Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 25 - ಕನ್ನಡ ಸತ್ಯವೇದವು J.V. (BSI)

1 ಆಗ ಪರಲೋಕರಾಜ್ಯವು ಆರತಿಗಳನ್ನು ತೆಗೆದುಕೊಂಡು ಮದಲಿಂಗನನ್ನು ಎದುರುಗೊಳ್ಳುವದಕ್ಕೆ ಹೊರಟಂಥ ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವದು.

2 ಅವರಲ್ಲಿ ಐದು ಮಂದಿ ಬುದ್ಧಿಯಿಲ್ಲದವರು, ಐದು ಮಂದಿ ಬುದ್ಧಿವಂತೆಯರು.

3 ಬುದ್ಧಿಯಿಲ್ಲದವರು ತಮ್ಮ ಆರತಿಗಳನ್ನು ತಕ್ಕೊಂಡರು, ಆದರೆ ಎಣ್ಣೆ ತಕ್ಕೊಳ್ಳಲಿಲ್ಲ.

4 ಬುದ್ಧಿವಂತೆಯರು ತಮ್ಮ ಆರತಿಗಳ ಕೂಡ ಪಾತ್ರೆಗಳಲ್ಲಿ ಎಣ್ಣೆ ತಕ್ಕೊಂಡರು.

5 ಮದಲಿಂಗನು ಬರುವದಕ್ಕೆ ತಡಮಾಡಲು ಅವರೆಲ್ಲರು ತೂಕಡಿಸಿ ಮಲಗಿದರು.

6 ಆದರೆ ಅರ್ಧರಾತ್ರಿಯಲ್ಲಿ - ಇಗೋ, ಮದಲಿಂಗನು! ಅವನನ್ನು ಎದುರುಗೊಳ್ಳುವದಕ್ಕೆ ಹೊರಡಿರಿ ಎಂಬ ಕೂಗಾಯಿತು.

7 ಆಗ ಆ ಕನ್ಯೆಯರೆಲ್ಲರು ಎಚ್ಚತ್ತು ತಮ್ಮ ಆರತಿಗಳನ್ನು ನೆಟ್ಟಗೆಮಾಡಿದರು.

8 ಆಗ್ಗೆ ಬುದ್ಧಿಯಿಲ್ಲದವರು ಬುದ್ಧಿವಂತೆಯರಿಗೆ - ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿರಿ.

9 ನಮ್ಮ ಆರತಿಗಳು ಆರಿಹೋಗುತ್ತವೆ ಎಂದು ಹೇಳಿದರು. ಅದಕ್ಕೆ ಆ ಬುದ್ಧಿವಂತೆಯರು - ನಿಮಗೆ ಕೊಟ್ಟರೆ ನಮಗೂ ನಿಮಗೂ ಕೂಡ ಸಾಲದೆ ಹೋದೀತು; ನೀವು ಮಾರುವವರ ಬಳಿಗೆ ಹೋಗಿ ಕೊಂಡುಕೊಂಡರೆ ಒಳ್ಳೇದು ಅಂದರು.

10 ಅವರು ಕೊಂಡುಕೊಳ್ಳಲಿಕ್ಕೆ ಹೋದಾಗ ಮದಲಿಂಗನು ಬಂದನು. ಸಿದ್ಧವಾಗಿದ್ದವರು ಅವನ ಸಂಗಡ ಮದುವೆಯ ಮನೆಯೊಳಕ್ಕೆ ಹೋದರು. ಬಾಗಿಲು ಮುಚ್ಚಲಾಯಿತು.

11 ತರುವಾಯ ಉಳಿದ ಕನ್ಯೆಯರು ಸಹ ಬಂದು - ಸ್ವಾಮೀ, ಸ್ವಾಮೀ, ನಮಗೆ ತೆರೆಯಿರಿ ಅಂದರು.

12 ಆತನು - ನಿಮ್ಮನ್ನು ನಾನರಿಯೆನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.

13 ಆದಕಾರಣ ಆ ದಿನವಾದರೂ ಗಳಿಗೆಯಾದರೂ ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.

14 ದೇಶಾಂತರಕ್ಕೆ ಹೋಗುವ ಒಬ್ಬ ಮನುಷ್ಯನು ತನ್ನ ಆಳುಗಳನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿಕೊಟ್ಟಂತಿರುವದು.

15 ಅವನು ಒಬ್ಬನಿಗೆ ಐದು ತಲಾಂತು, ಒಬ್ಬನಿಗೆ ಎರಡು, ಒಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ಬೇರೊಂದು ದೇಶಕ್ಕೆ ಹೋದನು.

16 ಐದು ತಲಾಂತು ಹೊಂದಿದವನು ಹೋಗಿ ಅದನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಗಳಿಸಿಕೊಂಡನು.

17 ಹಾಗೆಯೇ ಎರಡು ತಲಾಂತು ಹೊಂದಿದವನು ಇನ್ನೂ ಎರಡು ಸಂಪಾದಿಸಿಕೊಂಡನು.

18 ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂವಿುಯನ್ನು ಅಗೆದು ತನ್ನ ದಣಿಯ ಹಣವನ್ನು ಬಚ್ಚಿಟ್ಟನು.

19 ಬಹುಕಾಲದ ಮೇಲೆ ಆ ಆಳುಗಳ ಧಣಿಯು ಬಂದು ಅವರಿಂದ ಲೆಕ್ಕ ತೆಗೆದುಕೊಳ್ಳಲು

20 ಐದು ತಲಾಂತು ಹೊಂದಿದವನು ಮುಂದೆಬಂದು ಇನ್ನೂ ಐದು ತಲಾಂತು ತಂದು - ಸ್ವಾಮೀ, ನೀನು ಐದು ತಲಾಂತನ್ನು ನನಗೆ ಕೊಟ್ಟಿದ್ದಿಯಲ್ಲಾ, ಇಗೋ, ಇನ್ನು ಐದು ತಲಾಂತು ಸಂಪಾದಿಸಿದ್ದೇನೆ ಅಂದನು.

21 ಅವನ ಧಣಿಯು - ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು; ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು ಅಂದನು.

22 ಆಗ ಎರಡು ತಲಾಂತು ಹೊಂದಿದವನು ಮುಂದೆಬಂದು - ಸ್ವಾಮೀ, ಎರಡು ತಲಾಂತು ನನಗೆ ಒಪ್ಪಿಸಿದಿಯಲ್ಲಾ; ಇಗೋ, ಇನ್ನು ಎರಡು ತಲಾಂತು ಸಂಪಾದಿಸಿದ್ದೇನೆ ಅಂದನು.

23 ಅವನ ಧಣಿಯು ಅವನಿಗೆ - ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು; ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು ಎಂದು ಹೇಳಿದನು.

24 ತರುವಾಯ ಒಂದೇ ತಲಾಂತು ಹೊಂದಿದವನು ಸಹ ಮುಂದೆಬಂದು - ಸ್ವಾಮೀ, ನೀನು ಕಠಿಣ ಮನುಷ್ಯನು, ನೀನು ಬಿತ್ತದಿರುವಲ್ಲಿ ಕೊಯ್ಯುವವನು, ನೀನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ತಿಳಿದು

25 ಹೆದರಿಕೊಂಡು ಹೋಗಿ ನಿನ್ನ ತಲಾಂತನ್ನು ಭೂವಿುಯಲ್ಲಿ ಬಚ್ಚಿಟ್ಟೆನು; ಇಗೋ, ನಿನ್ನದು ನಿನಗೆ ಸಂದಿದೆ ಅಂದನು.

26 ಆಗ ಅವನ ಧಣಿಯು ಅವನಿಗೆ - ಮೈಗಳ್ಳನಾದ ಕೆಟ್ಟ ಆಳು ನೀನು; ನಾನು ಬಿತ್ತದಿರುವಲ್ಲಿ ಕೊಯ್ಯುವವನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ತಿಳಿದಿಯಾ?

27 ಹಾಗಾದರೆ, ನೀನು ನನ್ನ ಹಣವನ್ನು ಸಾಹುಕಾರರಲ್ಲಿ ಬಡ್ಡಿಗೆ ಹಾಕಬೇಕಾಗಿತ್ತು; ನಾನು ಬಂದು ನನ್ನದನ್ನು ಬಡ್ಡಿಸಹಿತ ಪಡಕೊಳ್ಳುತ್ತಿದ್ದೆನು ಎಂದು ಹೇಳಿ

28 ತನ್ನ ಸೇವಕರಿಗೆ - ಅವನಿಂದ ಆ ತಲಾಂತು ತೆಗೆದು ಹತ್ತು ತಲಾಂತು ಇದ್ದವನಿಗೆ ಕೊಡಿರಿ.

29 ಇದ್ದವರಿಗೆಲ್ಲಾ ಕೊಡಲ್ಪಡುವದು, ಅವರಿಗೆ ಮತ್ತೂ ಹೆಚ್ಚಾಗುವದು; ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವದು.

30 ಮತ್ತು ಕೆಲಸಕ್ಕೆ ಬಾರದ ಈ ಆಳನ್ನು ಹೊರಗೆ ಕತ್ತಲೆಗೆ ಹಾಕಿಬಿಡಿರಿ ಎಂದು ಹೇಳಿದನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.

31 ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು;

32 ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಆತನು ಅವರನ್ನು ಬೇರೆಬೇರೆಮಾಡಿ

33 ಕುರಿಗಳನ್ನು ತನ್ನ ಬಲಗಡೆಯಲ್ಲಿ ಆಡುಗಳನ್ನು ತನ್ನ ಎಡಗಡೆಯಲ್ಲಿ ನಿಲ್ಲಿಸುವನು.

34 ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ - ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ.

35 ನಾನು ಹಸಿದಿದ್ದೆನು, ನನಗೆ ಊಟಕ್ಕೆ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನ್ನನ್ನು ಸೇರಿಸಿಕೊಂಡಿರಿ;

36 ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವದಕ್ಕೆ ಕೊಟ್ಟಿರಿ; ರೋಗದಲ್ಲಿ ಬಿದ್ದಿದ್ದೆನು, ನನ್ನನ್ನು ಆರೈಕೆ ಮಾಡುವದಕ್ಕೆ ಬಂದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವದಕ್ಕೆ ಬಂದಿರಿ ಎಂದು ಹೇಳುವನು.

37 ಅದಕ್ಕೆ ನೀತಿವಂತರು - ಸ್ವಾಮೀ, ಯಾವಾಗ ನೀನು ಹಸಿದದ್ದನ್ನು ಕಂಡು ನಿನಗೆ ಊಟಕ್ಕೆ ಕೊಟ್ಟೆವು? ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವದಕ್ಕೆ ಕೊಟ್ಟೆವು?

38 ಯಾವಾಗ ನೀನು ಪರದೇಶಿಯಾಗಿರುವದನ್ನು ಕಂಡು ಸೇರಿಸಿಕೊಂಡೆವು? ಇಲ್ಲವೆ ನಿನಗೆ ಬಟ್ಟೆಯಿಲ್ಲದ್ದನ್ನು ಕಂಡು ಉಡುವದಕ್ಕೆ ಕೊಟ್ಟೆವು?

39 ಯಾವಾಗ ನೀನು ರೋಗದಲ್ಲಿ ಬಿದ್ದದ್ದನ್ನು ಅಥವಾ ಸೆರೆಮನೆಯಲ್ಲಿ ಇದ್ದದ್ದನ್ನು ಕಂಡು ನಿನ್ನನ್ನು ನೋಡುವದಕ್ಕೆ ಬಂದೆವು ಎಂದು ಉತ್ತರವಾಗಿ ಹೇಳುವರು.

40 ಅದಕ್ಕೆ ಅರಸನು - ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅನ್ನುವನು.

41 ಆಮೇಲೆ ಆತನು ಎಡಗಡೆಯಲ್ಲಿರುವವರಿಗೆ - ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ.

42 ನಾನು ಹಸಿದಿದ್ದೆನು, ನೀವು ನನಗೆ ಊಟಕ್ಕೆ ಕೊಡಲಿಲ್ಲ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವದಕ್ಕೆ ಕೊಡಲಿಲ್ಲ;

43 ಪರದೇಶಿಯಾಗಿದ್ದೆನು, ನೀವು ನನ್ನನ್ನು ಸೇರಿಸಿಕೊಳ್ಳಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವದಕ್ಕೆ ಕೊಡಲಿಲ್ಲ; ರೋಗದಲ್ಲಿ ಬಿದ್ದಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆಮಾಡುವದಕ್ಕೆ ಬರಲಿಲ್ಲವೆಂದು ಹೇಳುವನು.

44 ಅದಕ್ಕೆ ಅವರು ಸಹ - ಸ್ವಾಮೀ, ಯಾವಾಗ ನೀನು ಹಸಿದದ್ದನ್ನೂ ನೀನು ಬಾಯಾರಿದ್ದನ್ನೂ ನೀನು ಪರದೇಶಿಯಾದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ರೋಗದಲ್ಲಿ ಬಿದ್ದದ್ದನ್ನೂ ಸೆರೆಮನೆಯಲ್ಲಿದ್ದದ್ದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು? ಅನ್ನುವರು.

45 ಆಗ ಆತನು - ನೀವು ಈ ಕೇವಲ ಅಲ್ಪವಾದವರಲ್ಲಿ ಒಬ್ಬನಿಗೆ ಏನೇನು ಮಾಡದೆ ಹೋದಿರೋ ಅದನ್ನು ನನಗೂ ಮಾಡದೆ ಹೋದಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅನ್ನುವನು.

46 ಮತ್ತು ಇವರು ನಿತ್ಯಶಿಕ್ಷೆಗೂ ನೀತಿವಂತರು ನಿತ್ಯಜೀವಕ್ಕೂ ಹೋಗುವರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು