Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 22 - ಕನ್ನಡ ಸತ್ಯವೇದವು J.V. (BSI)

1 ಆಮೇಲೆ ಅವನು ಸ್ಫಟಿಕದಂತೆ ಪ್ರಕಾಶಮಾನವಾಗಿದ್ದ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಯಾದಾತನ ಸಿಂಹಾಸನದಿಂದ ಹೊರಟು ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು.

2 ಆ ನದಿಯ ಉಭಯ ಪಾರ್ಶ್ವಗಳಲ್ಲಿ ಜೀವವೃಕ್ಷವಿತ್ತು; ಅದು ತಿಂಗಳು ತಿಂಗಳಿಗೆ ಫಲವನ್ನು ಫಲಿಸುತ್ತಾ ಹನ್ನೆರಡು ತರದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವದಕ್ಕೆ ಪ್ರಯೋಜನವಾಗಿವೆ.

3 ಇನ್ನು ಶಾಪಗ್ರಸ್ತವಾದದ್ದು ಒಂದೂ ಇರುವದಿಲ್ಲ. ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಯಾದಾತನ ಸಿಂಹಾಸನವಿರುವದು.

4 ಆತನ ದಾಸರು ಆತನಿಗೆ ಯಾಜಕಸೇವೆ ಮಾಡುವರು; ಅವರಿಗೆ ಆತನ ಮುಖದರ್ಶನವಾಗುವದು; ಅವರ ಹಣೆಗಳ ಮೇಲೆ ಆತನ ಹೆಸರು ಇರುವದು.

5 ಇನ್ನು ರಾತ್ರಿ ಇರುವದಿಲ್ಲ; ಅವರಿಗೆ ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗುವದಿಲ್ಲ; ದೇವರಾದ ಕರ್ತನೇ ಅವರಿಗೆ ಬೆಳಕನ್ನು ಕೊಡುವನು; ಅವರು ಯುಗಯುಗಾಂತರಗಳಲ್ಲಿಯೂ ಆಳುವರು.


ಅಂತ್ಯೋಕ್ತಿಗಳು

6 ಆಮೇಲೆ ಅವನು ನನಗೆ - ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ; ಪ್ರವಾದಿಗಳ ಆತ್ಮಗಳನ್ನು ಪ್ರೇರೇಪಿಸುವ ದೇವರಾದ ಕರ್ತನು ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತಿಳಿಯಪಡಿಸುವದಕ್ಕಾಗಿ ತನ್ನ ದೂತನನ್ನು ಕಳುಹಿಸಿಕೊಟ್ಟನು.

7 ಇಗೋ, ಬೇಗನೆ ಬರುತ್ತೇನೆ. ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನೆಯ ಮಾತುಗಳನ್ನು ಕೈಕೊಂಡು ನಡೆಯುವವನು ಧನ್ಯನು ಎಂದು ಹೇಳಿದನು.

8 ಈ ಸಂಗತಿಗಳನ್ನು ಕೇಳಿ ಕಂಡವನು ಯೋಹಾನನೆಂಬ ನಾನೇ. ನಾನು ಕೇಳಿ ಕಂಡಾಗ ಈ ಸಂಗತಿಗಳನ್ನು ನನಗೆ ತೋರಿಸಿದ ದೇವದೂತನಿಗೆ ನಮಸ್ಕಾರಮಾಡಬೇಕೆಂದು ಅವನ ಪಾದಕ್ಕೆ ಬಿದ್ದೆನು.

9 ಅವನು ನನಗೆ - ಮಾಡಬೇಡ ನೋಡು; ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಈ ಪುಸ್ತಕದಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವವರಿಗೂ ಜೊತೆಯ ದಾಸನಾಗಿದ್ದೇನೆ; ದೇವರಿಗೇ ನಮಸ್ಕಾರಮಾಡು ಎಂದು ಹೇಳಿದನು.

10 ಇದಲ್ಲದೆ ಅವನು ನನಗೆ - ಈ ಪುಸ್ತಕದಲ್ಲಿರುವ ಪ್ರವಾದನವಾಕ್ಯಗಳನ್ನು ಗುಪ್ತವಾಗಿಡಬೇಡ; ಇವು ನೆರವೇರುವ ಸಮಯವು ಸಮೀಪವಾಗಿದೆ.

11 ಅನ್ಯಾಯ ಮಾಡುವವನು ಇನ್ನೂ ಅನ್ಯಾಯಮಾಡಲಿ; ಮೈಲಿಗೆಯಾದವನು ತನ್ನನ್ನು ಇನ್ನೂ ಮೈಲಿಗೆಮಾಡಿಕೊಳ್ಳಲಿ; ನೀತಿವಂತನು ಇನ್ನೂ ನೀತಿಯನ್ನು ಅನುಸರಿಸಲಿ; ಪವಿತ್ರನು ತನ್ನನ್ನು ಇನ್ನೂ ಪವಿತ್ರಮಾಡಿಕೊಳ್ಳಲಿ.

12 ಇಗೋ, ಬೇಗ ಬರುತ್ತೇನೆ; ನಾನು ಪ್ರತಿಯೊಬ್ಬನಿಗೆ ಅವನವನ ನಡತೆಯ ಪ್ರಕಾರ ಕೊಡತಕ್ಕ ಪ್ರತಿಫಲವು ನನ್ನ ಕೈಯಲ್ಲಿ ಅದೆ.

13 ನಾನೇ ಆದಿಯೂ ಅಂತವೂ ಮೊದಲನೆಯವನೂ ಕಡೆಯವನೂ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ.

14 ತಮ್ಮ ನಿಲುವಂಗಿಗಳನ್ನು ತೊಳಕೊಂಡವರು ಧನ್ಯರು; ಅವರಿಗೆ ಜೀವವೃಕ್ಷದ ಹಕ್ಕು ಇರುವದು; ಅವರು ಬಾಗಿಲುಗಳಿಂದ ಆ ಪಟ್ಟಣದೊಳಕ್ಕೆ ಸೇರುವರು.

15 ನಾಯಿಗಳಂತಿರುವವರೂ ಮಾಟಗಾರರೂ ಜಾರರೂ ಕೊಲೆಗಾರರೂ ವಿಗ್ರಹಾರಾಧಕರೂ ಸುಳ್ಳಾದದ್ದನ್ನು ಪ್ರೀತಿಸಿ ನಡಿಸುವವರೆಲ್ಲರೂ ಹೊರಗಿರುವರು ಎಂದು ಹೇಳಿದನು.

16 ಯೇಸುವೆಂಬ ನಾನು ನನ್ನ ಸಭೆಗಳ ಪ್ರಯೋಜನಾರ್ಥವಾಗಿ ಈ ಸಂಗತಿಗಳ ವಿಷಯದಲ್ಲಿ ನಿಮಗೆ ಸಾಕ್ಷಿಹೇಳುವದಕ್ಕೋಸ್ಕರ ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು ದಾವೀದವಂಶವೆಂಬ ಬುಡದಿಂದ ಹುಟ್ಟಿದ ಚಿಗುರೂ ಅವನ ಸಂತತಿಯೂ ಉದಯಸೂಚಕವಾದ ಪ್ರಕಾಶವುಳ್ಳ ನಕ್ಷತ್ರವೂ ಆಗಿದ್ದೇನೆ.

17 ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.

18 ಈ ಪುಸ್ತಕದ ಪ್ರವಾದನಾವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನಂದರೆ - ಇವುಗಳಿಗೆ ಯಾವನಾದರೂ ಹೆಚ್ಚು ಮಾತುಗಳನ್ನು ತಂದುಹಾಕಿದರೆ ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ತಂದುಹಾಕುವನು.

19 ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ಮಾತುಗಳಲ್ಲಿ ಒಂದನ್ನಾದರೂ ತೆಗೆದುಬಿಟ್ಟರೆ ಈ ಪುಸ್ತಕದಲ್ಲಿ ಬರೆದಿರುವ ಪರಿಶುದ್ಧ ಪಟ್ಟಣದಲ್ಲಿಯೂ ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ದೇವರು ತೆಗೆದುಬಿಡುವನು.

20 ಈ ವಿಷಯಗಳಲ್ಲಿ ಸಾಕ್ಷಿಹೇಳುವವನು - ನಿಜವಾಗಿ ಬೇಗ ಬರುತ್ತೇನೆ ಎಂದು ಹೇಳುತ್ತಾನೆ. ಹಾಗೆಯೇ ಆಗಲಿ; ಕರ್ತನಾದ ಯೇಸುವೇ, ಬಾ.

21 ಕರ್ತನಾದ ಯೇಸುವಿನ ಕೃಪೆಯು ಎಲ್ಲರೊಂದಿಗೆ ಇರಲಿ. ಆಮೆನ್.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು