ಪ್ರಸಂಗಿ 4 - ಕನ್ನಡ ಸತ್ಯವೇದವು J.V. (BSI)1 ಆಮೇಲೆ ತಿರಿಗಿ ದೃಷ್ಟಿಸಿ ಲೋಕದಲ್ಲಿನ ಹಿಂಸೆಗಳನ್ನೆಲ್ಲಾ ನೋಡಿದೆನು; ಆಹಾ, ಹಿಂಸೆಗೊಂಡವರ ಕಣ್ಣೀರು ಏನೆಂದು ಹೇಳಲಿ! ಸಂತಯಿಸುವವರು ಯಾರೂ ಇರಲಿಲ್ಲ; ಹಿಂಸಕರಿಗೆ ಬಹು ಬಲ; ಸಂತಯಿಸುವವರೋ ಒಬ್ಬರೂ ಇರಲಿಲ್ಲ. 2 ಇದನ್ನು ನೋಡಿ ಇನ್ನೂ ಜೀವದಿಂದಿರುವವರಿಗಿಂತ ಸತ್ತವರೇ ಮೇಲೆಂದು ಹೊಗಳಿದೆನು; 3 ಹೌದು, ಈ ಉಭಯರಿಗಿಂತಲೂ ಇನ್ನು ಹುಟ್ಟದೆ ಲೋಕದಲ್ಲಿನ ಅಧರ್ಮವನ್ನು ನೋಡದೆ ಇರುವವನೇ ಲೇಸೆಂದು ತಿಳಿದುಕೊಂಡೆನು. 4 ಮತ್ತು ಸಮಸ್ತಪ್ರಯಾಸವನ್ನೂ ಕೈಗೂಡುವ ಸಕಲ ಕಾರ್ಯವನ್ನೂ ನೋಡಿ ಇವು ಪರಸ್ಪರ ಮತ್ಸರಕ್ಕೆ ಆಸ್ಪದವೆಂದು ಗ್ರಹಿಸಿಕೊಂಡೆನು. ಇದೂ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ. 5 ಮೂಢನು ಅಪ್ಪುಗೈ ಮಾಡಿಕೊಂಡು ತನ್ನ ಮಾಂಸವನ್ನು ತಾನೇ ತಿನ್ನುವನು. 6 ಗಾಳಿಯನ್ನು ಹಿಂದಟ್ಟುವ ವ್ಯರ್ಥ ಪ್ರಯಾಸದ ಬೊಗಸೆಗಿಂತಲೂ ನೆಮ್ಮದಿಯ ಸೇರೆಯೇ ಲೇಸು. 7 ಲೋಕದಲ್ಲಿ ಮತ್ತೊಂದು ವ್ಯರ್ಥ ವಿಷಯವನ್ನು ಕಂಡೆನು. 8 ಎರಡನೆಯವನಿಲ್ಲದೆ ಒಬ್ಬೊಂಟಿಗನೊಬ್ಬನಿದ್ದಾನೆ; ಅವನಿಗೆ ಅಣ್ಣತಮ್ಮಂದಿರೂ ಇಲ್ಲ, ಮಕ್ಕಳೂ ಇಲ್ಲ; ಆದರೂ ಅವನ ಶ್ರಮೆಗೆ ಪಾರವಿಲ್ಲ, ಧನದಿಂದ ಅವನ ಕಣ್ಣಿಗೆ ತೃಪ್ತಿಯಿಲ್ಲ. ನಾನು ಸುಖವನ್ನು ತೊರೆದು ಯಾರಿಗೋಸ್ಕರ ಪ್ರಯಾಸಪಡುತ್ತಲೇ ಇದ್ದೇನೆ ಅಂದುಕೊಳ್ಳುವನು. ಇದೂ ವ್ಯರ್ಥ, ಕೇವಲ ಪ್ರಯಾಸವೇ ಸರಿ. 9 ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಸಕ್ಕೆ ಒಳ್ಳೆಯ ಲಾಭ. 10 ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು; ಬಿದ್ದಾಗ ಎತ್ತುವವನು ಇನ್ನೊಬ್ಬನಿಲ್ಲದಿದ್ದರೆ ಅವನ ಗತಿ ದುರ್ಗತಿಯೇ. 11 ಮತ್ತು ಒಬ್ಬನ ಮಗ್ಗುಲಲ್ಲೊಬ್ಬನು ಮಲಗಿಕೊಂಡರೆ ಇಬ್ಬರಿಗೂ ಬೆಚ್ಚಗಾಗುವದು; ಒಂಟಿಗನಿಗೆ ಹೇಗೆ ಬೆಚ್ಚಗಾದೀತು. 12 ಒಬ್ಬೊಂಟಿಗನನ್ನು ಜಯಿಸಬಲ್ಲವನಿಗೆ ಇಬ್ಬರು ಎದುರಾಗಿ ನಿಲ್ಲಬಹುದು; ಮೂರು ಹುರಿಯ ಹಗ್ಗ ಬೇಗ ಕಿತ್ತು ಹೋಗುವದಿಲ್ಲವಷ್ಟೆ. 13 ಎಚ್ಚರದ ಮಾತಿಗೆ ಕಿವಿಗೊಡುವದನ್ನು ಬಿಟ್ಟ ಮೂರ್ಖನಾದ ಮುದಿಯರಸನಿಗಿಂತ ಜ್ಞಾನಿಯಾದ ಬಡ ಯೌವನಸ್ಥನೇ ಮೇಲು. 14 ಇಂಥ ಯುವಕನೊಬ್ಬನು ರಾಜನಾಗಲು ಸೆರೆಮನೆಯಿಂದ ತರಲ್ಪಟ್ಟನು; ಹೌದು, ತನ್ನ ರಾಜ್ಯದಲ್ಲಿ ಬಡ ಪ್ರಜೆಯಾಗಿ ಹುಟ್ಟಿದ್ದನು. 15 ಸೂರ್ಯನ ಕೆಳಗೆ ಚಲಿಸುವ ಜೀವಂತರೆಲ್ಲಾ ರಾಜನಿಗೆ ಪ್ರತಿಯಾಗಿ ನಿಂತ ಯುವಕನಾದ ಈ ಎರಡನೆಯವನ ಪಕ್ಷ ವಹಿಸುವದನ್ನು ನೋಡಿದೆನು. 16 ಇವನ ಆಧಿಪತ್ಯಕ್ಕೆ ಒಳಪಟ್ಟ ಎಲ್ಲಾ ಜನರ ಸಂಖ್ಯೆಯು ಅಪಾರ. ಇವನ ಆಳಿಕೆಯ ಕೊನೆಗಾಲದವರಾದರೋ ಇವನಲ್ಲಿ ಆನಂದಿಸಲಿಲ್ಲ. ಇದೂ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India