Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಫಿಲಿಪ್ಪಿಯವರಿಗೆ 3 - ಕನ್ನಡ ಸತ್ಯವೇದವು J.V. (BSI)


ಸುಳ್ಳುಬೋಧಕರ ವಿಷಯದಲ್ಲಿ ಎಚ್ಚರಿಕೆಯಾಗಿರಬೇಕೆಂದು ಪೌಲನು ಬೋಧಿಸಿ ತನ್ನ ಅನುಭವವನ್ನೂ ಗುರಿಯನ್ನೂ ದೃಷ್ಟಾಂತವಾಗಿ ತಿಳಿಸಿದ್ದು

1 ಕಡೇ ಮಾತೇನಂದರೆ ನನ್ನ ಸಹೋದರರೇ, ಕರ್ತನಲ್ಲಿ ಸಂತೋಷಪಡಿರಿ. ಮೊದಲು ತಿಳಿಸಿದ ಮಾತುಗಳನ್ನು ತಿರಿಗಿ ನಿಮಗೆ ಬರೆಯುವದರಲ್ಲಿ ನನಗೇನೂ ಬೇಸರವಿಲ್ಲ; ನಿಮ್ಮನ್ನಾದರೋ ಅದು ದೃಢಮಾಡುವದು.

2 ಆ ನಾಯಿಗಳಿಗೆ ಎಚ್ಚರಿಕೆಯಾಗಿರಿ; ದುರ್ಮನಸ್ಸಿನಿಂದ ಕೆಲಸಮಾಡುವವರಿಗೆ ಎಚ್ಚರಿಕೆಯಾಗಿರಿ. ಸುನ್ನತಿಯೆಂದು ಹೇಳಿಕೊಂಡು ಅಂಗಚ್ಫೇದನ ಮಾಡುವವರಿಗೆ ಎಚ್ಚರಿಕೆಯಾಗಿರಿ.

3 ನಿಜವಾದ ಸುನ್ನತಿಯವರು ಯಾರಂದರೆ - ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ ಕ್ರಿಸ್ತ ಯೇಸುವಿನಲ್ಲಿ ಹರ್ಷಗೊಳ್ಳುವವರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಲ್ಲದವರೂ ಆಗಿರುವ ನಾವೇ.

4 ನಾನಾದರೋ ಶರೀರಸಂಬಂಧವಾದವುಗಳಲ್ಲಿಯೂ ಭರವಸವಿಟ್ಟರೂ ಇಡಬಹುದು. ಬೇರೆ ಯಾವನಾದರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಡಬಹುದೆಂದು ಯೋಚಿಸುವದಾದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು.

5 ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು; ನಾನು ಇಸ್ರಾಯೇಲ್ ವಂಶದವನು, ಬೆನ್ಯಾಮೀನನ ಕುಲದವನು, ಇಬ್ರಿಯರಿಂದ ಹುಟ್ಟಿದ ಇಬ್ರಿಯನು; ನೇಮನಿಷ್ಠೆಗಳನ್ನು ನೋಡಿದರೆ ನಾನು ಫರಿಸಾಯನು,

6 ಮತಾಸಕ್ತಿಯನ್ನು ನೋಡಿದರೆ ನಾನು ಕ್ರೈಸ್ತಸಭೆಯ ಹಿಂಸಕನು, ಧರ್ಮಶಾಸ್ತ್ರದಲ್ಲಿ ಹೇಳಿರುವ ನೀತಿಯನ್ನು ನೋಡಿದರೆ ನಾನು ನಿರ್ದೋಷಿ.

7 ಆದರೆ ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿವಿುತ್ತ ನಷ್ಟವೆಂದೆಣಿಸಿದ್ದೇನೆ.

8 ಇಷ್ಟೇ ಅಲ್ಲದೇ, ನನ್ನ ಕರ್ತನಾದ ಕ್ರಿಸ್ತ ಯೇಸುವನ್ನರಿಯುವದೇ ಅತಿಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿವಿುತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.

9 ಇದರಲ್ಲಿ ನನ್ನ ಉದ್ದೇಶವೇನಂದರೆ - ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು ನೇಮನಿಷ್ಠೆಗಳ ಫಲವಾಗಿರುವ ಸ್ವನೀತಿಯನ್ನಾಶ್ರಯಿಸದೆ ಕ್ರಿಸ್ತನನ್ನು ನಂಬುವದರಿಂದ ದೊರಕುವಂಥ ಅಂದರೆ ಕ್ರಿಸ್ತನ ಮೇಲಣ ನಂಬಿಕೆಯ ಆಧಾರದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ಕ್ರಿಸ್ತನಲ್ಲಿರುವವನಾಗಿ ಕಾಣಿಸಿಕೊಳ್ಳಬೇಕೆಂಬದೇ.

10 ಆತನನ್ನೂ ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ ಆತನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳುಕೊಂಡು ಆತನ ಮರಣದ ವಿಷಯದಲ್ಲಿ ಆತನಿಗೆ ಸರೂಪನಾಗಬೇಕೆಂಬದೇ ನನ್ನ ಕುತೂಹಲವಾಗಿದೆ.

11 ಹೀಗಾದರೆ ಸತ್ತವರಲ್ಲಿ ಕೆಲವರಿಗೆ ಆಗುವ ಪುನರುತ್ಥಾನವು ನನಗೆ ಒದಗಿ ಬಂದೀತು.

12 ಇಷ್ಟರೊಳಗೆ ನಾನು ಬಿರುದನ್ನು ಪಡಕೊಂಡು ಸಿದ್ಧಿಗೆ ಬಂದವನೆಂದು ಹೇಳುವದಿಲ್ಲ; ನಾನು ಯಾವದನ್ನು ಹೊಂದುವದಕ್ಕಾಗಿ ಕ್ರಿಸ್ತ ಯೇಸು ನನ್ನನ್ನು ಹಿಡಿದುಕೊಂಡನೋ ಅದನ್ನು ಹಿಡಿದುಕೊಳ್ಳುವದಕ್ಕೋಸ್ಕರ ಓಡುತ್ತಾ ಇದ್ದೇನೆ.

13 ಸಹೋದರರೇ, ನಾನಂತೂ ಹಿಡಿದುಕೊಂಡವನೆಂದು ನನ್ನನ್ನು ಈವರೆಗೂ ಎಣಿಸಿಕೊಳ್ಳುವದಿಲ್ಲ; ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆ ಬೊಗ್ಗಿದವನಾಗಿ

14 ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.

15 ನಮ್ಮಲ್ಲಿ ಪ್ರವೀಣರಾದವರು ಇದೇ ಅಭಿಪ್ರಾಯವುಳ್ಳವರಾಗಿರೋಣ. ಯಾವದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನೂ ದೇವರು ನಿಮಗೆ ತೋರಿಸಿಕೊಡುವನು.

16 ಆದರೆ ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ.

17 ಸಹೋದರರೇ, ನೀವೆಲ್ಲರು ನನ್ನನ್ನು ಅನುಸರಿಸುವವರಾಗಿರಿ; ಮತ್ತು ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ.

18 ಯಾಕಂದರೆ ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ; ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ.

19 ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, ನಾಚಿಕೆ ಕೆಲಸಗಳಲ್ಲಿಯೇ ಅವರ ಗೌರವವು, ಅವರು ಪ್ರಪಂಚದ ಕಾರ್ಯಗಳ ಮೇಲೆ ಮನಸ್ಸಿಡುವವರು. ನಾವಾದರೋ ಪರಲೋಕಸಂಸ್ಥಾನದವರು;

20 ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವದನ್ನು ಎದುರುನೋಡುತ್ತಾ ಇದ್ದೇವೆ.

21 ಆತನು ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ ಪರಾಕ್ರಮವನ್ನು ಸಾಧಿಸಿ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸಿ ಪ್ರಭಾವವುಳ್ಳ ತನ್ನ ದೇಹದ ಸಾರೂಪ್ಯವಾಗುವಂತೆ ಮಾಡುವನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು