ಪ್ರಸಂಗಿ 10 - ಕನ್ನಡ ಸತ್ಯವೇದವು J.V. (BSI)1 ಸತ್ತ ನೊಣಗಳಿಂದ ಗಂದಿಗನ ತೈಲವು ಕೊಳೆತು ನಾರುವದು; ಹಾಗೆಯೇ ಹುಚ್ಚುತನ ಸ್ವಲ್ಪವಾದರೂ ಜ್ಞಾನಮಾನಗಳನ್ನು ಮುಚ್ಚಿ ಮೀರುವದು. 2 ಜ್ಞಾನಿಯ ಬುದ್ಧಿಯು ಅವನ ಬಲಗಡೆಯಿರುವದು, ಅಜ್ಞಾನಿಯ ಬುದ್ಧಿಯು ಅವನ ಎಡಗಡೆಯಿರುವದು. 3 ಇದಲ್ಲದೆ ಹುಚ್ಚನು ಬುದ್ಧಿತಪ್ಪಿ ತಿರುಗುವ ದಾರಿಯಲ್ಲಿ ತನ್ನ ಹುಚ್ಚುತನವನ್ನು ಎಲ್ಲರಿಗೆ ಪ್ರಕಟಮಾಡುವನು. 4 ದೊರೆಯು ನಿನ್ನ ಮೇಲೆ ಸಿಟ್ಟುಗೊಂಡರೆ ಉದ್ಯೋಗವನ್ನು ಬಿಡಬೇಡ; ತಾಳ್ಮೆಯು ದೊಡ್ಡ ದೋಷಗಳನ್ನು ಅಡಗಿಸುತ್ತದಲ್ಲವೆ. 5 ಲೋಕದಲ್ಲಿ ಒಂದು ಸಂಕಟವನ್ನು ಕಂಡಿದ್ದೇನೆ. ಅದು ದೊರೆಯ ಪ್ರಮಾದದಿಂದಾದದ್ದೆಂದು ತೋರುತ್ತದೆ; 6 ಮೂಢರಿಗೆ ಮಹಾಪದವಿ ದೊರೆತಿರುವದು, ಘನವಂತರು ಹೀನ ಸ್ಥಿತಿಯಲ್ಲಿರುವರು. 7 ಆಳುಗಳು ಕುದುರೆಸವಾರಿ ಮಾಡುವದನ್ನೂ ಪ್ರಭುಗಳು ಆಳುಗಳಂತೆ ನೆಲದ ಮೇಲೆ ನಡೆಯುವದನ್ನೂ ನೋಡಿದ್ದೇನೆ. 8 ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುವನು; ಗೋಡೆಯೊಡೆಯುವವನನ್ನು ಹಾವು ಕಚ್ಚುವದು. 9 ಎಲ್ಲೆಕಲ್ಲೆತ್ತುವವನಿಗೆ ಹಾನಿಯಾಗುವದು; ಮರವನ್ನು ಕಡಿಯುವವನಿಗೆ ಅಪಾಯವಿದೆ. 10 ಮೊಂಡುಕೊಡಲಿಯ ಬಾಯಿ ಮೊನೆಮಾಡದಿದ್ದರೆ ಹೆಚ್ಚು ಬಲವನ್ನು ಪ್ರಯೋಗಿಸಬೇಕಲ್ಲವೆ; ಕಾರ್ಯಸಿದ್ಧಿಗೆ ಜ್ಞಾನವೇ ಸಾಧನ. 11 ಮಂತ್ರಿಸಿ ತಡೆಯುವದರೊಳಗಾಗಿ ಹಾವು ಕಚ್ಚಿದರೆ ಮಂತ್ರಿಸುವವನಿಗೆ ಏನು ಪ್ರಯೋಜನ? 12 ಜ್ಞಾನಿಯ ಮಾತು ಹಿತ; ಅಜ್ಞಾನಿಯ ಬಾಯಿ ತನ್ನನ್ನೇ ನುಂಗಿಬಿಡುವದು. 13 ಅಜ್ಞಾನಿಯ ಮಾತುಗಳ ಆರಂಭದಲ್ಲಿ ಬುದ್ಧಿಹೀನತೆ, ಅಂತ್ಯದಲ್ಲಿ ಅಪಾಯದ ಮರುಳುತನ. 14 ಮನುಷ್ಯನು ಮುಂದಿನದನ್ನು ತಿಳಿಯನು; ತಾನು ಕಾಲವಾದ ಮೇಲೆ ಹೀಗೆಯೇ ಆಗುವದೆಂದು ಅವನು ಯಾರಿಂದ ತಿಳಿದುಕೊಂಡಾನು? ಅಜ್ಞಾನಿಯ ಮಾತುಗಳೋ ಬಹಳ. 15 ಪಟ್ಟಣದ ದಾರಿ ತಿಳಿಯದವನಿಗೆ ಮೂಢರು [ತಿಳಿಸಲು] ಪಡುವ ಪ್ರಯಾಸದಿಂದ ಆಯಾಸವೇ. 16 ಎಲೆ ದೇಶವೇ ನಿನ್ನ ರಾಜನು ಬಾಲನಾಗಿದ್ದು ಪ್ರಭುಗಳು ಹೊತ್ತಾರೆ ಔತಣಕ್ಕೆ ಕೂತುಕೊಂಡರೆ ನಿನಗೆ ದೌರ್ಭಾಗ್ಯವೇ. 17 ದೇಶವೇ, ನಿನ್ನ ರಾಜನು ಕುಲೀನನಾಗಿದ್ದು ಪ್ರಭುಗಳು ಅಮಲನ್ನೊಲ್ಲದೆ ಶಕ್ತಿಗೊಳ್ಳುವೆವೆಂದು ಸರಿಯಾದ ಸಮಯದಲ್ಲಿ ಊಟಕ್ಕೆ ಕುಳಿತರೆ ನಿನಗೆ ಭಾಗ್ಯವೇ ಸರಿ. 18 ಸೋಮಾರಿತನದಿಂದ ತೊಲೆಗಳು ಬೊಗ್ಗುವವು, ಜೋಲುಗೈಯಿಂದ ಮನೆ ಸೋರುವದು. 19 ನಗುವಿಗಾಗಿ ಔತಣವು, ದ್ರಾಕ್ಷಾರಸದಿಂದ ಜೀವನಕ್ಕೆ ಆನಂದವು; ಧನವು ಎಲ್ಲವನ್ನೂ ಒದಗಿಸಿಕೊಡುವದು. 20 ಮನಸ್ಸಿನಲ್ಲಿಯೂ ರಾಜನನ್ನು ದೂಷಿಸದಿರು, ಮಲಗುವ ಮನೆಯಲ್ಲಿಯೂ ಧನಿಕನನ್ನು ಬಯ್ಯದಿರು; ಆಕಾಶದ ಹಕ್ಕಿಯು ಆ ಶಬ್ದವನ್ನು ಮುಟ್ಟಿಸೀತು; ಪಕ್ಷಿಯು ಆ ವಿಷಯವನ್ನು ತಿಳಿಸೀತು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India