Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 5 - ಕನ್ನಡ ಸತ್ಯವೇದವು J.V. (BSI)


III. ಸುರುಳಿಯ ಏಳು ಮುದ್ರೆಗಳನ್ನು ಕುರಿತದ್ದು

1 ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು ಸುರುಳಿಯನ್ನು ಕಂಡೆನು; ಅದರ ಎರಡು ಪಕ್ಕೆಗಳಲ್ಲಿಯೂ ಬರೆದಿತ್ತು; ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು.

2 ಇದಲ್ಲದೆ ಬಲಿಷ್ಠನಾದ ಒಬ್ಬ ದೇವದೂತನು - ಈ ಸುರುಳಿಯನ್ನು ಬಿಚ್ಚುವದಕ್ಕೂ ಇದರ ಮುದ್ರೆಗಳನ್ನು ಒಡೆಯುವದಕ್ಕೂ ಯಾವನು ಯೋಗ್ಯನು ಎಂದು ಮಹಾ ಶಬ್ದದಿಂದ ಸಾರುವದನ್ನು ಕಂಡೆನು.

3 ಆ ಸುರುಳಿಯನ್ನು ಬಿಚ್ಚುವದಕ್ಕಾದರೂ ಅದರೊಳಗೆ ನೋಡುವದಕ್ಕಾದರೂ ಪರಲೋಕದಲ್ಲಿಯಾಗಲಿ ಭೂವಿುಯಲ್ಲಿಯಾಗಲಿ ಭೂವಿುಯ ಕೆಳಗಾಗಲಿ ಯಾವನಿಗೂ ಶಕ್ತಿಯಿರಲಿಲ್ಲ.

4 ಆಗ ಸುರುಳಿಯನ್ನು ಬಿಚ್ಚುವದಕ್ಕಾಗಲಿ ಅದರಲ್ಲಿ ನೋಡುವದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವಾದ ಕಾರಣ ನಾನು ಬಹಳವಾಗಿ ಅಳುತ್ತಿರಲು ಹಿರಿಯರಲ್ಲಿ ಒಬ್ಬನು ನನಗೆ -

5 ಅಳಬೇಡ; ಅಗೋ, ಯೂದಾ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ಅಂಕುರದವನೂ ಆಗಿರುವಾತನು ಜಯಹೊಂದಿದನು; ಆತನು ಆ ಸುರುಳಿಯನ್ನೂ ಅದರ ಏಳು ಮುದ್ರೆಗಳನ್ನೂ ಬಿಚ್ಚುವನು ಎಂದು ಹೇಳಿದನು.

6 ಸಿಂಹಾಸನವೂ ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಹಿರಿಯರು ಇದ್ದ ಸ್ಥಳಕ್ಕೂ ಮಧ್ಯದಲ್ಲಿ ಒಂದು ಕುರಿ ಕೊಯ್ಯಲ್ಪಟ್ಟದ್ದಾಗಿ ನಿಂತಿರುವದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು; ಅವು ಏನಂದರೆ ಭೂವಿುಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮಗಳು.

7 ಈತನು ಮುಂದೆ ಬಂದು ಸಿಂಹಾಸನದ ಮೇಲೆ ಕೂತಿದ್ದಾತನ ಬಲಗೈಯೊಳಗಿಂದ ಆ ಸುರುಳಿಯನ್ನು ತೆಗೆದುಕೊಂಡನು.

8 ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ತುನಾಲ್ಕು ಮಂದಿ ಹಿರಿಯರೂ ಯಜ್ಞದ ಕುರಿಯಾದಾತನ ಪಾದಕ್ಕೆ ಬಿದ್ದರು. ಹಿರಿಯರ ಕೈಗಳಲ್ಲಿ ವೀಣೆಗಳೂ, ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ ಚಿನ್ನದ ಧೂಪಾರತಿಗಳೂ ಇದ್ದವು.

9 ಅವರು ಹೊಸ ಹಾಡನ್ನು ಹಾಡುತ್ತಾ - ನೀನು ಸುರುಳಿಯನ್ನು ತೆಗೆದುಕೊಂಡು ಅದರ ಮುದ್ರೆಗಳನ್ನು ಒಡೆಯುವದಕ್ಕೆ ಯೋಗ್ಯನೇ; ನೀನು ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿ;

10 ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದಿ; ಅವರು ಭೂವಿುಯ ಮೇಲೆ ಆಳುವರು ಎಂದು ಹೇಳಿದರು.

11 ಇದಲ್ಲದೆ ಸಿಂಹಾಸನವು ಜೀವಿಗಳು ಹಿರಿಯರು ಇವರ ಸುತ್ತಲು ಬಹು ಮಂದಿ ದೇವದೂತರನ್ನು ಕಂಡೆನು; ಅವರ ಸಂಖ್ಯೆಯು ಕೋಟ್ಯಾನುಕೋಟಿಯಾಗಿಯೂ ಲಕ್ಷೋಪಲಕ್ಷವಾಗಿಯೂ ಇತ್ತು.

12 ಅವರ ಸ್ವರವು ನನಗೆ ಕೇಳಿಸಿತು; ಅವರು ಮಹಾ ಶಬ್ದದಿಂದ - ವಧಿತನಾದ ಕುರಿಯಾದಾತನು ಬಲ ಐಶ್ವರ್ಯ ಜ್ಞಾನ ಸಾಮರ್ಥ್ಯ ಮಾನ ಪ್ರಭಾವ ಸ್ತೋತ್ರಗಳನ್ನು ಹೊಂದುವದಕ್ಕೆ ಯೋಗ್ಯನು ಎಂದು ಹೇಳಿದರು.

13 ಇದಲ್ಲದೆ ಆಕಾಶದಲ್ಲಿಯೂ ಭೂವಿುಯ ಮೇಲೆಯೂ ಭೂವಿುಯ ಕೆಳಗೆಯೂ ಸಮುದ್ರದ ಮೇಲೆಯೂ ಇರುವ ಎಲ್ಲಾ ಸೃಷ್ಟಿಗಳು ಅಂದರೆ ಭೂಮ್ಯಾಕಾಶಸಮುದ್ರಗಳೊಳಗೆ ಇರುವದೆಲ್ಲವೂ - ಸಿಂಹಾಸನಾಸೀನನಿಗೂ ಯಜ್ಞದ ಕುರಿಯಾದಾತನಿಗೂ ಸ್ತೋತ್ರ ಮಾನ ಪ್ರಭಾವ ಆಧಿಪತ್ಯಗಳು ಯುಗಯುಗಾಂತರಗಳಲ್ಲಿಯೂ ಇರಲಿ ಎಂದು ಹೇಳುವದನ್ನು ಕೇಳಿದೆನು.

14 ಆಗ ನಾಲ್ಕು ಜೀವಿಗಳು ಆಮೆನ್ ಅಂದವು; ಮತ್ತು ಹಿರಿಯರು ಅಡ್ಡಬಿದ್ದು ನಮಸ್ಕಾರ ಮಾಡಿದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು