Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಪ್ರಕಟನೆ 19 - ಕನ್ನಡ ಸತ್ಯವೇದವು J.V. (BSI)


ಬಾಬೆಲ್ ಪಟ್ಟಣವು ಬಿದ್ದದ್ದಕ್ಕೆ ಪರಲೋಕದಲ್ಲಿ ಉಂಟಾದ ಹರ್ಷವನ್ನು ಕುರಿತದ್ದು

1 ಇದಾದ ಮೇಲೆ ಪರಲೋಕದಲ್ಲಿ ದೊಡ್ಡ ಗುಂಪಿನ ಮಹಾ ಶಬ್ದವೋ ಎಂಬಂತೆ ಒಂದು ಶಬ್ದವನ್ನು ಕೇಳಿದೆನು. ಅವರು - ಹಲ್ಲೆಲೂಯಾ. ಜಯವೂ ಪ್ರಭಾವವೂ ಶಕ್ತಿಯೂ ನಮ್ಮ ದೇವರಲ್ಲಿ ಉಂಟು;

2 ಆತನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ, ತನ್ನ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾ ಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಅವಳು ಆತನ ಸೇವಕರನ್ನು ಕೊಂದದ್ದಕ್ಕಾಗಿ ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿ ಎರಡನೆಯ ಸಾರಿ -

3 ಹಲ್ಲೆಲೂಯಾ ಎಂದು ಆರ್ಭಟಿಸಿ - ಅವಳ ದಹನದಿಂದುಂಟಾದ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿ ಹೋಗುತ್ತದೆ ಎಂದು ಹೇಳಿದರು.

4 ಆಗ ಇಪ್ಪತ್ತುನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ ಅಡ್ಡಬಿದ್ದು ಸಿಂಹಾಸನದ ಮೇಲೆ ಕೂತಿರುವ ದೇವರಿಗೆ ನಮಸ್ಕಾರ ಮಾಡಿ - ಆಮೆನ್; ಹಲ್ಲೆಲೂಯಾ, ಅಂದರು.


ಸಭೆಯೆಂಬ ಕನ್ಯೆಯನ್ನೂ ರಾಜಾಧಿರಾಜನನ್ನೂ ಕುರಿತದ್ದು

5 ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಶಬ್ದವು - ದೇವರ ದಾಸರೆಲ್ಲರೇ, ದೇವರಿಗೆ ಭಯಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಕೊಂಡಾಡಿರಿ ಎಂದು ಹೇಳಿತು.

6 ತರುವಾಯ ಜನರ ದೊಡ್ಡ ಗುಂಪಿನ ಶಬ್ದದಂತೆಯೂ ಜಲಪ್ರವಾಹಘೋಷದಂತೆಯೂ ಗಟ್ಟಿಯಾದ ಗುಡುಗಿನ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ಕೇಳಿದೆನು. ಅದು - ಹಲ್ಲೆಲೂಯಾ; ಸರ್ವಶಕ್ತನಾಗಿರುವ ನಮ್ಮ ದೇವರಾದ ಕರ್ತನು ಆಳುತ್ತಾನೆ;

7 ಯಜ್ಞದ ಕುರಿಯಾದಾತನ ವಿವಾಹ ಕಾಲವು ಬಂತು; ಆತನಿಗೆ ವಿವಾಹವಾಗುವ ಕನ್ಯೆ ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ; ಸಂತೋಷಪಡೋಣ, ಹರ್ಷಗೊಳ್ಳೋಣ, ಆತನನ್ನು ಘನಪಡಿಸೋಣ ಎಂದು ಹೇಳಿತು.

8 ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವದಕ್ಕೆ ಆಕೆಗೆ ಅನುಗ್ರಹಿಸೋಣವಾಗಿತ್ತು. ಆ ನಾರುಮಡಿ ಅಂದರೆ ದೇವಜನರ ಸತ್ಕಾರ್ಯಗಳೇ.

9 ಇದಲ್ಲದೆ ಅವನು ನನ್ನ ಸಂಗಡ ಮಾತಾಡುತ್ತಾ - ಯಜ್ಞದ ಕುರಿಯಾದಾತನ ವಿವಾಹದ ಔತಣಕ್ಕೆ ಕರಸಿಕೊಂಡವರು ಧನ್ಯರು ಎಂಬದಾಗಿ ಬರೆ ಎಂದು ನನಗೆ ಹೇಳಿ - ಈ ಮಾತುಗಳು ದೇವರ ಸತ್ಯವಚನಗಳಾಗಿವೆ, ಅಂದನು.

10 ಆಗ ನಾನು ಅವನಿಗೆ ನಮಸ್ಕಾರಮಾಡಬೇಕೆಂದು ಅವನ ಪಾದಗಳ ಮುಂದೆ ಬೀಳಲು ಅವನು - ಮಾಡಬೇಡ ನೋಡು, ನಾನು ನಿನಗೂ ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವ ನಿನ್ನ ಸಹೋದರರಿಗೂ ಜೊತೆಯ ದಾಸನಾಗಿದ್ದೇನೆ; ದೇವರಿಗೇ ನಮಸ್ಕಾರಮಾಡು ಅಂದನು. ಯೇಸುವಿನ ವಿಷಯವಾದ ಸಾಕ್ಷಿಯು ಪ್ರವಾದನೆಯ ಆತ್ಮವೇ.

11 ಪರಲೋಕವು ತೆರೆದಿರುವದನ್ನು ನಾನು ಕಂಡೆನು. ಆಗ ಇಗೋ, ಬಿಳೀ ಕುದುರೆಯು ನನಗೆ ಕಾಣಿಸಿತು; ಅದರ ಮೇಲೆ ಕೂತಿದ್ದವನಿಗೆ ನಂಬಿಗಸ್ತನೂ ಸತ್ಯವಂತನೂ ಎಂದು ಹೆಸರು. ಆತನು ನೀತಿಯಿಂದ ನ್ಯಾಯವಿಚಾರಿಸುತ್ತಾನೆ, ನೀತಿಯಿಂದ ಯುದ್ಧಮಾಡುತ್ತಾನೆ;

12 ಆತನ ಕಣ್ಣುಗಳು ಬೆಂಕಿಯ ಉರಿಯಂತಿವೆ; ಆತನ ತಲೆಯ ಮೇಲೆ ಅನೇಕ ಮಕುಟಗಳುಂಟು; ಆತನಿಗೆ ಒಂದು ಹೆಸರು ಬರೆದು ಕೊಟ್ಟಿದೆ, ಅದು ಆತನಿಗೇ ಹೊರತು ಮತ್ತಾರಿಗೂ ತಿಳಿಯದು.

13 ಆತನು ರಕ್ತಪ್ರೋಕ್ಷಿತವಾದ ವಸ್ತ್ರವನ್ನು ಧರಿಸಿಕೊಂಡಿದ್ದನು. ಆತನಿಗೆ ದೇವರ ವಾಕ್ಯವೆಂದು ಹೆಸರು.

14 ಪರಲೋಕದಲ್ಲಿರುವ ಸೈನ್ಯದವರು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಹತ್ತಿದವರಾಗಿ ಆತನ ಹಿಂದೆ ಬರುತ್ತಿದ್ದರು.

15 ಜನಾಂಗಗಳನ್ನು ಹೊಡೆಯುವದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಬರುತ್ತದೆ. ಆತನು ಅವರನ್ನು ಕಬ್ಬಿಣದ ಕೋಲಿನಿಂದ ಆಳುವನು. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷೆಯ ತೊಟ್ಟಿಯಲ್ಲಿರುವದನ್ನು ತುಳಿಯುತ್ತಾನೆ.

16 ಆತನ ತೊಡೆಯ ಮೇಲಣ ವಸ್ತ್ರದಲ್ಲಿ - ರಾಜಾಧಿರಾಜನೂ ಕರ್ತರ ಕರ್ತನೂ ಎಂಬ ಹೆಸರು ಬರೆದದೆ.


2. ಮೊದಲನೆಯ ಮೃಗವೂ ಸುಳ್ಳು ಪ್ರವಾದಿಯೂ ನಾಶವಾದದ್ದು

17 ಆಮೇಲೆ ಒಬ್ಬ ದೇವದೂತನು ಸೂರ್ಯನಲ್ಲಿ ನಿಂತಿರುವದನ್ನು ಕಂಡೆನು. ಅವನು ಮಹಾ ಶಬ್ದದಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ - ಬನ್ನಿರಿ, ದೇವರು ಮಾಡಿಸುವ ಮಹಾಭೋಜನಕ್ಕೆ ಕೂಡಿಬನ್ನಿರಿ,

18 ರಾಜರ ಮಾಂಸವನ್ನೂ ಸಹಸ್ರಾಧಿಪತಿಗಳ ಮಾಂಸವನ್ನೂ ಪರಾಕ್ರಮಶಾಲಿಗಳ ಮಾಂಸವನ್ನೂ ಕುದುರೆಗಳ ಮಾಂಸವನ್ನೂ ರಾಹುತರ ಮಾಂಸವನ್ನೂ, ಸ್ವತಂತ್ರರೂ ದಾಸರೂ ದೊಡ್ಡವರೂ ಚಿಕ್ಕವರೂ ಇವರೆಲ್ಲರ ಮಾಂಸವನ್ನೂ ತಿನ್ನುವದಕ್ಕೆ ಬನ್ನಿರಿ ಎಂದು ಹೇಳಿದನು.

19 ತರುವಾಯ ಆ ಮೊದಲನೆಯ ಮೃಗವೂ ಭೂರಾಜರೂ ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕೂತಿದ್ದವನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧಮಾಡುವದಕ್ಕಾಗಿ ಕೂಡಿ ಬಂದಿರುವದನ್ನು ಕಂಡೆನು.

20 ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹಕ್ಕೆ ನಮಸ್ಕರಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳುಪ್ರವಾದಿಯೂ ಅದರ ಜೊತೆಯಲ್ಲಿ ಸೆರೆಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕದಿಂದ ಉರಿಯುವ ಬೆಂಕಿಯ ಕೆರೆಯಲ್ಲಿ ಹಾಕಲ್ಪಟ್ಟರು;

21 ವಿುಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದವನ ಬಾಯಿಂದ ಬಂದ ಕತ್ತಿಯಿಂದ ಹತರಾದರು; ಮತ್ತು ಹಕ್ಕಿಗಳೆಲ್ಲಾ ಅವರ ಮಾಂಸವನ್ನು ಹೊಟ್ಟೆ ತುಂಬಾ ತಿಂದವು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು