ಪ್ರಕಟನೆ 17 - ಕನ್ನಡ ಸತ್ಯವೇದವು J.V. (BSI)VIII. ಕ್ರಿಸ್ತ ವಿರೋಧಿಗಳ ನಾಶವನ್ನು ಕುರಿತದ್ದು 1. ಬಾಬೆಲೆಂಬ ಜಾರಸ್ತ್ರೀಯ ನಾಶವು 1 ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತಾಡಿ - ಬಾ, ಬಹಳ ನೀರುಗಳ ಮೇಲೆ ವಾಸಿಸಿರುವ ಮಹಾ ಜಾರಸ್ತ್ರೀಗೆ ಬರುವ ದಂಡನೆಯನ್ನು ನಿನಗೆ ತೋರಿಸುತ್ತೇನೆ; 2 ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು, ಮತ್ತು ಭೂನಿವಾಸಿಗಳು ಅವಳ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು ಎಂದು ಹೇಳಿದನು. 3 ಆಗ ಅವನು ದೇವರಾತ್ಮವಶನಾದ ನನ್ನನ್ನು ಎತ್ತಿಕೊಂಡು ಅಡವಿಗೆ ಹೋದನು. ಅಲ್ಲಿ ನಾನು ರಕ್ತವರ್ಣದ ಮೃಗದ ಮೇಲೆ ಕೂತಿದ್ದ ಒಬ್ಬ ಸ್ತ್ರೀಯನ್ನು ಕಂಡೆನು; ಆ ಮೃಗದ ಮೈಮೇಲೆಲ್ಲಾ ದೇವದೂಷಣೆಯ ಹೆಸರುಗಳು ತುಂಬಿದ್ದವು. 4 ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು. ಆ ಸ್ತ್ರೀಯು ಧೂಮ್ರವರ್ಣದ ವಸ್ತ್ರಗಳನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ ರತ್ನ ಮುತ್ತು ಇವುಗಳಿಂದ ಅಲಂಕರಿಸಿಕೊಂಡಿದ್ದಳು; ಅವಳ ಕೈಯಲ್ಲಿ ಒಂದು ಚಿನ್ನದ ಬಟ್ಟಲು ಇತ್ತು; ಅದು ಅಸಹ್ಯವಾದವುಗಳಿಂದ ಅಂದರೆ ಅವಳ ಜಾರತ್ವ ಸಂಬಂಧವಾದ ಅಶುದ್ಧ ವಸ್ತುಗಳಿಂದ ತುಂಬಿತ್ತು. 5 ಅವಳ ಹಣೆಯ ಮೇಲೆ - ಬಾಬೆಲೆಂಬ ಮಹಾನಗರಿ, ಭೂವಿುಯಲ್ಲಿರುವ ಜಾರಸ್ತ್ರೀಯರಿಗೂ ಅಸಹ್ಯವಾದ ಕಾರ್ಯಗಳಿಗೂ ತಾಯಿ ಎಂದು ಗೂಢಾರ್ಥವುಳ್ಳ ಹೆಸರು ಬರೆದಿತ್ತು. 6 ಆ ಸ್ತ್ರೀಯು ದೇವಜನರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿ ಕೊಟ್ಟು ಹತರಾದವರ ರಕ್ತವನ್ನೂ ಕುಡಿದು ಮತ್ತಳಾಗಿರುವದನ್ನು ಕಂಡೆನು. ನಾನು ಅವಳನ್ನು ನೋಡಿ ಅತ್ಯಾಶ್ಚರ್ಯಪಟ್ಟೆನು. 7 ಆಗ ಆ ದೇವದೂತನು ನನಗೆ ಹೇಳಿದ್ದು - ನೀನೇಕೆ ಆಶ್ಚರ್ಯಪಟ್ಟಿ? ಆ ಸ್ತ್ರೀಯಿಂದಲೂ ಅವಳ ವಾಹನವಾಗಿದ್ದು ಏಳು ತಲೆಗಳೂ ಹತ್ತು ಕೊಂಬುಗಳೂ ಉಳ್ಳ ಮೃಗದಿಂದಲೂ ಸೂಚಿತವಾದ ಗೂಢಾರ್ಥವನ್ನು ನಾನು ನಿನಗೆ ವಿವರಿಸುತ್ತೇನೆ. 8 ನೀನು ಕಂಡ ಈ ಮೃಗವು ಮೊದಲು ಇತ್ತು, ಈಗ ಇಲ್ಲ, ಮತ್ತು ಅಧೋಲೋಕದಿಂದ ಏರಿಬಂದು ನಾಶಕ್ಕೆ ಹೋಗುವದು. ಭೂನಿವಾಸಿಗಳೊಳಗೆ ಯಾರಾರ ಹೆಸರುಗಳು ಲೋಕಾದಿಯಿಂದ ಜೀವಬಾಧ್ಯರ ಪಟ್ಟಿಯಲ್ಲಿ ಬರೆದಿರುವದಿಲ್ಲವೋ ಅವರು ಈ ಮೃಗವನ್ನು ನೋಡಿ ಇದು ಮೊದಲು ಇತ್ತು, ಈಗ ಇಲ್ಲ, ಇನ್ನು ಮೇಲೆ ಬರುವದು ಎಂದು ತಿಳಿದು ಆಶ್ಚರ್ಯಪಡುವರು. 9 ಇದು ಬುದ್ಧಿವಂತನಿಗೆ ಮಾತ್ರ ಗೊತ್ತಾಗುವದು. ಆ ಏಳು ತಲೆಗಳು ಆ ಸ್ತ್ರೀ ಕೂತುಕೊಂಡಿರುವ ಏಳು ಬೆಟ್ಟಗಳೇ; 10 ಇದಲ್ಲದೆ ಅವು ಏಳು ಮಂದಿ ಅರಸುಗಳನ್ನು ಸೂಚಿಸುತ್ತವೆ; ಅವರಲ್ಲಿ ಐದು ಮಂದಿ ಬಿದ್ದುಹೋಗಿದ್ದಾರೆ, ಒಬ್ಬನು ಇದ್ದಾನೆ, ಮತ್ತೊಬ್ಬನು ಇನ್ನೂ ಬಂದಿಲ್ಲ. ಬಂದ ಮೇಲೆ ಅವನು ಸ್ವಲ್ಪಕಾಲ ಇರಬೇಕು. 11 ಮೊದಲಿದ್ದು ಈಗ ಇಲ್ಲದಿರುವ ಆ ಮೃಗವು ತಾನೇ ಎಂಟನೆಯ ಅರಸು; ಅವನು ಆ ಏಳು ಮಂದಿ ಅರಸುಗಳಿಗೆ ಸೇರಿದವನು; ನಾಶಕ್ಕೆ ಹೋಗುವನು. 12 ನೀನು ಕಂಡ ಆ ಹತ್ತು ಕೊಂಬುಗಳು ಅಂದರೆ ರಾಜ್ಯವನ್ನು ಇನ್ನೂ ಹೊಂದದಿರುವ ಹತ್ತು ಮಂದಿ ಅರಸುಗಳು. ಅವರು ಒಂದು ಗಳಿಗೆಯವರೆಗೆ ರಾಜರಂತೆ ಆಳುವ ಅಧಿಕಾರವನ್ನು ಮೃಗದೊಂದಿಗೆ ಹೊಂದುತ್ತಾರೆ. 13 ಅವರು ಒಂದೇ ಅಭಿಪ್ರಾಯವುಳ್ಳವರಾಗಿದ್ದು ತಮ್ಮ ಶಕ್ತಿಯನ್ನೂ ಅಧಿಕಾರವನ್ನೂ ಮೃಗಕ್ಕೆ ಕೊಡುತ್ತಾರೆ. 14 ಅವರು ಯಜ್ಞದ ಕುರಿಯಾದಾತನ ಮೇಲೆ ಯುದ್ಧಮಾಡುವರು, ಆದರೆ ಆತನು ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವದರಿಂದ ಅವರನ್ನು ಜಯಿಸುವನು; ಮತ್ತು ದೇವರು ಕರೆದವರೂ ದೇವರಾದುಕೊಂಡವರೂ ನಂಬಿಗಸ್ತರೂ ಆಗಿರುವ ಆತನ ಕಡೆಯವರು ಆ ಜಯದಲ್ಲಿ ಪಾಲುಗಾರರಾಗುವರು. 15 ಇನ್ನೂ ಆ ದೇವದೂತನು ನನಗೆ ಹೇಳಿದ್ದು - ಆ ಜಾರಸ್ತ್ರೀಯು ವಾಸಿಸಿರುವ ನೀರುಗಳನ್ನು ಕಂಡಿಯಲ್ಲ? ಅವು ಪ್ರಜೆ ಸಮೂಹ ಜನ ಭಾಷೆಗಳನ್ನು ಸೂಚಿಸುತ್ತವೆ. 16 ಇದಲ್ಲದೆ ಹತ್ತು ಕೊಂಬುಗಳನ್ನೂ ಮೃಗವನ್ನೂ ಕಂಡಿಯಲ್ಲ? ಇವುಗಳಿಂದ ಸೂಚಿತರಾದವರು ಆ ಜಾರಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವರು. 17 ಯಾಕಂದರೆ ಅವರು ದೇವರ ಅಭಿಪ್ರಾಯವನ್ನು ನೆರವೇರಿಸುವದಕ್ಕೂ ಒಂದೇ ಅಭಿಪ್ರಾಯವುಳ್ಳವರಾಗಿದ್ದು ತಮ್ಮ ರಾಜ್ಯವನ್ನು ಮೃಗಕ್ಕೆ ಕೊಡುವದಕ್ಕೂ ದೇವರು ತನ್ನ ವಚನವು ನೆರವೇರುವ ತನಕ ಅವರ ಹೃದಯಗಳನ್ನು ಪ್ರೇರಿಸಿದನು. 18 ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಅಧಿಕಾರ ಹೊಂದಿರುವ ಮಹಾನಗರಿಯೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India