Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಸಂಗಿ 5 - ಕನ್ನಡ ಸತ್ಯವೇದವು J.V. (BSI)

1 ದೇವಸ್ಥಾನಕ್ಕೆ ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು; ಮೂಢರ ಯಜ್ಞಕ್ಕಿಂತ ಸಾನ್ನಿಧ್ಯಕ್ಕೆ ಬಂದು ಕಿವಿಗೊಡುವದು ಲೇಸು; ತಾವು ಮಾಡುವದು ಅಧರ್ಮವೆಂದು ಮೂಢರಿಗೆ ಗೊತ್ತೇ ಇಲ್ಲ.

2 ಬಾಯಿದುಡುಕಬೇಡ, ದೇವರ ಮುಂದೆ ಮಾತಾಡಲು ನಿನ್ನ ಹೃದಯದಲ್ಲಿ ಆತುರಪಡದಿರು; ದೇವರು ಆಕಾಶದಲ್ಲಿದ್ದಾನಲ್ಲವೆ, ನೀನು ಭೂವಿುಯಲ್ಲಿದ್ದೀ; ಆದಕಾರಣ ನಿನ್ನ ಮಾತುಗಳು ಕೊಂಚವಾಗಿರಲಿ.

3 ಕನಸು ಬಹು ಪ್ರಯಾಸದಿಂದಲೂ ಉಂಟಾಗುತ್ತದೆ, ಮೂಢನ ಧ್ವನಿಯು ಬಹು ಮಾತುಗಳಿಂದಲೂ ಕೂಡಿದ್ದಾಗಿದೆ.

4 ನೀನು ದೇವರಿಗೆ ಹರಕೆಯನ್ನು ಕಟ್ಟಿದರೆ ಅದನ್ನು ತೀರಿಸಲು ತಡಮಾಡಬೇಡ; ಆತನು ಮೂಢರಿಗೆ ಒಲಿಯನು; ನಿನ್ನ ಹರಕೆಯನ್ನು ಒಪ್ಪಿಸು.

5 ನೀನು ಹರಸಿಕೊಂಡು ತೀರಿಸದೆ ಇರುವದಕ್ಕಿಂತ ಹರಕೆ ಮಾಡಿಕೊಳ್ಳದೆ ಇರುವದು ವಾಸಿ.

6 ನಿನ್ನ ಬಾಯಿ ನಿನ್ನನ್ನು ಪಾಪಕ್ಕೆ ಗುರಿಮಾಡದಂತೆ ನೋಡಿಕೋ; ಇದು ಅಜಾಗ್ರತೆಯಿಂದಾಯಿತೆಂದು ದೂತನ ಮುಂದೆ ಹೇಳಬೇಡ; ದೇವರು ನಿನ್ನ ಮಾತಿಗೆ ರೋಷಗೊಂಡು ನಿನ್ನ ಕೈಗೆಲಸವನ್ನು ಏಕೆ ಹಾಳುಮಾಡಬೇಕು?

7 ಬಹಳ ಕನಸುಗಳಿಂದಲೂ ವ್ಯರ್ಥವಿಷಯಗಳಿಂದಲೂ ಹೆಚ್ಚು ಮಾತುಗಳು ಹೊರಡುತ್ತವಷ್ಟೆ; ನೀನಂತು ದೇವರಲ್ಲಿ ಭಯಭಕ್ತಿಯುಳ್ಳವನಾಗಿರು.

8 ಸಂಸ್ಥಾನದಲ್ಲಿ ಬಡವರ ಹಿಂಸೆಯನ್ನೂ ನೀತಿನ್ಯಾಯಗಳ ನಾಶನವನ್ನೂ ನೀನು ನೋಡಿದರೆ ಆಶ್ಚರ್ಯಪಡಬೇಡ; ಉನ್ನತೋನ್ನತನು ಲಕ್ಷ್ಯಕ್ಕೆ ತರುವನು; ಆ ಹಿಂಸಕರಿಗಿಂತ ಮಹೋನ್ನತನು ಇದ್ದಾನಲ್ಲಾ.

9 ಭೂವಿುಯಿಂದ ಸರ್ವಕ್ಕೂ ಲಾಭವಿದೆ. ಹೊಲಗದ್ದೆಗಳಿಂದ ರಾಜನಿಗೂ ಸೇವೆಯಾಗುತ್ತದೆ.

10 ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿಂದಲೂ ತೃಪ್ತಿಯಾಗದು; ಸಮೃದ್ಧಿಯನ್ನು ಬಯಸುತ್ತಲೇ ಇರುವವನಿಗೆ ಆದಾಯವೆಷ್ಟಾದರೂ ಸಾಲದು. ಇದು ಸಹ ವ್ಯರ್ಥ.

11 ಸೊತ್ತು ಹೆಚ್ಚಿದರೆ ಅನುಭವಿಸುವವರ ಸಂಖ್ಯೆಯೂ ಹೆಚ್ಚುವದು; ಅದನ್ನು ಕಣ್ಣಿಂದ ನೋಡುವದೇ ಹೊರತು ಯಜಮಾನನಿಗೆ ಇನ್ನಾವ ಲಾಭವೂ ಇಲ್ಲ.

12 ದುಡಿಯುವವನು ಸ್ವಲ್ಪವೇ ಉಣ್ಣಲಿ ಹೆಚ್ಚೇ ಉಣ್ಣಲಿ ಹಾಯಾಗಿ ನಿದ್ರಿಸುವನು; ಐಶ್ವರ್ಯವಂತನ ಸಮೃದ್ಧಿಯೋ ಅವನಿಗೆ ನಿದ್ರೆ ಬರಲೀಸದು.

13 ಲೋಕದಲ್ಲಿ ಕೇವಲ ಈ ದುರ್ದಶೆಯನ್ನು ನೋಡಿದೆನು; ಆಸ್ತಿವಂತನು ತನ್ನ ಆಸ್ತಿಯನ್ನು ಕಾಪಾಡುವದರಲ್ಲಿಯೇ ಕೊರಗುತ್ತಿರುವನು;

14 ಆ ಆಸ್ತಿಯು ವ್ಯರ್ಥ ಪ್ರಯತ್ನದಿಂದ ಹಾಳಾಗುವದು; ಅವನಿಗೆ ಮಗನಿದ್ದರೆ [ಆ ಮಗನಿಗಾಗಿ] ಅವನ ಕೈಯಲ್ಲಿ ಏನೂ ಇರದು.

15 ತಾಯಿಯ ಗರ್ಭದಿಂದ ಹೇಗೆ ಬಂದನೋ ಹಾಗೆಯೇ ಏನೂ ಇಲ್ಲದವನಾಗಿ ಗತಿಸಿಹೋಗುವನು; ಅವನು ಪ್ರಯಾಸಪಟ್ಟದ್ದಕ್ಕೆಲ್ಲಾ ತನ್ನ ಕೈಯಲ್ಲಿ ಏನೂ ತೆಗೆದುಕೊಂಡು ಹೋಗನು.

16 ಬಂದಂತೆಯೇ ಗತಿಸುವನು; ಗಾಳಿಗಾಗಿ ಪಟ್ಟ ಪ್ರಯಾಸದಿಂದ ಅವನಿಗೆ ಲಾಭವೇನು? ಇದೇ ಕೇವಲ ದುರ್ದಶೆ.

17 ಅವನ ಜೀವಮಾನವೆಲ್ಲಾ ಅವನ ಊಟದಲ್ಲಿ ಕತ್ತಲು ಕವಿದಿರುವದು; ಅವನಿಗೆ ಕರಕರೆಯು ಶಾನೆ; ರೋಗರೋಷಗಳು ಇದ್ದೇ ಇರುವವು.

18 ಇಗೋ ನಾನು ಕಂಡದ್ದು ಇದೇ; ದೇವರು ಒಬ್ಬನಿಗೆ ದಯಪಾಲಿಸಿರುವ ಜೀವಮಾನದ ದಿನಗಳಲ್ಲೆಲ್ಲಾ ಅವನು ಅನ್ನಪಾನಗಳನ್ನು ತೆಗೆದುಕೊಂಡು ತಾನು ಲೋಕದೊಳಗೆ ಪಡುವ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವದು ಮೇಲಾಗಿಯೂ ಉಚಿತವಾಗಿಯೂ ಇದೆ; ಇದೇ ಅವನ ಪಾಲು.

19 ಮತ್ತೂ ಆತನು ಯಾವನಿಗೆ ಆಸ್ತಿಪಾಸ್ತಿಗಳನ್ನು ದಯಪಾಲಿಸುವದಲ್ಲದೆ ಅದನ್ನು ಅನುಭವಿಸಿ ಪಾಲಿಗೆ ಬಂದದ್ದನ್ನು ಹೊಂದಿ ತನ್ನ ಪ್ರಯಾಸದಲ್ಲಿ ಸಂತೋಷಪಡಲು ಶಕ್ತಿಕೊಡುವನೋ, ಅವನ ಸುಖವು ದೇವರ ಅನುಗ್ರಹ.

20 ಇಂಥವನು ತನ್ನ ಜೀವಮಾನದ ದಿನಗಳನ್ನು ಹೆಚ್ಚಾಗಿ ಗಣನೆಗೆ ತಾರನು; ಇವನು ತನ್ನ ಹೃದಯಾನಂದದಲ್ಲಿ ಮಗ್ನನಾಗಿರುವಂತೆ ದೇವರು ಮಾಡಿದ್ದಾನಷ್ಟೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು