ಪ್ರಸಂಗಿ 9 - ಕನ್ನಡ ಸತ್ಯವೇದವು J.V. (BSI)1 ಏಕೆಂದರೆ ಧರ್ಮಿಗಳೂ ಜ್ಞಾನಿಗಳೂ ಅವರ ಕೃತ್ಯಗಳೂ ದೇವರ ಕೈಯಲ್ಲುಂಟು; ತಾವು ಪ್ರೀತಿಗೆ ಗುರಿಯೋ ದ್ವೇಷಕ್ಕೆ ಗುರಿಯೋ ಮನುಷ್ಯರಿಗೆ ಗೊತ್ತಿಲ್ಲ. ಅವರ ಮುಂದೆ ಸಮಸ್ತವೂ ಕಾದಿದೆ ಎಂಬೀ ವಿಷಯಗಳನ್ನೆಲ್ಲಾ ವಿಚಾರಿಸಬೇಕೆಂದು ಮನಸ್ಸಿಗೆ ತೆಗೆದುಕೊಂಡೆನು. 2 ಎಲ್ಲವೂ ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವದು; ಶಿಷ್ಟನಿಗೂ ದುಷ್ಟನಿಗೂ ಒಳ್ಳೆಯವನಿಗೂ ಶುದ್ಧನಿಗೂ ಅಶುದ್ಧನಿಗೂ ಯಜ್ಞಮಾಡುವವನಿಗೂ ಮಾಡದವನಿಗೂ ಒಂದೇ ಗತಿ; ನಿರ್ದೋಷಿಯಂತೆ ದೋಷಿಯಿರುವನು; ಆಣೆಯಿಡುವವನ ಹಾಗೆ ಆಣೆಗೆ ಅಂಜುವವನು ಇರುವನು. 3 ಎಲ್ಲರಿಗೂ ಒಂದೇ ಗತಿಯೆಂಬ ಸಂಕಟವು ಲೋಕವ್ಯವಹಾರದಲ್ಲೆಲ್ಲಾ ಸೇರಿಕೊಂಡಿದೆ; ಇದಲ್ಲದೆ ನರವಂಶದವರ ಎದೆಯಲ್ಲಿ ಕೆಟ್ಟತನವು ತುಂಬಿದೆ; ಅವರು ಬದುಕಿರುವ ತನಕ ಮರುಳುತನವು ಅವರ ಮನಸ್ಸನ್ನು ಹಿಡಿದಿರುವದು. ಆಮೇಲೆ ಪ್ರೇತಲೋಕವೇ ಗತಿ. 4 ಜೀವಿತರ ಗುಂಪಿನಲ್ಲಿ ಸೇರಿದವನಿಗೆ ನಿರೀಕ್ಷೆಯುಂಟು; 5 ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಲೇಸು. ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ, ಅವರ ಜ್ಞಾಪಕವೇ ಹೋಯಿತಲ್ಲವೆ. 6 ಅವರು ಸತ್ತಾಗಲೇ ಅವರ ಪ್ರೀತಿಯೂ ಹಗೆಯೂ ಹೊಟ್ಟೇಕಿಚ್ಚೂ ಅಳಿದುಹೋದವು; ಲೋಕದೊಳಗೆ ನಡೆಯುವ ಯಾವ ಕೆಲಸದಲ್ಲಿಯೂ ಅವರಿಗೆ ಇನ್ನೆಂದಿಗೂ ಪಾಲೇ ಇಲ್ಲ. 7 ಹೋಗು, ನಿನ್ನ ಅನ್ನವನ್ನು ಸಂತೋಷದಿಂದ ಉಣ್ಣು; ನಿನ್ನ ದ್ರಾಕ್ಷಾರಸವನ್ನು ಒಳ್ಳೆಯ ಮನಸ್ಸಿನಿಂದ ಕುಡಿ; ದೇವರು ನಿನ್ನ ನಡತೆಗೆ ಈಗ ಮೆಚ್ಚಿದನಷ್ಟೆ. 8 ನಿನ್ನ ಬಟ್ಟೆಗಳು ಬೆಳ್ಳಗಿರಲಿ; ತಲೆಗೆ ತೈಲದ ಕೊರತೆ ಇಲ್ಲದಿರಲಿ. 9 ಲೋಕದೊಳಗೆ ದೇವರು ನಿನಗೆ ನೇವಿುಸಿರುವ ವ್ಯರ್ಥ ಜೀವಮಾನದ ವ್ಯರ್ಥ ದಿನಗಳಲ್ಲೆಲ್ಲಾ ನಿನ್ನ ಪ್ರಿಯಪತ್ನಿಯೊಡನೆಯ ಸುಖದಿಂದ ಬದುಕು; ನಿನ್ನ ಬಾಳಿನಲ್ಲಿಯೂ ನೀನು ಲೋಕದೊಳಗೆ ಪಡುವ ಪ್ರಯಾಸದಲ್ಲಿಯೂ ಇದೇ ನಿನಗೆ ಬಂದ ಪಾಲು. 10 ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು; ನೀನು ಸೇರಬೇಕಾದ ಪಾತಾಳದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ. 11 ನಾನು ಲೋಕದಲ್ಲಿ ತಿರಿಗಿ ದೃಷ್ಟಿಸಲು ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ, ಬಲಿಷ್ಠರಿಗೆ ಯುದ್ಧದಲ್ಲಿ ಜಯವಾಗದು, ಜ್ಞಾನಿಗಳಿಗೆ ಅನ್ನ ಸಿಕ್ಕದು, ವಿವೇಕಿಗಳಿಗೆ ಧನ ಲಭಿಸದು, ಪ್ರವೀಣರಿಗೆ ದಯೆ ದೊರೆಯದು; ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ ಎಂದು ತಿಳಿದುಕೊಂಡೆನು. 12 ಮನುಷ್ಯನೋ ತನ್ನ ಕಾಲಗತಿಯನ್ನು ತಿಳಿಯನಷ್ಟೆ; ಮೀನುಗಳು ಕೆಟ್ಟ ಬಲೆಗೂ ಪಕ್ಷಿಗಳು ಜಾಲಕ್ಕೂ ಸಿಕ್ಕಿಬೀಳುವ ಹಾಗೆ ನರಜನ್ಮದವರು ತಮ್ಮ ಮೇಲೆ ತಟ್ಟನೆ ಬೀಳುವ ಕೆಟ್ಟ ಕಾಲಪಾಶಕ್ಕೆ ಸಿಕ್ಕಿಕೊಳ್ಳುವರು. 13 ನಾನು ಲೋಕದಲ್ಲಿ ಜ್ಞಾನವನ್ನು ಈ ವಿಧವಾಗಿಯೂ ಕಂಡುಕೊಂಡೆನು; ಅದು ದೊಡ್ಡದೆಂದು ತೋಚಿತು; 14 ಇಗೋ, ಒಂದು ಚಿಕ್ಕ ಪಟ್ಟಣ, ಅದರಲ್ಲಿ ಕೊಂಚ ಜನರೇ ಇದ್ದರು; ಒಬ್ಬ ದೊಡ್ಡ ಅರಸು ಅದಕ್ಕೆ ವಿರುದ್ಧವಾಗಿ ಬಂದು ಮುತ್ತಿಗೆಹಾಕಿ ಅಲ್ಲಿ ದೊಡ್ಡ ದಿಬ್ಬಗಳನ್ನು ಹಾಕಿದನು. 15 ಆಗ ಅಲ್ಲಿದ್ದವರು ತಮ್ಮಲ್ಲಿ ಒಬ್ಬ ಬಡ ಜ್ಞಾನಿಯನ್ನು ಕಂಡುಕೊಂಡರು. ಅವನು ತನ್ನ ಜ್ಞಾನದಿಂದಲೇ ಆ ಪಟ್ಟಣವನ್ನು ರಕ್ಷಿಸಿದನು; ಆದರೆ ಆ ಬಡ ಜ್ಞಾನಿಯನ್ನು ಯಾರೂ ಸ್ಮರಿಸಲಿಲ್ಲ. 16 ನಾನು ಇದನ್ನು ನೋಡಿ, ಬಲಕ್ಕಿಂತ ಜ್ಞಾನವೇ ಶ್ರೇಷ್ಠ; ಆದರೆ ಜನರು ಬಡವನ ಜ್ಞಾನವನ್ನು ತಾತ್ಸಾರಮಾಡಿ ಅವನ ಮಾತುಗಳನ್ನು ಗಮನಿಸರು ಅಂದುಕೊಂಡೆನು. 17 ಹುಚ್ಚರೊಡೆಯನ ಕೂಗಿಗಿಂತ ಜ್ಞಾನಿಯ ಮೆಲ್ಲನೆಯ ಮಾತುಗಳು ಕಿವಿಗೆ ಅಂಟುತ್ತವೆ. 18 ಯುದ್ಧಾಯುಧಗಳಿಗಿಂತ ಜ್ಞಾನವೇ ಉತ್ತಮ; ಒಬ್ಬ ಪಾಪಿಯು ಬಹು ಶುಭವನ್ನು ಹಾಳುಮಾಡುವನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India