇ.

13 ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವದೋ ಅಲ್ಲಲ್ಲಿ ಈಕೆ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ ಹೇಳುವರೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಎಂದು ಹೇಳಿದನು.

14 ಆಮೇಲೆ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನೆಂಬವನು ಮಹಾಯಾಜಕರ ಬಳಿಗೆ ಹೋಗಿ -

15 ನಾನು ಅವನನ್ನು ನಿಮಗೆ ಹಿಡುಕೊಟ್ಟರೆ ನನಗೆ ಏನು ಕೊಡುತ್ತೀರಿ? ಅಂದನು. ಅವರು ಅವನಿಗೆ ಮೂವತ್ತು ರೂಪಾಯಿ ತೂಗಿ ಕೊಟ್ಟರು.

16 ಅಂದಿನಿಂದ ಅವನು ಆತನನ್ನು ಹಿಡುಕೊಡುವದಕ್ಕೆ ಅನುಕೂಲವಾದ ಸಮಯವನ್ನು ನೋಡುತ್ತಿದ್ದನು.


ಯೇಸು ತನ್ನ ಶಿಷ್ಯರ ಸಂಗಡ ಕಡೇ ಭೋಜನ ಮಾಡಿದ್ದು
( ಮಾರ್ಕ. 14.12-31 ; ಲೂಕ. 22.7-34 ; ಯೋಹಾ. 13.21-26 )

17 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿವಸದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು - ಪಸ್ಕದ ಊಟಮಾಡುವದಕ್ಕೆ ನಾವು ನಿನಗೆ ಎಲ್ಲಿ ಸಿದ್ಧಮಾಡಬೇಕೆನ್ನುತ್ತೀ ಎಂದು ಕೇಳಲು

18 ಆತನು - ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ ಅವನಿಗೆ - ನನ್ನ ಕಾಲ ಸಮೀಪವಾಯಿತು, ನಿನ್ನ ಮನೆಯಲ್ಲಿ ನನ್ನ ಶಿಷ್ಯರ ಸಂಗಡ ಪಸ್ಕಹಬ್ಬಮಾಡುತ್ತೇನೆಂದು ಬೋಧಕನು ಹೇಳುತ್ತಾನೆ ಎಂಬದಾಗಿ ಹೇಳಿರಿ ಅಂದನು.

19 ಶಿಷ್ಯರು ಯೇಸು ತಮಗೆ ಅಪ್ಪಣೆಕೊಟ್ಟಂತೆ ಮಾಡಿ ಪಸ್ಕಕ್ಕೆ ಸೌರಿಸಿದರು.

20 ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕೂತುಕೊಂಡನು.

21 ಅವರು ಊಟಮಾಡುತ್ತಿರುವಾಗ ಆತನು - ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.

22 ಆಗ ಅವರು ಬಹಳ ದುಃಖಪಟ್ಟು - ಸ್ವಾಮೀ, ನಾನಲ್ಲವಲ್ಲ ಎಂದು ಪ್ರತಿಯೊಬ್ಬರು ಕೇಳತೊಡಗಿದರು.

23 ಅದಕ್ಕಾತನು - ಬಟ್ಟಲಲ್ಲಿ ನನ್ನ ಸಂಗಡ ಕೈ ಅದ್ದಿದವನೇ ನನ್ನನ್ನು ಹಿಡುಕೊಡುವನು.

24 ಮನುಷ್ಯಕುಮಾರನು ಹೊರಟುಹೋಗುತ್ತಾನೆ ಸರಿ; ಹಾಗೆ ಆತನ ವಿಷಯವಾಗಿ ಬರೆದದೆಯಲ್ಲಾ. ಆದರೆ ಯಾವನು ಮನುಷ್ಯಕುಮಾರನನ್ನು ಹಿಡುಕೊಡುವನೋ ಅವನ ಗತಿಯನ್ನು ಏನು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಅವನಿಗೆ ಒಳ್ಳೇದಾಗಿತ್ತು ಅಂದನು.

25 ಆಗ ಆತನನ್ನು ಹಿಡುಕೊಡಬೆಕೆಂದಿದ್ದ ಯೂದನು - ಗುರುವೇ, ನಾನಲ್ಲವಲ್ಲ? ಅನ್ನಲಾಗಿ ಯೇಸು ಅವನಿಗೆ - ನೀನೇ ಹೇಳಿದ್ದೀ ಎಂದು ಹೇಳಿದನು.

26 ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು ಶಿಷ್ಯರಿಗೆ ಕೊಟ್ಟು - ತಕ್ಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ ಅಂದನು.

27 ಆಮೇಲೆ ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟು - ಇದರಲ್ಲಿರುವದನ್ನು ಎಲ್ಲರೂ ಕುಡಿಯಿರಿ;

28 ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ.

29 ನಾನು ನನ್ನ ತಂದೆಯ ರಾಜ್ಯದಲ್ಲಿ ದ್ರಾಕ್ಷಾರಸವನ್ನು ನಿಮ್ಮ ಸಂಗಡ ಹೊಸದಾಗಿ ಕುಡಿಯುವ ದಿನದವರೆಗೂ ಇನ್ನು ಕುಡಿಯುವದೇ ಇಲ್ಲ ಎಂದು ನಿಮಗೆ ಹೇಳುತ್ತೇನೆ ಅಂದನು.

30 ಬಳಿಕ ಅವರು ಕೀರ್ತನೆಯನ್ನು ಹಾಡಿ ಎಣ್ಣೆಯ ಮರಗಳ ಗುಡ್ಡಕ್ಕೆ ಹೊರಟುಹೋದರು.

31 ಆಗ ಯೇಸು, ಅವರಿಗೆ - ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿಯುವಿರಿ. ಕುರುಬನನ್ನು ಹೊಡೆಯುವೆನು; ಹಿಂಡಿನ ಕುರಿಗಳು ಚದರಿಹೋಗುವವು ಎಂದು ಬರೆದದೆಯಲ್ಲಾ.

32 ಆದರೆ ನಾನು ಜೀವಿತನಾಗಿ ಎದ್ದ ಮೇಲೆ ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುವೆನು ಎಂದು ಹೇಳಿದನು.

33 ಪೇತ್ರನು ಆತನಿಗೆ - ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಎಂದಿಗೂ ಹಿಂಜರಿಯುವದಿಲ್ಲ ಎಂದು ಉತ್ತರಕೊಡಲು

34 ಯೇಸು - ನಿನಗೆ ಸತ್ಯವಾಗಿ ಹೇಳುತ್ತೇನೆ. ಇದೇ ರಾತ್ರಿಯಲ್ಲಿ ಕೋಳಿಕೂಗುವದಕ್ಕಿಂತ ಮುಂಚೆ ನೀನು ನನ್ನ ವಿಷಯದಲ್ಲಿ - ಅವನನ್ನು ಅರಿಯೆನೆಂಬದಾಗಿ ಮೂರು ಸಾರಿ ಹೇಳುವಿ ಅಂದನು.

35 ಪೇತ್ರನು ಆತನಿಗೆ - ನಾನು ನಿನ್ನ ಸಂಗಡ ಸಾಯಬೇಕಾದರೂ ನಿನ್ನನ್ನು ಅರಿಯೆನೆಂಬದಾಗಿ ಹೇಳುವದೇ ಇಲ್ಲ ಎಂದು ಹೇಳಿದನು. ಅದರಂತೆ ಶಿಷ್ಯರೆಲ್ಲರೂ ಹೇಳಿದರು.


ಯೇಸು ಗೆತ್ಸೇಮನೆ ತೋಟದಲ್ಲಿ ಪ್ರಾರ್ಥಿಸುವಾಗ ಯೂದನು ಆತನನ್ನು ಶತ್ರುಗಳಿಗೆ ಹಿಡುಕೊಟ್ಟದ್ದು
( ಮಾರ್ಕ. 14.32-50 ; ಲೂಕ. 22.40-53 ; ಯೋಹಾ. 18.1-12 )

36 ಅನಂತರ ಯೇಸು ತನ್ನ ಶಿಷ್ಯರ ಸಂಗಡ ಗೆತ್ಸೇಮನೆ ಎಂಬ ತೋಟಕ್ಕೆ ಬಂದು ಅವರಿಗೆ - ಇಲ್ಲೇ ಕೂತುಕೊಳ್ಳಿರಿ, ನಾನು ಅತ್ತಲಾಗಿ ಹೋಗಿ ಪ್ರಾರ್ಥನೆ ಮಾಡಿ ಬರುತ್ತೇನೆ ಎಂದು ಹೇಳಿ

37 ಪೇತ್ರನನ್ನೂ ಜೆಬೆದಾಯನ ಇಬ್ಬರು ಮಕ್ಕಳನ್ನೂ ಕರಕೊಂಡು ಹೋಗಿ ದುಃಖಪಟ್ಟು ಮನಗುಂದಿದವನಾದನು.

38 ಮತ್ತು ಅವರಿಗೆ - ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನ ಸಂಗಡ ಎಚ್ಚರವಾಗಿರ್ರಿ ಎಂದು ಹೇಳಿ

39 ಸ್ವಲ್ಪ ಮುಂದೆ ಹೋಗಿ ಬೋರಲಬಿದ್ದು - ನನ್ನ ತಂದೆಯೇ, ಸಾಧ್ಯವಾಗಿದ್ದರೆ ಈ ಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಹೇಗೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ ಎಂದು ದೇವರನ್ನು ಪ್ರಾರ್ಥಿಸಿದನು.

40 ಆಮೇಲೆ ಆ ಶಿಷ್ಯರ ಬಳಿಗೆ ಬಂದು ಅವರು ನಿದ್ದೆ ಮಾಡುವದನ್ನು ಕಂಡು ಪೇತ್ರನಿಗೆ - ಹೀಗೋ? ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ?

41 ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು ಎಂದು ಹೇಳಿದನು.

42 ತಿರಿಗಿ ಎರಡನೆಯ ಸಾರಿ ಹೋಗಿ - ನನ್ನ ತಂದೆಯೇ, ನಾನು ಕುಡಿದ ಹೊರತು ಈ ಪಾತ್ರೆ ಬಿಟ್ಟು ಹೋಗಕೂಡದಾಗಿದ್ದರೆ ನಿನ್ನ ಚಿತ್ತವೇ ಆಗಲಿ ಎಂದು ಪ್ರಾರ್ಥನೆಮಾಡಿದನು.

43 ಆತನು ತಿರಿಗಿ ಬಂದಾಗ ಅವರು ನಿದ್ದೆಮಾಡುವದನ್ನು ಕಂಡನು; ಅವರ ಕಣ್ಣುಗಳು ಭಾರವಾಗಿದ್ದವು.

44 ಆಮೇಲೆ ತಿರಿಗಿ ಅವರನ್ನು ಬಿಟ್ಟುಹೋಗಿ ತಿರಿಗಿ ಅದೇ ಮಾತನ್ನು ಹೇಳುತ್ತಾ ಮೂರನೆಯ ಸಾರಿ ಪ್ರಾರ್ಥಿಸಿದನು.

45 ತರುವಾಯ ಶಿಷ್ಯರ ಬಳಿಗೆ ಬಂದು ಅವರಿಗೆ - ನೀವು ಇನ್ನೂ ನಿದ್ದೆಮಾಡಿ ದಣುವಾರಿಸಿಕೊಳ್ಳಿರಿ; ಇಗೋ, ಗಳಿಗೆ ಸಮೀಪಿಸಿತು, ಈಗ ಮನುಷ್ಯಕುಮಾರನು ದುರ್ಜನರ ಕೈಗೆ ಒಪ್ಪಿಸಲ್ಪಡುತ್ತಾನೆ.

46 ಏಳಿರಿ, ಹೋಗೋಣ; ನನ್ನನ್ನು ಹಿಡುಕೊಡುವವನು ಹತ್ತಿರಕ್ಕೆ ಬಂದಿದ್ದಾನೆ ನೋಡಿರಿ ಎಂದು ಹೇಳಿದನು.

47 ಆತನು ಇನ್ನೂ ಮಾತಾಡುತ್ತಿರಲು ಇಗೋ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಬಂದನು; ಮಹಾಯಾಜಕರು ಜನರ ಹಿರಿಯರು ಇವರ ಕಡೆಯಿಂದ ಬಹು ಜನರ ಗುಂಪು ಕತ್ತಿ ದೊಣ್ಣೆಗಳನ್ನು ಹಿಡುಕೊಂಡು ಅವನ ಸಂಗಡ ಬಂತು.

48 ಇದಲ್ಲದೆ ಆತನನ್ನು ಹಿಡುಕೊಡುವವನು ಅವರಿಗೆ - ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಅವನನ್ನು ಹಿಡಿಯಿರಿ ಎಂದು ಗುರುತು ಹೇಳಿಕೊಟ್ಟನು.

49 ಕೂಡಲೆ ಅವನು ಯೇಸುವಿನ ಬಳಿಗೆ ಹೋಗಿ - ಗುರುವೇ, ನಮಸ್ಕಾರ ಎಂದು ಹೇಳಿ ಆತನಿಗೆ ಮುದ್ದಿಟ್ಟನು.

50 ಯೇಸು ಅವನಿಗೆ - ಗೆಳೆಯನೇ, ನೀನು ಬಂದ ಕೆಲಸ ಇದೇಯೋ? ಎಂದು ಹೇಳಲು ಅವರು ಹತ್ತರಕ್ಕೆ ಬಂದು ಯೇಸುವಿನ ಮೇಲೆ ಕೈ ಹಾಕಿ ಆತನನ್ನು ಹಿಡಿದರು.

51 ಹಿಡಿಯುತ್ತಲೆ ಯೇಸುವಿನ ಸಂಗಡ ಇದ್ದವರಲ್ಲಿ ಒಬ್ಬನು ಕೈಚಾಚಿ ತನ್ನ ಕತ್ತಿಯನ್ನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕಡಿದುಹಾಕಿದನು.

52 ಆಗ ಯೇಸು ಅವನಿಗೆ - ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು.

53 ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆಂದೂ ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವದಿಲ್ಲವೆಂದೂ ನೆನಸುತ್ತೀಯಾ?

54 ಕಳುಹಿಸಿಕೊಟ್ಟರೆ ನನಗೆ ಇಂಥಿಂಥದು ಆಗಬೇಕೆಂಬುವ ಶಾಸ್ತ್ರದ ಮಾತುಗಕು ನೆರವೇರುವದು ಹೇಗೆ ಎಂದು ಹೇಳಿದನು.

55 ಅದೇ ಗಳಿಗೆಯಲ್ಲಿ ಯೇಸು ಗುಂಪುಗುಂಪಾಗಿ ಕೂಡಿದ್ದ ಜನರಿಗೆ - ಕಳ್ಳನನ್ನು ಹಿಡಿಯುವದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ತೆಗೆದುಕೊಂಡು ನನ್ನನ್ನು ಹಿಡಿಯುವದಕ್ಕೆ ಬಂದಿರಾ? ನಾನು ದಿನಾಲು ದೇವಾಲಯದಲ್ಲಿ ಕೂತುಕೊಂಡು ಬೋಧಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ;

56 ಆದರೆ ಪ್ರವಾದಿಗಳು ಬರೆದ ವಚನಗಳು ನೆರವೇರುವಂತೆ ಇದೆಲ್ಲಾ ಆಯಿತು ಎಂದು ಹೇಳಿದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.


ಹಿರಿಸಭೆಯವರು ಯೇಸುವನ್ನು ಮರಣದಂಡನೆಗೆ ತಕ್ಕವನೆಂದು ಪಿಲಾತನ ಬಳಿಗೆ ತೆಗೆದುಕೊಂಡು ಹೋದದ್ದು ಅಷ್ಟರಲ್ಲಿ ಪೇತ್ರನು ಅವನನ್ನು ಅರಿಯೆನೆಂದು ಹೇಳಿದ್ದು
( ಮಾರ್ಕ. 14.53-72 ; ಲೂಕ. 22.54-71 ; ಯೋಹಾ. 18.12-27 )

57 ಯೇಸುವನ್ನು ಹಿಡಿದವರು ಆತನನ್ನು ಮಹಾಯಾಜಕನಾದ ಕಾಯಫನ ಬಳಿಗೆ ತೆಗೆದುಕೊಂಡು ಹೋದರು.

58 ಅಲ್ಲಿ ಶಾಸ್ತ್ರಿಗಳೂ ಹಿರಿಯರೂ ಕೂಡಿ ಬಂದಿದ್ದರು. ಪೇತ್ರನಾದರೋ ದೂರದಿಂದ ಆತನ ಹಿಂದೆ ಹೋಗುತ್ತಾ ಮಹಾಯಾಜಕನ ಮಠದ ಅಂಗಳದ ತನಕ ಬಂದು ಒಳಗೆ ಹೊಕ್ಕು ಆತನ ಗತಿ ಏನಾಗುವದೋ ನೋಡಬೇಕೆಂದು ಓಲೇಕಾರರ ಸಂಗಡ ಕೂತುಕೊಂಡನು.

59 ಆಗ ಮಹಾಯಾಜಕರೂ ಹಿರಿಯ ಸಭೆಯವರೆಲ್ಲರೂ ಯೇಸುವನ್ನು ಕೊಲ್ಲಿಸಬೇಕೆಂದು ಆತನ ಮೇಲೆ ಸುಳ್ಳುಸಾಕ್ಷಿಯನ್ನು ಹುಡುಕಿದರು; ಆದರೆ ಬಹು ಮಂದಿ ಸುಳ್ಳುಸಾಕ್ಷಿಗಳು ಬಂದು ನಿಂತರೂ ಏನೂ ಸಿಕ್ಕಲಿಲ್ಲ.

60 ಕಡೆಗೆ ಇಬ್ಬರು ಮುಂದೆ ಬಂದು -

61 ನಾನು ದೇವರ ಆಲಯವನ್ನು ಕೆಡವಿಬಿಟ್ಟು ಮೂರು ದಿನಗಳಲ್ಲಿ ಕಟ್ಟಬಲ್ಲೆನೆಂದು ಇವನು ಹೇಳಿದನು ಅಂದರು;

62 ಆಗ ಮಹಾಯಾಜಕನು ಎದ್ದು ನಿಂತು - ನೀನೇನೂ ಉತ್ತರ ಹೇಳುವದಿಲ್ಲವೋ? ಇವರು ನಿನ್ನ ಮೇಲೆ ಹೇಳುವ ಈ ಸಾಕ್ಷಿ ಏನು ಎಂದು ಆತನನ್ನು ಕೇಳಿದನು. ಆದರೆ ಯೇಸು ಸುಮ್ಮನಿದ್ದನು.

63 ಆಗ ಮಹಾಯಾಜಕನು - ನಿನಗೆ ಜೀವಸ್ವರೂಪನಾದ ದೇವರ ಆಣೆಯನ್ನು ಇಡುತ್ತೇನೆ; ನೀನು ದೇವಕುಮಾರನಾದ ಕ್ರಿಸ್ತನು ಹೌದೋ ಅಲ್ಲವೋ ಎಂಬದನ್ನು ನಮಗೆ ಹೇಳಬೇಕು ಎಂದು ಅನ್ನಲಾಗಿ ಯೇಸು -

64 ನೀನೇ ಹೇಳಿದ್ದೀ; ಇದಲ್ಲದೆ ಇನ್ನು ಮೇಲೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳ ಮೇಲೆ ಕುಳಿತು ಬರುವದನ್ನೂ ಕಾಣುವಿರಿ ಎಂದು ನಿಮಗೆ ಹೇಳುತ್ತೇನೆ ಅಂದನು.

65 ಆಗ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಕೊಂಡು - ಇದು ದೇವದೂಷಣೆಯ ಮಾತು; ನಮಗೆ ಸಾಕ್ಷಿಗಳು ಇನ್ನು ಯಾತಕ್ಕೆ ಬೇಕು? ಇವನು ಈಗಲೇ ಆಡಿದ ದೂಷಣೆಯ ಮಾತನ್ನು ಕೇಳಿದಿರಲ್ಲಾ;

66 ನಿಮಗೆ ಹೇಗೆ ತೋರುತ್ತದೆ? ಅನ್ನಲು ಇವನು ಮರಣದಂಡನೆ ಹೊಂದತಕ್ಕವನು ಎಂದು ಉತ್ತರಕೊಟ್ಟರು.

67 ಆಗ ಆತನ ಮುಖದ ಮೇಲೆ ಉಗುಳಿ ಆತನನ್ನು ಗುದ್ದಿದರು; ಕೆಲವರು ಆತನ ಕೆನ್ನೆಗೆ ಏಟುಹಾಕಿ -

68 ಕ್ರಿಸ್ತನೇ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದನೆ ಹೇಳು ಅಂದರು.

69 ಇತ್ತಲಾಗಿ ಪೇತ್ರನು ಹೊರಗೆ ಅಂಗಳದಲ್ಲಿ ಕೂತಿದ್ದನು. ಅಲ್ಲಿ ಒಬ್ಬ ದಾಸಿಯು ಅವನ ಬಳಿಗೆ ಬಂದು - ನೀನು ಸಹ ಗಲಿಲಾಯದ ಯೇಸುವಿನ ಕೂಡ ಇದ್ದವನು ಅನ್ನಲು ಅವನು -

70 ಅಲ್ಲ, ನೀನು ಏನನ್ನುತ್ತೀಯೋ ನನಗೆ ಗೊತ್ತಿಲ್ಲ ಎಂದು ಎಲ್ಲರ ಮುಂದೆ ಹೇಳಿದನು.

71 ಅವನು ಅಲ್ಲಿಂದ ಬಾಗಿಲಿನ ಕಡೆಗೆ ಹೊರಟುಹೋದಾಗ ಮತ್ತೊಬ್ಬಳು ಅವನನ್ನು ಕಂಡು ಅಲ್ಲಿರುವವರಿಗೆ - ಇವನೂ ನಜರೇತಿನ ಯೇಸುವಿನ ಕೂಡ ಇದ್ದವನು ಎಂದು ಹೇಳಿದಳು.

72 ಅವನು ತಿರಿಗಿ - ಅಲ್ಲ, ಆ ಮನುಷ್ಯನನ್ನು ನಾನರಿಯೆನು ಎಂದು ಆಣೆಯಿಟ್ಟುಕೊಂಡು ಹೇಳಿದನು.

73 ಸ್ವಲ್ಪ ಹೊತ್ತಿನ ಮೇಲೆ ಅಲ್ಲಿ ನಿಂತವರು ಮುಂದೆ ಬಂದು ಪೇತ್ರನಿಗೆ - ನಿಶ್ಚಯವಾಗಿ ನೀನು ಸಹ ಅವರಲ್ಲಿ ಒಬ್ಬನು, ನಿನ್ನ ಭಾಷೆಯೇ ನಿನ್ನನ್ನು [ಗಲಿಲಾಯದವನೆಂದು] ತೋರಿಸಿಕೊಡುತ್ತದೆ ಎಂದು ಹೇಳಲಾಗಿ ಅವನು -

74 ಆ ಮನುಷ್ಯನನ್ನು ನಾನರಿಯೆನು ಎಂದು ಹೇಳಿ ಶಾಪಹಾಕಿಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಪ್ರಾರಂಭಿಸಿದನು.

75 ಕೂಡಲೆ ಕೋಳಿ ಕೂಗಿತು. ಆಗ ಪೇತ್ರನು - ಕೋಳಿ ಕೂಗುವದಕ್ಕಿಂತ ಮುಂಚೆ ಮೂರು ಸಾರಿ ನನ್ನ ವಿಷಯವಾಗಿ ಅವನನ್ನು ಅರಿಯೆನೆಂಬದಾಗಿ ಹೇಳುವಿ ಎಂದು ಯೇಸು ಹೇಳಿದ ಮಾತನ್ನು ನೆನಸಿ ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು