ಮತ್ತಾಯ 13 - ಕನ್ನಡ ಸತ್ಯವೇದವು J.V. (BSI)ಪರಲೋಕರಾಜ್ಯವನ್ನು ಕುರಿತ ಸಾಮ್ಯಗಳು ( ಮಾರ್ಕ. 4.1-20 , 30-34 ; ಲೂಕ. 8.4-15 , 13.18 , 19 ) 1 ಆ ದಿವಸದಲ್ಲಿ ಯೇಸು ಮನೆಯಿಂದ ಹೊರಟು ಸಮುದ್ರದ ದಡದಲ್ಲಿ ಕೂತುಕೊಂಡನು. 2 ಬಹಳ ಜನರು ಆತನ ಬಳಿಗೆ ಕೂಡಿಬಂದದರಿಂದ ಆತನು ದೋಣಿ ಹತ್ತಿ ಕೂತುಕೊಂಡನು. ಆ ಜನರೆಲ್ಲರು ದಡದಲ್ಲಿ ನಿಂತಿದ್ದರು. 3 ಆಗ ಆತನು ಅವರಿಗೆ ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು ಹೇಳಿದನು. ಹೇಗಂದರೆ - 4 ಕೇಳಿರಿ! ಬಿತ್ತುವವನು ಬಿತ್ತುವದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜ ದಾರಿಯ ಮಗ್ಗುಲಲ್ಲಿ ಬಿದ್ದವು; ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು. 5 ಕೆಲವು ಬೀಜ ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು; ಅಲ್ಲಿ ಮಣ್ಣು ತೆಳ್ಳಗಿದ್ದದರಿಂದ ಅವು ಬೇಗ ಮೊಳೆತವು; 6 ಆದರೆ ಬಿಸಿಲೇರಿದಾಗ ಬಾಡಿ ಬೇರಿಲ್ಲದ ಕಾರಣ ಒಣಗಿಹೋದವು. 7 ಮತ್ತೆ ಕೆಲವು ಬೀಜ ಮುಳ್ಳುಗಿಡಗಳಲ್ಲಿ ಬಿದ್ದವು; ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು. 8 ಇನ್ನು ಕೆಲವು ಒಳ್ಳೆಯ ನೆಲದಲ್ಲಿ ಬಿದ್ದು ಒಂದು ನೂರರಷ್ಟು, ಒಂದು ಅರುವತ್ತರಷ್ಟು, ಒಂದು ಮೂವತ್ತರಷ್ಟು ಫಲವನ್ನು ಕೊಟ್ಟವು. 9 ಕಿವಿಯುಳ್ಳವನು ಕೇಳಲಿ ಅಂದನು. 10 ತರುವಾಯ ಆತನ ಶಿಷ್ಯರು ಬಂದು - ಯಾಕೆ ಸಾಮ್ಯರೂಪವಾಗಿ ಅವರ ಸಂಗಡ ಮಾತಾಡುತ್ತೀ ಎಂದು ಕೇಳಿದರು. 11 ಅದಕ್ಕಾತನು ಅವರಿಗೆ - ಪರಲೋಕರಾಜ್ಯದ ಗುಟ್ಟುಗಳನ್ನು ತಿಳಿಯುವ ವರವು ನಿಮಗೇ ಕೊಟ್ಟದೆ; ಅವರಿಗೆ ಕೊಟ್ಟಿಲ್ಲ. 12 ಯಾಕಂದರೆ ಇದ್ದವನಿಗೆ ಕೊಡಲ್ಪಡುವದು, ಅವನಿಗೆ ಮತ್ತೂ ಹೆಚ್ಚಾಗುವದು; ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವದು. 13 ನಾನು ಅವರ ಸಂಗಡ ಸಾಮ್ಯರೂಪವಾಗಿ ಮಾತಾಡುವದಕ್ಕೆ ಕಾರಣವೇನಂದರೆ ಅವರಿಗೆ ಕಣ್ಣಿದ್ದರೂ ನೋಡುವದಿಲ್ಲ, ಕಿವಿಯಿದ್ದರೂ ಕೇಳುವದಿಲ್ಲ ಮತ್ತು ತಿಳುಕೊಳ್ಳುವದಿಲ್ಲ. 14 ಯೆಶಾಯನು ಹೇಳಿದ ಪ್ರವಾದನೆಯು ಅವರಲ್ಲಿ ನೆರವೇರುತ್ತದೆ; ಅದೇನಂದರೆ - ನೀವು ಕಿವಿಯಿದ್ದು ಕೇಳಿದರೂ ತಿಳುಕೊಳ್ಳುವದೇ ಇಲ್ಲ; ಕಣ್ಣಿದ್ದು ನೋಡಿದರೂ ಕಾಣುವದೇ ಇಲ್ಲ. 15 ಈ ಜನರ ಹೃದಯವು ಕೊಬ್ಬಿತು; ಇವರ ಕಿವಿ ಮಂದವಾಯಿತು; ಇವರು ಕಣ್ಣು ಮುಚ್ಚಿಕೊಂಡಿದ್ದಾರೆ. ತಾವು ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗುಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಮಾಡಿಕೊಂಡಿದ್ದಾರೆ ಎಂಬದು. 16 ಆದರೆ ನಿಮ್ಮ ಕಣ್ಣು ಕಾಣುತ್ತವೆ, ನಿಮ್ಮ ಕಿವಿ ಕೇಳುತ್ತವೆ; ಆದದರಿಂದ ನೀವು ಧನ್ಯರು. 17 ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ನೋಡುತ್ತಿರುವ ಕಾರ್ಯಗಳನ್ನು ಬಹು ಮಂದಿ ಪ್ರವಾದಿಗಳೂ ಸತ್ಪುರುಷರೂ ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಿಲ್ಲ; ನೀವು ಕೇಳುತ್ತಿರುವ ಸಂಗತಿಗಳನ್ನು ಅವರು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಿಲ್ಲ. 18-19 ಬಿತ್ತುವವನ ವಿಷಯವಾದ ಸಾಮ್ಯದ ಅರ್ಥವನ್ನು ಕೇಳಿರಿ - ಯಾವನಾದರೂ ಪರಲೋಕರಾಜ್ಯದ ವಾಕ್ಯವನ್ನು ಕೇಳಿ ತಿಳುಕೊಳ್ಳದೆ ಇರುವಲ್ಲಿ ಸೈತಾನನು ಬಂದು ಆ ಮನುಷ್ಯನ ಮನಸ್ಸಿನಲ್ಲಿ ಬಿತ್ತಿದ್ದನ್ನು ತೆಗೆದುಹಾಕುತ್ತಾನೆ; ಈ ಮನುಷ್ಯನೇ ಬೀಜ ಬಿದ್ದ ದಾರೀ ಮಗ್ಗುಲಾಗಿರುವವನು. 20 ಒಬ್ಬನು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾನೆ; 21 ತನಗೆ ಬೇರಿಲ್ಲದ ಕಾರಣ ಇವನು ಸ್ವಲ್ಪ ಕಾಲ ಮಾತ್ರವೇ ಇದ್ದು ಆ ವಾಕ್ಯದ ನಿವಿುತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿ ಬೀಳುತ್ತಾನೆ; ಇವನೇ ಬೀಜ ಬಿದ್ದ ಬಂಡೆಯ ನೆಲವಾಗಿರುವವನು. 22 ಒಬ್ಬನು ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಯೂ ಐಶ್ವರ್ಯದಿಂದುಂಟಾಗುವ ಮೋಸವೂ ಆ ವಾಕ್ಯವನ್ನು ಅಡಗಿಸಿಬಿಡುವದರಿಂದ, ಫಲವನ್ನು ಕೊಡದೆ ಇರುತ್ತಾನೆ; ಇವನೇ ಮುಳ್ಳುಗಿಡಗಳಲ್ಲಿ ಬೀಜ ಬಿದ್ದ ನೆಲವಾಗಿರುವವನು. 23 ಒಬ್ಬನು ವಾಕ್ಯವನ್ನು ಕೇಳಿ ತಿಳುಕೊಂಡು ಫಲವಂತನಾಗಿ ನೂರರಷ್ಟಾಗಲಿ ಅರುವತ್ತರಷ್ಟಾಗಲಿ ಮೂವತ್ತರಷ್ಟಾಗಲಿ ಫಲವನ್ನು ಕೊಡುತ್ತಾನೆ; ಇವನೇ ಒಳ್ಳೆಯ ನೆಲವಾಗಿರುವವನು ಎಂದು ಹೇಳಿದನು. 24 ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು; ಅದೇನಂದರೆ - ಪರಲೋಕರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ್ದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. 25 ಆದರೆ ಜನರು ನಿದ್ರೆಮಾಡುವ ಕಾಲದಲ್ಲಿ ಅವನ ವೈರಿಯು ಬಂದು ಗೋದಿಯ ನಡುವೆ ಹಣಜಿ ಬಿತ್ತಿ ಹೋದನು. 26 ಗೋದಿಯು ಬೆಳೆದು ಫಲಕ್ಕೆ ಬಂದಾಗ ಹಣಜಿ ಸಹ ಕಾಣಬಂತು. 27 ಆಗ ಯಜಮಾನನ ಆಳುಗಳು ಅವನ ಬಳಿಗೆ ಬಂದು - ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜ ಬಿತ್ತಿದಿಯಲ್ಲಾ; ಹಣಜಿ ಎಲ್ಲಿಂದ ಬಂತು ಎಂದು ಕೇಳಲು 28 ಅವನು - ಇದು ಒಬ್ಬ ವೈರಿ ಮಾಡಿದ ಕೆಲಸ ಅನ್ನಲಾಗಿ ಆಳುಗಳು ಅವನನ್ನು - ಹಾಗಾದರೆ ನಾವು ಅದನ್ನು ಆರಿಸಿ ತೆಗೆಯೋಣೋ ಎಂದು ಕೇಳಲು 29 ಅವನು - ಬೇಡ; ಹಣಜಿಯನ್ನು ಆರಿಸಿ ತೆಗೆಯುವಾಗ ಅದರ ಸಂಗಡ ಗೋದಿಯನ್ನೆಲ್ಲಾದರೂ ಕಿತ್ತೀರಿ. 30 ಸುಗ್ಗೀಕಾಲದ ತನಕ ಎರಡೂ ಕೂಡ ಬೆಳೆಯಲಿ; ಸುಗ್ಗೀಕಾಲದಲ್ಲಿ ನಾನು ಕೊಯ್ಯುವವರಿಗೆ - ಮೊದಲು ಹಣಜಿಯನ್ನು ಆರಿಸಿತೆಗೆದು ಅದನ್ನು ಸುಡುವದಕ್ಕೆ ಹೊರೆಕಟ್ಟಿಹಾಕಿ, ಗೋದಿಯನ್ನು ನನ್ನ ಕಣಜಕ್ಕೆ ತುಂಬಿರಿ ಎಂದು ಹೇಳುವೆನು ಅಂದನು. 31 ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು; ಅದೇನಂದರೆ - ಪರಲೋಕರಾಜ್ಯವು ಸಾಸಿವೆಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತೆಗೆದುಕೊಂಡು ಹೋಗಿ ತನ್ನ ಹೊಲದಲ್ಲಿ ಬಿತ್ತಿದನು. 32 ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ, ಬೆಳೆದ ಮೇಲೆ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ಮರವಾಗುತ್ತದೆ; ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ವಾಸಮಾಡುತ್ತವೆ. 33 ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದನು; ಅದೇನಂದರೆ - ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಹೆಂಗಸು ತಕ್ಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿಡಲು ಆ ಹಿಟ್ಟೆಲ್ಲಾ ಹುಳಿಯಾಯಿತು. 34 ಯೇಸು ಈ ಮಾತುಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯರೂಪವಾಗಿ ಹೇಳಿದನು; ಸಾಮ್ಯವಿಲ್ಲದೆ ಒಂದನ್ನೂ ಹೇಳಲಿಲ್ಲ. 35 ಹೀಗೆ - ನಾನು ಬಾಯಿದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು; ಲೋಕಾದಿಯಿಂದ ಮರೆಯಾಗಿದ್ದವುಗಳನ್ನು ಹೊರಪಡಿಸುವೆನು ಎಂದು ಒಬ್ಬ ಪ್ರವಾದಿಯ ಮುಖಾಂತರ ನುಡಿದ ಮಾತು ನೆರವೇರಿತು. 36 ಆಗ ಯೇಸು ಜನರನ್ನು ಬಿಟ್ಟು ಮನೆಗೆ ಹೋದ ಮೇಲೆ ಆತನ ಶಿಷ್ಯರು ಬಂದು - ಹೊಲದಲ್ಲಿಯ ಹಣಜಿಯ ಸಾಮ್ಯದ ಅರ್ಥವನ್ನು ನಮಗೆ ಹೇಳು ಅಂದರು. 37 ಅದಕ್ಕಾತನು - ಒಳ್ಳೆಯ ಬೀಜವನ್ನು ಬಿತ್ತುವವನಂದರೆ ಮನುಷ್ಯಕುಮಾರನು; 38 ಹೊಲವಂದರೆ ಈ ಲೋಕ; ಒಳ್ಳೆಯ ಬೀಜವಂದರೆ ಪರಲೋಕ ರಾಜ್ಯದವರು; ಹಣಜಿ ಅಂದರೆ ಸೈತಾನನವರು; 39 ಅದನ್ನು ಬಿತ್ತುವ ವೈರಿ ಅಂದರೆ ಸೈತಾನನು; ಸುಗ್ಗೀಕಾಲ ಅಂದರೆ ಯುಗದ ಸಮಾಪ್ತಿ; ಕೊಯ್ಯುವವರು ಅಂದರೆ ದೇವದೂತರು. 40 ಹೀಗಿರಲಾಗಿ ಹೇಗೆ ಹಣಜಿಯನ್ನು ಆರಿಸಿತೆಗೆದು ಸುಟ್ಟುಬಿಡುತ್ತಾರೋ, ಹಾಗೆಯೇ ಯುಗದ ಸಮಾಪ್ತಿಯಲ್ಲಿ ನಡೆಯುವದು. 41 ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು; ಅವರು ಆತನ ರಾಜ್ಯದೊಳಗಿಂದ ಎಲ್ಲಾ ಕಂಟಕರನ್ನೂ 42 ಅಧರ್ಮಿಗಳನ್ನೂ ಕೂಡಿಸಿ ಬೆಂಕೀಕೊಂಡದಲ್ಲಿ ಹಾಕುವರು; ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು. 43 ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕಿವಿಯುಳ್ಳವನು ಕೇಳಲಿ ಅಂದನು. 44 ಪರಲೋಕರಾಜ್ಯವು ಹೊಲದಲ್ಲಿ ಹೂಳಿಟ್ಟ ದ್ರವ್ಯಕ್ಕೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ಕಂಡುಕೊಂಡು ಮುಚ್ಚಿಬಿಟ್ಟು ಅದರಿಂದಾದ ಸಂತೋಷದಿಂದ ತನ್ನ ಬದುಕನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು. 45 ಮತ್ತು ಪರಲೋಕರಾಜ್ಯವು ಉತ್ತಮವಾದ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ. 46 ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು ತನ್ನ ಬದುಕನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು. 47 ಮತ್ತು ಪರಲೋಕರಾಜ್ಯವು ಒಂದು ಬಲೆಗೆ ಹೋಲಿಕೆಯಾಗಿದೆ. ಅದನ್ನು ಸಮುದ್ರದಲ್ಲಿ ಹಾಕಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿದರು. 48 ಅದು ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯ ಮೀನುಗಳನ್ನು ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಟುಬಿಟ್ಟರು. 49 ಹಾಗೆಯೇ ಯುಗದ ಸಮಾಪ್ತಿಯಲ್ಲಿ ಆಗುವದು. ದೇವದೂತರು ಹೊರಟುಬಂದು ನೀತಿವಂತರೊಳಗಿಂದ ಕೆಟ್ಟವರನ್ನು ಬೇರೆಮಾಡಿ ಅವರನ್ನು ಬೆಂಕೀಕೊಂಡದಲ್ಲಿ ಹಾಕುವರು. 50 ಅಲ್ಲಿ ಗೋಳಾಟವೂ ಕಟಕಟನೆ ಹಲ್ಲುಕಡಿಯೋಣವೂ ಇರುವವು. 51 ಈ ಎಲ್ಲಾ ಮಾತುಗಳ ಅರ್ಥವು ನಿಮಗೆ ತಿಳಿಯಿತೋ ಎಂದು ಕೇಳಲು ಅವರು - ತಿಳಿಯಿತು ಅಂದರು. 52 ಆಗ ಆತನು ಅವರಿಗೆ - ಹೀಗಿರಲಾಗಿ ಪರಲೋಕರಾಜ್ಯದ ವಿಷಯವಾಗಿ ಉಪದೇಶಹೊಂದಿ ಶಿಕ್ಷಿತನಾದ ಪ್ರತಿಯೊಬ್ಬ ಶಾಸ್ತ್ರೋಪದೇಶಕನು ಮನೇಯಜಮಾನನಿಗೆ ಹೋಲಿಕೆಯಾಗಿದ್ದಾನೆ. ಅವನು ತನ್ನ ಬೊಕ್ಕಸದೊಳಗಿಂದ ಹೊಸ ವಸ್ತುಗಳನ್ನೂ ಹಳೇ ವಸ್ತುಗಳನ್ನೂ ಹೊರಗೆ ತರುತ್ತಿರುವನು ಎಂದು ಹೇಳಿದನು. 53 ಯೇಸು ಈ ಸಾಮ್ಯಗಳನ್ನು ಮುಗಿಸಿದ ಮೇಲೆ ಅಲ್ಲಿಂದ ಹೊರಟುಹೋದನು. ಯೇಸುವಿನ ಸ್ವಂತ ಊರಿನವರು ಆತನನ್ನು ತಾತ್ಸಾರಮಾಡಿದ್ದು ( ಮಾರ್ಕ. 6.1-6 ; ಲೂಕ. 4.15-30 ) 54 ತರುವಾಯ ಆತನು ತನ್ನ ಊರಿಗೆ ಬಂದು ಅಲ್ಲಿರುವ ಸಭಾಮಂದಿರದಲ್ಲಿ ಜನರಿಗೆ ಉಪದೇಶಮಾಡುತ್ತಿದ್ದನು. ಅವರು ಕೇಳಿ ಅತ್ಯಾಶ್ಚರ್ಯಪಟ್ಟು - ಇವನಿಗೆ ಈ ಜ್ಞಾನವೂ ಈ ಮಹತ್ಕಾರ್ಯಗಳೂ ಎಲ್ಲಿಂದ ಬಂದಿದ್ದಾವು? 55 ಇವನು ಆ ಬಡಗಿಯ ಮಗನಲ್ಲವೇ. ಇವನ ತಾಯಿ ಮರಿಯಳೆಂಬವಳಲ್ಲವೇ. ಯಾಕೋಬ ಯೋಸೇಫ ಸೀಮೋನ ಯೂದ ಇವರು ಇವನ ತಮ್ಮಂದಿರಲ್ಲವೇ. 56 ಇವನ ತಂಗಿಯರೆಲ್ಲರು ನಮ್ಮಲ್ಲಿ ಇದ್ದಾರಲ್ಲವೇ. ಹಾಗಾದರೆ ಇವೆಲ್ಲಾ ಇವನಿಗೆ ಎಲ್ಲಿಂದ ಬಂದಿದ್ದಾವು? ಎಂದು ಮಾತಾಡಿಕೊಂಡು ಆತನ ವಿಷಯವಾಗಿ ಬೇಸರಗೊಂಡರು. 57 ಆದರೆ ಯೇಸು ಅವರಿಗೆ - ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಮರ್ಯಾದೆ ಉಂಟು; ಆದರೆ ಸ್ವದೇಶದಲ್ಲಿಯೂ ಸ್ವಂತ ಮನೆಯಲ್ಲಿಯೂ ಮಾತ್ರ ಮರ್ಯಾದೆಯಿಲ್ಲ ಅಂದನು. 58 ಅವರು ಆತನನ್ನು ನಂಬದೆ ಹೋದದರಿಂದ ಆತನು ಅಲ್ಲಿ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India