Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 9 - ಕನ್ನಡ ಸತ್ಯವೇದವು J.V. (BSI)

1 ಐದನೆಯ ದೇವದೂತನು ತುತೂರಿಯನ್ನೂದಿದಾಗ ಆಕಾಶದಿಂದ ಭೂವಿುಗೆ ಬಿದ್ದ ಒಂದು ನಕ್ಷತ್ರವನ್ನು ಕಂಡೆನು. ಅವನಿಗೆ ಅಧೋಲೋಕಕ್ಕೆ ಹೋಗುವ ಕೂಪದ ಬೀಗದಕೈ ಕೊಡಲ್ಪಟ್ಟಿತು.

2 ಅವನು ಅಧೋಲೋಕದ ಕೂಪವನ್ನು ತೆರೆಯಲು ಕೂಪದಿಂದ ಬಂದ ಹೊಗೆ ದೊಡ್ಡ ಕುಲುಮೆಯ ಹೊಗೆಯಂತೆ ಏರಿತು; ಕೂಪದ ಹೊಗೆಯಿಂದ ಸೂರ್ಯನೂ ಆಕಾಶವೂ ಕತ್ತಲಾದವು.

3 ಹೊಗೆಯೊಳಗಿಂದ ವಿುಡಿತೆಗಳು ಭೂವಿುಯ ಮೇಲೆ ಹೊರಟುಬಂದವು. ಭೂವಿುಯಲ್ಲಿರುವ ಚೇಳುಗಳಿಗೆ ಸಾಮರ್ಥ್ಯವಿರುವ ಪ್ರಕಾರ ಅವುಗಳಿಗೆ ಸಾಮರ್ಥ್ಯ ಕೊಡಲ್ಪಟ್ಟಿತು.

4 ಭೂವಿುಯ ಮೇಲಿರುವ ಹುಲ್ಲನ್ನಾಗಲಿ ಯಾವ ಪಲ್ಯವನ್ನಾಗಲಿ ಮರವನ್ನಾಗಲಿ ಕೆಡಿಸದೆ ಹಣೆಯ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರನ್ನು ಮಾತ್ರ ಕೆಡಿಸಬಹುದೆಂದು ಅವುಗಳಿಗೆ ಅಪ್ಪಣೆಯಾಯಿತು.

5 ಇವರನ್ನು ಕೊಲ್ಲದೆ ಐದು ತಿಂಗಳುಗಳವರೆಗೂ ಪೀಡಿಸುವದಕ್ಕೆ ಅಪ್ಪಣೆಯಾಯಿತು. ಅವರಿಗುಂಟಾದ ಪೀಡೆಯು ಚೇಳು ಮನುಷ್ಯನನ್ನು ಹೊಡೆಯುವದರಿಂದುಂಟಾಗುವ ಪೀಡೆಗೆ ಸಮಾನವಾಗಿತ್ತು.

6 ಆ ಕಾಲದಲ್ಲಿ ಮನುಷ್ಯರು ಮರಣವನ್ನು ಬಯಸುವರು, ಆದರೆ ಅದು ಪ್ರಾಪ್ತವಾಗುವದಿಲ್ಲ; ಸಾಯಬೇಕೆಂದು ಕೋರುವರು, ಆದರೆ ಮೃತ್ಯುವು ಅವರ ಬಳಿಯಿಂದ ಓಡಿಹೋಗುವದು.

7 ಆ ವಿುಡಿತೆಗಳ ರೂಪವು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ರೂಪದಂತೆ ಇತ್ತು; ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆ ಏನೋ ಇದ್ದವು; ಅವುಗಳ ಮುಖಗಳು ಮನುಷ್ಯರ ಮುಖಗಳ ಹಾಗೆ ಇದ್ದವು.

8 ಸ್ತ್ರೀಯರ ಕೂದಲಿನಂತಿರುವ ಕೂದಲು ಅವುಗಳಿಗೆ ಇತ್ತು; ಅವುಗಳ ಹಲ್ಲುಗಳು ಸಿಂಹದ ಹಲ್ಲುಗಳ ಹಾಗಿದ್ದವು.

9 ಅವುಗಳಿಗೆ ಉಕ್ಕಿನ ಕವಚಗಳಂತಿದ್ದ ಕವಚಗಳು ಇದ್ದವು; ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ರಥಾಶ್ವಗಳ ಶಬ್ದದ ಹಾಗೆ ಇತ್ತು.

10 ಚೇಳಿಗಿರುವಂತೆ ಅವುಗಳಿಗೆ ಬಾಲಗಳೂ ಕೊಂಡಿಗಳೂ ಉಂಟು; ಮನುಷ್ಯರನ್ನು ಐದು ತಿಂಗಳುಗಳವರೆಗೂ ಪೀಡಿಸುವ ಸಾಮರ್ಥ್ಯವು ಅವುಗಳ ಬಾಲಗಳಲ್ಲಿಯೇ ಇರುವದು.

11 ಅಧೋಲೋಕದ ಅಧಿಕಾರಿಯಾದ ದೂತನು ಅವುಗಳನ್ನಾಳುವ ಅರಸನು; ಅವನಿಗೆ ಇಬ್ರಿಯ ಭಾಷೆಯಲ್ಲಿ ಅಬದ್ದೋನನೆಂತಲೂ ಗ್ರೀಕ್ ಭಾಷೆಯಲ್ಲಿ ಅಪೊಲ್ಲುವೋನನೆಂತಲೂ ಹೆಸರುಂಟು.

12 ಮೊದಲನೆಯ ವಿಪತ್ತು ಕಳೆದುಹೋಯಿತು; ಇಗೋ, ಇನ್ನೂ ಎರಡು ವಿಪತ್ತುಗಳು ಬರಬೇಕು.


ಆರನೆಯ ತುತೂರಿ ಊದಿದ್ದು. ಎರಡನೆಯ ವಿಪತ್ತು; ಭಯಂಕರವಾದ ರಾಹುತರು ಯೂಫ್ರೇಟೀಸ್ ನದಿಯ ಕಡೆಯಿಂದ ಬಂದದ್ದು

13 ಆರನೆಯ ದೇವದೂತನು ತುತೂರಿಯನ್ನೂದಿದಾಗ ದೇವರ ಸಮ್ಮುಖದಲ್ಲಿರುವ ಚಿನ್ನದ ವೇದಿಯ ಕೊಂಬುಗಳಿಂದ ಹೊರಟ ಒಂದೇ ಧ್ವನಿಯನ್ನು ಕೇಳಿದೆನು.

14 ಅದು ತುತೂರಿಯನ್ನು ಹಿಡಿದಿದ್ದ ಆರನೆಯ ದೇವದೂತನಿಗೆ - ಯೂಫ್ರೇಟೀಸ್ ಎಂಬ ಮಹಾನದಿಯ ಬಳಿಯಲ್ಲಿ ಕಟ್ಟಿರುವ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು ಎಂದು ಹೇಳಿತು.

15 ಆಗ ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರಮಾಡುವದಕ್ಕಾಗಿ ಅದೇ ವರುಷ ಅದೇ ತಿಂಗಳು ದಿನ ತಾಸಿಗೆ ಸಿದ್ಧವಾಗಿದ್ದ ಆ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಟ್ಟರು;

16 ಕುದುರೇ ದಂಡಿನವರ ಸಂಖ್ಯೆಯು ಇಪ್ಪತ್ತು ಕೋಟಿ ಎಂದು ನನಗೆ ಕೇಳಿಸಿತು.

17 ನಾನು ದರ್ಶನದಲ್ಲಿ ಕಂಡ ಕುದುರೆಗಳ ಮತ್ತು ಸವಾರರ ವಿವರಣೆ ಹೇಗಂದರೆ - ಸವಾರರ ಕವಚಗಳ ಬಣ್ಣವು ಬೆಂಕಿ ಹೊಗೆ ಗಂಧಕ ಇವುಗಳ ಬಣ್ಣದ ಹಾಗಿತ್ತು. ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತಿದ್ದವು;

18 ಅವುಗಳ ಬಾಯಿಂದ ಬೆಂಕಿ ಹೊಗೆ ಗಂಧಕ ಇವುಗಳು ಹೊರಡುತ್ತಿದ್ದವು. ಅವುಗಳ ಬಾಯಿಂದ ಹೊರಟ ಆ ಬೆಂಕಿ ಹೊಗೆ ಗಂಧಕ ಎಂಬ ಮೂರು ಉಪದ್ರವಗಳಿಂದ ಮನುಷ್ಯರಲ್ಲಿ ಮೂರನೆಯ ಭಾಗವು ಹತವಾಯಿತು.

19 ಆ ಕುದುರೆಗಳ ಸಾಮರ್ಥ್ಯವು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇತ್ತು. ಅವುಗಳ ಬಾಲಗಳು ತಲೆಗಳುಳ್ಳವುಗಳಾಗಿ ಸರ್ಪಗಳ ಹಾಗೆ ಇದ್ದವು. ಅವುಗಳಿಂದ ಕೇಡನ್ನುಂಟುಮಾಡುತ್ತವೆ.

20 ಉಪದ್ರವಗಳಿಂದ ಸಾಯದೆ ಉಳಿದ ಜನರು ತಾವೇ ಮಾಡಿಕೊಂಡ ವಿಗ್ರಹಗಳನ್ನು ಬಿಟ್ಟು ದೇವರ ಕಡೆಗೆ ತಿರುಗಲಿಲ್ಲ; ಅವರು ದೆವ್ವಗಳ ಪೂಜೆಯನ್ನೂ ಬಂಗಾರ ಬೆಳ್ಳಿ ತಾಮ್ರ ಕಲ್ಲು ಮರ ಇವೇ ಮುಂತಾದವುಗಳಿಂದ ಮಾಡಲ್ಪಟ್ಟು ನೋಡಲಾರದೆ ಕೇಳಲಾರದೆ ನಡೆಯಲಾರದೆ ಇರುವ ವಿಗ್ರಹಗಳ ಪೂಜೆಯನ್ನೂ ಬಿಡಲಿಲ್ಲ.

21 ಇದಲ್ಲದೆ ತಾವು ನಡಿಸುತ್ತಿದ್ದ ಕೊಲೆ ಮಾಟ ಜಾರತ್ವ ಕಳ್ಳತನ ಇವುಗಳೊಳಗೆ ಒಂದನ್ನೂ ಬಿಟ್ಟು ಮಾನಸಾಂತರ ಮಾಡಿಕೊಳ್ಳಲಿಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು