Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಸಂಗಿ 8 - ಕನ್ನಡ ಸತ್ಯವೇದವು J.V. (BSI)

1 ಜ್ಞಾನಿಯ ಹಾಗಿರುವವನು ಯಾರು? ವಿಷಯವನ್ನು ವಿವರಿಸಬಲ್ಲವರು ಯಾರು? ಜ್ಞಾನದಿಂದ ಒಬ್ಬನ ಮುಖವು ಪ್ರಕಾಶಗೊಳ್ಳುವದು.

2 ಒರಟು ಮೋರೆಯು ಮಾರ್ಪಡುವದು. ದೇವರ ಮೇಲೆ ಇಟ್ಟ ಆಣೆಯ ನಿವಿುತ್ತ ರಾಜನ ಆಜ್ಞೆಯನ್ನು ಕೈಕೊಳ್ಳಬೇಕೆಂಬದು ನನ್ನ ಬೋಧೆ.

3 ರಾಜಸನ್ನಿಧಿಯಿಂದ ತೊಲಗಿಬಿಡಲು ಆತುರಪಡಬೇಡ; ದ್ರೋಹಕ್ಕೆ ಸೇರದಿರು; ಅವನು ಇಷ್ಟಬಂದಂತೆ ಮಾಡಬಲ್ಲನಲ್ಲವೆ.

4 ರಾಜನ ಮಾತಿಗೆ ಅಧಿಕಾರವುಂಟು; ಏನು ಮಾಡುತ್ತೀ ಎಂದು ಅವನನ್ನು ಯಾರು ತಾನೇ ಕೇಳಬಹುದು?

5 ಆಜ್ಞೆಯನ್ನು ಕೈಕೊಳ್ಳುವವನು ಕೇಡನ್ನು ಅನುಭವಿಸನು; ಕಾಲವೂ ನ್ಯಾಯತೀರ್ಪೂ ಉಂಟೆಂಬದು ಜ್ಞಾನಿಯ ಬುದ್ಧಿಗೆ ಗೊತ್ತು;

6 ಪ್ರತಿಯೊಂದು ಕಾರ್ಯಕ್ಕೆ ಕಾಲವೂ ನ್ಯಾಯತೀರ್ಪೂ ಇರುವವಲ್ಲವೆ; ಮನುಷ್ಯನು ಪಡುವ ಕಷ್ಟವು ಅವನಿಗೆ ಘೋರವಾಗಿದೆ.

7 ಏಕಂದರೆ ಮುಂದೆ ಆಗುವದು ಅವನಿಗೆ ಗೊತ್ತಿಲ್ಲ; ಅದು ಹೇಗೆ ಆಗುವದೋ ಅವನಿಗೆ ವಿವರಿಸಬಲ್ಲವರು ಯಾರು?

8 ಗಾಳಿಯನ್ನು ತಡೆಯುವ ಶಕ್ತಿಯು ಹೇಗೆ ಯಾರಿಗೂ ಇಲ್ಲವೋ ಹಾಗೆ ತಮ್ಮ ಮರಣದಿನವನ್ನು ತಡೆಯುವ ಶಕ್ತಿಯು ಯಾರಿಗೂ ಇಲ್ಲ; ಯುದ್ಧಕಾಲದಲ್ಲಿ ಹೇಗೆ ವಿರಾಮ ದೊರೆಯುವದಿಲ್ಲವೋ ಹಾಗೆ ಅಧರ್ಮಕ್ಕೊಳಪಟ್ಟವನಿಗೆ ಬಿಡುಗಡೆಯಿಲ್ಲ.

9 ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರ ನಡಿಸಿ ಅವನಿಗೆ ಹಾನಿಯನ್ನುಂಟುಮಾಡುವ ಈ ಕಾಲದಲ್ಲಿ ಇದನ್ನೆಲ್ಲಾ ನೋಡಿ ಲೋಕದೊಳಗೆ ನಡೆಯುವ ಸಕಲ ಕಾರ್ಯಗಳನ್ನೂ ಪರಿಶೀಲಿಸಿದ್ದೇನೆ.

10 ಇದಲ್ಲದೆ ದುಷ್ಟರಿಗೆ ಸಮಾಧಿಯಾಗುವದನ್ನು ಕಂಡೆನು, ಅವರು [ಸುಖವಾಗಿ] ಗತಿಸಿದರು; ಧಾರ್ಮಿಕರೋ ಪರಿಶುದ್ಧಸ್ಥಾನದಿಂದ ತೊಲಗಬೇಕಾಯಿತು, ಪಟ್ಟಣದಲ್ಲಿ ಅವರ ಜ್ಞಾಪಕವೇ ಇಲ್ಲವಾಯಿತು; ಇದೂ ವ್ಯರ್ಥ.

11 ಅಪರಾಧಕ್ಕೆ ವಿಧಿಸಿದ ದಂಡನೆಯು ಕೂಡಲೆ ನಡೆಯದಿರುವ ಕಾರಣ ಅಪರಾಧಮಾಡಬೇಕೆಂಬ ಯೋಚನೆಯು ನರಜನ್ಮದವರ ಹೃದಯದಲ್ಲಿ ತುಂಬಿ ತುಳುಕುವದು.

12 ಪಾಪಿಯು ನೂರು ಸಲ ಅಧರ್ಮಮಾಡಿ ಬಹುಕಾಲ ಬದುಕಿದರೂ ದೇವರ ಮುಂದೆ ಹೆದರಿ ಆತನಲ್ಲಿ ಭಯಭಕ್ತಿಯುಳ್ಳವರಿಗೆ ಮೇಲೇ ಆಗುವದೆಂದು ಬಲ್ಲೆನು.

13 ಆದರೆ ದುಷ್ಟನಿಗೆ ಮೇಲಾಗದು, ನೆರಳಿನಂತಿರುವ ಅವನ ದಿನಗಳು ಹೆಚ್ಚುವದಿಲ್ಲ; ಅವನು ದೇವರಿಗೆ ಹೆದರುವವನಲ್ಲವಷ್ಟೆ.

14 ಲೋಕದಲ್ಲಿ ನಡೆಯುವ ವ್ಯರ್ಥಕಾರ್ಯವೊಂದುಂಟು; ದುಷ್ಟರ ನಡತೆಗೆ ತಕ್ಕ ಗತಿಯು ಶಿಷ್ಟರಿಗೆ ಆಗುವದು, ಶಿಷ್ಟರ ನಡತೆಗೆ ತಕ್ಕ ಗತಿಯು ದುಷ್ಟರಿಗೆ ಆಗುವದು; ಇದೂ ವ್ಯರ್ಥವೆಂದು ನಾನು ಹೇಳಿದೆನು.

15 ಮತ್ತು ಮನುಷ್ಯನು ಅನ್ನಪಾನಗಳನ್ನು ತೆಗೆದುಕೊಂಡು ಸಂತೋಷಪಡುವದಕ್ಕಿಂತ ಅವನಿಗೆ ಲೋಕದಲ್ಲಿ ಇನ್ನಾವ ಮೇಲೂ ಇಲ್ಲವೆಂದು ಸಂತೋಷವನ್ನೇ ಸ್ತುತಿಸಿದೆನು; ದೇವರು ಅವನಿಗೆ ಲೋಕದಲ್ಲಿ ಅನುಗ್ರಹಿಸುವ ದಿನಗಳಲ್ಲೆಲ್ಲಾ ಅವನು ಪಡುವ ಪ್ರಯಾಸದಲ್ಲಿ ಸಂತೋಷವೇ ಸೇರಿರುವದು.

16 ರಾತ್ರಿ ಹಗಲು ಮನುಷ್ಯರ ಕಣ್ಣುಗಳಿಗೆ ನಿದ್ರೆ ಹತ್ತಗೊಡದ ಲೋಕದ ಶ್ರಮೆಯನ್ನು ನೋಡಲೂ ಜ್ಞಾನವನ್ನು ಪಡೆಯಲೂ ನಾನು ಮನಸ್ಸಿಟ್ಟಾಗ

17 ಲೋಕದಲ್ಲಿ ನಡೆಯುವದನ್ನು ಮನುಷ್ಯನು ಗ್ರಹಿಸಲಾರನು, ಎಷ್ಟು ಪ್ರಯಾಸಪಟ್ಟು ವಿಚಾರಿಸಿದರೂ ಗ್ರಹಿಸಲಾರನು; ಹೌದು, ಜ್ಞಾನಿಯು ಗ್ರಹಿಸಬಹುದೆಂದರೂ ಗ್ರಹಿಸಲಾರನು ಎಂಬದಾಗಿ ನಾನು ದೇವರ ಕೆಲಸವನ್ನೆಲ್ಲಾ ದೃಷ್ಟಿಸಿ ತಿಳಿದುಕೊಂಡೆನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು