Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 3 - ಕನ್ನಡ ಸತ್ಯವೇದವು J.V. (BSI)

1 ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ ಬರೆ - ದೇವರ ಏಳು ಆತ್ಮಗಳೂ ಏಳು ನಕ್ಷತ್ರಗಳೂ ಉಳ್ಳಾತನು ಹೇಳುವದೇನಂದರೆ - ನಿನ್ನ ಕೃತ್ಯಗಳನ್ನು ಬಲ್ಲೆನು; ಜೀವಿಸುವವನು ಎಂದು ಹೆಸರು ನಿನಗಿದ್ದರೂ ಸತ್ತವನಾಗಿದ್ದೀ ಎಂಬದನ್ನು ಬಲ್ಲೆನು.

2 ಎಚ್ಚರವಾಗಿರು; ಸಾಯುವ ಹಾಗಿದ್ದ ಉಳಿದವುಗಳನ್ನು ದೃಢಪಡಿಸು. ನನ್ನ ದೇವರ ಮುಂದೆ ನಿನ್ನ ಕೃತ್ಯಗಳಲ್ಲಿ ಒಂದಾದರೂ ಸಂಪೂರ್ಣವಾದದ್ದೆಂದು ನಾನು ಕಾಣಲಿಲ್ಲ.

3 ಆದದರಿಂದ ನೀನು ಹೊಂದಿದ ಉಪದೇಶವನ್ನೂ ಅದನ್ನು ಕೇಳಿದ ರೀತಿಯನ್ನೂ ನೆನಪಿಗೆ ತಂದುಕೊಂಡು ಅದನ್ನು ಕಾಪಾಡಿಕೋ ಮತ್ತು ದೇವರ ಕಡೆಗೆ ತಿರುಗಿಕೋ. ನೀನು ಎಚ್ಚರವಾಗಿಲ್ಲದಿದ್ದರೆ ಕಳ್ಳನು ಬರುವಂತೆ ಬರುವೆನು; ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಅದು ನಿನಗೆ ತಿಳಿಯುವದೇ ಇಲ್ಲ.

4 ಆದರೂ ತಮ್ಮ ವಸ್ತ್ರಗಳನ್ನು ಮೈಲಿಗೆ ಮಾಡಿಕೊಳ್ಳದಿರುವ ಸ್ವಲ್ಪ ಜನರು ಸಾರ್ದಿಸಿನೊಳಗೆ ನಿನ್ನಲ್ಲಿದ್ದಾರೆ; ಅವರು ಯೋಗ್ಯರಾಗಿರುವದರಿಂದ ಶುಭ್ರವಸ್ತ್ರಗಳನ್ನು ಧರಿಸಿಕೊಂಡು ನನ್ನ ಜೊತೆಯಲ್ಲಿ ನಡೆಯುವರು.

5 ಜಯಶಾಲಿಗೆ ಹೀಗೆ ಶುಭ್ರವಸ್ತ್ರಗಳನ್ನು ಹೊದಿಸುವರು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಬಿಡದೆ ಅವನು ನನ್ನವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಒಪ್ಪುವೆನು.

6 ದೇವರಾತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ.

7 ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಬರೆ - ಪರಿಶುದ್ಧನೂ ಸತ್ಯವಂತನೂ ದಾವೀದನ ಬೀಗದ ಕೈಯುಳ್ಳವನೂ ಯಾರೂ ಮುಚ್ಚಕೂಡದಂತೆ ತೆರೆಯುವವನೂ ಯಾರೂ ತೆರೆಯದಂತೆ ಮುಚ್ಚುವವನೂ ಆಗಿರುವಾತನು ಹೇಳುವದೇನಂದರೆ -

8 ನಿನ್ನ ಕೃತ್ಯಗಳನ್ನು ಬಲ್ಲೆನು; ನಿನಗಿರುವ ಶಕ್ತಿ ಕೊಂಚವಾಗಿದ್ದರೂ ನೀನು ನನಗೆ ಸೇರಿದವನಲ್ಲವೆಂದು ಹೇಳದೆ ನನ್ನ ವಾಕ್ಯವನ್ನು ಕಾಪಾಡಿದ್ದರಿಂದ ಇಗೋ, ನಿನ್ನೆದುರಿನಲ್ಲಿ ಒಂದು ಬಾಗಿಲನ್ನು ತೆರೆದಿಟ್ಟಿದ್ದೇನೆ; ಯಾರೂ ಅದನ್ನು ಮುಚ್ಚಲಾರರು.

9 ನಾನು ನಿನಗೆ ಅನುಗ್ರಹಿಸುವದೇನಂದರೆ ತಾವು ಯೆಹೂದ್ಯರೆಂದು ಸುಳ್ಳಾಗಿ ಕೊಚ್ಚಿಕೊಳ್ಳುವ ಸೈತಾನನ ಸಮಾಜದವರಲ್ಲಿ ಕೆಲವರು ಬಂದು ನಿನ್ನ ಪಾದಗಳ ಮುಂದೆ ಬೀಳುವಂತೆಯೂ ನಿನ್ನನ್ನು ನಾನು ಪ್ರೀತಿಸಿದ್ದನ್ನು ತಿಳುಕೊಳ್ಳುವಂತೆಯೂ ಮಾಡುವೆನು.

10 ನೀನು ನನ್ನ ಸಹನವಾಕ್ಯವನ್ನು ಕಾಪಾಡಿದ್ದರಿಂದ ಭೂನಿವಾಸಿಗಳನ್ನು ಪರೀಕ್ಷಿಸುವದಕ್ಕಾಗಿ ಲೋಕದ ಮೇಲೆಲ್ಲಾ ಬರುವದಕ್ಕಿರುವ ಶೋಧನೆಯ ಸಮಯದಲ್ಲಿ ನಿನ್ನನ್ನು ತಪ್ಪಿಸಿ ಕಾಪಾಡುವೆನು.

11 ಬೇಗನೆ ಬರುತ್ತೇನೆ; ನಿನಗಿರುವದನ್ನು ಹಿಡಿದುಕೊಂಡಿರು; ನಿನ್ನ ಜಯಮಾಲೆಯನ್ನು ಯಾರೂ ಅಪಹರಿಸಬಾರದು.

12 ಯಾವನು ಜಯ ಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ನಿಲ್ಲಿಸುವೆನು; ಅವನು ಇನ್ನು ಮುಂದೆ ಅದರೊಳಗಿಂದ ಹೋಗುವದೇ ಇಲ್ಲ. ಇದಲ್ಲದೆ ನನ್ನ ದೇವರ ಹೆಸರನ್ನೂ ನನ್ನ ದೇವರ ಬಳಿಯಿಂದ ಪರಲೋಕದೊಳಗಿಂದ ಇಳಿದುಬರುವ ಹೊಸ ಯೆರೂಸಲೇಮ್ ಪಟ್ಟಣವೆಂಬ ನನ್ನ ದೇವರ ಪಟ್ಟಣದ ಹೆಸರನ್ನೂ ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು.

13 ದೇವರಾತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ.

14 ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ - ಆಮೆನ್ ಎಂಬಾತನು ಅಂದರೆ ನಂಬತಕ್ಕ ಸತ್ಯಸಾಕ್ಷಿಯೂ ದೇವರ ಸೃಷ್ಟಿಗೆ ಮೂಲನೂ ಆಗಿರುವಾತನು ಹೇಳುವದೇನಂದರೆ -

15 ನಿನ್ನ ಕೃತ್ಯಗಳನ್ನು ಬಲ್ಲೆನು; ನೀನು ತಣ್ಣಗೂ ಅಲ್ಲ, ಬೆಚ್ಚಗೂ ಅಲ್ಲ; ನೀನು ತಣ್ಣಗಾಗಲಿ ಬೆಚ್ಚಗಾಗಲಿ ಇದ್ದರೆ ಒಳ್ಳೇದಾಗಿತ್ತು.

16 ನೀನು ಬೆಚ್ಚಗೂ ಇಲ್ಲದೆ ತಣ್ಣಗೂ ಇಲ್ಲದೆ ಉಗುರುಬೆಚ್ಚಗಿರುವದರಿಂದ ನಿನ್ನನ್ನು ನನ್ನ ಬಾಯೊಳಗಿಂದ ಕಾರುವೆನು.

17 ನೀನು ನಿನ್ನ ವಿಷಯದಲ್ಲಿ - ನಾನು ಐಶ್ವರ್ಯವಂತನು, ಸಂಪನ್ನನು, ಒಂದರಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ; ಆದರೆ ನೀನು ಕೇವಲ ದುರವಸ್ಥೆಯಲ್ಲಿ ಬಿದ್ದಿರುವಂಥವನು, ದೌರ್ಭಾಗ್ಯನು, ದರಿದ್ರನು, ಕುರುಡನು, ಬಟ್ಟೆಯಿಲ್ಲದವನು ಆಗಿರುವದನ್ನು ತಿಳಿಯದೆ ಇದ್ದೀ.

18 ನೀನು ಐಶ್ವರ್ಯವಂತನಾಗುವಂತೆ ಬೆಂಕಿಯಲ್ಲಿ ಪುಟಾಹಾಕಿದ ಚಿನ್ನವನ್ನೂ, ಲಜ್ಜಾಸ್ಪದವಾದ ನಿನ್ನ ಬೆತ್ತಲೆತನ ಕಾಣಿಸದಂತೆ ಹೊದ್ದುಕೊಳ್ಳುವದಕ್ಕಾಗಿ ಬಿಳೀವಸ್ತ್ರಗಳನ್ನೂ, ಕಣ್ಣುಕಾಣುವಂತೆ ನಿನ್ನ ಕಣ್ಣುಗಳಿಗೆ ಹಚ್ಚುವದಕ್ಕಾಗಿ ಅಂಜನವನ್ನೂ ನನ್ನಿಂದ ಕೊಂಡುಕೊಳ್ಳಬೇಕೆಂದು ನಿನಗೆ ಬುದ್ಧಿ ಹೇಳುತ್ತೇನೆ.

19 ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದದರಿಂದ ನೀನು ಆಸಕ್ತನಾಗಿರು; ದೇವರ ಕಡೆಗೆ ತಿರುಗಿಕೋ.

20 ಇಗೋ, ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಶಬ್ದವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟಮಾಡುವೆನು, ಅವನು ನನ್ನ ಸಂಗಡ ಊಟಮಾಡುವನು.

21 ನಾನು ಜಯಹೊಂದಿ ನನ್ನ ತಂದೆಯೊಡನೆ ಸಿಂಹಾಸನದಲ್ಲಿ ಕೂತುಕೊಂಡೆನು; ಹಾಗೆಯೇ ಜಯಹೊಂದುವವನನ್ನು ನನ್ನೊಡನೆ ಸಿಂಹಾಸನದಲ್ಲಿ ಕೂತುಕೊಳ್ಳುವಂತೆ ಮಾಡುವೆನು.

22 ದೇವರಾತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು