Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 7 - ಕನ್ನಡ ಸತ್ಯವೇದವು J.V. (BSI)


ರಕ್ಷಣೆಯನ್ನು ಹೊಂದಿದ ಯೆಹೂದ್ಯರನ್ನೂ ಅನ್ಯಜನರನ್ನೂ ಕುರಿತದ್ದು

1 ಇದಾದ ಮೇಲೆ ನಾಲ್ಕು ಮಂದಿ ದೇವದೂತರು ಭೂವಿುಯ ನಾಲ್ಕು ದಿಕ್ಕುಗಳಲ್ಲಿ ನಿಂತುಕೊಂಡು ಭೂವಿುಯ ಮೇಲಾಗಲಿ ಸಮುದ್ರದ ಮೇಲಾಗಲಿ ಯಾವ ಮರದ ಮೇಲಾಗಲಿ ಗಾಳಿಬೀಸದಂತೆ ಭೂವಿುಯ ಚತುರ್ದಿಕ್ಕುಗಳ ಗಾಳಿಗಳನ್ನು ಹಿಡಿದಿರುವದನ್ನು ಕಂಡೆನು.

2 ಇದಲ್ಲದೆ ಮತ್ತೊಬ್ಬ ದೇವದೂತನು ಜೀವಸ್ವರೂಪನಾದ ದೇವರ ಮುದ್ರೆಯನ್ನು ಹಿಡುಕೊಂಡು ಮೂಡಣ ದಿಕ್ಕಿನಿಂದ ಏರಿಬರುವದನ್ನು ಕಂಡೆನು. ಅವನು ಭೂವಿುಯನ್ನೂ ಸಮುದ್ರವನ್ನೂ ಕೆಡಿಸುವದಕ್ಕೆ ಅಧಿಕಾರಹೊಂದಿದ ಆ ನಾಲ್ಕು ಮಂದಿ ದೇವದೂತರಿಗೆ -

3 ನಾವು ನಮ್ಮ ದೇವರ ದಾಸರಿಗೆ ಹಣೆಯ ಮೇಲೆ ಮುದ್ರೆ ಒತ್ತುವತನಕ ಭೂವಿುಯನ್ನಾಗಲಿ ಸಮುದ್ರವನ್ನಾಗಲಿ ಮರಗಳನ್ನಾಗಲಿ ಕೆಡಿಸಬೇಡಿರಿ ಎಂದು ಮಹಾ ಶಬ್ದದಿಂದ ಕೂಗಿ ಹೇಳಿದನು.

4 ಮುದ್ರೆ ಒತ್ತಿಸಿಕೊಂಡವರ ಸಂಖ್ಯೆಯು ಪ್ರಸಿದ್ಧವಾದಾಗ ನಾನು ಕೇಳಿದೆನು. ಇಸ್ರಾಯೇಲ್ಯರ ಪ್ರತಿಯೊಂದು ಕುಲಕ್ಕೆ ಸೇರಿದವರು ಒತ್ತಿಸಿಕೊಂಡರು. ಅವರ ಸಂಖ್ಯೆ ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ ಮಂದಿ.

5 ಯೂದನ ಕುಲದವರಲ್ಲಿ ಮುದ್ರೆಹಾಕಿಸಿಕೊಂಡವರು ಹನ್ನೆರಡು ಸಾವಿರ, ರೂಬೇನನ ಕುಲದವರಲ್ಲಿ ಹನ್ನೆರಡು ಸಾವಿರ, ಗಾದನ ಕುಲದವರಲ್ಲಿ ಹನ್ನೆರಡು ಸಾವಿರ,

6 ಅಷೇರನ ಕುಲದವರಲ್ಲಿ ಹನ್ನೆರಡು ಸಾವಿರ, ನೆಫ್ತಲೀಮನ ಕುಲದವರಲ್ಲಿ ಹನ್ನೆರಡು ಸಾವಿರ, ಮನಾಸ್ಸೆಯ ಕುಲದವರಲ್ಲಿ ಹನ್ನೆರಡು ಸಾವಿರ,

7 ಸಿಮೆಯೋನನ ಕುಲದವರಲ್ಲಿ ಹನ್ನೆರಡು ಸಾವಿರ, ಲೇವಿಯ ಕುಲದವರಲ್ಲಿ ಹನ್ನೆರಡು ಸಾವಿರ, ಇಸ್ಸಕಾರನ ಕುಲದವರಲ್ಲಿ ಹನ್ನೆರಡು ಸಾವಿರ,

8 ಜೆಬುಲೋನನ ಕುಲದವರಲ್ಲಿ ಹನ್ನೆರಡು ಸಾವಿರ, ಯೋಸೇಫನ ಕುಲದವರಲ್ಲಿ ಹನ್ನೆರಡು ಸಾವಿರ, ಬೆನ್ಯಾಮೀನನ ಕುಲದವರಲ್ಲಿ ಮುದ್ರೆ ಹಾಕಿಸಿಕೊಂಡವರು ಹನ್ನೆರಡು ಸಾವಿರ ಮಂದಿ ಇದ್ದರು.

9 ಇವುಗಳಾದ ಮೇಲೆ ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವದನ್ನು ಕಂಡೆನು. ಅವರು ಸಕಲ ಜನಾಂಗಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿದ್ದರು. ಅವರು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು.

10 ಅವರು - ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ ಎಂದು ಮಹಾ ಶಬ್ದದಿಂದ ಕೂಗಿದರು.

11 ಅಷ್ಟರಲ್ಲಿ ದೇವದೂತರೆಲ್ಲರೂ ಸಿಂಹಾಸನವು ಹಿರಿಯರು ನಾಲ್ಕು ಜೀವಿಗಳು ಇವುಗಳ ಸುತ್ತಲು ನಿಂತುಕೊಂಡಿದ್ದರು. ಅವರು ಸಿಂಹಾಸನದ ಮುಂದೆ ಅಡ್ಡಬಿದ್ದು -

12 ಆಮೆನ್. ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾಸ್ತುತಿಯೂ ಮಾನವೂ ಬಲವೂ ಶಕ್ತಿಯೂ ನಮ್ಮ ದೇವರಿಗೆ ಯುಗಯುಗಾಂತರಗಳಲ್ಲಿಯೂ ಇರಲಿ, ಆಮೆನ್ ಎಂದು ಹೇಳುತ್ತಾ ದೇವರನ್ನು ಆರಾಧಿಸಿದರು.

13 ಇದನ್ನು ನೋಡಿ ಹಿರಿಯರಲ್ಲಿ ಒಬ್ಬನು - ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು? ಎಲ್ಲಿಂದ ಬಂದರು ಎಂದು ನನ್ನನ್ನು ಕೇಳಲು - ಅಯ್ಯಾ, ನೀನೇ ಬಲ್ಲೆ ಅಂದೆನು.

14 ಅವನು ನನಗೆ - ಇವರು ಆ ಮಹಾ ಹಿಂಸೆಯನ್ನು ಅನುಭವಿಸಿ ಬಂದವರು; ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.

15 ಈ ಕಾರಣದಿಂದ ಅವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳು ಆತನ ಸೇವೆಮಾಡುತ್ತಾ ಇದ್ದಾರೆ; ಸಿಂಹಾಸನದಲ್ಲಿ ಕೂತಿರುವಾತನು ಗುಡಾರದಂತೆ ಅವರನ್ನು ಆವರಿಸುವನು.

16 ಇನ್ನು ಮೇಲೆ ಅವರಿಗೆ ಹಸಿವೆ ಇಲ್ಲ, ಬಾಯಾರಿಕೆ ಇಲ್ಲ; ಅವರಿಗೆ ಬಿಸಿಲಾದರೂ ಯಾವ ಝಳವಾದರೂ ಬಡಿಯುವದಿಲ್ಲ;

17 ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಯಾದಾತನು ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ನಡಿಸುತ್ತಾನೆ. ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು ಎಂದು ಹೇಳಿದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು