ಫಿಲಿಪ್ಪಿಯವರಿಗೆ 4 - ಕನ್ನಡ ಸತ್ಯವೇದವು J.V. (BSI)1 ಹೀಗಿರಲಾಗಿ ಪ್ರಿಯರೂ ಇಷ್ಟರೂ ಆದ ನನ್ನ ಸಹೋದರರೇ, ನನಗೆ ಸಂತೋಷವೂ ಜಯಮಾಲೆಯೂ ಆಗಿರುವವರೇ, ನಾನು ಹೇಳಿದಂತೆ ಕರ್ತನಲ್ಲಿ ದೃಢವಾಗಿ ನಿಲ್ಲಿರಿ; ಪ್ರಿಯರೇ. ಇಬ್ಬರು ಕ್ರೈಸ್ತ ಸಹೋದರಿಗಳಲ್ಲಿ ಇದ್ದ ಮನಸ್ತಾಪವನ್ನು ಕುರಿತದ್ದು 2 ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರ್ರಿಯೆಂದು ಯುವೊದ್ಯಳನ್ನೂ ಸಂತುಕೆಯನ್ನೂ ಪ್ರಬೋಧಿಸುತ್ತೇನೆ. 3 ಸತ್ಯ ಸಯುಜನೇ, ಅವರಿಗೆ ಸಹಾಯಕನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕ್ಲೇಮೆನ್ಸ್ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಕೂಡ ಸುವಾರ್ತೆಗೋಸ್ಕರ ಪ್ರಯಾಸಪಟ್ಟವರು. ಅವರವರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಬರೆದವೆ. ಕ್ರೈಸ್ತರಲ್ಲಿ ತೋರತಕ್ಕ ಸದ್ಗುಣಗಳು 4 ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ. 5 ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ; ಕರ್ತನು ಹತ್ತಿರವಾಗಿದ್ದಾನೆ. 6 ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. 7 ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು. 8 ಕಡೇ ಮಾತೇನಂದರೆ, ಸಹೋದರರೇ, ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ. 9 ನೀವು ಯಾವದನ್ನು ನನ್ನಿಂದ ಕಲಿತು ಹೊಂದಿದಿರೋ ಮತ್ತು ಯಾವದನ್ನು ನನ್ನಲ್ಲಿ ಕೇಳಿ ಕಂಡಿರೋ ಅದನ್ನೇ ಮಾಡುತ್ತಾ ಬನ್ನಿರಿ. ಹೀಗೆ ಮಾಡಿದರೆ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು. ಫಿಲಿಪ್ಪಿ ಸಭೆಯವರು ಪೌಲನಿಗೆ ತೋರಿಸಿದ ಔದಾರ್ಯವನ್ನು ಕುರಿತದ್ದು 10 ನನ್ನ ವಿಷಯವಾದ ನಿಮ್ಮ ಯೋಚನೆಯೆಂಬ ಬಳ್ಳಿಯು ಇಷ್ಟು ದಿವಸಗಳಾದ ಮೇಲೆ ಪುನಃ ಚಿಗುರಿದ್ದಕ್ಕೆ ನಾನು ಕರ್ತನ ನಿವಿುತ್ತ ಬಹಳವಾಗಿ ಸಂತೋಷಪಡುತ್ತೇನೆ. ಇಂಥ ಯೋಚನೆ ನಿಮ್ಮಲ್ಲಿ ನಿಜವಾಗಿ ಇರುತ್ತಿದ್ದರೂ ಇದುವರೆಗೆ ಅದರ ಪ್ರಕಾರ ಮಾಡುವದಕ್ಕೆ ಸಂದರ್ಭ ಸಿಕ್ಕಲಿಲ್ಲವೇನೋ. 11 ಕೊರತೆಯಲ್ಲಿದ್ದೇನೆಂದು ಸೂಚಿಸುವದಕ್ಕೆ ನಾನು ಇದನ್ನು ಹೇಳುವದಿಲ್ಲ; ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತುಕೊಂಡಿದ್ದೇನೆ. 12 ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು. ನಾನು ತೃಪ್ತನಾಗಿದ್ದರೂ ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ, ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದದೆ. 13 ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ. 14 ಹೀಗಿದ್ದರೂ ನೀವು ನನ್ನ ಸಂಕಟದಲ್ಲಿ ಪಾಲುಗಾರರಾಗಿದ್ದದ್ದು ಒಳ್ಳೇದಾಯಿತು. 15 ಇದಲ್ಲದೆ ಫಿಲಿಪ್ಪಿಯವರೇ, ನಾನು ಮೊದಲು ನಿಮ್ಮಲ್ಲಿ ಸುವಾರ್ತೆಯನ್ನು ಸಾರಿ ಮಕೆದೋನ್ಯದಿಂದ ಹೊರಟು ಹೋದಾಗ ಕೊಡುವ ಕೊಳ್ಳುವ ವಿಷಯದಲ್ಲಿ ನಿಮ್ಮ ಹೊರತು ಬೇರೆ ಯಾವ ಸಭೆಗೂ ನನಗೂ ಸಂಬಂಧವಿರಲಿಲ್ಲವೆಂದು ನೀವೂ ಬಲ್ಲಿರಿ. 16 ನಾನು ಥೆಸಲೋನಿಕದಲ್ಲಿದ್ದಾಗಲೂ ನೀವು ಒಂದೆರಡು ಸಾರಿ ನನ್ನ ಕೊರತೆಯನ್ನು ನೀಗಿಸುವದಕ್ಕೆ ಕೊಟ್ಟುಕಳುಹಿಸಿದಿರಲ್ಲಾ. 17 ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವದಿಲ್ಲ; ನಿಮ್ಮ ಆತ್ಮಕ್ಕೆ ಆದಾಯವಾಗುವಂಥ ಪ್ರೀತಿಫಲವನ್ನೇ ಅಪೇಕ್ಷಿಸುತ್ತೇನೆ. ಬೇಕಾದದ್ದೆಲ್ಲಾ ನನಗುಂಟು, ಸಮೃದ್ಧಿಯಾಯಿತು. 18 ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ ಮೆಚ್ಚಿಕೆಯಾದದ್ದು, ಸುಗಂಧವಾಸನೆಯೇ, ಇಷ್ಟ ಯಜ್ಞವೇ. 19 ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು. 20 ನಮ್ಮ ತಂದೆಯಾದ ದೇವರಿಗೆ ಯುಗಯುಗಾಂತರಗಳಲ್ಲಿಯೂ ಪ್ರಭಾವ. ಆಮೆನ್. ವಂದನೆಗಳು 21 ದೇವಜನರಲ್ಲಿ ಪ್ರತಿಯೊಬ್ಬನಿಗೆ ಜೊತೆ ಕ್ರೈಸ್ತನಿಗೆಂದು ನನ್ನ ವಂದನೆಯನ್ನು ಹೇಳಿರಿ. ನನ್ನ ಜೊತೆಯಲ್ಲಿರುವ ಸಹೋದರರು ನಿಮ್ಮನ್ನು ವಂದಿಸುತ್ತಾರೆ. 22 ಇಲ್ಲಿರುವ ದೇವಜನರು ನಿಮ್ಮನ್ನು ವಂದಿಸುತ್ತಾರೆ. ಚಕ್ರವರ್ತಿಯ ಅರಮನೆಗೆ ಸೇರಿದವರು ವಿಶೇಷವಾದ ವಂದನೆಗಳನ್ನು ಹೇಳುತ್ತಾರೆ. 23 ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗೆ ಇರಲಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India