Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 23 - ಕನ್ನಡ ಸತ್ಯವೇದವು J.V. (BSI)


ಯೇಸು ಶಾಸ್ತ್ರಿಗಳನ್ನೂ ಫರಿಸಾಯರನ್ನೂ ಗದರಿಸಿದ್ದು; ಯೆರೂಸಲೇವಿುನ ವಿಷಯದಲ್ಲಿ ದುಃಖಪಟ್ಟದ್ದು
( ಮಾರ್ಕ. 12.38-40 ; ಲೂಕ. 20.45-47 , 11.39-54 , 13.34-35 )

1 ತರುವಾಯ ಯೇಸು ಜನರ ಗುಂಪಿಗೂ ತನ್ನ ಶಿಷ್ಯರಿಗೂ ಹೇಳಿದ್ದೇನಂದರೆ -

2 ಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಪೀಠದಲ್ಲಿ ಕೂತುಕೊಂಡಿದ್ದಾರೆ;

3 ಆದದರಿಂದ ಅವರು ನಿಮಗೆ ಏನೇನು ಹೇಳುತ್ತಾರೋ ಅದನ್ನೆಲ್ಲಾ ಮಾಡಿರಿ, ಕಾಪಾಡಿಕೊಳ್ಳಿರಿ; ಆದರೆ ಅವರ ನಡತೆಯ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೇ ಹೊರತು ನಡೆಯುವದಿಲ್ಲ.

4 ಅವರು ಭಾರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲಿನ ಮೇಲೆ ಹೊರಿಸುತ್ತಾರೆ; ತಾವಾದರೋ ಬೆರಳಿನಿಂದಲಾದರೂ ಅವುಗಳನ್ನು ಮುಟ್ಟಲೊಲ್ಲರು.

5 ಅವರು ತಮ್ಮ ಕೆಲಸಗಳನ್ನೆಲ್ಲಾ ಜನರಿಗೆ ಕಾಣಬೇಕೆಂದು ಮಾಡುತ್ತಾರೆ. ತಾವು ಕಟ್ಟಿಕೊಳ್ಳುವ ಜ್ಞಾಪಕ ಪಟ್ಟಿಗಳನ್ನು ಅಗಲಮಾಡುತ್ತಾರೆ, ಗೊಂಡೆಗಳನ್ನು ಉದ್ದಮಾಡುತ್ತಾರೆ.

6 ಇದಲ್ಲದೆ ಔತಣಪ್ರಸ್ತಗಳಲ್ಲಿ ಪ್ರಥಮಸ್ಥಾನ, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು, ಅಂಗಡೀ ಬೀದಿಗಳಲ್ಲಿ ನಮಸ್ಕಾರಗಳು,

7 ಜನರಿಂದ ಬೋಧಕರನ್ನಿಸಿಕೊಳ್ಳುವದು, ಇವುಗಳೇ ಅವರಿಗೆ ಇಷ್ಟ.

8 ಆದರೆ ನೀವು ಬೋಧಕರನ್ನಿಸಿಕೊಳ್ಳಬೇಡಿರಿ; ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರು ಸಹೋದರರು.

9 ಇದಲ್ಲದೆ ಭೂಲೋಕದಲ್ಲಿ ಯಾರನ್ನೂ ನಮ್ಮ ತಂದೆ ಎಂದು ಕರೆಯಬೇಡಿರಿ; ಪರಲೋಕದಲ್ಲಿರುವಾತನೊಬ್ಬನೇ ನಿಮಗೆ ತಂದೆ.

10 ಮತ್ತು ಗುರುಗಳು ಅನ್ನಿಸಿಕೊಳ್ಳಬೇಡಿರಿ; ಕ್ರಿಸ್ತನೊಬ್ಬನೇ ನಿಮಗೆ ಗುರುವು.

11 ನಿಮ್ಮಲ್ಲಿ ಹೆಚ್ಚಿನವನು ನಿಮ್ಮ ಸೇವಕನಾಗಿರಬೇಕು.

12 ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.

13 ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ಪರಲೋಕರಾಜ್ಯದ ಬಾಗಲನ್ನು ಮನುಷ್ಯರ ಎದುರಿಗೆ ಮುಚ್ಚಿಬಿಡುತ್ತೀರಿ; ನೀವಂತೂ ಒಳಕ್ಕೆ ಹೋಗುವದಿಲ್ಲ, ಒಳಕ್ಕೆ ಹೋಗಬೇಕೆಂದಿರುವವರನ್ನೂ ಹೋಗಗೊಡಿಸುವದಿಲ್ಲ.

15 ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಒಬ್ಬನನ್ನು ನಿಮ್ಮ ಮತದಲ್ಲಿ ಸೇರಿಸಿಕೊಳ್ಳುವದಕ್ಕಾಗಿ ಭೂವಿುಯನ್ನೂ ಸಮುದ್ರವನ್ನೂ ಸುತ್ತಿಕೊಂಡು ಬರುತ್ತೀರಿ; ಅವನು ಸೇರಿದ ಮೇಲೆ ಅವನನ್ನು ನಿಮಗಿಂತ ಎರಡರಷ್ಟಾಗಿ ನರಕ ಪಾತ್ರನಾಗಮಾಡುತ್ತೀರಿ.

16 ಅಯ್ಯೋ, ದಾರಿತೋರಿಸುವ ಕುರುಡರೇ, ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ. ಆದರೆ ಒಬ್ಬನು ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು ಎಂದು ನೀವು ಹೇಳುತ್ತೀರಿ.

17 ಹುಚ್ಚರೇ, ಕುರುಡರೇ, ಯಾವದು ಹೆಚ್ಚಿನದು? ಚಿನ್ನವೋ, ಚಿನ್ನವನ್ನು ಪಾವನ ಮಾಡುವ ದೇವಾಲಯವೋ?

18 ಒಬ್ಬನು ಯಜ್ಞವೇದಿಯ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ, ಆದರೆ ಅದರಲ್ಲಿರುವ ಕಾಣಿಕೆಯ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು ಎಂದು ಹೇಳುತ್ತೀರಿ.

19 ಕುರುಡರೇ, ಯಾವದು ಹೆಚ್ಚಿನದು? ಕಾಣಿಕೆಯೋ, ಆ ಕಾಣಿಕೆಯನ್ನು ಪಾವನ ಮಾಡುವ ಯಜ್ಞವೇದಿಯೋ?

20 ಹೀಗಿರುವದರಿಂದ ಯಜ್ಞವೇದಿಯ ಮೇಲೆ ಆಣೆಯಿಟ್ಟುಕೊಂಡರೆ ಅದರ ಮೇಲೆಯೂ ಅದರಲ್ಲಿರುವ ಎಲ್ಲಾದರ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು.

21 ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದರ ಮೇಲೆಯೂ ಅದರಲ್ಲಿ ವಾಸಮಾಡುವಾತನ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು.

22 ಪರಲೋಕದ ಮೇಲೆ ಆಣೆಯಿಟ್ಟುಕೊಂಡರೆ ದೇವರ ಸಿಂಹಾಸನದ ಮೇಲೆಯೂ ಅದರಲ್ಲಿ ಕೂತಿರುವಾತನ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು.

23 ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಮರುಗ ಸೋಪು ಜೀರಿಗೆಗಳಲ್ಲಿ ಹತ್ತರಲ್ಲೊಂದು ಪಾಲುಕೊಡುತ್ತೀರಿ ಸರಿ, ಆದರೆ ಧರ್ಮಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟುಬಿಟ್ಟಿರಿ. ಇವುಗಳನ್ನು ಮಾಡಬೇಕಾಗಿತ್ತು; ಅವುಗಳನ್ನೂ ಬಿಡಬಾರದು.

24 ದಾರಿತೋರಿಸುವ ಕುರುಡರೇ, ನೀವು ಸೊಳ್ಳೇ ಸೋಸುವವರು, ಒಂಟೇ ನುಂಗುವವರು.

25 ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪಂಚಪಾತ್ರೆ ಬಟ್ಟಲು ಇವುಗಳ ಹೊರಭಾಗವನ್ನು ಶುಚಿಮಾಡುತ್ತೀರಿ; ಆದರೆ ಅವು ಒಳಗೆ ಸುಲುಕೊಂಡವುಗಳಿಂದಲೂ ಇಹಭೋಗ ಪದಾರ್ಥಗಳಿಂದಲೂ ತುಂಬಿರುತ್ತವೆ.

26 ಕುರುಡನಾದ ಫರಿಸಾಯನೇ, ಮೊದಲು ಪಂಚಪಾತ್ರೆ ಬಟ್ಟಲುಗಳ ಒಳಭಾಗವನ್ನು ಶುಚಿಮಾಡು. ಆಗ ಅವುಗಳ ಹೊರಭಾಗವೂ ಶುಚಿಯಾಗುವದು.

27 ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಸುಣ್ಣಾ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ; ಇವು ಹೊರಗೆ ಚಂದವಾಗಿ ಕಾಣುತ್ತವೆ. ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ.

28 ಹಾಗೆಯೇ ನೀವು ಸಹ ಹೊರಗೆ ಜನರಿಗೆ ಸತ್ಪುರುಷರಂತೆ ಕಾಣಿಸಿಕೊಳ್ಳುತ್ತೀರಿ ಸರಿ, ಆದರೆ ಒಳಗೆ ಕಪಟದಿಂದಲೂ ಅನ್ಯಾಯದಿಂದಲೂ ತುಂಬಿದವರಾಗಿದ್ದೀರಿ.

29 ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟಿ,

30 ನೀತಿವಂತರ ಗೋರಿಗಳನ್ನು ಅಲಂಕರಿಸಿ - ನಾವು ನಮ್ಮ ಹಿರಿಯರ ಕಾಲದಲ್ಲಿ ಇರುತ್ತಿದ್ದರೆ ಪ್ರವಾದಿಗಳನ್ನು ಕೊಂದ ಪಾಪದಲ್ಲಿ ಪಾಲುಗಾರರಾಗುತ್ತಿರಲಿಲ್ಲ ಅನ್ನುತ್ತೀರಿ.

31 ಹಾಗಾದರೆ ನೀವು ಪ್ರವಾದಿಗಳನ್ನು ಕೊಂದವರ ಮಕ್ಕಳೇ ಹೌದು ಎಂಬದಕ್ಕೆ ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ.

32 ಒಳ್ಳೇದು, ನೀವು ನಿಮ್ಮ ಹಿರಿಯರ ಪಾಪದ ಅಳತೆಯನ್ನು ಪೂರ್ತಿಮಾಡಿರಿ.

33 ಹಾವುಗಳೇ, ಸರ್ಪಜಾತಿಯವರೇ, ನರಕದಂಡನೆಗೆ ಹೇಗೆ ತಪ್ಪಿಸಿಕೊಂಡೀರಿ?

34 ಆದದರಿಂದ ನೋಡಿರಿ, ನಾನು ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಶಾಸ್ತ್ರಿಗಳನ್ನೂ ಕಳುಹಿಸುತ್ತೇನೆ; ಅವರಲ್ಲಿ ಕೆಲವರನ್ನು ಕೊಲ್ಲುವಿರಿ, ಶಿಲುಬೆಗೆ ಹಾಕುವಿರಿ; ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಊರಿಂದ ಊರಿಗೆ ಅಟ್ಟಿಕೊಂಡು ಹೋಗುವಿರಿ.

35 ಹೀಗೆ ನೀತಿವಂತನಾದ ಹೇಬೆಲನ ರಕ್ತವು ಮೊದಲುಗೊಂಡು ನೀವು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ಕೊಂದುಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದವರೆಗೂ ಭೂವಿುಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತದಿಂದುಂಟಾಗುವ ಅಪರಾಧವು ನಿಮ್ಮ ತಲೆಯ ಮೇಲೆ ಬರುವದು.

36 ಅದೆಲ್ಲಾ ಈ ಸಂತತಿಯವರ ಮೇಲೆ ಬರುವದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

37 ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು.

38 ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.

39 ಈಗಿನಿಂದ - ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ ಎಂದು ನೀವು ಹೇಳುವ ತನಕ ನೀವು ನನ್ನನ್ನು ನೋಡುವದೇ ಇಲ್ಲವೆಂದು ನಿಮಗೆ ಹೇಳುತ್ತೇನೆ ಅಂದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು