Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಸಂಗಿ 3 - ಕನ್ನಡ ಸತ್ಯವೇದವು J.V. (BSI)

1 ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.

2 ಹುಟ್ಟುವ ಸಮಯ, ಸಾಯುವ ಸಮಯ, ನೆಡುವ ಸಮಯ, ನೆಟ್ಟದ್ದನ್ನು ಕಿತ್ತುಹಾಕುವ ಸಮಯ,

3 ಕೊಲ್ಲುವ ಸಮಯ, ಸ್ವಸ್ಥ ಮಾಡುವ ಸಮಯ, ಕೆಡವಿಬಿಡುವ ಸಮಯ, ಕಟ್ಟುವ ಸಮಯ,

4 ಅಳುವ ಸಮಯ, ನಗುವ ಸಮಯ, ಗೋಳಾಡುವ ಸಮಯ, ಕುಣಿದಾಡುವ ಸಮಯ,

5 ಕಲ್ಲುಗಳನ್ನು ಚೆಲ್ಲುವ ಸಮಯ, ಕಲ್ಲುಗಳನ್ನು ಕೂಡಿಸುವ ಸಮಯ, ಅಪ್ಪುವ ಸಮಯ, ಅಪ್ಪದಿರುವ ಸಮಯ,

6 ಗಳಿಸುವ ಸಮಯ, ಕಳೆಯುವ ಸಮಯ, ಕಾಪಾಡುವ ಸಮಯ, ಬಿಸಾಡುವ ಸಮಯ, ಹರಿಯುವ ಸಮಯ,

7 ಹೊಲಿಯುವ ಸಮಯ, ಸುಮ್ಮನಿರುವ ಸಮಯ, ಮಾತಾಡುವ ಸಮಯ, ಪ್ರೀತಿಸುವ ಸಮಯ,

8 ದ್ವೇಷಿಸುವ ಸಮಯ, ಯುದ್ಧದ ಸಮಯ, ಸಮಾಧಾನದ ಸಮಯ - ಅಂತೂ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.

9 ದುಡಿಯುವವನಿಗೆ ಅವನ ಪ್ರಯಾಸದಿಂದ ಲಾಭವೇನು?

10 ನರಜನ್ಮದವರ ಕರ್ತವ್ಯವೆಂದು ದೇವರು ನೇವಿುಸಿರುವ ಪ್ರಯಾಸವನ್ನು ನೋಡಿದ್ದೇನೆ.

11 ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ; ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ; ಆದರೂ ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ.

12 ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ.

13 ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ ಎಂದು ನನಗೆ ಗೊತ್ತಿದೆ.

14 ದೇವರ ಕಾರ್ಯವೆಲ್ಲವೂ ನಿತ್ಯವೆಂದು ಬಲ್ಲೆನು; ಅದಕ್ಕೆ ಯಾವದನ್ನೂ ಸೇರಿಸಲಾರೆವು, ಅದರಿಂದ ಯಾವದನ್ನೂ ತೆಗೆಯಲಾರೆವು; ದೇವರ ಈ ನಿಯಮಕ್ಕೆ ಮನುಷ್ಯರು ತನ್ನ ಎದುರಿನಲ್ಲಿ ಭಯಭಕ್ತಿಯುಳ್ಳವರಾಗಿರಬೇಕೆಂಬದೇ ಕಾರಣವು.

15 ಈಗಿನದು ಹಿಂದೆ ಇತ್ತು, ಮುಂದಿನದು ಈಗಲೂ ಇದೆ, ಕಳೆದದ್ದನ್ನು ದೇವರು ತಿರಿಗಿ ಬರಮಾಡುವನು.

16 ಇದಲ್ಲದೆ ನಾನು ಲೋಕವನ್ನು ದೃಷ್ಟಿಸಿ ನ್ಯಾಯಸ್ಥಾನದಲ್ಲಿಯೂ ಧರ್ಮಸ್ಥಾನದಲ್ಲಿಯೂ ಅಧರ್ಮವಿರುವದೆಂದು ನೋಡಿದೆನು.

17 ಆಗ ನಾನು ಮನಸ್ಸಿನಲ್ಲಿ - ದೇವರು ಧರ್ಮಿಗಳಿಗೂ ಅಧರ್ಮಿಗಳಿಗೂ ನ್ಯಾಯತೀರಿಸುವನು.; ಆತನ ನ್ಯಾಯಕ್ರಮದಲ್ಲಿ ಎಲ್ಲಾ ಕೆಲಸಕಾರ್ಯಗಳಿಗೂ ತಕ್ಕ ಸಮಯವುಂಟಲ್ಲವೆ ಅಂದುಕೊಂಡೆನು.

18 ಮತ್ತೆ ಮನಸ್ಸಿನಲ್ಲಿ ಹೀಗೆ ಯೋಚಿಸಿದೆನು - ದೇವರು ಮನುಷ್ಯರನ್ನು ಪರೀಕ್ಷಿಸುವದಕ್ಕೂ ಮನುಷ್ಯರು ಪಶುಪ್ರಾಯರಾಗಿದ್ದೇವೆಂದು ತಾವೇ ಗ್ರಹಿಸಿಕೊಳ್ಳುವದಕ್ಕೂ ಆಸ್ಪದವಾಗುವಂತೆ ಇದು ನರಜನ್ಮದವರ ನಿವಿುತ್ತವಾಗಿ ಆಯಿತಲ್ಲವೆ.

19 ಮನುಷ್ಯನ ಗತಿಯೂ ಪಶುವಿನ ಗತಿಯೂ ಒಂದೇ; ಪಶುವಿಗೆ ಸಾವು ಬರುವ ಹಾಗೆ ಮನುಷ್ಯನಿಗೂ ಬರುವದು; ಎಲ್ಲಕ್ಕೂ ಪ್ರಾಣ ಒಂದೇ; ಮನುಷ್ಯನು ಪಶುವಿಗಿಂತ ಶ್ರೇಷ್ಠನಲ್ಲ; ಎಲ್ಲಾ ಬರೀ ಗಾಳಿಯೇ.

20 ಎಲ್ಲಾ ಪ್ರಾಣಿಗಳು ಒಂದೇ ಸ್ಥಳಕ್ಕೆ ಹೋಗುವವು; ಎಲ್ಲಾ ಮಣ್ಣಿನಿಂದಾದವು, ಎಲ್ಲಾ ಮಣ್ಣಿಗೆ ಪುನಃ ಸೇರುವವು.

21 ಮನುಷ್ಯನ ಆತ್ಮವು ಮೇಲಕ್ಕೆ ಏರುತ್ತದೋ ಪಶುವಿನ ಆತ್ಮವು ಕೆಳಕ್ಕೆ ಇಳಿದು ಭೂವಿುಗೆ ಸೇರುತ್ತದೋ ಯಾರಿಗೆ ಗೊತ್ತು?

22 ಈ ಪ್ರಕಾರ ನಾನು ಯೋಚಿಸಿ, ಮನುಷ್ಯನು ತನ್ನ ಕಾರ್ಯಗಳಲ್ಲಿ ಉಲ್ಲಾಸಗೊಳ್ಳುವದಕ್ಕಿಂತ ಅವನಿಗೆ ಯಾವ ಮೇಲೂ ಇಲ್ಲ; ಇದೇ ಅವನ ಪಾಲು ಎಂದು ಗ್ರಹಿಸಿಕೊಂಡೆನು. ಜೀವಮಾನದನಂತರ ಸಂಭವಿಸುವವುಗಳನ್ನು ನೋಡುವದಕ್ಕೆ ಮನುಷ್ಯನನ್ನು ಯಾರು ಪುನಃ ಬರಮಾಡುವರು?

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು