ಪ್ರಸಂಗಿ 12 - ಕನ್ನಡ ಸತ್ಯವೇದವು J.V. (BSI)1 ಕಷ್ಟದ ದಿನಗಳೂ ಸಂತೋಷವಿಲ್ಲವೆಂದು ನೀನು ಹೇಳುವ ವರುಷಗಳೂ ಸಮೀಪಿಸುವದರೊಳಗಾಗಿ ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು . 2 ಆ ಕಷ್ಟದ ದಿನಗಳಲ್ಲಿ ಸೂರ್ಯನೂ ಬೆಳಕೂ ಚಂದ್ರನೂ ನಕ್ಷತ್ರಗಳೂ ಮೊಬ್ಬಾಗುವವು; ಮಳೆಯಾದ ಮೇಲೆಯೂ ಮೋಡಗಳು ಮತ್ತೆ ಬರುವವು. 3 ಅದೇ ಕಾಲದಲ್ಲಿ ಮನೆಗಾವಲಿನವರು ನಡುಗುವರು, ಬಲಿಷ್ಠರು ಬೊಗ್ಗುವರು, ಅರೆಯುವವರು ಕೊಂಚವಾದದರಿಂದ ಕೆಲಸವನ್ನು ನಿಲ್ಲಿಸಿಬಿಡುವರು, ಕಿಟಕಿಗಳಿಂದ ನೋಡುವವರು ಮಂಕಾಗುವರು. 4 ಬೀದಿಯ ಬಾಗಿಲುಗಳು ಮುಚ್ಚಿರುವವು; ಅರೆಯುವ ಸ್ಥಳದ ಶಬ್ದವು ತಗ್ಗಿ ಹಕ್ಕಿಯ ಧ್ವನಿಯಷ್ಟು ಕೀರ್ಲಾಗುವದು; ಗಾಯಕಿಯರೆಲ್ಲಾ ಕುಗ್ಗುವರು. 5 ಇದಲ್ಲದೆ ಆ ದಿನಗಳಲ್ಲಿ ದಿನ್ನೆ ಕಂಡರೆ ಭಯ, ದಾರಿಯಲ್ಲಿ ಅಪಾಯ; ಬಾದಾವಿುಯ ಮರವು ಹೂಬಿಡುವದು; ವಿುಡತೆಯು ಕೂಡ ಭಾರವಾಗುವದು; ಆಶೆಯು ಕುಂದುವದು, ಮನುಷ್ಯನು ತನ್ನ ನಿತ್ಯ ಗೃಹಕ್ಕೆ ಹೊರಡುವದಕ್ಕಿದ್ದಾನಲ್ಲಾ; ಗೋಳಾಟದವರು ಬೀದಿಯಲ್ಲಿ ತಿರುಗುವರು. 6 ಇನ್ನು ಮುಂದೆ ಬೆಳ್ಳಿಯ ತಂತಿ ಕಿತ್ತು ಚಿನ್ನದ ಬಟ್ಟಲು ಜಜ್ಜಿಹೋಗುವದು; ಮಡಕೆ ಬುಗ್ಗೆಯ ಹತ್ತಿರ ಒಡೆಯುವದು; ಬಾವಿಯ ರಾಟೆ ಮುರಿಯುವದು; 7 ಮಣ್ಣು ಭೂವಿುಗೆ ಸೇರಿ ಇದ್ದ ಹಾಗಾಗುವದು; ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವದು; ಇಷ್ಟರೊಳಗಾಗಿ [ನಿನ್ನ ಸೃಷ್ಟಿಕರ್ತನನ್ನು ಸ್ಮರಿಸದಿರಬೇಡ.] 8 ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ ಎಂದು ಪ್ರಸಂಗಿಯು ಹೇಳುತ್ತಾನೆ. 9 ಮತ್ತು ಪ್ರಸಂಗಿಯು ಜ್ಞಾನಿಯಾಗಿದ್ದದ್ದಲ್ಲದೆ ಜನರಿಗೆ ತಿಳುವಳಿಕೆಯನ್ನು ಬೋಧಿಸುತ್ತಾ ಬಂದನು; ಅನೇಕಾನೇಕ ಜ್ಞಾನೋಕ್ತಿಗಳನ್ನು ಧ್ಯಾನಿಸಿ ಪರೀಕ್ಷಿಸಿ ಕ್ರಮಪಡಿಸಿದನು. 10 ಪ್ರಸಂಗಿಯು ಯಥಾರ್ಥಭಾವದಿಂದ ರಚಿಸಿದ ಒಪ್ಪಿಗೆಯ ಸತ್ಯದ ಮಾತುಗಳನ್ನು ಹುಡುಕಿ ಆರಿಸಿದನು. 11 ಜ್ಞಾನಿಗಳ ಮಾತುಗಳು ಮುಳ್ಳುಗೋಲುಗಳು; ಸಂಗ್ರಹವಾಕ್ಯಗಳು ಬಿಗಿಯಾಗಿ ಬಡಿದ ಮೊಳೆಗಳು; ಒಬ್ಬನೇ ಕರ್ತನಿಂದ ಬಂದಿವೆ. 12 ಕಂದಾ, ಇವಲ್ಲದೆ ಉಳಿದವುಗಳಲ್ಲಿಯೂ ಎಚ್ಚರದಿಂದಿರು; ಬಹುಗ್ರಂಥಗಳ ರಚನೆಗೆ ವಿುತಿಯಿಲ್ಲ; ಅತಿ ವ್ಯಾಸಂಗವು ದೇಹಕ್ಕೆ ಆಯಾಸ. 13 ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ. 14 ಒಳ್ಳೇದಾಗಲಿ ಕೆಟ್ಟದಾಗಲಿ ಸಕಲ ರಹಸ್ಯ ಸಂಗತಿಗಳನ್ನು ವಿಮರ್ಶಿಸುವ ನ್ಯಾಯವಿಚಾರಣೆಗೆ ದೇವರು ಪ್ರತಿಯೊಂದು ಕಾರ್ಯವನ್ನು ಗುರಿಮಾಡುವನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India