Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಲಾಪಗಳು 5 - ಕನ್ನಡ ಸತ್ಯವೇದವು J.V. (BSI)

1 ಯೆಹೋವನೇ, ನಮಗಾದ ದುರ್ಗತಿಯನ್ನು ಚಿತ್ತಕ್ಕೆ ತಂದುಕೋ; ನಾವು ಗುರಿಯಾಗಿರುವ ದೂಷಣೆಯನ್ನು ದೃಷ್ಟಿಸಿ ನೋಡು.

2 ನಮ್ಮ ಸ್ವಾಸ್ತ್ಯವು ಪರರ ಪಾಲಾಗಿದೆ, ನಮ್ಮ ಮನೆಗಳು ಹೆರರ ಕೈಗೆ ಸಿಕ್ಕಿವೆ.

3 ನಾವು ತಂದೆಯಿಲ್ಲದ ಅನಾಥರು, ನಮ್ಮ ತಾಯಿಗಳು ವಿಧವೆಯ ಗತಿಗೆ ಬಂದಿದ್ದಾರೆ.

4 ನೀರು ನಮ್ಮದಾದರೂ ಕೊಂಡುಕೊಂಡು ಕುಡಿಯುತ್ತೇವೆ; ಸೌದೆ ಸ್ವಂತವಾದರೂ ಕ್ರಯಕ್ಕೆ ತೆಗೆದುಕೊಳ್ಳುತ್ತೇವೆ.

5 ನಮ್ಮನ್ನು ಹಿಂದಟ್ಟುವವರು ನಮ್ಮ ಹೆಗ್ಗತ್ತನ್ನು ಹಿಡಿದಿದ್ದಾರೆ, ಬಳಲಿಹೋಗಿದ್ದೇವೆ, ಯಾವ ವಿಶ್ರಾಂತಿಯೂ ಇಲ್ಲ.

6 ಹೇಗಾದರೂ ಹೊಟ್ಟೆ ತುಂಬ ಅನ್ನ ತಿಂಬೋಣ ಎಂದು ಐಗುಪ್ತ್ಯರಿಗೂ ಅಶ್ಶೂರ್ಯರಿಗೂ ಅಧೀನರಾದೆವು.

7 ನಮ್ಮ ಪಿತೃಗಳು ಪಾಪಮಾಡಿ ಇಲ್ಲದೆ ಹೋದರು; ಅವರ ದೋಷಫಲವನ್ನು ನಾವು ಅನುಭವಿಸಬೇಕಾಯಿತು.

8 ದಾಸರು ನಮಗೆ ದಣಿಗಳಾದರು, ಅವರ ಕೈಯಿಂದ ನಮ್ಮನ್ನು ಬಿಡಿಸುವವರೇ ಇಲ್ಲ.

9 ಬೆಳೆಯನ್ನು ಕೊಯ್ಯುತ್ತಿರುವಾಗ ಅರಣ್ಯದವರ ಕತ್ತಿಯಿಂದ ಪ್ರಾಣಾಪಾಯಕ್ಕೆ ಗುರಿಯಾಗಿದ್ದೇವೆ.

10 ಕ್ಷಾಮಕಾಲದ ಜ್ವರದಿಂದ ನಮ್ಮ ಚರ್ಮವು ಒಲೆಯಂತೆ ಸುಡುತ್ತದೆ.

11 ಚೀಯೋನಿನ ಸತಿಯರನ್ನೂ ಯೆಹೂದದ ಊರುಗಳ ಯುವತಿಯರನ್ನೂ ಕೆಡಿಸಿದರು.

12 ಸರದಾರರ ಕೈಗಳನ್ನು ಗಲ್ಲಿಗೆ ನೇತಕಟ್ಟಿದರು; ವೃದ್ಧರು ಮಾನಭಂಗಪಟ್ಟರು.

13 ಯುವಕಭಟರಿಗೆ ಬೀಸುವ ಕಲ್ಲನ್ನು ಹೊರುವ ಗತಿ ಬಂತು, ಮಕ್ಕಳು ಸೌದೆಹೊರೆ ಹೊತ್ತು ಮುಗ್ಗರಿಸಬೇಕಾಯಿತು.

14 ವೃದ್ಧರು ಇನ್ನು ಚಾವಡಿಯಲ್ಲಿ ಸೇರರು, ಯುವಕರು ಇನ್ನು ವಾದ್ಯಬಾರಿಸರು.

15 ನಮ್ಮ ಹೃದಯಾನಂದವು ತೀರಿತು, ನಮ್ಮ ನಾಟ್ಯವೇ ದುಃಖವಾಯಿತು.

16 ಕಿರೀಟವು ನಮ್ಮ ತಲೆಯ ಮೇಲಿಂದ ಬಿದ್ದು ಹೋಗಿದೆ, ಅಯ್ಯೋ, ನಮ್ಮ ಗತಿಯನ್ನು ಏನು ಹೇಳೋಣ! ನಾವು ಪಾಪಮಾಡಿದವರೇ ಸರಿ.

17 ಚೀಯೋನ್ ಪರ್ವತವು ಹಾಳಾಯಿತಲ್ಲಾ! ನರಿಗಳು ಅಲ್ಲಿ ಸಂಚರಿಸುತ್ತವೆ.

18 ಇದರಿಂದ ನಮ್ಮ ಹೃದಯವು ಕುಂದಿದೆ, ಇದರಿಂದ ನಮ್ಮ ಕಣ್ಣು ಮೊಬ್ಬಾಗಿದೆ.

19 ಯೆಹೋವನೇ, ನೀನು ಶಾಶ್ವತವಾಗಿ ನೆಲೆಗೊಂಡಿದ್ದೀ, ತಲತಲಾಂತರಕ್ಕೂ ನಿನ್ನ ಸಿಂಹಾಸನವು ಸ್ಥಿರವಾಗಿರುವದು.

20 ನೀನು ನಮ್ಮನ್ನು ಸಂಪೂರ್ಣವಾಗಿ ಮರೆತಿರುವದೇಕೆ? ಏಕೆ ನಮ್ಮನ್ನು ಇಷ್ಟು ಕಾಲ ಕೈಬಿಟ್ಟಿದ್ದೀ.

21 ಯೆಹೋವನೇ, ನೀನು ನಮ್ಮ ಮೇಲೆ ಬಲು ಸಿಟ್ಟುಗೊಂಡು ನಮ್ಮನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿಯೋ, ಏನೋ?

22 ನಮ್ಮನ್ನು ನಿನ್ನ ಕಡೆಗೆ ತಿರುಗಿಸು; ನೀನು ತಿರುಗಿಸಿದ ಹಾಗೆ ತಿರುಗುವೆವು; ಪೂರ್ವಕಾಲದ ಸುಸ್ಥಿತಿಯನ್ನು ನಮಗೆ ಮತ್ತೆ ದಯಪಾಲಿಸು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು