Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 20 - ಕನ್ನಡ ಸತ್ಯವೇದವು J.V. (BSI)

1 ಅದು ಹೇಗಂದರೆ - ಪರಲೋಕರಾಜ್ಯವು ಒಬ್ಬ ಮನೆಯ ಯಜಮಾನನಿಗೆ ಹೋಲಿಕೆಯಾಗಿದೆ. ಅವನು ತನ್ನ ದ್ರಾಕ್ಷೇತೋಟಕ್ಕೆ ಕೂಲೀ ಆಳುಗಳನ್ನು ಕರೆಯುವದಕ್ಕೆ ಬೆಳಿಗ್ಗೆ ಹೊರಟನು.

2 ಆಳಿಗೆ ದಿನಕ್ಕೆ ಒಂದು ಪಾವಲಿಯಂತೆ ಕೂಲಿ ಗೊತ್ತುಮಾಡಿ ಅವರನ್ನು ದ್ರಾಕ್ಷೇತೋಟಕ್ಕೆ ಕಳುಹಿಸಿದನು.

3 ತರುವಾಯ ಹೆಚ್ಚುಕಡಿಮೆ ಒಂಭತ್ತು ಗಂಟೆಗೆ ಹೋಗಿ ಪೇಟೆಯಲ್ಲಿ ಸುಮ್ಮನೆ ನಿಂತಿದ್ದ ಇನ್ನು ಕೆಲವರನ್ನು ಕಂಡು -

4 ನೀವು ಸಹ ನನ್ನ ದ್ರಾಕ್ಷೇತೋಟಕ್ಕೆ ಹೋಗಿರಿ; ನಿಮಗೆ ಸರಿಯಾದ ಕೂಲಿಯನ್ನು ಕೊಡುತ್ತೇನೆ ಅನ್ನಲು ಅವರು ತೋಟಕ್ಕೆ ಹೋದರು.

5 ಅವನು ತಿರಿಗಿ ಹೆಚ್ಚುಕಡಿಮೆ ಹನ್ನೆರಡು ಗಂಟೆಗೆ ಮತ್ತು ಮೂರು ಗಂಟೆಗೆ ಹೋಗಿ ಅದೇ ಪ್ರಕಾರ ಮಾಡಿದನು.

6 ತಿರಿಗಿ ಹೆಚ್ಚುಕಡಿಮೆ ಸಾಯಂಕಾಲ ಐದು ಗಂಟೆಗೆ ಹೋಗಿ ಬೇರೆ ಕೆಲವರು ನಿಂತಿರುವದನ್ನು ಕಂಡು ಅವರನ್ನು - ದಿನವೆಲ್ಲಾ ಇಲ್ಲಿ ಯಾಕೆ ಸುಮ್ಮನೆ ನಿಂತಿದ್ದೀರಿ ಎಂದು ಕೇಳಲು

7 ಅವರು - ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ ಅಂದಾಗ ಅವನು - ನೀವು ಸಹ ನನ್ನ ದ್ರಾಕ್ಷೇತೋಟಕ್ಕೆ ಹೋಗಿರಿ ಅಂದನು.

8 ಸಂಜೇಹೊತ್ತಿಗೆ ದ್ರಾಕ್ಷೇತೋಟದ ಯಜಮಾನನು ತನ್ನ ಪಾರುಪತ್ಯಗಾರನಿಗೆ - ಆ ಆಳುಗಳನ್ನು ಕರೆದು ಕಡೆಗೆ ಬಂದವರನ್ನು ಮೊದಲು ಮಾಡಿಕೊಂಡು ಮೊದಲು ಬಂದವರ ತನಕ ಅವರಿಗೆ ಕೂಲಿಕೊಡು ಎಂದು ಹೇಳಿದನು.

9 ಆಗ ಸಾಯಂಕಾಲ ಐದು ಗಂಟೆಗೆ ಬಂದವರಿಗೆ ಒಂದೊಂದು ಪಾವಲಿ ಸಿಕ್ಕಿತು.

10 ತರುವಾಯ ಮೊದಲಿನವರು ಬಂದು ತಮಗೆ ಹೆಚ್ಚು ದೊರೆಯುವದೆಂದು ನೆನಸಿದರು; ಆದರೆ ಇವರಿಗೆ ಸಹ ಒಂದೊಂದು ಪಾವಲಿಯೇ ಸಿಕ್ಕಿತು.

11 ಅದನ್ನು ತೆಗೆದುಕೊಂಡು ಮನೆಯ ಯಜಮಾನನ ಮೇಲೆ ಗುಣುಗುಟ್ಟಿ -

12 ಕಡೆಗೆ ಬಂದ ಇವರು ಒಂದು ತಾಸು ಹೊತ್ತು ಮಾತ್ರ ಕೆಲಸ ಮಾಡಿದ್ದಾರೆ; ನಾವು ದಿನವೆಲ್ಲಾ ಬಿಸಲಿನಲ್ಲಿ ಕೆಲಸ ಮಾಡಿ ಕಷ್ಟಪಟ್ಟಿದ್ದೇವೆ; ಇವರನ್ನು ನಮಗೆ ಸಮಮಾಡಿದ್ದೀಯೆ ಅಂದರು.

13 ಅದಕ್ಕೆ ಅವನು ಅವರಲ್ಲಿ ಒಬ್ಬನಿಗೆ - ಏನಪ್ಪಾ, ನಾನು ನಿನಗೆ ಅನ್ಯಾಯ ಮಾಡಲಿಲ್ಲ; ನೀನು ನನ್ನ ಸಂಗಡ ಒಂದು ಪಾವಲಿಗೆ ಒಡಂಬಟ್ಟಿಯಲ್ಲಾ;

14 ನಿನ್ನ ಕೂಲಿ ತಕ್ಕೊಂಡು ಹೋಗು; ನಿನಗೆ ಕೊಟ್ಟಂತೆ ಕಡೆಗೆ ಬಂದ ಇವನಿಗೂ ಕೊಡುವದಕ್ಕೆ ನನಗೆ ಮನಸ್ಸುಂಟು.

15 ನನ್ನ ಬದುಕನ್ನು ನಾನು ಬೇಕಾದ ಹಾಗೆ ಮಾಡಬಹುದಲ್ಲವೋ? ನಾನು ಒಳ್ಳೆಯವನಾಗಿರುವದು ನಿನ್ನ ಕಣ್ಣನ್ನು ಒತ್ತುತ್ತದೋ ಎಂದು ಹೇಳಿದನು.

16 ಈ ಪ್ರಕಾರ ಕಡೆಯವರು ಮೊದಲಿನವರಾಗುವರು, ಮೊದಲಿನವರು ಕಡೆಯವರಾಗುವರು ಎಂದು ಹೇಳಿದನು.


ಯೇಸು ತನ್ನ ಕಷ್ಟ ಮರಣ ಪುನರುತ್ಥಾನಗಳನ್ನು ಮೂರನೆಯ ಸಾರಿ ಮುಂತಿಳಿಸಿದ್ದು
( ಮಾರ್ಕ. 10.32-34 ; ಲೂಕ. 18.31-33 )

17 ಯೇಸು ಯೆರೂಸಲೇವಿುಗೆ ಹೋಗುತ್ತಿರುವಾಗ ಹನ್ನೆರಡು ಮಂದಿ ಶಿಷ್ಯರನ್ನು ಒತ್ತಟ್ಟಿಗೆ ಕರೆದುಕೊಂಡು ದಾರಿಯಲ್ಲಿ ಅವರಿಗೆ -

18 ನೋಡಿರಿ, ನಾವು ಯೆರೂಸಲೇವಿುಗೆ ಹೋಗುತ್ತಾ ಇದ್ದೇವೆ; ಮತ್ತು ಮನುಷ್ಯಕುಮಾರನನ್ನು ಮಹಾಯಾಜಕರ ಮತ್ತು ಶಾಸ್ತ್ರಿಗಳ ಕೈಗೆ ಹಿಡುಕೊಡುವರು.

19 ಅವರು ಅವನಿಗೆ ಮರಣದಂಡನೆಯನ್ನು ವಿಧಿಸಿ ಅವನನ್ನು ಅಪಹಾಸ್ಯ ಮಾಡುವದಕ್ಕೂ ಕೊರಡೆಗಳಿಂದ ಹೊಡೆಯುವದಕ್ಕೂ ಶಿಲುಬೆಗೆ ಹಾಕುವದಕ್ಕೂ ಅನ್ಯರ ಕೈಗೆ ಒಪ್ಪಿಸುವರು; ಅವನು ಸತ್ತ ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡುವನು ಎಂದು ಹೇಳಿದನು.


ಇಬ್ಬರು ಶಿಷ್ಯರು ತಮಗೆ ಹೆಚ್ಚಿನ ಪದವಿಯನ್ನು ಕೊಡಬೇಕೆಂದು ಬೇಡಿಕೊಳ್ಳಲು ಯೇಸು ದೀನತೆಯನ್ನು ಕುರಿತು ಬೋಧಿಸಿದ್ದು
( ಮಾರ್ಕ. 10.35-45 )

20 ಆಗ ಜೆಬೆದಾಯನ ಮಕ್ಕಳ ತಾಯಿ ಆತನಿಂದ ಏನೋ ಒಂದು ಬೇಡಿಕೊಳ್ಳಬೇಕೆಂದು ತನ್ನ ಮಕ್ಕಳನ್ನು ಕರಕೊಂಡು ಬಂದು ಆತನಿಗೆ ಅಡ್ಡಬಿದ್ದಳು.

21 ಆತನು ಆಕೆಯನ್ನು - ನಿನಗೇನು ಬೇಕಮ್ಮಾ ಎಂದು ಕೇಳಲು ಆಕೆ - ನಿನ್ನ ರಾಜ್ಯದಲ್ಲಿ ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ಕೂತುಕೊಳ್ಳುವದಕ್ಕೆ ಅಪ್ಪಣೆಯಾಗಬೇಕು ಅಂದಳು.

22 ಅದಕ್ಕೆ ಯೇಸು - ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಬೇಕಾಗಿರುವ ಪಾತ್ರೆಯಲ್ಲಿ ನೀವು ಕುಡಿಯುವದು ನಿವ್ಮಿುಂದಾದೀತೇ ಎಂದು ಕೇಳಲು ಅವರು - ಆಗುವದು ಅಂದರು.

23 ಆಗ ಆತನು ಅವರಿಗೆ - ನನ್ನ ಪಾತ್ರೆಯಲ್ಲಿ ನೀವು ಕುಡಿಯುವಿರಿ ಸರಿ; ಆದರೆ ನನ್ನ ಎಡಬಲಗಡೆಗಳಲ್ಲಿ ಕೂತುಕೊಳ್ಳುವಂತೆ ಅನುಗ್ರಹ ಮಾಡುವದು ನನ್ನದಲ್ಲ; ನನ್ನ ತಂದೆಯಿಂದ ಅದು ಯಾರಿಗೆಂದು ಸಿದ್ಧಪಡಿಸಿದೆಯೋ ಅವರಿಗೇ ಸಿಕ್ಕುವದು ಎಂದು ಹೇಳಿದನು.

24 ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಆ ಇಬ್ಬರು ಅಣ್ಣತಮ್ಮಂದಿರ ಮೇಲೆ ಸಿಟ್ಟುಗೊಂಡರು.

25 ಆದರೆ ಯೇಸು ಅವರನ್ನು ಹತ್ತಿರಕ್ಕೆ ಕರೆದು ಅವರಿಗೆ - ಜನಗಳನ್ನಾಳುವವರು ಅವರ ಮೇಲೆ ಅಹಂಕಾರದಿಂದ ದೊರೆತನಮಾಡುತ್ತಾರೆ, ಮತ್ತು ದೊಡ್ಡವರು ಬಲಾತ್ಕಾರದಿಂದ ಅಧಿಕಾರ ನಡಿಸುತ್ತಾರೆ ಎಂದು ನೀವು ಬಲ್ಲಿರಷ್ಟೆ.

26 ನಿಮ್ಮಲ್ಲಿ ಹಾಗಿರಬಾರದು; ಆದರೆ ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು;

27 ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ನಿಮ್ಮ ಆಳಾಗಿರಬೇಕು.

28 ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು.


ಯೇಸು ಇಬ್ಬರು ಕುರುಡರಿಗೆ ದೃಷ್ಟಿ ಕೊಟ್ಟದ್ದು
( ಮಾರ್ಕ. 10.46-52 ; ಲೂಕ. 18.35-43 )

29 ಅವರು ಯೆರಿಕೋವಿನಿಂದ ಹೊರಟುಹೋಗುತ್ತಿರುವಾಗ ಜನರ ದೊಡ್ಡ ಗುಂಪು ಆತನ ಹಿಂದೆ ಹೋಯಿತು.

30 ಆಗ ದಾರಿಯ ಮಗ್ಗುಲಲ್ಲಿ ಕೂತಿದ್ದ ಇಬ್ಬರು ಕುರುಡರು, ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂದು ಕೇಳಿ - ಸ್ವಾಮೀ, ದಾವೀದನ ಕುಮಾರನೇ, ನಮ್ಮನ್ನು ಕರುಣಿಸು ಎಂದು ಕೂಗಿಕೊಂಡರು.

31 ಆ ಗುಂಪಿನವರು - ಸುಮ್ಮನಿರಿ ಎಂದು ಅವರನ್ನು ಗದರಿಸಲು ಅವರು - ಸ್ವಾಮೀ, ದಾವೀದನ ಕುಮಾರನೇ, ನಮ್ಮನ್ನು ಕರುಣಿಸು ಎಂದು ಹೆಚ್ಚಾಗಿ ಕೂಗಿಕೊಂಡರು.

32 ಆಗ ಯೇಸು ನಿಂತು ಅವರನ್ನು ಕರೆದು - ನಾನು ನಿಮಗೆ ಏನು ಮಾಡಬೇಕೆಂದು ಕೋರುತ್ತೀರಿ ಎಂದು ಕೇಳಲು

33 ಅವರು - ನಮ್ಮ ಕಣ್ಣುಗಳು ತೆರೆಯಲ್ಪಡಬೇಕು, ಸ್ವಾಮೀ ಅಂದರು.

34 ಆಗ ಯೇಸು ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೆ ಅವರಿಗೆ ಕಣ್ಣು ಬಂದವು, ಅವರು ಆತನ ಹಿಂದೆ ಹೋದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು