Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಮತ್ತಾಯ 15 - ಕನ್ನಡ ಸತ್ಯವೇದವು J.V. (BSI)


ಊಟದಿಂದ ಮನುಷ್ಯನು ಕೆಡುವದಿಲ್ಲವೆಂದು ಯೇಸು ಬೋಧಿಸಿದ್ದು
( ಮಾರ್ಕ. 7.1-23 )

1 ಆಗ ಯೆರೂಸಲೇವಿುನಿಂದ ಫರಿಸಾಯರೂ ಶಾಸ್ತ್ರಿಗಳೂ ಯೇಸುವಿನ ಬಳಿಗೆ ಬಂದು -

2 ನಿನ್ನ ಶಿಷ್ಯರು ಹಿರಿಯರಿಂದ ಬಂದ ಸಂಪ್ರದಾಯವನ್ನು ಯಾಕೆ ಮೀರುತ್ತಾರೆ? ಅವರು ಕೈತೊಳಕೊಳ್ಳದೆ ಆಹಾರ ತೆಗೆದುಕೊಳ್ಳುತ್ತಾರಲ್ಲಾ ಎಂದು ಕೇಳಿದ್ದಕ್ಕೆ ಆತನು ಅವರಿಗೆ ಉತ್ತರಕೊಟ್ಟದ್ದೇನಂದರೆ -

3 ನೀವು ಸಹ ನಿಮ್ಮ ಸಂಪ್ರದಾಯದ ನಿವಿುತ್ತ ದೇವರ ಆಜ್ಞೆಯನ್ನು ಯಾಕೆ ಮೀರುತ್ತೀರಿ?

4 ಹೇಗಂದರೆ ತಂದೆತಾಯಿಗಳನ್ನು ಸನ್ಮಾನಿಸಬೇಕೆಂತಲೂ ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣದಂಡನೆ ಆಗಬೇಕೆಂತಲೂ ದೇವರು ಹೇಳಿದ್ದಾನೆ.

5 ನೀವೋ, ಯಾವನಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ನೋಡಿ - ನಾನು ನಿನ್ನ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ದೇವರಿಗಾಗಿ ಇಟ್ಟಿದ್ದೇನೆ ಎಂದು ಹೇಳುವದಾದರೆ

6 ಅವನಿಗೆ ತನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕಾದದ್ದಿಲ್ಲ ಅನ್ನುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿವಿುತ್ತ ದೇವರ ವಾಕ್ಯವನ್ನು ನಿರರ್ಥಕ ಮಾಡಿದ್ದೀರಿ.

7 ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ; ಅವನು ಬರೆದದ್ದೇನಂದರೆ -

8 ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಮನಸ್ಸು ನನಗೆ ದೂರವಾಗಿದೆ.

9 ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ ಭಕ್ತಿ ತೋರಿಸುವದು ವ್ಯರ್ಥ ಎಂಬದೇ.

10 ಆಮೇಲೆ ಯೇಸು ಜನರ ಗುಂಪನ್ನು ಹತ್ತರಕ್ಕೆ ಕರೆದು ಅವರಿಗೆ - ಕಿವಿಗೊಟ್ಟು ಕೇಳಿರಿ, ತಿಳುಕೊಳ್ಳಿರಿ.

11 ಬಾಯೊಳಕ್ಕೆ ಹೋಗುವಂಥದು ಮನುಷ್ಯನನ್ನು ಹೊಲೆಮಾಡುವದಿಲ್ಲ; ಬಾಯೊಳಗಿಂದ ಹೊರಡುವಂಥದೇ ಮನುಷ್ಯನನ್ನು ಹೊಲೆಮಾಡುವದು ಎಂದು ಹೇಳಿದನು.

12 ಆಗ ಶಿಷ್ಯರು ಬಂದು ಆತನನ್ನು - ಫರಿಸಾಯರು ಈ ಮಾತನ್ನು ಕೇಳಿ ಬೇಸರಗೊಂಡರೆಂದು ನಿನಗೆ ಗೊತ್ತಾಯಿತೋ ಎಂದು ಕೇಳಿದರು.

13 ಅದಕ್ಕೆ ಆತನು - ಪರಲೋಕದಲ್ಲಿರುವ ನನ್ನ ತಂದೆಯು ನೆಡದೆ ಇರುವ ಗಿಡಗಳೆಲ್ಲಾ ಬೇರಿನೊಂದಿಗೆ ಕಿತ್ತುಹಾಕಲ್ಪಡುವವು.

14 ಅವರ ಮಾತನ್ನು ಬಿಡಿರಿ; ತಾವೇ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸುವದಕ್ಕೆ ಹೋಗುತ್ತಾರೆ; ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಕುಣಿಯಲ್ಲಿ ಬೀಳುವರು ಅಂದನು.

15 ಆಗ ಪೇತ್ರನು ಈ ಸಾಮ್ಯದ ಅರ್ಥವನ್ನು ನಮಗೆ ಹೇಳು ಅನ್ನಲು

16 ಆತನು - ನಿಮಗೂ ಇನ್ನು ಬುದ್ಧಿ ಇಲ್ಲವೇ?

17 ಬಾಯೊಳಕ್ಕೆ ಹೋಗುವಂಥದು ಹೊಟ್ಟೆಯಲ್ಲಿ ಸೇರಿ ಬಹಿರ್ದೇಶಕ್ಕೆ ಹೋಗುತ್ತದೆಂದು ನಿಮಗೆ ತಿಳಿಯಲಿಲ್ಲವೋ?

18 ಆದರೆ ಬಾಯೊಳಗಿಂದ ಹೊರಡುವಂಥವುಗಳು ಮನಸ್ಸಿನೊಳಗಿಂದ ಬರುತ್ತವೆ; ಇವೇ ಮನುಷ್ಯನನ್ನು ಹೊಲೆ ಮಾಡುವವು.

19 ಹೇಗಂದರೆ ಮನಸ್ಸಿನೊಳಗಿಂದ ಕೆಟ್ಟ ಆಲೋಚನೆ ಕೊಲೆ ಹಾದರ ಸೂಳೆಗಾರಿಕೆ ಕಳ್ಳತನ ಸುಳ್ಳುಸಾಕ್ಷಿ ಬೈಗಳು ಹೊರಟು ಬರುತ್ತವೆ.

20 ಮನುಷ್ಯನನ್ನು ಕೆಡಿಸುವಂಥವುಗಳು ಇವೇ; ಆದರೆ ಕೈತೊಳಕೊಳ್ಳದೆ ಊಟಮಾಡುವದು ಮನುಷ್ಯನನ್ನು ಕೆಡಿಸುವದಿಲ್ಲ ಅಂದನು.


ಯೇಸು ಕಾನಾನ್ಯಳಾದ ಸ್ತ್ರೀಯ ಮಗಳನ್ನು ಸ್ವಸ್ಥಮಾಡಿದ್ದು
( ಮಾರ್ಕ. 7.24-30 )

21 ಯೇಸು ಅಲ್ಲಿಂದ ಹೊರಟು ತೂರ್ ಸೀದೋನ್ ಪಟ್ಟಣಗಳ ಪ್ರಾಂತ್ಯಗಳಿಗೆ ಹೋದನು.

22 ಆ ಸೀಮೆಯಿಂದ ಕಾನಾನ್ಯರವಳೊಬ್ಬಳು ಹೊರಟು ಬಂದು - ಸ್ವಾಮೀ, ದಾವೀದನ ಕುಮಾರನೇ, ನನ್ನನ್ನು ಕರುಣಿಸು. ನನ್ನ ಮಗಳಿಗೆ ದೆವ್ವದ ಕಾಟ ಬಹಳವಾಗಿದೆ ಎಂದು ಕೂಗಿಕೊಂಡಳು.

23 ಆದರೆ ಆತನು ಆಕೆಗೆ ಏನೂ ಉತ್ತರಕೊಡಲಿಲ್ಲ; ಆಗ ಆತನ ಶಿಷ್ಯರು ಬಂದು - ನಮ್ಮ ಹಿಂದೆ ಕೂಗಿಕೊಂಡು ಬರುತ್ತಾಳೆ; ಆಕೆಯನ್ನು ಕಳುಹಿಸಿಬಿಡು ಎಂದು ಆತನನ್ನು ಬೇಡಿಕೊಂಡರು.

24 ಅದಕ್ಕಾತನು - ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲನ ಮನೆತನದವರ ಬಳಿಗೇ ಹೊರತು ಮತ್ತಾರ ಬಳಿಗೂ ನಾನು ಕಳುಹಿಸಲ್ಪಟ್ಟವನಲ್ಲ ಅಂದನು.

25 ಆಗ ಆಕೆ ಬಂದು ಆತನಿಗೆ ಅಡ್ಡಬಿದ್ದು - ಸ್ವಾಮೀ, ನನಗೆ ಅನುಗ್ರಹ ಮಾಡಬೇಕು ಅಂದಳು.

26 ಅದಕ್ಕಾತನು - ಮಕ್ಕಳು ತಿನ್ನುವ ರೊಟ್ಟಿಯನ್ನು ತಕ್ಕೊಂಡು ನಾಯಿಮರಿಗಳಿಗೆ ಹಾಕುವದು ಸರಿಯಲ್ಲ ಎಂದು ಉತ್ತರಕೊಡಲು

27 ಆಕೆ - ಸ್ವಾಮೀ, ಆ ಮಾತು ನಿಜವೇ; ನಾಯಿಮರಿಗಳಂತೂ ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿಯ ತುಂಡುಗಳನ್ನು ತಿನ್ನುತ್ತವಲ್ಲಾ ಅಂದಳು.

28 ಆಗ ಯೇಸು ಆಕೆಗೆ - ಅಮ್ಮಾ, ನಿನ್ನ ನಂಬಿಕೆ ಬಹಳ; ನಿನ್ನ ಮನಸ್ಸಿನಂತೆ ಆಗಲಿ ಎಂದು ಉತ್ತರಕೊಟ್ಟನು. ಅದೇ ಗಳಿಗೆಯಲ್ಲಿ ಆಕೆಯ ಮಗಳು ಸ್ವಸ್ಥಳಾದಳು.


ಯೇಸು ಅನೇಕರನ್ನು ಸ್ವಸ್ಥಮಾಡಿದ್ದು; ನಾಲ್ಕು ಸಾವಿರ ಜನರಿಗೆ ಊಟಮಾಡಿಸಿದ್ದು
( ಮಾರ್ಕ. 8.1-10 )

29 ಯೇಸು ಅಲ್ಲಿಂದ ಹೊರಟು ಗಲಿಲಾಯಸಮುದ್ರದ ಬಳಿಗೆ ಬಂದು ಬೆಟ್ಟವನ್ನು ಹತ್ತಿ ಅಲ್ಲಿ ಕೂತುಕೊಂಡನು.

30 ಆಗ ಜನರು ಗುಂಪುಗುಂಪಾಗಿ ಆತನ ಬಳಿಗೆ ಬಂದು ಕುಂಟರು ಕುರುಡರು ಮೂಕರು ಕೈಕಾಲಿಲ್ಲದವರು ಈ ಮುಂತಾದ ಅನೇಕರನ್ನು ಕರತಂದು ಅವರನ್ನು ಆತನ ಪಾದಗಳ ಬಳಿಯಲ್ಲಿ ಬಿಟ್ಟರು; ಆತನು ಅವರನ್ನು ವಾಸಿಮಾಡಿದನು.

31 ಮೂಕರಾಗಿದ್ದವರು ಮಾತಾಡಿದ್ದನ್ನೂ ಕೈಕಾಲಿಲ್ಲದವರು ಸ್ವಸ್ಥವಾದದ್ದನ್ನೂ ಕುಂಟರಿಗೆ ಕಾಲುಬಂದದ್ದನ್ನೂ ಕುರುಡರಿಗೆ ಕಣ್ಣು ಬಂದದ್ದನ್ನೂ ಜನರು ಕಂಡು ಆಶ್ಚರ್ಯಪಟ್ಟು ಇಸ್ರಾಯೇಲ್ ಜನರ ದೇವರನ್ನು ಕೊಂಡಾಡಿದರು.

32 ಆಗ ಯೇಸು ತನ್ನ ಶಿಷ್ಯರನ್ನು ಹತ್ತರಕ್ಕೆ ಕರೆದು ಅವರಿಗೆ - ಈ ಜನರನ್ನು ನೋಡಿ ಕನಿಕರಪಡುತ್ತೇನೆ; ಅವರು ನನ್ನ ಬಳಿಗೆ ಬಂದು ಈಗ ಮೂರು ದಿನವಾಯಿತು; ಅವರಿಗೆ ಊಟಕ್ಕೆ ಏನೂ ಇಲ್ಲ; ಅವರನ್ನು ಉಪವಾಸವಾಗಿ ಕಳುಹಿಸಿಬಿಡುವದಕ್ಕೆ ನನಗೆ ಮನಸ್ಸಿಲ್ಲ; ದಾರಿಯಲ್ಲಿ ಬಳಲಿಹೋದಾರು ಎಂದು ಹೇಳಿದನು.

33 ಶಿಷ್ಯರು - ಇಷ್ಟು ಜನರನ್ನು ತೃಪ್ತಿಪಡಿಸಲಾಗುವಷ್ಟು ರೊಟ್ಟಿ ಈ ಅಡವಿಯಲ್ಲಿ ನಮಗೆ ಎಲ್ಲಿಂದ ಬಂದೀತು? ಅನ್ನಲು

34 ಯೇಸು - ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ ಎಂದು ಕೇಳಿದ್ದಕ್ಕೆ ಅವರು - ಏಳು ರೊಟ್ಟಿಗಳು ಮತ್ತು ಕೆಲವು ಸಣ್ಣ ಮೀನುಗಳು ಅವೆ ಅಂದರು.

35 ಆಗ ಆತನು ಜನರ ಗುಂಪಿಗೆ ನೆಲದ ಮೇಲೆ ಕೂತುಕೊಳ್ಳಿರಿ ಎಂದು ಅಪ್ಪಣೆಕೊಟ್ಟು

36 ಆ ಏಳು ರೊಟ್ಟಿಗಳನ್ನೂ ಆ ಮೀನುಗಳನ್ನೂ ತೆಗೆದುಕೊಂಡು ದೇವರ ಸ್ತೋತ್ರಮಾಡಿ ಅವುಗಳನ್ನು ಮುರಿದು ಶಿಷ್ಯರಿಗೆ ಕೊಡಲು ಶಿಷ್ಯರು ಗುಂಪಿನವರಿಗೆ ಹಂಚಿಕೊಟ್ಟರು.

37 ಎಲ್ಲರೂ ಊಟಮಾಡಿ ತೃಪ್ತರಾದರು. ವಿುಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಹೆಡಿಗೆ ತುಂಬಿದವು.

38 ಊಟ ಮಾಡಿದವರು, ಹೆಂಗಸರು ಮಕ್ಕಳು ಅಲ್ಲದೆ, ಗಂಡಸರೇ ನಾಲ್ಕು ಸಾವಿರ ಮಂದಿ.

39 ಬಳಿಕ ಆತನು ಆ ಜನರ ಗುಂಪನ್ನು ಕಳುಹಿಸಿಬಿಟ್ಟು ದೋಣಿಯನ್ನು ಹತ್ತಿ ಮಗದಾನ ಸೀಮೆಗೆ ಬಂದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು