Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 8 - ಕನ್ನಡ ಸತ್ಯವೇದವು J.V. (BSI)


ಏಳನೆಯ ಮುದ್ರೆಯನ್ನು ಒಡೆಯಲು ನಿಶ್ಶಬ್ದವಾದದ್ದು; ತುತೂರಿಗಳನ್ನು ಹಿಡಿದುಕೊಂಡ ಏಳು ಮಂದಿ ದೇವದೂತರು ಮುಂದೆ ಬಂದದ್ದು. ದೇವಜನರ ಪ್ರಾರ್ಥನೆಗಳು ದೇವರ ಸನ್ನಿಧಿಗೆ ಏರಿಬಂದದ್ದು

1 ಆತನು ಏಳನೆಯ ಮುದ್ರೆಯನ್ನು ಒಡೆದಾಗ ಸುಮಾರು ಅರ್ಧಗಂಟೇ ಹೊತ್ತಿನವರೆಗೂ ಪರಲೋಕವು ನಿಶ್ಶಬ್ದವಾಯಿತು.

2 ಆಗ ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ಮಂದಿ ದೇವದೂತರನ್ನು ಕಂಡೆನು; ಅವರಿಗೆ ಏಳು ತುತೂರಿಗಳು ಕೊಡಲ್ಪಟ್ಟವು.

3 ಆಮೇಲೆ ಮತ್ತೊಬ್ಬ ದೇವದೂತನು ಬಂದು ಯಜ್ಞವೇದಿಯ ಬಳಿಯಲ್ಲಿ ನಿಂತನು; ಅವನ ಕೈಯಲ್ಲಿ ಚಿನ್ನದ ಧೂಪಾರತಿ ಇತ್ತು. ಸಿಂಹಾಸನದ ಮುಂದಣ ಚಿನ್ನದ ಧೂಪವೇದಿಯ ಮೇಲೆ ದೇವಜನರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಸಮರ್ಪಿಸುವದಕ್ಕಾಗಿ ಅವನಿಗೆ ಬಹಳ ಧೂಪ ಕೊಡಲ್ಪಟ್ಟಿತು.

4 ಆಗ ಧೂಪದ ಹೊಗೆಯು ದೇವದೂತನ ಕೈಯೊಳಗಿಂದ ಹೊರಟು ದೇವಜನರ ಪ್ರಾರ್ಥನೆಗಳೊಂದಿಗೆ ಕೂಡಿ ದೇವರ ಸನ್ನಿಧಿಗೆ ಏರಿಹೋಯಿತು.

5 ತರುವಾಯ ಆ ದೇವದೂತನು ಧೂಪಾರತಿಯನ್ನು ತೆಗೆದುಕೊಂಡು ಯಜ್ಞವೇದಿಯ ಮೇಲಿದ್ದ ಕೆಂಡಗಳಿಂದ ತುಂಬಿಸಿ ಭೂವಿುಗೆ ಬಿಸಾಡಿದನು. ಆಗ ಗುಡುಗುಗಳೂ ವಾಣಿಗಳೂ ವಿುಂಚುಗಳೂ ಭೂಕಂಪವೂ ಉಂಟಾದವು.


IV. ಏಳು ತುತೂರಿಗಳನ್ನು ಕುರಿತದ್ದು. ನಾಲ್ಕು ತುತೂರಿಗಳು ಊದಲಾಗಿ ಆನೆಕಲ್ಲು ರಕ್ತ, ಮಾಚಿಪತ್ರೆವಿಷ, ಕತ್ತಲು ಎಂಬ ಉಪದ್ರವಗಳು ಸಂಭವಿಸಿದ್ದು

6 ಏಳು ತುತೂರಿಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರು ತುತೂರಿಗಳನ್ನೂದುವದಕ್ಕೆ ಸಿದ್ಧಮಾಡಿಕೊಂಡರು.

7 ಮೊದಲನೆಯ ದೇವದೂತನು ತುತೂರಿಯನ್ನೂದಿದಾಗ ರಕ್ತದಲ್ಲಿ ಕಲಸಿದ್ದ ಆನೆಕಲ್ಲಿನ ಮಳೆಯೂ ಬೆಂಕಿಯೂ ಭೂವಿುಗೆ ಸುರಿಸಲ್ಪಟ್ಟವು; ಭೂವಿುಯೊಳಗೆ ಮೂರರಲ್ಲಿ ಒಂದು ಭಾಗ ಸುಟ್ಟುಹೋಯಿತು; ಮರಗಳೊಳಗೆ ಮೂರರಲ್ಲಿ ಒಂದು ಭಾಗ ಸುಟ್ಟುಹೋಯಿತು; ಹಸುರು ಹುಲ್ಲೆಲ್ಲಾ ಸುಟ್ಟುಹೋಯಿತು.

8 ಎರಡನೆಯ ದೇವದೂತನು ತುತೂರಿಯನ್ನೂದಿದಾಗ ಬೆಂಕಿಹತ್ತಿ ಉರಿಯುವ ದೊಡ್ಡ ಬೆಟ್ಟವೋ ಎಂಬಂತಿರುವ ಒಂದು ವಸ್ತು ಸಮುದ್ರದಲ್ಲಿ ಹಾಕಲ್ಪಟ್ಟಿತು. ಆಗ ಸಮುದ್ರದೊಳಗೆ ಮೂರರಲ್ಲಿ ಒಂದು ಭಾಗ ರಕ್ತವಾಯಿತು;

9 ಸಮುದ್ರಜೀವಿಗಳೊಳಗೆ ಮೂರರಲ್ಲಿ ಒಂದು ಭಾಗ ಸತ್ತುಹೋಯಿತು; ಹಡಗುಗಳೊಳಗೆ ಮೂರರಲ್ಲಿ ಒಂದು ಭಾಗ ನಾಶವಾಯಿತು.

10 ಮೂರನೆಯ ದೇವದೂತನು ತುತೂರಿಯನ್ನೂದಿದಾಗ ಪಂಜಿನಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶದಿಂದ ಬಿತ್ತು. ಅದು ನದಿಗಳೊಳಗೆ ಮೂರರಲ್ಲಿ ಒಂದು ಭಾಗದ ಮೇಲೆಯೂ ನೀರಿನ ಒರತೆಗಳ ಮೇಲೆಯೂ ಬಿತ್ತು.

11 ಆ ನಕ್ಷತ್ರಕ್ಕೆ ಮಾಚಿಪತ್ರೆ ಎಂದು ಹೆಸರು. ನೀರಿನೊಳಗೆ ಮೂರರಲ್ಲಿ ಒಂದು ಭಾಗ ಮಾಚಿಪತ್ರೆಯಂತೆ ಕಹಿಯಾಯಿತು. ಆ ನೀರು ವಿಷವಾದದ್ದರಿಂದ ಮನುಷ್ಯರಲ್ಲಿ ಅನೇಕರು ಸತ್ತರು.

12 ನಾಲ್ಕನೆಯ ದೇವದೂತನು ತುತೂರಿಯನ್ನೂದಿದಾಗ ಸೂರ್ಯ ಚಂದ್ರ ನಕ್ಷತ್ರಗಳೊಳಗೆ ಮೂರರಲ್ಲಿ ಒಂದು ಭಾಗವು ಬಡಿಯಲ್ಪಟ್ಟು ಕತ್ತಲಾಯಿತು. ಆದದರಿಂದ ಹಗಲಿನೊಳಗೆ ಮೂರರಲ್ಲಿ ಒಂದು ಭಾಗವು ಪ್ರಕಾಶವಿಲ್ಲದೆ ಇತ್ತು. ರಾತ್ರಿಯು ಹಾಗೆಯೇ ಆಯಿತು.


ಐದನೆಯ ತುತೂರಿ ಊದಿದ್ದು. ಮೊದಲನೆಯ ವಿಪತ್ತು; ವಿುಡಿತೆಗಳು ಅಧೋಲೋಕದಿಂದ ಭೂವಿುಯ ಮೇಲೆ ಬಂದದ್ದು

13 ಆಮೇಲೆ ನಾನು ನೋಡಲಾಗಿ ಇಗೋ, ಒಂದೇ ಗರುಡಪಕ್ಷಿಯು ಆಕಾಶಮಧ್ಯದಲ್ಲಿ ಹಾರಾಡುತ್ತಿತ್ತು. ಅದು - ಅಯ್ಯೋ, ಅಯ್ಯೋ, ಅಯ್ಯೋ, ಊದಬೇಕಾಗಿರುವ ಮೂವರು ದೇವದೂತರ ವಿುಕ್ಕಾದ ತುತೂರಿಯ ಧ್ವನಿಗಳು ಉಂಟಾಗುವಾಗ ಭೂನಿವಾಸಿಗಳಿಗೆ ಎಂಥಾ ವಿಪತ್ತುಗಳು ಸಂಭವಿಸುವವು ಎಂದು ಮಹಾ ಶಬ್ದದಿಂದ ಹೇಳುವದನ್ನು ಕೇಳಿದೆನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು