ಪ್ರಸಂಗಿ 6 - ಕನ್ನಡ ಸತ್ಯವೇದವು J.V. (BSI)1 ಲೋಕದಲ್ಲಿ ಮನುಷ್ಯರಿಗೆ ವಿಪರೀತವಾಗಿ ಉಂಟಾಗಿರುವ ದುರವಸ್ಥೆಯನ್ನು ಕಂಡೆನು; 2 ಏನಂದರೆ ದೇವರು ಒಬ್ಬನಿಗೆ ಯಾವ ಇಷ್ಟಾರ್ಥಕ್ಕೂ ಕೊರತೆಯಿಲ್ಲದಂತೆ ಧನಸಂಪತ್ತನ್ನೂ ಘನತೆಯನ್ನೂ ಅನುಗ್ರಹಿಸುವನು; ಆದರೆ ಅದನ್ನು ಅನುಭವಿಸುವದಕ್ಕೆ ದೇವರು ಅವನನ್ನು ಶಕ್ತಿಗೊಳಿಸುವದಿಲ್ಲ; ಅದನ್ನು ಮತ್ತೊಬ್ಬನು ಅನುಭವಿಸುವನು; ಇದು ಸಹ ವ್ಯರ್ಥವೂ ದೊಡ್ಡ ರೋಗವೂ ಆಗಿದೆ. 3 ನೂರಾರು ಮಕ್ಕಳನ್ನು ಪಡೆದು ಮುಪ್ಪಿನ ಮುದುಕನಾಗುವ ತನಕ ಬಹು ವರುಷ ಬದುಕಿದವನಿಗೆ ಸುಖ ತೃಪ್ತಿಯೂ ಉತ್ತರಕ್ರಿಯೆಯೂ ಇಲ್ಲದಿದ್ದರೆ ಇವನಿಗಿಂತಲೂ ಗರ್ಭಸ್ರಾವದ ಪಿಂಡವೇ ಉತ್ತಮ ಅಂದುಕೊಂಡೆನು. 4 ಅದು ವ್ಯರ್ಥತ್ವದಲ್ಲಿ ಬರುತ್ತದೆ, ಕತ್ತಲಲ್ಲಿ ಹೋಗುತ್ತದೆ, ಅಂಧಕಾರವು ಅದರ ಹೆಸರನ್ನು ಕವಿದಿರುತ್ತದೆ; 5 ಅದು ಸೂರ್ಯನನ್ನು ಕಂಡಿಲ್ಲ, ಅದಕ್ಕೆ ತಿಳುವಳಿಕೆಯೇ ಇಲ್ಲ; ಆದರೂ ಅವನಿಗಿಂತ ಅದರ ಶಾಂತಿಯೇ ಹೆಚ್ಚು. 6 ಸಾವಿರದ ಮೇಲೆ ಸಾವಿರ ವರುಷ ಬದುಕಿಯೂ ಸುಖವನ್ನು ಅನುಭವಿಸದಿದ್ದರೆ [ಏನು ಪ್ರಯೋಜನ?] ಇವೆರಡು ಒಂದೇ ಸ್ಥಳಕ್ಕೆ ಹೋಗುತ್ತವಲ್ಲವೆ. 7 ಮನುಷ್ಯನು ಪಡುವ ಪ್ರಯಾಸವೆಲ್ಲಾ ತನ್ನ ಹೊಟ್ಟೆಗಾಗಿಯೇ, ಆದರೂ ಅವನಿಗೆ ತೃಪ್ತಿಯಿಲ್ಲ. 8 ಜ್ಞಾನಿಯಾಗಲಿ ಜನರ ಮುಂದೆ ಸರಿಯಾಗಿ ನಡೆಯಬಲ್ಲ ಬಡವನಾಗಲಿ ಮೂಢನಿಗಿಂತ ಯಾವ ವಿಷಯದಲ್ಲಿ ಶ್ರೇಷ್ಠ? 9 ಬಗೆಬಗೆಯಾಗಿ ಆಶಿಸುವದಕ್ಕಿಂತ ಕಣ್ಣೆದುರಿಗಿರುವದನ್ನು ಅನುಭವಿಸುವದೇ ಲೇಸು; ಇದು ಕೂಡ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ. 10 ಮನುಷ್ಯನು ಎಂಥವನಾದರೂ ಪೂರ್ವದಲ್ಲಿ ಅವನಿಗೆ ವಿಧಿಸಲ್ಪಟ್ಟ ಹೆಸರಿನಿಂದ ಅವನು ಮಣ್ಣಿನವನೇ ಎಂದು ಗೊತ್ತಾಗಿದೆ. ತನಗಿಂತ ಬಲಿಷ್ಠನ ಸಂಗಡ ಹೋರಾಡಲಾರನು. 11 ನಿರರ್ಥಕವಾದ ಮಾತುಗಳು ಬಹಳ, ಅವುಗಳಿಂದ ಮನುಷ್ಯನಿಗೆ ಏನು ಪ್ರಯೋಜನ? 12 ನೆರಳಿನಂತೆ ವ್ಯರ್ಥವಾಗಿ ಕಳೆದುಹೋಗುವ ಮನುಷ್ಯನ ಜೀವಮಾನದ ದಿನಗಳಲ್ಲೆಲ್ಲಾ ಅವನಿಗೆ ಯಾವದು ಮೇಲೆಂದು ಯಾರಿಗೆ ಗೊತ್ತು? ತಾನು ಕಾಲವಾದ ಮೇಲೆ ಇಹಲೋಕದಲ್ಲಿ ಏನಾಗುವದೆಂದು ಅವನು ಯಾರಿಂದ ತಿಳಿದುಕೊಂಡಾನು? |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India