ಪ್ರಸಂಗಿ 7 - ಕನ್ನಡ ಸತ್ಯವೇದವು J.V. (BSI)1 ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; 2 ಜನನ ದಿನಕ್ಕಿಂತ ಮರಣ ದಿನ ಮೇಲು. ಔತಣದ ಮನೆಗಿಂತ ಮರಣದುಃಖದ ಮನೆಗೆ ಹೋಗುವದು ಲೇಸು; ಎಲ್ಲಾ ಮನುಷ್ಯರಿಗೂ ಕೊನೆಗೆ ಇದೇ ಗತಿ; ಜೀವಂತನು ಇದನ್ನು ನೋಡಿ ಸ್ಮರಿಸಿಕೊಳ್ಳುವನು. 3 ನಗೆಗಿಂತ ಕರಕರೆಯು ವಾಸಿ; ಮುಖವು ಸಪ್ಪೆಗಿರುವಲ್ಲಿ ಹೃದಯಕ್ಕೆ ಮೇಲು. 4 ದುಃಖದ ಮನೆಯು ಜ್ಞಾನಿಗಳ ಮನಸ್ಸಿಗೆ ನೆಲೆ; ಉಲ್ಲಾಸದ ಮನೆಯು ಮೂಢರ ಮನಸ್ಸಿಗೆ ನಿವಾಸ. 5 ಅಜ್ಞಾನಿಗಳ ಗಾನಕ್ಕಿಂತ ಜ್ಞಾನಿಗಳ ಗದರಿಕೆಯನ್ನು ಕೇಳುವದು ಲೇಸು. 6 ಮೂಢರ ನಗುವಾಟವು ಹಂಡೆಯ ಕೆಳಗೆ ಉರಿಯುವ ಮುಳ್ಳಿನ ಚಟಪಟ ಶಬ್ದದ ಹಾಗೆ. ಇದೂ ವ್ಯರ್ಥ. 7 ಕಸುಕೊಳ್ಳುವದು ಜ್ಞಾನಿಗೆ ಬುದ್ಧಿಗೇಡು; ಲಂಚವು ವಿವೇಕನಾಶಕ. 8 ಆದಿಗಿಂತ ಅಂತ್ಯವು ಲೇಸು; ಹಮ್ಮುಗಾರನಿಗಿಂತ ತಾಳ್ಮೆಯುಳ್ಳವನು ಉತ್ತಮ. 9 ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ. 10 ಹಿಂದಿನ ಕಾಲವು ಈ ಕಾಲಕ್ಕಿಂತ ಮೇಲಾದದ್ದಕ್ಕೆ ಕಾರಣವೇನು ಅನ್ನಬೇಡ; ನೀನು ಈ ವಿಷಯದಲ್ಲಿ ವಿಚಾರಿಸುವದು ಜ್ಞಾನಕಾರ್ಯವಲ್ಲ. 11 ಜ್ಞಾನವು ಸ್ವಾಸ್ತ್ಯದಂತೆ ಪ್ರಯೋಜನಕರ; ಹೌದು, ಸ್ವಾಸ್ತ್ಯಕ್ಕಿಂತ ಜೀವಿತರಿಗೆ ಉತ್ತಮೋತ್ತಮವಾಗಿದೆ. 12 ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ; ಜ್ಞಾನಕ್ಕೆ ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ. 13 ದೇವರ ಕಾರ್ಯವನ್ನು ನೋಡು; ಆತನು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡುವದಕ್ಕೆ ಯಾರಿಂದಾದೀತು? 14 ಸುಖದ ದಿನದಲ್ಲಿ ಸುಖದಿಂದಿರು; ದುಃಖದ ದಿನದಲ್ಲಿ ಯೋಚಿಸು; ಮನುಷ್ಯನು ತನ್ನ ಕಾಲವಾದ ಮೇಲೆ ಸಂಭವಿಸುವ ಯಾವದನ್ನೂ ಗ್ರಹಿಸಲಾರದಂತೆ ದೇವರು ಇವುಗಳನ್ನು ದ್ವಂದ್ವ ಮಾಡಿದ್ದಾನೆ. 15 ಧರ್ಮಿಯು ತನ್ನ ಧರ್ಮದಲ್ಲಿಯೇ ನಶಿಸುವದುಂಟು; ಅಧರ್ಮಿಯು ತನ್ನ ಅಧರ್ಮದಲ್ಲಿಯೇ ಬಹು ದಿನ ಬದುಕುವದುಂಟು; ಇದನ್ನೆಲ್ಲಾ ನನ್ನ ವ್ಯರ್ಥವಾದ ಜೀವಮಾನದಲ್ಲಿ ನೋಡಿದ್ದೇನೆ. 16 ಧರ್ಮವನ್ನು ಅತಿಯಾಗಿ ಆಚರಿಸದಿರು; ಜ್ಞಾನವನ್ನು ಅಧಿಕವಾಗಿ ಆರ್ಜಿಸಬೇಡ; ನಿನ್ನನ್ನು ನೀನೇ ನಾಶನಕ್ಕೆ ಏಕೆ ಗುರಿಮಾಡಿಕೊಳ್ಳುವಿ? 17 ಅಧರ್ಮವನ್ನು ಹೆಚ್ಚಾಗಿ ಆಚರಿಸದಿರು; ಬುದ್ಧಿಹೀನನಾಗಿರಬೇಡ; ಏಕೆ ಅಕಾಲ ಮರಣವನ್ನು ಹೊಂದುವಿ? 18 ನೀನು ಇದನ್ನು ಹಿಡಿದುಕೊಳ್ಳುವದು ಒಳ್ಳೇದು; ಅದರಿಂದಲೂ ಕೈದೆಗೆಯಬೇಡ; ದೇವರಲ್ಲಿ ಭಯಭಕ್ತಿಯುಳ್ಳವನು ಇವೆರಡರಿಂದಲೂ ಪಾರಾಗುವನು. 19 ಹತ್ತು ಮಂದಿ ಅಧಿಕಾರಿಗಳಿಂದ ಪಟ್ಟಣಕ್ಕೆ ಉಂಟಾಗುವ ಬಲಕ್ಕಿಂತಲೂ ಜ್ಞಾನದಿಂದ ಜ್ಞಾನಿಗೆ ಉಂಟಾಗುವ ಬಲವು ಹೆಚ್ಚು. 20 ಪಾಪಮಾಡದೆ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷನು ಲೋಕದಲ್ಲಿ ಇಲ್ಲವೇ ಇಲ್ಲ. 21 ಆಡುವ ಮಾತುಗಳನ್ನೆಲ್ಲಾ ಲಕ್ಷ್ಯಕ್ಕೆ ತಾರದಿರು; ನಿನ್ನ ಆಳು ನಿನ್ನನ್ನು ಶಪಿಸುವದು ಕಿವಿಗೆ ಬಿದ್ದೀತು. 22 ನೀನೂ ಅನೇಕ ವೇಳೆ ಇತರರನ್ನು ಶಪಿಸಿದ್ದೀ ಎಂಬದಕ್ಕೆ ನಿನ್ನ ಮನಸ್ಸೇ ಸಾಕ್ಷಿ. 23 ಇದನ್ನೆಲ್ಲಾ ಜ್ಞಾನದಿಂದ ಪರೀಕ್ಷಿಸಿದೆನು; ಜ್ಞಾನಿಯಾಗುವೆನು ಎಂದುಕೊಂಡೆನು; ಅದು ನನಗೆ ದೂರವಾಯಿತು. 24 ತತ್ವವು ಬಹು ದೂರ, ಅಗಾಧವೇ ಅಗಾಧ; ಅದನ್ನು ಯಾರು ಕಂಡುಕೊಂಡಾರು? 25 ನಾನು ತಿರುಗಿಕೊಂಡು ಜ್ಞಾನವನ್ನೂ ಮೂಲತತ್ವವನ್ನೂ ಹುಡುಕಿ ವಿಚಾರಿಸಿ ಗ್ರಹಿಸುವದಕ್ಕೂ ಅಧರ್ಮವು ಮೂಢತನ, ಅಜ್ಞಾನವು ಹುಚ್ಚುತನ ಎಂದು ತಿಳಿದುಕೊಳ್ಳುವದಕ್ಕೂ ಮನಸ್ಸಿಟ್ಟೆನು. 26 ಆಗ ಮರಣಕ್ಕಿಂತ ಹೆಚ್ಚು ವಿಷವೊಂದು ಕಂಡುಬಂತು, ಯಾವದಂದರೆ, ಕೆಟ್ಟ ಹೆಂಗಸೇ. ಅವಳು ಬೋನು, ಅವಳ ಹೃದಯ ಬಲೆ, ಅವಳ ಕೈ ಪಾಶ; ದೇವರು ಒಲಿದವನು ಇವಳಿಂದ ತಪ್ಪಿಸಿಕೊಳ್ಳುವನು; ಪಾಪಿಯೋ ಅವಳ ಕೈಗೆ ಸಿಕ್ಕಿಬೀಳುವನು. 27 ಪ್ರಸಂಗಿಯು ಹೀಗೆ ಹೇಳುತ್ತಾನೆ - ನೋಡು, ನಾನು ತೀರ್ಮಾನವನ್ನು ನಿಶ್ಚಯಿಸಬೇಕೆಂದು ಒಂದೊಂದು ವಿಚಾರಿಸಿ ಒಂದು ವಿಷಯವನ್ನು ಕಂಡೆನು. ಎಷ್ಟು ಹುಡುಕುತ್ತಿದ್ದರೂ ಇದುವರೆಗೆ ಅದು ದೊರೆತಿರಲಿಲ್ಲ. 28 ಸಹಸ್ರ ಪುರುಷರಲ್ಲಿ ಯೋಗ್ಯನೊಬ್ಬನನ್ನು ಕಂಡಿದ್ದರೂ ಕಂಡಿರಬಹುದು; ಸಹಸ್ರ ಸ್ತ್ರೀಯರಲ್ಲಿ ಯೋಗ್ಯಳೊಬ್ಬಳನ್ನೂ ಕಂಡಿಲ್ಲ. 29 ನೋಡು, ದೇವರು ಮನುಷ್ಯರನ್ನು ಸತ್ಯವಂತರನ್ನಾಗಿ ಸೃಷ್ಟಿಸಿದನು, ಅವರಾದರೋ ಬಹು ಯುಕ್ತಿಗಳನ್ನು ಕಲ್ಪಿಸಿಕೊಂಡಿದ್ದಾರೆ; ಇದನ್ನು ಮಾತ್ರ ಕಂಡೆನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India