ಪ್ರಕಟನೆ 6 - ಕನ್ನಡ ಸತ್ಯವೇದವು J.V. (BSI)ಮೊದಲ ನಾಲ್ಕು ಮುದ್ರೆಗಳನ್ನು ಒಡೆಯಲು ಯುದ್ಧ ಕ್ಷಾಮ ಕೊಲೆ ಇವುಗಳ ಗುರುತುಗಳು ಕಾಣಿಸಿದ್ದು 1 ಯಜ್ಞದ ಕುರಿಯಾದಾತನು ಆ ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ನೋಡಿದೆನು. ಮತ್ತು ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು - ಬಾ ಎಂದು ಗುಡುಗಿನಂತಿದ್ದ ಸ್ವರದಿಂದ ಹೇಳುವದನ್ನು ಕೇಳಿದನು. 2 ಆಗ ಇಗೋ, ಒಂದು ಬಿಳಿ ಕುದುರೆ ಕಾಣಿಸಿತು; ಅದರ ಮೇಲೆ ಕೂತಿದ್ದವನ ಕೈಯಲ್ಲಿ ಬಿಲ್ಲು ಇತ್ತು; ಅವನಿಗೆ ಜಯಮಾಲೆ ಕೊಡಲ್ಪಟ್ಟಿತು; ಅವನು ಜಯಿಸುತ್ತಿರುವವನಾಗಿ ಜಯಿಸುವದಕ್ಕೋಸ್ಕರ ಹೊರಟನು. 3 ಆತನು ಎರಡನೆಯ ಮುದ್ರೆಯನ್ನು ಒಡೆದಾಗ ಎರಡನೆಯ ಜೀವಿಯು - ಬಾ ಅನ್ನುವದನ್ನು ಕೇಳಿದೆನು. 4 ಆಗ ಮತ್ತೊಂದು ಕುದುರೆಯು ಹೊರಟು ಬಂತು; ಅದು ಕೆಂಪು ಕುದುರೆ. ಅದರ ಮೇಲೆ ಕೂತಿದ್ದವನಿಗೆ ಭೂವಿುಯಿಂದ ಸಮಾಧಾನವನ್ನು ತೆಗೆದುಬಿಡುವದಕ್ಕೂ ಮನುಷ್ಯರು ಒಬ್ಬರನ್ನೊಬ್ಬರು ಕೊಲ್ಲುವವರಾಗುವಂತೆ ಮಾಡುವದಕ್ಕೂ ಅಧಿಕಾರವು ಕೊಡಲ್ಪಟ್ಟಿತು; ಅವನಿಗೆ ದೊಡ್ಡ ಕತ್ತಿಯು ಕೊಡಲ್ಪಟ್ಟಿತು. 5 ಆತನು ಮೂರನೆಯ ಮುದ್ರೆಯನ್ನು ಒಡೆದಾಗ ಮೂರನೆಯ ಜೀವಿಯು - ಬಾ ಅನ್ನುವದನ್ನು ಕೇಳಿದೆನು. ಆಗ ಇಗೋ, ಕಪ್ಪು ಕುದುರೆಯು ಕಾಣಿಸಿತು; ಅದರ ಮೇಲೆ ಕೂತಿದ್ದವನ ಕೈಯಲ್ಲಿ ತ್ರಾಸು ಇತ್ತು . 6 ಆಮೇಲೆ ನಾಲ್ಕು ಜೀವಿಗಳ ಮಧ್ಯದಿಂದ ಒಬ್ಬನ ಧ್ವನಿಯು ಹೊರಟ ಹಾಗೆ ಕೇಳಿದೆನು. ಅದು - ರೂಪಾಯಿಗೆ ಒಂದು ಸೇರು ಗೋದಿ; ರೂಪಾಯಿಗೆ ಮೂರು ಸೇರು ಜವೆ ಗೋದಿ; ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಕೆಡಿಸಬೇಡ ಎಂದು ಹೇಳಿತು. 7 ಆತನು ನಾಲ್ಕನೆಯ ಮುದ್ರೆಯನ್ನು ಒಡೆದಾಗ ನಾಲ್ಕನೆಯ ಜೀವಿಯು - ಬಾ ಅನ್ನುವ ಶಬ್ದವನ್ನು ಕೇಳಿದೆನು. ಆಗ ಇಗೋ, ಬೂದಿಬಣ್ಣದ ಕುದುರೆಯು ಕಾಣಿಸಿತು. 8 ಅದರ ಮೇಲೆ ಕೂತಿದ್ದವನ ಹೆಸರು ಮೃತ್ಯುವು; ಅವನ ಹಿಂದೆ ಪಾತಾಳವೆಂಬವನು ಬಂದನು. ಅವರಿಗೆ ಭೂವಿುಯ ಕಾಲುಭಾಗದಲ್ಲಿ ಕತ್ತಿಯಿಂದಲೂ ಬರದಿಂದಲೂ ಅಂಟುರೋಗದಿಂದಲೂ ಕಾಡುಮೃಗಗಳಿಂದಲೂ ಕೊಲ್ಲುವದಕ್ಕೆ ಅಧಿಕಾರವು ಕೊಡಲ್ಪಟ್ಟಿತು. ಐದನೆಯ ಮುದ್ರೆಯನ್ನು ಒಡೆದದ್ದು; ರಕ್ತಸಾಕ್ಷಿಗಳ ಆತ್ಮಗಳು ದೇವರ ಶತ್ರುಗಳಿಗೆ ಪ್ರತಿದಂಡನೆಯಾಗಬೇಕೆಂದು ಮೊರೆಯಿಟ್ಟದ್ದು 9 ಆತನು ಐದನೆಯ ಮುದ್ರೆಯನ್ನು ಒಡೆದಾಗ ದೇವರ ವಾಕ್ಯದ ನಿವಿುತ್ತವಾಗಿಯೂ ತಾವು ಹೇಳಿದ ಸಾಕ್ಷಿಯ ನಿವಿುತ್ತವಾಗಿಯೂ ಹತವಾದವರ ಆತ್ಮಗಳು ಯಜ್ಞವೇದಿಯ ಕೆಳಗಿರುವದನ್ನು ಕಂಡೆನು. 10 ಅವರು - ಒಡೆಯನೇ, ಪರಿಶುದ್ಧನೂ ಸತ್ಯವಂತನೂ ಆಗಿರುವಾತನೇ, ಭೂನಿವಾಸಿಗಳು ನಮ್ಮನ್ನು ಕೊಂದದ್ದಕ್ಕಾಗಿ ನೀನು ಎಷ್ಟು ಕಾಲದವರೆಗೂ ನ್ಯಾಯವಿಚಾರಿಸದೆಯೂ ಪ್ರತಿದಂಡನೆ ಮಾಡದೆಯೂ ಇರುವಿ? ಎಂದು ಮಹಾಶಬ್ದದಿಂದ ಕೂಗಿದರು. 11 ಅವರಲ್ಲಿ ಒಬ್ಬೊಬ್ಬನಿಗೆ ಒಂದೊಂದು ಬಿಳಿ ನಿಲುವಂಗಿಯು ಕೊಡಲ್ಪಟ್ಟಿತು. ಇದಲ್ಲದೆ - ನಿಮ್ಮ ಹಾಗೆ ಕೊಲೆಯಾಗಬೇಕಾಗಿರುವ ನಿಮ್ಮ ಸಹೋದರರ ಮತ್ತು ನಿಮ್ಮ ಜೊತೆದಾಸರ ಸಂಖ್ಯೆಯೂ ಪೂರ್ಣವಾಗುವ ತನಕ ಇನ್ನೂ ಸ್ವಲ್ಪ ಕಾಲ ವಿಶ್ರವಿುಸಿಕೊಂಡಿರಬೇಕೆಂದು ಅವರಿಗೆ ಉತ್ತರವಾಯಿತು. ಆರನೆಯ ಮುದ್ರೆಯನ್ನು ಒಡೆದದ್ದು; ಮನುಷ್ಯರು ದೇವರ ಕೋಪದಿಂದ ತಪ್ಪಿಸಿಕೊಳ್ಳಬೇಕೆಂದು ಓಡಿಹೋದದ್ದು 12 ಆತನು ಆರನೆಯ ಮುದ್ರೆ ಒಡೆಯುವದನ್ನು ಕಂಡೆನು. ಒಡೆದಾಗ ಮಹಾಭೂಕಂಪ ಉಂಟಾಯಿತು; ಸೂರ್ಯನು ಕರೀಕಂಬಳಿಯಂತೆ ಕಪ್ಪಾದನು; 13 ಪೂರ್ಣಚಂದ್ರನು ರಕ್ತದಂತಾದನು; ಅತ್ತೀಮರವು ಬಿರುಗಾಳಿಯಿಂದ ಅಲ್ಲಾಡಿಸಲ್ಪಟ್ಟು ತನ್ನ ಕಾಯಿಗಳನ್ನು ಉದುರಿಸುವ ಪ್ರಕಾರ ಆಕಾಶದ ನಕ್ಷತ್ರಗಳು ಭೂವಿುಗೆ ಬಿದ್ದವು. 14 ಆಕಾಶವು ಸುರುಳಿಯ ಹಾಗೆ ಸುತ್ತಲ್ಪಟ್ಟು ಹೋಗಿಬಿಟ್ಟಿತು; ಎಲ್ಲಾ ಬೆಟ್ಟಗಳೂ ದ್ವೀಪಗಳೂ ತಮ್ಮ ತಮ್ಮ ಸ್ಥಳಗಳಿಂದ ಚಲಿಸಿದವು. 15 ಇದಲ್ಲದೆ ಭೂರಾಜರೂ ಪ್ರಭುಗಳೂ ಸಹಸ್ರಾಧಿಪತಿಗಳೂ ಐಶ್ವರ್ಯವಂತರೂ ಪರಾಕ್ರಮಶಾಲಿಗಳೂ ಎಲ್ಲಾ ದಾಸರೂ ಸ್ವತಂತ್ರರೂ ಬೆಟ್ಟಗಳ ಗವಿಗಳಿಗೂ ಬಂಡೆಗಳ ಸಂದುಗಳಿಗೂ ಓಡಿಹೋಗಿ ತಮ್ಮನ್ನು ಮರೆಮಾಡಿಕೊಂಡು 16 ಬೆಟ್ಟಗಳಿಗೂ ಬಂಡೆಗಳಿಗೂ - ನಮ್ಮ ಮೇಲೆ ಬೀಳಿರಿ, ಸಿಂಹಾಸನದ ಮೇಲೆ ಕೂತಿರುವಾತನ ಮುಖಕ್ಕೂ ಯಜ್ಞದ ಕುರಿಯಾದಾತನ ಕೋಪಕ್ಕೂ ನಮ್ಮನ್ನು ಮರೆಮಾಡಿರಿ; 17 ಅವರ ಕೋಪವು ಕಾಣಿಸುವ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India