ಮತ್ತಾಯ 22 - ಕನ್ನಡ ಸತ್ಯವೇದವು J.V. (BSI)1 ಯೇಸು ಬೋಧನೆ ಮಾಡುತ್ತಾ ಇನ್ನೂ ಸಾಮ್ಯರೂಪವಾಗಿ ಅವರಿಗೆ ಹೇಳಿದ್ದೇನಂದರೆ - 2 ಪರಲೋಕರಾಜ್ಯವು ಮಗನಿಗೆ ಮದುವೆಮಾಡಿದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. 3 ಅವನು ಮದುವೆಗೆ ಹೇಳಿಸಿಕೊಂಡವರನ್ನು ಕರೆಯುವದಕ್ಕೆ ತನ್ನ ಆಳುಗಳನ್ನು ಕಳುಹಿಸಲು ಬರುವದಕ್ಕೆ ಅವರಿಗೆ ಮನಸ್ಸಿರಲಿಲ್ಲ. 4 ತಿರಿಗಿ ಬೇರೆ ಆಳುಗಳನ್ನು ಕರೆದು - ನೀವು ಊಟಕ್ಕೆ ಹೇಳಿಸಿಕೊಂಡವರ ಬಳಿಗೆ ಹೋಗಿ - ಇಗೋ, ಅಡಿಗೆ ಸಿದ್ಧವಾಗಿದೆ; ನನ್ನ ಹೋರಿಗಳನ್ನೂ ಕೊಬ್ಬಿದ ಪಶುಗಳನ್ನೂ ಕೊಯಿಸಿದ್ದೇನೆ; ಎಲ್ಲಾ ಸಿದ್ಧವಾಗಿದೆ; ಮದುವೆಯ ಊಟಕ್ಕೆ ಬನ್ನಿರೆಂಬದಾಗಿ ಅವರಿಗೆ ಹೇಳಿರೆಂದು ಅಪ್ಪಣೆ ಕೊಟ್ಟು ಕಳುಹಿಸಿದನು. 5 ಆದರೆ ಅವರು ಅಲಕ್ಷ್ಯಮಾಡಿ ಒಬ್ಬನು ತನ್ನ ಹೊಲಕ್ಕೆ ಒಬ್ಬನು ತನ್ನ ವ್ಯಾಪಾರಕ್ಕೆ ಹೋಗಿಬಿಟ್ಟರು; 6 ಉಳಿದವರು ಅವನ ಆಳುಗಳನ್ನು ಹಿಡಿದು ಬೈದು ಕೊಂದುಹಾಕಿದರು. 7 ಅರಸನು ಸಿಟ್ಟುಗೊಂಡು ತನ್ನ ದಂಡುಗಳನ್ನು ಕಳುಹಿಸಿ ಆ ಕೊಲೆಗಾರರನ್ನು ನಾಶಮಾಡಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು. 8 ಆಗ ತನ್ನ ಆಳುಗಳಿಗೆ - ಮದುವೆಗೆ ಸಿದ್ಧವಾಗಿದೆ ಸರಿ, ಆದರೆ ಕರೆಯಲ್ಪಟ್ಟವರು ಯೋಗ್ಯರಾಗಿರಲಿಲ್ಲ. 9 ನೀವು ಈಗ ನಾಲ್ಕು ಹಾದಿಗಳು ಕೂಡುವ ಸ್ಥಳಗಳಿಗೆ ಹೋಗಿ ಕಂಡವರನ್ನೆಲ್ಲಾ ಮದುವೆಯ ಊಟಕ್ಕೆ ಕರೆಯಿರಿ ಎಂದು ಹೇಳಿದನು. 10 ಆ ಆಳುಗಳು ಹಾದಿಗಳಿಗೆ ಹೋಗಿ ಕೆಟ್ಟವರು ಒಳ್ಳೆಯವರು ಅನ್ನದೆ ಕಂಡವರನ್ನೆಲ್ಲಾ ಕೂಡಿಸಿ ಕರಕೊಂಡು ಬಂದರು. 11 ಹೀಗೆ ಮನೆತುಂಬ ಊಟಕ್ಕೆ ಕೂತರು. ಆಮೇಲೆ ಅರಸನು ಕೂತವರನ್ನು ನೋಡುವದಕ್ಕೆ ಒಳಕ್ಕೆ ಬರಲಾಗಿ ಮದುವೇಬಟ್ಟೆಯನ್ನು ಹಾಕಿಕೊಳ್ಳದ ಒಬ್ಬನನ್ನು ಕಂಡು 12 ಅವನನ್ನು - ಏನಪ್ಪಾ, ಮದುವೆಯ ಬಟ್ಟೆ ಇಲ್ಲದೆ ನೀನಿಲ್ಲಿ ಹೇಗೆ ಒಳಕ್ಕೆ ಬಂದಿ ಎಂದು ಕೇಳಲು ಅವನು ಸುಮ್ಮನಿದ್ದನು. 13 ಆಮೇಲೆ ಅರಸನು ಸೇವಕರಿಗೆ - ಅವನ ಕೈಕಾಲು ಕಟ್ಟಿ ಅವನನ್ನು ಹೊರಗೆ ಕತ್ತಲೆಗೆ ನೂಕಿರಿ ಎಂದು ಹೇಳಿದನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು. 14 ಹೀಗೆ ಕರೆಯಲ್ಪಟ್ಟವರು ಬಹು ಜನ, ಆಯಲ್ಪಟ್ಟವರು ಸ್ವಲ್ಪ ಜನ ಅಂದನು. ಅನೇಕರು ಯೇಸುವನ್ನು ಮಾತಿನಲ್ಲಿ ಸಿಕ್ಕಿಸುವದಕ್ಕೆ ಪ್ರಯತ್ನಮಾಡಿ ಸೋತುಹೋದದ್ದು ( ಮಾರ್ಕ. 12.13-37 ; ಲೂಕ. 20.20-44 ) 15 ಆಗ್ಗೆ ಫರಿಸಾಯರು ಹೊರಟು ಆತನನ್ನು ಮಾತಿನಲ್ಲಿ ಹೇಗೆ ಸಿಕ್ಕಿಸುವ ಎಂದು ಕೂಡಿ ಆಲೋಚಿಸಿಕೊಂಡು 16 ಆತನ ಬಳಿಗೆ ತಮ್ಮ ಶಿಷ್ಯರನ್ನು ಹೆರೋದಿಯರ ಕೂಡ ಕಳುಹಿಸಿದರು. ಇವರು ಬಂದು - ಗುರುವೇ, ನೀನು ಸತ್ಯವಂತನು, ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನು, ಯಾರಿಗೂ ಹೆದರದವನು; ನೀನು ಜನರ ಮುಖದಿಚ್ಫೆಗೆ ಮಾತಾಡುವವನಲ್ಲ ಎಂದು ಬಲ್ಲೆವು. 17 ಹೀಗಿರಲಾಗಿ ಕೈಸರನಿಗೆ ತೆರಿಗೆ ಕೊಡುವದು ಸರಿಯೋ ಸರಿಯಲ್ಲವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು ಅಂದರು. 18 ಯೇಸು ಅವರ ಕೆಡುಕನ್ನು ಅರಿತುಕೊಂಡವನಾಗಿ - ಕಪಟಿಗಳೇ, ನನ್ನನ್ನು ಯಾಕೆ ಪರೀಕ್ಷೆಮಾಡುತ್ತೀರಿ? 19 ತೆರಿಗೆಗೆ ಕೊಡುವ ನಾಣ್ಯವನ್ನು ನನಗೆ ತೋರಿಸಿರಿ ಅನ್ನಲು ಅವರು ಆತನಿಗೆ ಒಂದು ಹಣವನ್ನು ತಂದುಕೊಟ್ಟರು. 20 ಆತನು - ಈ ತಲೆಯೂ ಈ ಮುದ್ರೆಯೂ ಯಾರದು ಎಂದು ಕೇಳಿದ್ದಕ್ಕೆ 21 ಅವರು - ಕೈಸರನದು ಅಂದರು. ಆಗ ಆತನು ಅವರಿಗೆ - ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ ಎಂದು ಹೇಳಿದನು. 22 ಅವರು ಈ ಮಾತನ್ನು ಕೇಳಿ ಆಶ್ಚರ್ಯಪಟ್ಟು ಆತನನ್ನು ಬಿಟ್ಟುಹೋದರು. 23 ಅದೇ ದಿನದಲ್ಲಿ ಸದ್ದುಕಾಯರು ಆತನ ಬಳಿಗೆ ಬಂದರು. ಇವರು ಪುನರುತ್ಥಾನವಿಲ್ಲ ಅನ್ನುವವರು. 24 ಇವರು ಆತನಿಗೆ ಪ್ರಶ್ನೆಮಾಡಿದ್ದೇನಂದರೆ - ಬೋಧಕನೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ ಅವನ ಹೆಂಡತಿಯನ್ನು ಅವನ ತಮ್ಮನು ಮದುವೆಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದನಷ್ಟೆ. 25 ಆದರೆ ನಮ್ಮಲ್ಲಿ ಏಳು ಮಂದಿ ಅಣ್ಣತಮ್ಮಂದಿರಿದ್ದರು. ಮೊದಲನೆಯವನು ಮದುವೆಯಾಗಿ ತೀರಿಹೋದನು. ಅವನಿಗೆ ಸಂತಾನವಿಲ್ಲದ ಕಾರಣ ಹೆಂಡತಿಯನ್ನು ತನ್ನ ತಮ್ಮನಿಗೆ ಬಿಟ್ಟನು; 26 ಅದರಂತೆ ಎರಡನೆಯವನೂ ಮೂರನೆಯವನೂ ಮುಂತಾದವರು ಏಳನೆಯವನವರೆಗೂ ಮಾಡಿದರು. 27 ಅವರೆಲ್ಲರು ಸತ್ತ ಮೇಲೆ ಆ ಹೆಂಗಸೂ ಸತ್ತಳು. 28 ಹಾಗಾದರೆ ಪುನರುತ್ಥಾನದಲ್ಲಿ ಆಕೆ ಆ ಏಳು ಮಂದಿಯಲ್ಲಿ ಯಾರ ಹೆಂಡತಿಯಾಗಿರುವಳು? ಆಕೆಯನ್ನು ಅವರೆಲ್ಲರೂ ಮದುವೆ ಮಾಡಿಕೊಂಡಿದ್ದರಲ್ಲಾ ಅಂದರು. 29 ಅದಕ್ಕೆ ಯೇಸು ಉತ್ತರವಾಗಿ ಅವರಿಗೆ - ನೀವು ಶಾಸ್ತ್ರವನ್ನಾದರೂ ದೇವರ ಶಕ್ತಿಯನ್ನಾದರೂ ತಿಳಿಯದೆ ತಪ್ಪುವವರಾಗಿದ್ದೀರಿ; 30 ಪುನರುತ್ಥಾನವಾದ ಮೇಲೆ ಮದುವೆಮಾಡಿಕೊಳ್ಳುವದೂ ಇಲ್ಲ, ಮಾಡಿಕೊಡುವದೂ ಇಲ್ಲ; ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ. 31 ಸತ್ತವರ ಪುನರುತ್ಥಾನದ ವಿಷಯವಾಗಿ ಹೇಳಬೇಕಾದರೆ - 32 ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಎಂದು ದೇವರು ನಿಮಗೆ ನುಡಿದದ್ದನ್ನು ನೀವು ಓದಲಿಲ್ಲವೇ. ಆತನು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ ಎಂದು ಹೇಳಿದನು. 33 ಜನರು ಅದನ್ನು ಕೇಳಿ ಆತನ ಬೋಧನೆಗೆ ಅತ್ಯಾಶ್ಚರ್ಯಪಟ್ಟರು. 34 ಆತನು ಸದ್ದುಕಾಯರ ಬಾಯಿ ಕಟ್ಟಿದನೆಂದು ಫರಿಸಾಯರು ಕೇಳಿ ಅಲ್ಲಿಗೆ ಕೂಡಿಬಂದರು. 35 ಅವರಲ್ಲಿದ್ದ ಒಬ್ಬ ಧರ್ಮೋಪದೇಶಕನು ಆತನನ್ನು ಪರೀಕ್ಷೆಮಾಡಬೇಕೆಂದು - 36 ಗುರುವೇ, ಧರ್ಮಶಾಸ್ತ್ರದಲ್ಲಿ ಯಾವ ಆಜ್ಞೆ ಮುಖ್ಯವಾದದ್ದು ಎಂದು ಆತನನ್ನು ಕೇಳಿದ್ದಕ್ಕೆ 37 ಆತನು - ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು 38 ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. 39 ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವದಂದರೆ - ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ. 40 ಈ ಎರಡು ಆಜ್ಞೆಗಳು ಎಲ್ಲಾ ಧರ್ಮಶಾಸ್ತ್ರಕ್ಕೂ ಪ್ರವಾದನಗ್ರಂಥಕ್ಕೂ ಆಧಾರವಾಗಿವೆ ಎಂದು ಹೇಳಿದನು. 41 ಫರಿಸಾಯರು ಕೂಡಿಬಂದಿರುವಾಗ ಯೇಸು ಅವರಿಗೆ - 42 ಬರಬೇಕಾದ ಕ್ರಿಸ್ತನ ವಿಷಯವಾಗಿ ನಿಮಗೆ ಹೇಗೆ ತೋರುತ್ತದೆ? ಆತನು ಯಾರ ಮಗನು? ಎಂದು ಪ್ರಶ್ನೆಹಾಕಿದ್ದಕ್ಕೆ ಅವರು ಆತನಿಗೆ - 43-44 ದಾವೀದನ ಮಗನು ಎಂದು ಹೇಳಲು ಆತನು - ಹಾಗಾದರೆ ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ಕರ್ತನು ನನ್ನ ಒಡೆಯನಿಗೆ ನುಡಿದನು. ಎಂಬ ಮಾತಿನಲ್ಲಿ ದಾವೀದನು ಪವಿತ್ರಾತ್ಮಪ್ರೇರಿತನಾಗಿ ಆತನನ್ನು ಒಡೆಯನು ಅನ್ನುವದು ಹೇಗೆ? 45 ದಾವೀದನು ಆತನನ್ನು ಒಡೆಯನೆಂದು ಹೇಳಿದ ಮೇಲೆ ಆತನು ಅವನಿಗೆ ಮಗನಾಗುವದು ಹೇಗೆ? ಅಂದನು. 46 ಅದಕ್ಕೆ ಉತ್ತರವಾಗಿ ಯಾರೂ ಒಂದು ಮಾತಾದರೂ ಆತನಿಗೆ ಹೇಳಲಾರದೆ ಹೋದರು. ಇದಲ್ಲದೆ ಅಂದಿನಿಂದ ಆತನನ್ನು ಇನ್ನೇನಾದರೂ ಕೇಳುವದಕ್ಕೆ ಯಾರಿಗೂ ಧೈರ್ಯ ಹುಟ್ಟಲಿಲ್ಲ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India