Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 19 - ಕನ್ನಡ ಸತ್ಯವೇದವು J.V. (BSI)


ಯೇಸು ಯೆರೂಸಲೇವಿುಗೆ ಹೋಗಬೇಕೆಂದು ಹೊರಟದ್ದು. ಹೆಂಡತಿಯ ಪರಿತ್ಯಾಗದ ವಿಷಯವಾಗಿ ಉತ್ತರಕೊಟ್ಟದ್ದು
( ಮಾರ್ಕ. 10.1-12 )

1 ಯೇಸು ಈ ಮಾತುಗಳನ್ನು ಮುಗಿಸಿದ ಮೇಲೆ ಗಲಿಲಾಯವನ್ನು ಬಿಟ್ಟು ಯೊರ್ದನ್ ಹೊಳೆಯ ಆಚೆ ಪ್ರಯಾಣಮಾಡಿ ಯೂದಾಯ ಪ್ರಾಂತ್ಯಕ್ಕೆ ಬಂದನು.

2 ಬಹುಜನರು ಆತನ ಹಿಂದೆ ಗುಂಪುಗುಂಪಾಗಿ ಹೋದರು; ಆತನು ಅವರನ್ನು ಅಲ್ಲಿಯೇ ಸ್ವಸ್ಥಮಾಡಿದನು.

3 ಆಗ ಫರಿಸಾಯರು ಆತನ ಹತ್ತಿರಕ್ಕೆ ಬಂದು ಆತನನ್ನು ಪರೀಕ್ಷಿಸಬೇಕೆಂಬ ಯೋಚನೆಯಿಂದ - ಒಬ್ಬನು ಯಾವದಾದರೂ ಒಂದು ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವದು ಧರ್ಮವೋ ಹೇಗೆ ಎಂದು ಕೇಳಿದ್ದಕ್ಕೆ

4 ಆತನು - ಮನುಷ್ಯರನ್ನು ನಿರ್ಮಾಣ ಮಾಡಿದವನು ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ

5 ಅವರ ವಿಷಯದಲ್ಲಿ - ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ಹೇಳಿದನೆಂಬದಾಗಿ ನೀವು ಓದಲಿಲ್ಲವೋ?

6 ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು ಅಂದನು.

7 ಅವರು ಆತನನ್ನು - ಹಾಗಾದರೆ ತ್ಯಾಗಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಯಾಕೆ ಆಜ್ಞೆಕೊಟ್ಟನು ಎಂದು ಕೇಳಲು

8 ಆತನು - ಮೋಶೆಯು ನಿಮ್ಮ ಮೊಂಡತನವನ್ನು ನೋಡಿ ನಿಮ್ಮ ಹೆಂಡರನ್ನು ಬಿಟ್ಟುಬಿಡುವದಕ್ಕೆ ಅಪ್ಪಣೆಕೊಟ್ಟನು; ಆದರೆ ಆದಿಯಿಂದಲೇ ಹಾಗೆ ಇರಲಿಲ್ಲ.

9 ಮತ್ತು ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆಂದು ನಿಮಗೆ ಹೇಳುತ್ತೇನೆ ಅಂದನು.

10 ಅದಕ್ಕೆ ಶಿಷ್ಯರು - ಹೆಂಡತಿಯ ವಿಷಯವಾಗಿ ಗಂಡನ ಧರ್ಮ ಹೀಗಿದ್ದರೆ ಮದುವೆಯಾಗುವದು ಒಳ್ಳೇದಲ್ಲ ಅಂದಾಗ

11 ಆತನು ಅವರಿಗೆ - ಈ ಮಾತನ್ನು ಅಂಗೀಕರಿಸುವ ವರವನ್ನು ಹೊಂದಿದವರೇ ಹೊರತು ಮತ್ತಾರೂ ಅದನ್ನು ಅಂಗೀಕರಿಸುವದಿಲ್ಲ.

12 ತಾಯಿಯ ಗರ್ಭದಿಂದ ನಪುಂಸಕರಾಗಿ ಹುಟ್ಟಿದವರು ಕೆಲವರು ಇದ್ದಾರೆ; ಮನುಷ್ಯರಿಂದ ನಪುಂಸಕರಾಗಿ ಮಾಡಲ್ಪಟ್ಟವರು ಕೆಲವರು ಇದ್ದಾರೆ; ಮತ್ತು ಪರಲೋಕರಾಜ್ಯದ ನಿವಿುತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡವರು ಕೆಲವರು ಇದ್ದಾರೆ. ಅಂಗೀಕರಿಸಬಲ್ಲವನು ಅಂಗೀಕರಿಸಲಿ ಎಂದು ಹೇಳಿದನು.


ಯೇಸು ಚಿಕ್ಕ ಮಕ್ಕಳನ್ನು ಆಶೀರ್ವದಿಸಿದ್ದು
( ಮಾರ್ಕ. 10.13-16 ; ಲೂಕ. 18.15-17 )

13 ಆಗ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನ ಬಳಿಗೆ ತಂದು ಆತನು ಅವುಗಳ ಮೇಲೆ ಕೈಯಿಟ್ಟು ಪ್ರಾರ್ಥನೆ ಮಾಡಬೇಕೆಂದು ಕೇಳಲು ಶಿಷ್ಯರು ಅವರನ್ನು ಗದರಿಸಿದರು.

14 ಆದರೆ ಯೇಸು - ಮಕ್ಕಳನ್ನು ಬಿಡಿರಿ; ನನ್ನ ಹತ್ತರ ಬರುವದಕ್ಕೆ ಅವುಗಳಿಗೆ ಅಡ್ಡಿಮಾಡಬೇಡಿರಿ; ಪರಲೋಕರಾಜ್ಯವು ಇಂಥವರದೇ ಎಂದು ಹೇಳಿ

15 ಅವುಗಳ ಮೇಲೆ ಕೈಯಿಟ್ಟು, ಅಲ್ಲಿಂದ ಹೊರಟು ಹೋದನು.


ನಿತ್ಯಜೀವವನ್ನು ಹೇಗೆ ಪಡೆಯಬೇಕೆಂದು ಒಬ್ಬ ಐಶ್ವರ್ಯವಂತನು ವಿಚಾರಿಸಿದ್ದಕ್ಕೆ ಯೇಸು ಹಣದ ಭ್ರಾಂತಿಯಿಂದಾಗುವ ಕೇಡನ್ನು ತೋರಿಸಿದ್ದು
( ಮಾರ್ಕ. 10.17-27 ; ಲೂಕ. 18.18-27 )

16 ಆಗ ಒಬ್ಬನು ಬಂದು ಆತನನ್ನು - ಬೋಧಕನೇ, ನಾನು ನಿತ್ಯಜೀವವನ್ನು ಪಡೆಯಬೇಕಾದರೆ ಏನು ಒಳ್ಳೇ ಕಾರ್ಯವನ್ನು ಮಾಡಬೇಕು ಎಂದು ಕೇಳಲಾಗಿ

17 ಆತನು ಅವನಿಗೆ - ಒಳ್ಳೇದನ್ನು ಕುರಿತು ನನ್ನನ್ನು ಯಾಕೆ ಕೇಳುತ್ತೀ? ಒಳ್ಳೆಯವನು ಒಬ್ಬನೇ. ಆದರೆ ಆ ಜೀವದಲ್ಲಿ ಸೇರಬೇಕೆಂದಿದ್ದರೆ ದೇವರಾಜ್ಞೆಗಳಿಗೆ ಸರಿಯಾಗಿ ನಡೆದುಕೋ ಎಂದು ಹೇಳಿದ್ದಕ್ಕೆ

18 ಅವನು - ಅವು ಯಾವವು ಎಂದು ಕೇಳಲು ಯೇಸು - ನರಹತ್ಯಮಾಡಬಾರದು; ವ್ಯಭಿಚಾರಮಾಡಬಾರದು; ಕದಿಯಬಾರದು; ಸುಳ್ಳುಸಾಕ್ಷಿ ಹೇಳಬಾರದು; ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು;

19 ಮತ್ತು ನಿನ್ನ ಹಾಗೆಯೇ ನಿನ್ನ ನೆರೆಯವನನ್ನು ಪ್ರೀತಿ ಮಾಡಬೇಕು ಎಂಬಿವುಗಳೇ ಅಂದನು.

20 ಆ ಯೌವನಸ್ಥನು ಆತನನ್ನು - ಇವೆಲ್ಲಕ್ಕೂ ಸರಿಯಾಗಿ ನಡಕೊಂಡಿದ್ದೇನೆ; ಇನ್ನೇನು ಕಡಿಮೆಯಾಗಿರಬಹುದು? ಎಂದು ಕೇಳಲು,

21 ಯೇಸು ಅವನಿಗೆ - ನೀನು ಸಂಪೂರ್ಣನಾಗಬೇಕೆಂದಿದ್ದರೆ ಹೋಗಿ ನಿನ್ನ ಆಸ್ತಿಯನ್ನು ಮಾರಿ ಬಡವರಿಗೆ ಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು.

22 ಆ ಯೌವನಸ್ಥನು ಬಹಳ ಆಸ್ತಿಯುಳ್ಳವನಾಗಿದ್ದದರಿಂದ ಈ ಮಾತನ್ನು ಕೇಳಿ ದುಃಖದಿಂದ ಹೊರಟುಹೋದನು.

23 ಆಗ ಯೇಸು ತನ್ನ ಶಿಷ್ಯರನ್ನು ನೋಡಿ - ನಿಮಗೆ ಸತ್ಯವಾಗಿ ಹೇಳುತ್ತೇನೆ, ಐಶ್ವರ್ಯವಂತನು ಪರಲೋಕರಾಜ್ಯದಲ್ಲಿ ಸೇರುವದು ಕಷ್ಟ.

24 ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವದು ಸುಲಭ ಎಂದು ನಿಮಗೆ ತಿರಿಗಿ ಹೇಳುತ್ತೇನೆ ಅಂದನು.

25 ಶಿಷ್ಯರು ಇದನ್ನು ಕೇಳಿ ಅತ್ಯಾಶ್ಚರ್ಯಪಟ್ಟು - ಹೀಗಿದ್ದರೆ ಯಾರಿಗೆ ರಕ್ಷಣೆಯಾದೀತು ಎಂದು ಕೇಳಲು

26 ಯೇಸು ಅವರನ್ನು ದೃಷ್ಟಿಸಿ ನೋಡಿ - ಇದು ಮನುಷ್ಯರಿಗೆ ಅಸಾಧ್ಯ; ಆದರೆ ದೇವರಿಗೆ ಎಲ್ಲವು ಸಾಧ್ಯವೇ ಅಂದನು.


ಯೇಸುವಿಗೋಸ್ಕರ ಎಲ್ಲವನ್ನು ಬಿಟ್ಟವರಿಗೂ ಪ್ರತಿಫಲವು ದೇವರ ಕೃಪೆಯಿಂದಲೇ ಸಿಕ್ಕುವದು
( ಮಾರ್ಕ. 10.28-31 ; ಲೂಕ. 18.28-30 )

27 ಆಗ ಪೇತ್ರನು ಆತನನ್ನು - ಇಗೋ, ನಾವು ಎಲ್ಲಾ ಬಿಟ್ಟುಬಿಟ್ಟು ನಿನ್ನನ್ನು ಹಿಂಬಾಲಿಸಿದೆವು; ನಮಗೆ ಏನು ದೊರಕುವದು ಎಂದು ಕೇಳಲು

28 ಯೇಸು ಅವರಿಗೆ - ನಿಮಗೆ ಸತ್ಯವಾಗಿ ಹೇಳುತ್ತೇನೆ, ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವಾಗ ನನ್ನನ್ನು ಹಿಂಬಾಲಿಸಿರುವ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.

29 ಮತ್ತು ನನ್ನ ಹೆಸರಿನ ನಿವಿುತ್ತ ಮನೆಗಳನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಂದೆಯನ್ನಾಗಲಿ ತಾಯಿಯನ್ನಾಗಲಿ ಮಕ್ಕಳನ್ನಾಗಲಿ ಭೂವಿುಯನ್ನಾಗಲಿ ಬಿಟ್ಟುಬಿಟ್ಟಿರುವವರೆಲ್ಲರಿಗೆ ಅನೇಕ ಪಾಲು ಹೆಚ್ಚಾಗಿ ಸಿಕ್ಕುವದು; ಮತ್ತು ಅವರು ನಿತ್ಯಜೀವಕ್ಕೆ ಬಾಧ್ಯರಾಗುವರು.

30 ಆದರೆ ಬಹು ಮಂದಿ ಮೊದಲಿನವರು ಕಡೆಯವರಾಗುವರು, ಕಡೆಯವರು ಮೊದಲಿನವರಾಗುವರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು