Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 4 - ಕನ್ನಡ ಸತ್ಯವೇದವು J.V. (BSI)


II. ಪರಲೋಕದಲ್ಲಿರುವ ದೇವರ ಸಾನ್ನಿಧ್ಯವನ್ನು ಕುರಿತದ್ದು

1 ಇವುಗಳಾದ ಮೇಲೆ ನಾನು ನೋಡಿದಾಗ ಪರಲೋಕದಲ್ಲಿ ತೆರೆದಿದ್ದ ಬಾಗಿಲು ಕಾಣಿಸಿತು; ಮತ್ತು ನನ್ನ ಸಂಗಡ ತುತೂರಿಯು ಮಾತಾಡುತ್ತದೋ ಎಂಬಂತೆ ನಾನು ಮೊದಲು ಕೇಳಿದ್ದ ವಾಣಿಯು ಕೇಳಿಸಿತು. ಇಲ್ಲಿಗೆ ಏರಿ ಬಾ, ಮುಂದೆ ಆಗಬೇಕಾದವುಗಳನ್ನು ನಿನಗೆ ತೋರಿಸುವೆನು ಎಂದು ಹೇಳಿತು. ಕೂಡಲೆ ದೇವರಾತ್ಮವಶನಾದೆನು.

2 ಆಗ ಇಗೋ, ಪರಲೋಕದಲ್ಲಿ ಒಂದು ಸಿಂಹಾಸನವಿತ್ತು; ಸಿಂಹಾಸನದ ಮೇಲೆ ಒಬ್ಬನು ಕೂತಿದ್ದನು.

3 ಕೂತಿದ್ದವನು ಕಣ್ಣಿಗೆ ಸೂರ್ಯಕಾಂತ ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲು ಪಚ್ಚೆಯಂತೆ ತೋರುತ್ತಿದ್ದ ಮುಗಿಲುಬಿಲ್ಲು ಇತ್ತು.

4 ಇದಲ್ಲದೆ ಸಿಂಹಾಸನದ ಸುತ್ತಲು ಇಪ್ಪತ್ತುನಾಲ್ಕು ಸಿಂಹಾಸನಗಳಿದ್ದವು; ಆ ಸಿಂಹಾಸನಗಳ ಮೇಲೆ ಶುಭ್ರವಸ್ತ್ರ ಧರಿಸಿಕೊಂಡಿದ್ದ ಇಪ್ಪತ್ತುನಾಲ್ಕು ಮಂದಿ ಹಿರಿಯರು ಕೂತಿದ್ದರು; ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು.

5 ಸಿಂಹಾಸನದೊಳಗಿಂದ ವಿುಂಚುಗಳೂ ವಾಣಿಗಳೂ ಗುಡುಗುಗಳೂ ಹೊರಡುತ್ತವೆ. ಅದರ ಮುಂದೆ ದೇವರ ಏಳು ಆತ್ಮಗಳನ್ನು ಸೂಚಿಸುವ ಏಳು ದೀಪಗಳು ಉರಿಯುತ್ತಿದ್ದವು.

6 ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕಕ್ಕೆ ಸಮಾನವಾದ ಗಾಜಿನ ಸಮುದ್ರವಿದ್ದ ಹಾಗೆ ತೋಚಿತು. ಸಿಂಹಾಸನದ ಮಧ್ಯದಲ್ಲಿ ಅದರ ನಾಲ್ಕು ಕಡೆಗಳಲ್ಲಿ ನಾಲ್ಕು ಜೀವಿಗಳಿದ್ದವು; ಅವುಗಳಿಗೆ ಹಿಂದೆ ಮುಂದೆ ತುಂಬಾ ಕಣ್ಣುಗಳಿದ್ದವು.

7 ಮೊದಲನೆಯ ಜೀವಿಯು ಸಿಂಹದಂತಿತ್ತು; ಎರಡನೆಯ ಜೀವಿಯು ಹೋರಿಯಂತಿತ್ತು; ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು; ನಾಲ್ಕನೆಯ ಜೀವಿಯು ಹಾರುವ ಗರುಡ ಪಕ್ಷಿಯಂತಿತ್ತು.

8 ಆ ನಾಲ್ಕು ಜೀವಿಗಳೊಳಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು; ಆ ಜೀವಿಗಳಿಗೆ ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರವಿುಸಿಕೊಳ್ಳದೆ - ದೇವರಾದ ಕರ್ತನು ಪರಿಶುದ್ಧನು ಪರಿಶುದ್ಧನು ಪರಿಶುದ್ಧನು; ಆತನು ಸರ್ವಶಕ್ತನು, ವರ್ತಮಾನ ಭೂತ ಭವಿಷ್ಯತ್ಕಾಲಗಳಲ್ಲಿರುವಂಥವನು ಎಂದು ಹೇಳುತ್ತವೆ.

9 ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿ ಸಿಂಹಾಸನದ ಮೇಲೆ ಕೂತಿರುವಾತನಿಗೆ ಆ ನಾಲ್ಕು ಜೀವಿಗಳು ಪ್ರಭಾವಮಾನ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುವಾಗ್ಗೆ

10 ಆ ಇಪ್ಪತ್ತುನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕೂತಾತನ ಪಾದಕ್ಕೆ ಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ -

11 ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಾರೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು